ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ಸರಿಯಾದ ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ಆಕ್ರೋಶ

ತಾ.ಪಂ ಸಾಮಾನ್ಯ ಸಭೆ, ಮಾಹಿತಿ ಕೊರತೆ
Last Updated 27 ಮೇ 2020, 15:41 IST
ಅಕ್ಷರ ಗಾತ್ರ

ಯಾದಗಿರಿ: ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಭೀಮವ್ವ ಅಚ್ಚೋಲಾ ಅಧ್ಯಕ್ಷತೆಯಲ್ಲಿ ಮಂಗಳವಾರ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ ನಡೆಯಿತು.

ಇಲಾಖೆಗಳ ಪ್ರಗತಿ ವರದಿ ವಿಳಂಬ, ಸರಿಯಾದ ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಅಂಗನವಾಡಿ, ಕಟ್ಟಡ ಕಾಮಗಾರಿ, ನೀರಿನ ಸಮಸ್ಯೆ, ಸಾಮಾಜಿಕ ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಚರ್ಚೆಗಳು ನಡೆದವು. ಸರಿಯಾಗಿ ಕಾರ್ಯ ನಿರ್ವಹಿಸದ ಅಧಿಕಾರಿಗಳನ್ನು ಸದಸ್ಯರು ತರಾಟೆಗೆ ತೆಗೆದುಕೊಂಡರು.

ಅಧಿಕಾರಿಗೆ ತರಾಟೆ:ಈ ವೇಳೆ ಸದಸ್ಯ ಸಾಯಬಣ್ಣ ಯರಗೋಳ ಮಾತನಾಡಿ, ಭೀಮಾ ನದಿಯಿಂದ ನೀರು ಸರಬರಾಜು ಯೋಜನೆ ಘೋಷಣೆಯಾಗಿ 10 ವರ್ಷ ಕಳೆದರೂ ನೀರು ಬರಲಿಲ್ಲ ಎಂದು ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು. ತಾಲ್ಲೂಕಿನ ಆನೂರು (ಕೆ), ಗೊಂದೆನೂರ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಈವರೆಗೆ ಹನಿ ನೀರು ಸಿಕ್ಕಿಲ್ಲ ಎಂದು ಬಾಡಿಯಾಳ ತಾಲ್ಲೂಕು ಪಂಚಾಯಿತಿ ಸದಸ್ಯ ಬಸವರಾಜಪ್ಪಗೌಡ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಅಲ್ಲದೇ ಭೀಮಾ ನದಿಯಿಂದ ಗ್ರಾಮೀಣ ಭಾಗಕ್ಕೆ ಕುಡಿಯುವ ನೀರಿನ ಯೋಜನೆಯಿಂದಲೂ ನೀರು ಸರಬರಾಜು ಆಗುತ್ತಿಲ್ಲ ಎಂದು ಸದಸ್ಯ ಮಕ್ಬೂಲ್ ಪಟೇಲ್ ಸಿಡಿಮಿಡಿಗೊಂಡರು. ಯೋಜನೆ 2009ರಲ್ಲಿ ಆರಂಭಗೊಂಡು 2015ರಲ್ಲಿ ಪೂರ್ಣಗೊಂಡಿದೆ ಎಂದು ಅಧಿಕಾರಿ ಆನಂದ ಸಭೆಗೆ ಮಾಹಿತಿ ನೀಡಿದರು. ಜಲ ಜೀವನ ಮಿಷನ್ ಯೋಜನೆಯಡಿ ಅಗತ್ಯ ಕ್ರಮವಹಿಸಲಾಗುವುದು ಎಂದು ಮಾಹಿತಿ ನೀಡಿದರು. ಇನ್ನೂ ಭೀಮಾನದಿಯಿಂದ ಗ್ರಾಮೀಣ ಭಾಗದ ಕುಡಿಯುವ ನೀರಿನ ಸರಬರಾಜು ಪೈಪ್‍ಲೈನ್ ಜೋಡಣೆ ಸರಿಯಾಗಿಲ್ಲ. ಇದರಿಂದ ತೊಂದರೆ ಅನುಭವಿಸುವಂತಾಗಿದೆ ಎಂದು ಮಕ್ಬೂಲ್‌ ಪಟೇಲ್ ಗಮನ ಸೆಳೆದರು.

ಗಂಭೀರ ಆರೋಪ:ಸದಸ್ಯೆ ಗೋರಿಬಾಯಿ ಮಾತನಾಡಿ, ಮುದ್ನಾಳ ತಾಂಡಾದ ಅಂಗನವಾಡಿ ಕಾರ್ಯಕರ್ತೆ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮವಹಿಸಲು ಒತ್ತಾಯಿಸಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವವಣಾಧಿಕಾರಿ ಬಸವರಾಜ ಶಾರಭೈ ಪ್ರತಿಕ್ರಿಯಿಸಿ, ಅಂಗನವಾಡಿ ಕಾರ್ಯಕರ್ತೆಗೆ ನೋಟಿಸ್ ಜಾರಿ ಮಾಡುವಂತೆ ಸೂಚಿಸಿದರು. ಅಂಗನವಾಡಿಯ ಆಹಾರ ಪದಾರ್ಥಗಳು ಅಂಗಡಿಗಳಿಗೆ ಹೋಗುತ್ತಿದೆ ಎಂದು ಸದಸ್ಯ ಮಕ್ಬೂಲ್‌ ಪಟೇಲ್ ಗಂಭೀರ ಆರೋಪ ಮಾಡಿದರು. ಮೇಲ್ವಿಚಾರಕರು ಸರಿಯಾಗಿ ಕಾರ್ಯ ಮಾಡುತ್ತಿಲ್ಲ ಎಂದು ಸದಸ್ಯರು ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಅಧ್ಯಕ್ಷ ಭಾಷು ರಾಠೋಡ ಮಾತನಾಡಿ, ಸಮಣಾಪುರ ಮತ್ತು ತಾಂಡಾದಲ್ಲಿ ನಿರ್ಮಿತಿ ಕೇಂದ್ರಕ್ಕೆ ವಹಿಸಿದ್ದ ಅಂಗನವಾಡಿ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿದೆ. ಈ ಬಗ್ಗೆ ಕ್ರಮವಹಿಸಲು ಸಭೆಗೆ ಒತ್ತಾಯಿಸಿದರು. ಸದಸ್ಯ ಸಾಯಬಣ್ಣ ಮಾತನಾಡಿ, ಯರಗೋಳದಲ್ಲಿ ಕಲ್ಯಾಣ ಮಂಟಪ ಅಪೂರ್ಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೋಟಿಸ್‌ ನೀಡಿ:ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶಾರಭೈ ಮಾತನಾಡಿ, ‌ಕಡ್ಡಾಯವಾಗಿ ಪ್ರತಿ ತಿಂಗಳು 5ನೇ ತಾರಿಕಿನ ಒಳಗೆ ತಾಲ್ಲೂಕು ಪಂಚಾಯಿತಿಗೆ ಎಲ್ಲ ಇಲಾಖೆಯ ವರದಿ ಸಲ್ಲಿಸಲು ಅಧ್ಯಕ್ಷರು ಸೂಚಿಸಿದ್ದು, ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ವರದಿ ನೀಡಬೇಕು. ಸಭೆಗೆ ಗೈರಾದ ಹಲವು ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ತಿಳಿಸಿದರು.

***

ಸಾಮಾಜಿಕ ಅರಣ್ಯ ಅಧಿಕಾರಿಗಳು ಗಿಡ ಮರಗಳ ಪ್ರಗತಿಯನ್ನು ಕೇವಲ ಕಾಗದದಲ್ಲಿ ತೋರಿಸುತ್ತಿದ್ದಾರೆ. ಮುಂದೆ ಹೀಗಾಗದಂತೆ ಸೂಕ್ತ ಕ್ರಮ ಕೈಗೊಳ್ಳಿ.
–ಮಕ್ಬೂಲ್‌ ಪಟೇಲ್, ತಾ.ಪಂ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT