ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲ ಕಚ್ಚಿದ ಶೇಂಗಾ, ಭತ್ತದ ಧಾರಣೆ: ನಷ್ಟದ ಭೀತಿಯಲ್ಲಿ ರೈತರು

ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಬೇಸಿಗೆ ಬೆಳೆ
Last Updated 27 ಏಪ್ರಿಲ್ 2021, 3:56 IST
ಅಕ್ಷರ ಗಾತ್ರ

ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಬೇಸಿಗೆ ಹಂಗಾಮಿನಲ್ಲಿ ನಾಟಿ ಮಾಡಿದ ಭತ್ತ ಮಾರುಕಟ್ಟೆಗೆ ಲಗ್ಗೆ ಹಾಕುತ್ತಿದ್ದಂತೆ ಧಾರಣೆ ಕುಸಿತವಾಗಿದೆ. ಅದೇ ಬಿಸಿ ಶೇಂಗಾಕ್ಕೂ ತಟ್ಟಿದೆ. ಲಾಕ್‌ಡೌನ್‌ನಿಂದ ಧಾರಣೆ ಇನ್ನಷ್ಟು ಕುಸಿಯುವ ಆತಂಕ ರೈತರನ್ನು ಕಾಡುತ್ತಿದೆ.

ನಾರಾಯಣಪುರ ಎಡದಂಡೆ ಕಾಲುವೆಗೆ ಬೇಸಿಗೆ ಹಂಗಾಮಿನ ಬೆಳೆಗೆ ಸಾಕಷ್ಟು ನೀರು ಹರಿದು ಬಂದಿದ್ದರಿಂದ ರೈತರು ಉತ್ಸಾಹದಿಂದ ಭತ್ತದ ವಿವಿಧ ತಳಿಗಳಾದ ಸುಜಾತ, ಆರ್‌.ಎಸ್– 22 ನಾಟಿ ಮಾಡಿದ್ದರು. ಕಟಾವು ಕಾರ್ಯ ಮುಕ್ತಾಯವಾಗಿದೆ. ಸಂಗ್ರಹಿಸಿ ಇಟ್ಟಿರುವ ಭತ್ತವನ್ನು ಮಾರಾಟ ಮಾಡಲು ರೈತರು ತೆರಳಿದರೆ ಧಾರಣೆ ತೀವ್ರವಾಗಿ ನೆಲಕಚ್ಚಿದೆ. 77 ಕೆ.ಜಿ ಭತ್ತದ
ಧಾರಣೆ ₹800 ಆಗಿದೆ.

ಸಾವಿರಾರು ರೂಪಾಯಿ ವೆಚ್ಚ ಮಾಡಿದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲಿ ವಾರಾಂತ್ಯ ಕರ್ಫ್ಯೂ ಹಾಗೂ ಲಾಕ್‌ಡೌನ್ ಜಾರಿ ಮಾಡುವ ಸುಳಿವು ಅರಿತ ದಲ್ಲಾಳಿಗಳು ಇನ್ನಷ್ಟು ಕಡಿಮೆ ಬೆಲೆಗೆ ಭತ್ತ ಕೇಳುತ್ತಿದ್ದಾರೆ. ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ರೈತ ಮುಖಂಡ ಚೆನ್ನಪ್ಪ ಆನೇಗುಂದಿ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ಶೇಂಗಾಕ್ಕೂ ಹೊಡೆತ: ಮುಂಗಾರು ಹಂಗಾಮಿನಲ್ಲಿ ಹೆಚ್ಚಿನ ಮಳೆ ಬಾಧಿಸಿದ್ದರಿಂದ ನಷ್ಟ ಅನುಭವಿಸಿದ ರೈತರು ಬೇಸಿಗೆ ಹಂಗಾಮಿನಲ್ಲಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಾಗಿ ಶೇಂಗಾ ಬಿತ್ತನೆ ಮಾಡಿದ್ದರು. ಆರಂಭದಲ್ಲಿ ಭರ್ಜರಿ ಧಾರಣೆ ದೊರೆಯಿತು. ನಂತರ 15 ದಿನದಲ್ಲಿ ಶೇಂಗಾ ಧಾರಣೆ ಇಳಿಮುಖವಾಗುತ್ತಾ ಬಂದಿತು. ಹೆಚ್ಚಾಗಿ ನೆರೆ ಮಹಾರಾಷ್ಟ್ರಕ್ಕೆ ಶೇಂಗಾ ತೆಗೆದುಕೊಂಡು ಸಾಗುತ್ತಿದ್ದರು. ಅಲ್ಲಿ ಲಾಕ್‌ಡೌನ್ ಸಮಸ್ಯೆಯಿಂದ ವ್ಯಾಪಾರಕ್ಕೆ ಧಕ್ಕೆ ಉಂಟಾಯಿತು. ಇದರಿಂದ ದಲ್ಲಾಳಿಗಳು ಧಾರಣೆಯನ್ನು ಕುಸಿತವಾಗುವಂತೆ ಮಾಡಿದರು. ಆದರೆ ಶೇಂಗಾ ಎಣ್ಣೆಯ ಧಾರಣೆ ಪ್ರತಿ ಕೆ.ಜಿಗೆ ₹150 ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದ್ಯಾವ ನ್ಯಾಯ ಎಂದು ರೈತ ಮಾನಪ್ಪ ಪೂಜಾರಿ ಪ್ರಶ್ನಿಸುತ್ತಾರೆ.

ಶ್ರಮವಹಿಸಿ ದುಡಿತ ಬೆಳೆಗೆ ಈಗ ಧಾರಣೆ ಕುಸಿತ ರೈತರಿಗೆ ಮತ್ತೊಂದು ಆಘಾತ ನೀಡಿದೆ. ಲಾಕ್‌ಡೌನ್ ಹಾಗೂ ಇನ್ನಿತರ ನೆಪಗಳನ್ನು ಹೇಳದೆ ಸರ್ಕಾರ ರೈತರ ನೆರವಿಗೆ ಆಗಮಿಸಬೇಕು ಎಂದು ಶೇಂಗಾ ಮತ್ತು ಭತ್ತ ಬೆಳೆಗಾರರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT