ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿತೀಯ ಪಿಯು: ‘ಅಂದಿನ ಪಾಠ ಅಂದೇ ಓದುತ್ತಿದ್ದೆ’

ಪರೀಕ್ಷೆಯಲ್ಲಿ ಪರಿನ್‌, ವಿನುತಾ ಜಿಲ್ಲೆಗೆ ಪ್ರಥಮ
Last Updated 16 ಏಪ್ರಿಲ್ 2019, 14:14 IST
ಅಕ್ಷರ ಗಾತ್ರ

ಯಾದಗಿರಿ: ಕಾಲೇಜಿನಲ್ಲಿ ಆಸಕ್ತಿಯಿಂದ ಪಾಠ ಕೇಳುತ್ತಿದ್ದೆ. ಮನೆಗೆ ಬಂದ ನಂತರ ಮನನ ಮಾಡುತ್ತಿದ್ದೆ. ಯಾವುದೇ ಕೋಚಿಂಗ್‌ಗೆ ಹೋಗಲಿಲ್ಲ. ಉತ್ತಮ ಅಂಕ ಬಂದಿದ್ದಕ್ಕೆ ಖುಷಿಯಾಗಿದೆ..

ಇವು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಜಿಲ್ಲೆಗ ಪ್ರಥಮ ಸ್ಥಾನ ಪಡೆದಿರುವ ನಗರದ ಸಹ್ಯಾದ್ರಿ ವಿಜ್ಞಾನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಫರಿನ್ ಫಾತಿಮಾ ಅವರ ಸಂತಸದ ನುಡಿಗಳು.

ಅವರು ಶಹಾಪುರದ ಡಿ.ದೇವರಾಜ ಅರಸು ಸ್ವತಂತ್ರ ಪದವಿಪೂರ್ವ ವಿಜ್ಞಾನ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಎ.ಎಸ್.ವಿನುತಾ ಅವರೊಂದಿಗೆ ಜಂಟಿಯಾಗಿ ಮೊದಲ ಸ್ಥಾನ (572 ಅಂಕ; ಶೇ 95.33) ವನ್ನು ಹಂಚಿಕೊಂಡಿದ್ದಾರೆ.

ನಗರದ ಗೋಗಿ ಮೊಹಲ್ಲಾ ನಿವಾಸಿಗಳಾದ ಅಬ್ದುಲ್ ಗನಿ ವಂಟಿ ಹಾಗೂ ಖಮರುನ್ನಿಸಾ ದಂಪತಿಯ ಪುತ್ರಿಯಾದ ಫರಿನ್, 572 (ಶೇ 95.33) ಅಂಕ ಗಳಿಸಿದ್ದಾರೆ. ಅವರು ಜೀವವಿಜ್ಞಾನದಲ್ಲಿ –96, ಬೌತವಿಜ್ಞಾನ–96, ಗಣಿತ–96, ರಾಸಾಯನವಿಜ್ಞಾನ–100, ಹಿಂದಿ–94, ಇಂಗ್ಲಿಷ್‌–90 ಅಂಕಗಳನ್ನು ಪಡೆದ್ದಾರೆ.

ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿದ್ದೆ. ಮನೆಗೆ ಬಂದ ನಂತರ ಮೂರು ತಾಸು ಅಭ್ಯಾಸ ಮಾಡುತ್ತಿದ್ದೆ. ಏನೇ ಗೊಂದಲ ಇದ್ದರೂ ಕಾಲೇಜಿನಲ್ಲಿ ಪರಿಹರಿಸಿಕೊಳ್ಳುತ್ತಿದ್ದೆ. ಹೀಗಾಗಿ ಉತ್ತಮ ಅಂಕ ಗಳಿಸಲು ಸಾಧ್ಯವಾಯಿತು ಎನ್ನುತ್ತಾರೆ ಫರಿನ್‌.

ಕಾಲೇಜಿನಲ್ಲಿ ಪ್ರಾಂಶುಪಾಲರು, ಉಪನ್ಯಾಸಕರು ಉತ್ತಮ ಪ್ರೋತ್ಸಾಹ ನೀಡುತ್ತಿದ್ದರು. ಅಂಕ ಗಳಿಕೆಗೆ ಓದಬೇಡಿ, ಜ್ಞಾನ ಸಂಪಾದನೆಗೆ ಅಭ್ಯಾಸ ಮಾಡಿ ಎಂದು ಹುರಿದುಂಬಿಸುತ್ತಿದ್ದರು ಎಂದರು.

ಉಪನ್ಯಾಸಕರು, ಪೋಷಕರು ಯಾವುದೇ ಒತ್ತಡ ಹಾಕಲಿಲ್ಲ. ಅಭ್ಯಾಸಕ್ಕೆ ಬೇಕಾದ ವಿಷಯಗಳನ್ನು ಉಪನ್ಯಾಸಕರು ವಾಟ್ಸ್‌ಆ್ಯಪ್‌ನಲ್ಲಿ ಕಳಿಸುತ್ತಿದ್ದರು. ಹೀಗಾಗಿ ಮಾತ್ರ ಅದನ್ನು ಬಳಕೆ ಮಾಡುತ್ತಿದ್ದೆ. ಮೊಬೈಲ್ ಹಾಗೂ ಫೇಸ್‌ಬುಲ್, ಇನ್‌ಸ್ಟಾಗ್ರಾಂಗಳನ್ನು ಬಳಕೆ ಮಾಡುತ್ತಿರಲಿಲ್ಲ. ಹೀಗಾಗಿ ಏಕಾಗ್ರತೆಯಿಂದ ಓದಲು ಸಾಧ್ಯವಾಯಿತು ಎಂದು ಹೇಳಿದರು.

ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಗೆ ಐದನೇ ಸ್ಥಾನ ಪಡೆದಿದ್ದೆ. ನಾನು ಡಾಕ್ಟರ್ ಆಗಬೇಕು ಎಂಬುದು ನನ್ನ ತಂದೆಯ ಕನಸು. ಹೀಗಾಗಿ ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡೆ. ಎಂಬಿಬಿಎಸ್ ಮಾಡುವುದು ನನ್ನ ಗುರಿ. ಮೇ 5ರಂದು ನೀಟ್ ಪರೀಕ್ಷೆ ಇದ್ದು, ಅದಕ್ಕಾಗಿ ಓದುತ್ತಿದ್ದೇನೆ. ಕಾಲೇಜಿನಲ್ಲಿಯೂ ನೀಟ್ ಪರೀಕ್ಷೆಗಾಗಿ ತರಬೇತಿ ನೀಡಿದ್ದಾರೆ ಎಂದರು.

’ಕ್ಯಾನ್ಸರ್ ತಜ್ಞೆ ಆಗುವೆ’

ಉತ್ತಮ ಅಂಕ ಬರುವ ನಿರೀಕ್ಷೆ ಇತ್ತು. ಆದರೆ, ಜಿಲ್ಲೆಗೆ ಪ್ರಥಮ ಸ್ಥಾನ ಬಂದಿರುವುದಕ್ಕೆ ತುಂಬಾ ಖುಷಿಯಾಗಿದೆ.. ಹೀಗೆ ಸಂಭ್ರಮದಿಂದ ನುಡಿದವರು ಎ.ಎಸ್.ವಿನುತಾ.

ಶಹಾಪುರದ ಡಿ.ದೇವರಾಜ ಅರಸು ಸ್ವತಂತ್ರ ವಿಜ್ಞಾನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ವಿನುತಾ, ಬೌತವಿಜ್ಞಾನದಲ್ಲಿ 95, ರಾಸಾಯನ ವಿಜ್ಞಾನದಲ್ಲಿ 95, ಗಣಿತ–99, ಜೀವವಿಜ್ಞಾನ–97, ಇಂಗ್ಲಿಷ 94 ಮತ್ತು ಕನ್ನಡದಲ್ಲಿ 92 (ಒಟ್ಟು 572) ಅಂಕ ಗಳಿಸಿದ್ದಾರೆ.

‘ವೈದ್ಯೆ ಆಗಬೇಕು ಎಂಬುದು ನನ್ನ ಕನಸಾಗಿತ್ತು. ಅದಕ್ಕಾಗಿ ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ಆರಿಸಿಕೊಂಡಿದ್ದೆ. ಪಿಯು ಮೊದಲ ವರ್ಷವಿದ್ದಾಗ ತಂದೆಗೆ ಕ್ಯಾನ್ಸರ್‌ ಇದ್ದುದು ತಿಳಿಯಿತು. ಅವರು ಕ್ಯಾನ್ಸರ್‌ನಿಂದಲೇ ಮೃತಪಟ್ಟರು. ಅದಾದ ನಂತರ ನಾನು ಕ್ಯಾನ್ಸರ್ ತಜ್ಞೆ ಆಗಬೇಕು ಎಂದು ಗುರಿ ಇಟ್ಟುಕೊಂಡು ಓದಿದೆ. ಮುಂದೆ ಎಂಬಿಬಿಎಸ್ ಮಾಡಬೇಕು ಎಂದುಕೊಂಡಿದ್ದೇನೆ’ ಎಂದು ತಮ್ಮ ಕನಸು ಬಿಚ್ಚಿಟ್ಟರು.

ಕಾಲೇಜಿನ ಅವಧಿ ಬಿಟ್ಟು ಮನೆಯಲ್ಲಿ ಪ್ರತಿ ದಿನ ಆರು ಗಂಟೆ ಅಭ್ಯಾಸಕ್ಕೆ ಮೀಸಲಿಡುತ್ತಿದ್ದೆ. ಪರೀಕ್ಷಾ ಸಮಯದಲ್ಲಿ ಹತ್ತು ತಾಸು ಓದುತ್ತಿದ್ದೆ ಎಂದರು.

ಬೇಸಿಗೆ ರಜೆಯಲ್ಲಿ ನಮಗೆ ವಿಶೇಷ ತರಗತಿಗಳನ್ನು ತೆಗೆದುಕೊಂಡಿದ್ದರು. ಹೀಗಾಗಿ ಕೋಚಿಂಗ್‌ಗೆ ಹೋಗುವ ಅಗತ್ಯ ಬೀಳಲಿಲ್ಲ. ಕಾಲೇಜಿನ ಅವಧಿಯಲ್ಲಿ ನಮ್ಮ ಎಲ್ಲ ಗೊಂದಲಗಳನ್ನು ಉಪನ್ಯಾಸಕರು ಪರಿಹರಿಸುತ್ತಿದ್ದರು. ಯಾವ ರೀತಿ ಓದಬೇಕು ಎಂದು ಮಾರ್ಗದರ್ಶನ ಮಾಡುತ್ತಿದ್ದರು. ಹೀಗಾಗಿ ಯಾವುದೇ ಭಯ ಇಲ್ಲದೆ ಪರೀಕ್ಷೆ ಎದುರಿಸಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT