ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತದ ಬೆಲೆ ಕುಸಿತ; ಕಂಗಾಲಾದ ಅನ್ನದಾತ

ಸುರಪುರ: ಸಾಲದ ಸುಳಿಯಲ್ಲಿ ರೈತರು, ಭತ್ತಕ್ಕೆ ಬೆಂಬಲ ಬೆಲೆ ಘೋಷಣೆಗೆ ಸರ್ಕಾರಕ್ಕೆ ಆಗ್ರಹ
Last Updated 8 ನವೆಂಬರ್ 2020, 5:29 IST
ಅಕ್ಷರ ಗಾತ್ರ

ಸುರಪುರ: ಅತಿವೃಷ್ಟಿಯಿಂದ ಹಾನಿಗೊಳಗಾದ ಅನ್ನದಾತ ಈಗ ಭತ್ತದ ಬೆಲೆ ಕುಸಿತದಿಂದ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.

ಸತತ ಸುರಿದ ಮಳೆಯಿಂದ ಈ ಭಾಗದ ತೆನೆ ಕಟ್ಟಿದ್ದ ಶೇ 20ರಷ್ಟು ಭತ್ತ ನೆಲ ಕಚ್ಚಿತ್ತು. ಉಳಿದೆಡೆ ಭಾಗಶಃ ನಷ್ಟವಾಗಿತ್ತು. ಹಾಗೂ ಹೀಗೂ ಕಷ್ಟ ಪಟ್ಟು ರೈತರು ಭತ್ತ ಕಟಾವು ಮಾಡುತ್ತಿದ್ದಾರೆ. ಈಗಾಗಲೇ ತಾಲ್ಲೂಕಿನಲ್ಲಿ ಶೇಕಡಾ 40ರಷ್ಟು ಭತ್ತ ಕಟಾವು ಮುಗಿದಿದೆ. ಆದರೆ ಭತ್ತದ ಬೆಲೆ ಕುಸಿದ್ದಿದ್ದರಿಂದ ರೈತರು ಇತ್ತ ಮಾರಾಟ ಮಾಡಲೂ ಆಗದೆ ಸಂಗ್ರಹಿಸಲೂ ಆಗದೆ ಚಿಂತಾಕ್ರಾಂತನಾಗಿದ್ದಾರೆ.

ಕಳೆದ ಸಾಲಿನಲ್ಲಿ ಸಾಮಾನ್ಯ ಭತ್ತಕ್ಕೆ (75 ಕೆ.ಜಿ ಚೀಲಕ್ಕೆ) ₹1,100ರಿಂದ 1,200ವರೆಗೆ, ಉತ್ತಮ ಭತ್ತಕ್ಕೆ ₹1,350 ರಿಂದ 1,450ರವರೆಗೆ ಭತ್ತದ ಬೆಲೆ ಇತ್ತು. ರೈತರಿಗೆ ಆದಾಯವೂ ಅಗಿತ್ತು. ಈಗ ಸಾಮಾನ್ಯ ಭತ್ತಕ್ಕೆ ₹900, ಉತ್ತಮ ಭತ್ತಕ್ಕೆ ₹1,100 ಬೆಲೆ ಇದೆ. ಈ ಬೆಲೆಗೆ ಮಾರಾಟ ಮಾಡಿದರೆ ರೈತರಿಗೆ ನಷ್ಟ ಉಂಟಾಗುತ್ತದೆ.

ಸುರಪುರ ಮತ್ತು ಹುಣಸಗಿ ತಾಲ್ಲೂಕಿನಲ್ಲಿ 55 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗಿದೆ. ಉತ್ತಮ ಇಳುವರಿ ಬಂದಿದ್ದು ಎಕರೆಗೆ 35 ರಿಂದ 45 ಚೀಲದವರೆಗೂ ಭತ್ತ ಬೆಳೆದಿದೆ. ರೈತರು ಬೇಸಾಯಕ್ಕೆ ಸಾಕಷ್ಟು ಸಾಲವನ್ನು ಮಾಡಿಕೊಂಡಿದ್ದಾರೆ. ಸಾಲ ತೀರಿಸಲು ಕಡಿಮೆ ಧಾರಣೆಗೆ ಭತ್ತ ಮಾರಾಟ ಮಾಡುವ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಸಾಲದ್ದಕ್ಕೆ ಕಟಾವು ಮಾಡುವ ಬೆಲೆಯನ್ನು ತಾಸಿಗೆ ₹2 ಸಾವಿರದಿಂದ 2500 ಸಾವಿರದವರೆಗೆ ಯಂತ್ರದ ಮಾಲಿಕರು ನಿಗದಿ ಮಾಡುತ್ತಿದ್ದಾರೆ.

ಸರ್ಕಾರ ಕಟಾವು ಧಾರಣೆಯನ್ನು ₹1,800ಕ್ಕೆ ನಿಗದಿಮಾಡಿದೆ. ಸರ್ಕಾರದ ಈ ಆದೇಶ ಇಲ್ಲಿ ಸ್ಪಷ್ಟವಾಗಿ ಉಲ್ಲಂಘನೆಯಾಗುತ್ತಿದೆ ಎಂದು ರೈತರು ಆರೋಪಿಸುತ್ತಾರೆ.

ಆಸಕ್ತಿ ತೋರದ ವ್ಯಾಪಾರಸ್ಥರು: ಸುರಪುರ ಮತ್ತು ಹುಣಸಗಿ ತಾಲ್ಲೂಕಿನಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸಲು ಟೆಂಡರ್ ಕರೆಯಲಾಗಿತ್ತು. ಆದರೆ ಯಾರೊಬ್ಬರು ಟೆಂಡರ್ ಹಾಕಿಲ್ಲ. ಭತ್ತ ಖರೀದಿ ಕೇಂದ್ರ ಸ್ಥಾಪಿಸಿದರೆ ಸರ್ಕಾರ ನಿಗದಿ ಮಾಡುವ ಬೆಲೆಯಲ್ಲಿ ಖರೀದಿಸಬೇಕಾಗುತ್ತದೆ. ಇದರಿಂದ ನಷ್ಟವೇ ಹೆಚ್ಚು. ನೇರವಾಗಿ ರೈತರ ಹೊಲಗಳಿಗೆ ಹೋಗಿ ಖರೀದಿಸಿದರೆ ಲಾಭ ನಿರೀಕ್ಷಿಸಬಹುದು ಎಂದು
ಹೆಸರು ಹೇಳಲು ಇಚ್ಚಿಸದ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.

ಖರೀದಿದಾರರು ಈ ಮೊದಲು ಕೃಷಿ ಉತ್ಪನ್ನಗಳನ್ನು ಖರೀದಿಸಲು ಎಪಿಎಂಸಿ ಅನುಮತಿ ಪಡೆಯಬೇಕಿತ್ತು. ಬದಲಾದ ನಿಯಮದ ಪ್ರಕಾರ ಈಗ ಅನುಮತಿಯ ಅವಶ್ಯಕತೆ ಇಲ್ಲ. ಈ ಮೊದಲು 100ಕ್ಕೆ ₹1.50 ಶುಲ್ಕ ಎಪಿಎಂಸಿಗೆ ಭರಿಸಬೇಕಿತ್ತು. ಈಗ 100ಕ್ಕೆ ಕೇವಲ 35 ಪೈಸೆ ಶುಲ್ಕ ಇದೆ. ಖರೀದಿದಾರರು ರೈತರಿಂದ ನೇರವಾಗಿ ಖರೀದಿ ಮಾಡಲು ಅವಕಾಶ ಇದೆ. ಇದರಿಂದಲೂ ರೈತರ ಶೋಷಣೆಯಾಗುತ್ತಿದೆ ಎನ್ನುತ್ತಾರೆ ರೈತ ಮುಖಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT