ಯಾದಗಿರಿ: ಭೀಮಾ ನದಿ ವ್ಯಾಪ್ತಿಯಲ್ಲಿ ಬೆಳೆದಿದ್ದ ಭತ್ತ ಕಟಾವು ಮಾಡಿದ್ದು, ಉತ್ತಮ ದರದ ನಿರೀಕ್ಷೆಯಲ್ಲಿ ರೈತರಿದ್ದಾರೆ.
ಮಳೆ ಕೊರತೆ ನಡುವೆಯೇ ಜೂನ್, ಜುಲೈ ತಿಂಗಳಲ್ಲಿ ಭೀಮಾ ನದಿ ತೀರದಲ್ಲಿ ಭತ್ತ ನಾಟಿ ಮಾಡಲಾಗಿತ್ತು. ಆನಂತರ ಸನ್ನತಿ, ಯಾದಗಿರಿ–ಗುರುಣಸಗಿ, ಗುಡೂರು–ಜೋಳದಡಗಿ ಬ್ರಿಜ್ ಕಂ ಬ್ಯಾರೇಜ್ ಮೂಲಕ ನೀರು ಹರಿಸಲಾಗಿತ್ತು.
ಈಗಾಗಲೇ ಯಾದಗಿರಿ ಸಮೀಪದ ಭೀಮಾನದಿ ತಟದ ಸುತ್ತಲಿನ ಜಮೀನುಗಳಲ್ಲಿ ಕಳೆದ ಒಂದು ವಾರದಿಂದ ಭತ್ತದ ಕಟಾವು ಕಾರ್ಯ ಭರದಿಂದ ಸಾಗಿದೆ. ಇನ್ನೂ ಕೆಲಕಡೆಗಳಲ್ಲಿ ಭತ್ತದ ಬೆಳೆಯ ತೆನೆ ಹಸಿ ಇರುವ ಕಾರಣಕ್ಕೆ ಒಂದು ವಾರ ನಂತರ ಆರಂಭಿಸಲಿದ್ದಾರೆ. ಮಂಗಳವಾರ ರಾತ್ರಿ ಸುರಿದ ಮಳೆಗೆ ಭತ್ತದ ಕಟಾವು ಸ್ಥಗಿತವಾಗಿದೆ. ಕಟಾವು ಯಂತ್ರಗಳು ನಿಂತಿವೆ.
ಯಂತ್ರದ ಬಾಡಿಗೆ ದುಬಾರಿ: ಮೊದಲೇ ಬರದಿಂದ ತತ್ತರಿಸಿದ ರೈತರಿಗೆ ಇದೀಗ ಯಂತ್ರಗಳ ಬಾಡಿಗೆ ದುಬಾರಿಯಾಗಿದೆ. ಭತ್ತದ ಕಟಾವುಗೆ ಪ್ರತಿ ಗಂಟೆಗೆ ₹ 2,500ರಿಂದ 3,000 ತನಕ ಏರಿಕೆಯಾಗಿದೆ. ಅದರಲ್ಲೂ ಪೈಪೋಟಿ ಯಾರು ಹೆಚ್ಚಿಗೆ ಹಣ ಕೊಡುತ್ತಾರೋ, ಅವರಿಗೆ ಆದ್ಯತೆ ನೀಡಲಾಗುತ್ತಿದೆ. ಉಪಾಹಾರ, ಊಟ, ಚಹಾ ಇತ್ಯಾದಿ ವ್ಯವಸ್ಥೆಗೊಳಿಸುವ ರೈತರಲ್ಲಿಗೆ, ಯಂತ್ರದ ಮಾಲೀಕರು ಹಾಗೂ ಮಧ್ಯವರ್ತಿಗಳು ಅಲ್ಲಿಗೆ ಯಂತ್ರಗಳನ್ನು ಕಳುಹಿಸುತ್ತಾರೆ.
ಈಗಾಗಲೇ ಕಟಾವು ಯಂತ್ರಗಳು ದೂರದ ಗಂಗಾವತಿ, ಸಿಂಧನೂರು, ದಾವಣಗೆರೆ, ಶಹಾಪುರ ಬಳಿಯ ಹುಲಕಲ್‌ನಿಂದ ಬಂದಿವೆ. ಈ ಭಾಗದಲ್ಲಿ ಭೀಮಾ ಹಾಗೂ ಕೃಷ್ಣಾ ನದಿ ಪಾತ್ರದ ಸುತ್ತಲಿನ ಸಾವಿರಾರು ಹೆಕ್ಟೇರ್ ಪ್ರದೇಶಗಳಲ್ಲಿ ಭತ್ತ ಬೆಳೆಯುವುರಿಂದ ಯಂತ್ರದ ಅವಶ್ಯಕತೆಯಿದೆ. ಕಳೆದ ಎರಡು ವರ್ಷಗಳ ಹಿಂದೆ ಗುರುಸಣಿಗಿ ಕ್ರಾಸ್ ಸಮೀಪದಲ್ಲಿ ಯಂತ್ರ ನಿಲ್ಲುಗಡೆಗೆ ಹಾಗೂ ದುರಸ್ತಿಗೆ ಬೃಹತ್ ಗ್ಯಾರೇಜ್ ನಿರ್ಮಾಣವಾಗಿದೆ.
ಕಟಾವಿಗೆ ಮಳೆರಾಯ ಅಡ್ಡಿ: ಭತ್ತದ ಕಟಾವುಗೆ ಮಳೆ ಅಡ್ಡಿಪಡಿಸಿದೆ. ಇನ್ನೂ ಆರಂಭಗೊಳ್ಳಲಿಕ್ಕೆ 3-4 ದಿನ ಆಗಬಹುದು ಎಂದು ಯಂತ್ರಗಳು ನಿಲ್ಲಿಸಲಾಗಿದೆ. ಸಾಲ ಶೂಲ ಮಾಡಿ ಎಕರೆಗೆ ₹30 ರಿಂದ ₹40 ಸಾವಿರ ಹಣ ಖರ್ಚು ಮಾಡಿ ಭತ್ತ ಬಿತ್ತನೆ ಮಾಡಲಾಗಿತ್ತು.
ಈಚೆಗೆ ಸುರಿದ ಮಳೆಗೆ ಗದ್ದೆ ಹಸಿಯಾಗಿದೆ. ಇದರಿಂದ ಕಟಾವಿಗೆ ಯಂತ್ರಗಳು ಸಿಗುವುದಿಲ್ಲ. ಇನ್ನೂ ವಾರ ಬಿಟ್ಟರೆ ಭತ್ತದ ಕಾಳುಗಳು ನೆಲಕ್ಕೆ ಉದುರಲಿವೆಸಿದ್ದಪ್ಪ ಆಗಸಿಮನಿ ರೈತ
ಮಳೆ ವಿದ್ಯುತ್ ಕೊರತೆ ನಡುವೆಯೂ ಈ ಬಾರಿ ಭತ್ತ ಬೆಳೆಯಲಾಗಿದ್ದು ಉತ್ತಮವಾಗಿ ಫಸಲು ಬಂದಿದೆ. ಆದರೆ ಕೂಲಿಗಾಗಿನ ಖರ್ಚೆ ಹೆಚ್ಚಾಗಿದೆಶಿವರಾಜ ನಾಲ್ವಡಿ ರೈತ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.