ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹10 ಸಾವಿರ ಪರಿಹಾರ ನೀಡಲು ಆಗ್ರಹ: ಕಟ್ಟಡ ಕಾರ್ಮಿಕರ ಆನ್‌ಲೈನ್ ಪ್ರತಿಭಟನೆ

ಕಟ್ಟಡ ಕಾರ್ಮಿಕರ ಆನ್‌ಲೈನ್ ಪ್ರತಿಭಟನಾ ಚಳವಳಿ
Last Updated 22 ಮೇ 2021, 3:50 IST
ಅಕ್ಷರ ಗಾತ್ರ

ಯಾದಗಿರಿ: ರಾಜ್ಯ ಸರ್ಕಾರವು ಇತ್ತೀಚೆಗೆ ಬಿಡುಗಡೆ ಮಾಡಿದ ಕೋವಿಡ್ ಪ್ಯಾಕೇಜ್‍ನಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಪ್ರತಿ ತಿಂಗಳಿಗೆ ಮಾಸಿಕ ₹10,000 ಮೂರು ತಿಂಗಳಿಗೆ ಬಿಡುಗಡೆ ಮಾಡಬೇಕೆಂದು ಕೇಂದ್ರ ಕಾರ್ಮಿಕ ಸಂಘಟನೆಯಾದ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ)ಗೆ ಸಂಯೋಜಿತಗೊಂಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘ ರಾಜ್ಯ ವ್ಯಾಪಿ ಆನ್‌ಲೈನ್ ಪ್ರತಿಭಟನಾ ಚಳವಳಿ ನಡೆಸಿತು.

ಆನ್‌ಲೈನ್ ಚಳವಳಿಯಲ್ಲಿ ಜಿಲ್ಲೆಯಾದ್ಯಂತ ಕಟ್ಟಡ ನಿರ್ಮಾಣ ಕಾರ್ಮಿಕರು ತಮ್ಮ ತಮ್ಮ ಸ್ಥಳಗಳಲ್ಲಿ ಬೇಡಿಕೆಗಳನ್ನು ಬಿಂಬಿಸುವ ಪ್ರತಿಭಟನಾ ಫಲಕಗಳನ್ನು ಪ್ರದರ್ಶಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರವು ಇತ್ತೀಚೆಗೆ ಬಿಡುಗಡೆ ಮಾಡಿದ ಕೋವಿಡ್ ಪ್ಯಾಕೇಜ್‍ನಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ₹3,000 ಪರಿಹಾರ ಧನ ಎಂದು ಘೋಷಣೆ ಮಾಡಿತ್ತು. ಆದರೆ, ಮೊದಲೇ ಕೋವಿಡ್‍ನಿಂದ ಬಹಳಷ್ಟು ಕಾರ್ಮಿಕರು ಅಸ್ವಸ್ಥರಾಗಿದ್ದಾರೆ. ಅದರ ಮೇಲೆ ಕಟ್ಟಡ ನಿರ್ಮಾಣ ಕಾರ್ಮಿಕರು, ತಮ್ಮ ದಿನಗೂಲಿ ಇಲ್ಲದೇ ಮನೆಯಲ್ಲೇ ಇರುವಂಥ ಪರಿಸ್ಥಿತಿಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಖರ್ಚುಗಳ ಜೊತೆಗೆ ದೈನಂದಿನ ಖರ್ಚುಗಳು ಹೆಚ್ಚುತ್ತಿದ್ದು, ಅನೇಕರು ಸಾಲದ ಮೊರೆ ಹೋಗಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಘೊಷಿಸಿರುವ ₹3,000 ಪರಿಹಾರ ಧನ ಏನೇನು ಸಾಲುವುದಿಲ್ಲ. ಆದ್ದರಿಂದ ಕೂಡಲೇ ಕಟ್ಟಡ ನಿರ್ಮಾಣ ಕಾರ್ಮಿಕರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಖ್ಯ ಬೇಡಿಕೆಯಾಗಿ ಪ್ರತಿ ತಿಂಗಳಿಗೆ ಮಾಸಿಕ ₹10,000 ನ್ನು ಮೂರು ತಿಂಗಳಿಗೆ ಬಿಡುಗಡೆ ಮಾಡಬೇಕೆಂದು ಸಂಘವು ಆಗ್ರಹಿಸಿತು.

ಅದರ ಜೊತೆಗೆ ಕಳೆದ ವರ್ಷ ಘೋಷಿಸಲಾದ ಕೋವಿಡ್ ₹5,000 ಪರಿಹಾರ ಹಣ ಬಾಕಿ ಇರುವ 1 ಲಕ್ಷ ಕಾರ್ಮಿಕರಿಗೆ ಕೂಡಲೇ ಹಣ ವರ್ಗಾವಣೆ ಮಾಡಬೇಕು. ಕೋವಿಡ್-19ರ ಸೋಂಕಿನಿಂದ ಮೃತಪಡುವ ನೋಂದಾಯಿತ ಪ್ರತಿ ಕಟ್ಟಡ ಕಾರ್ಮಿಕ ಅಥವಾ ಸಾವಿಗೀಡಾಗುವ ಕುಟುಂಬದ ಸದಸ್ಯರಿಗೆ ಕನಿಷ್ಠ ₹10 ಲಕ್ಷ ವಿಶೇಷ ಪರಿಹಾರಧನ ಪ್ರಕಟಿಸಬೇಕು. ನೋಂದಾಯಿತರಲ್ಲದ ಕಾರ್ಮಿಕರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಕನಿಷ್ಠ 5 ಲಕ್ಷ ಪರಿಹಾರ ನೀಡಬೇಕು ಮತ್ತು ಕೋವೀಡ್ ಸೋಂಕಿಗೊಳಗಾಗಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುವ ಕಟ್ಟಡ ಕಾರ್ಮಿಕರ ಮತ್ತು ಅವರ ಕುಟುಂಬದವರ ಸಂಪೂರ್ಣ ಚಿಕಿತ್ಸಾ ವೆಚ್ಚ ಮಂಡಳಿಯೇ ಭರಿಸಬೇಕು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘ ಆಗ್ರಹಿಸಿದೆ.

ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಹಾಗೂ ಕಾರ್ಮಿಕ ಸಚಿವರಿಗೆ ಕಾರ್ಮಿಕ ಅಧಿಕಾರಿಗಳ ಮೂಲಕ ಮನವಿ ಪತ್ರವನ್ನು ಈ ಮೇಲ್ ಮೂಲಕ ಸಲ್ಲಿಸಲಾಯಿತು.

ಮುಖಂಡರಾದ ರಾಮಲಿಂಗಪ್ಪ ಬಿ.ಎನ್, ಜಮಾಲ್‍ಸಾಬ್, ಹಣಮಂತ, ಕಾಶಪ್ಪ, ಭೀಮಪ್ಪ, ಬಂದೇನವಾಜ್, ಮೋನಯ್ಯ, ಕಾಳಮ್ಮ, ನರಸಮ್ಮ, ಮಹಾದೇವಿ, ಸೋನಿಯಾ, ಚಂದ್ರಕಲಾ, ನಿರ್ಮಲಾ, ನೀಲಿಬಾಯಿ ಸೇರಿದಂತೆ ಜಿಲ್ಲೆಯ ಕಾರ್ಮಿಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT