ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘2 ತಿಂಗಳ ಗೌರವಧನ ಕೂಡಲೇ ಪಾವತಿಸಿ’

ಅಂಗನವಾಡಿ ಕಾರ್ಯಕರ್ತೆಯರಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ
Last Updated 30 ನವೆಂಬರ್ 2022, 16:08 IST
ಅಕ್ಷರ ಗಾತ್ರ

ಯಾದಗಿರಿ: ಬಾಕಿ ಇರುವ 2 ತಿಂಗಳ ಗೌರವಧನ ಕೂಡಲೇ ಪಾವತಿ, ಪ್ರತಿ ತಿಂಗಳು 5ನೇ ತಾರೀಖಿನ ಒಳಗಾಗಿ ಗೌರವಧನ ಪಾವತಿ ಮಾಡಬೇಕು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಮುಖಂಡರು, ಪ್ರತಿ ತಿಂಗಳು ಗೌರವಧನ ಪಾವತಿ ಮಾಡುವಂತೆ ಹಲವು ಬಾರಿ ಮನವಿ ಮಾಡಿದರೂ ಸೂಕ್ತ ಕ್ರಮವಹಿಸದೆ, 2-3 ತಿಂಗಳಿಗೊಮ್ಮೆ ಗೌರವಧನ ಪಾವತಿ ಮಾಡುತ್ತಿರುವುದರಿಂದ ಕಾರ್ಯಕರ್ತೆಯರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಗೌರವಧನ ಬಾಕಿ ಇರುವುದು ಮತ್ತು ಕಾರ್ಯಕರ್ತೆಯರಿಗೆ ಸರ್ಕಾರದಿಂದ ನೀಡುವ ಗರ್ಭಕೋಶದ ಶಸ್ತ್ರ ಚಿಕಿತ್ಸೆಯ ಹಣ ಮರು ಪಾವತಿ ಆಗದೆ ಇರುವುದರಿಂದ ಆರ್ಥಿಕ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೆಲೆ ಏರಿಕೆ ದಿನಗಳಲ್ಲಿ ದುಡಿದ ಹಣ ಸಮಯಕ್ಕೆ ಸರಿಯಾಗಿ ಕೈಗೆ ಸಿಗದೆ ಇರುವುದರಿಂದ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಇಂಥ ಸಂದರ್ಭಗಳಲ್ಲಿ ಕೇಂದ್ರಗಳ ಬಾಡಿಗೆ ಬಾಕಿ ಇರುವುದು, ತರಕಾರಿಯನ್ನು ತರುವುದು ಎಲ್ಲದಕ್ಕೂ ಕೈಯಿಂದ ಖರ್ಚು ಮಾಡಬೇಕಾಗಿದೆ ಎಂದರು.

ಅಂಗನವಾಡಿ ಕೇಂದ್ರಗಳಿಗೆ ಮೆಡಿಕಲ್ ಕಿಟ್‌ಗಳನ್ನು ನೇರವಾಗಿ ಸರಬರಾಜು ಮಾಡಬೇಕು. ಈ ಕಿಟ್‌ಗಳನ್ನು ಜಿಲ್ಲಾ ಕೇಂದ್ರಗಳಿಗೆ ತೆರಳಿ ಕಾರ್ಯಕರ್ತೆಯರು ತೆಗೆದುಕೊಂಡು ಹೋಗಬೇಕಾಗಿದೆ.ಇನ್ ಚಾರ್ಜ್ ಕೆಲಸ ಮಾಡಿರುವ ಕಾರ್ಯಕರ್ತೆಯರಿಗೆ ಇನ್ ಚಾರ್ಜ್ ಮೊತ್ತ ಪಾವತಿಸಬೇಕು. ನಿವೃತ್ತಿ ಹೊಂದಿರುವ ನೌಕರರಿಗೆ ನಿವೃತ್ತಿ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಬಾಕಿ ಇರುವ 9 ತಿಂಗಳ ಕೇಂದ್ರಗಳ ಬಾಡಿಗೆ ಹಣ ಕೂಡಲೇ ಒದಗಿಸಬೇಕು. ತರಕಾರಿ ಮೊತ್ತ, ಪೋಷಣ್ ಅಭಿಯಾನ ಮೊತ್ತ, ಮಾತೃವಂದನಾ ಬಾಕಿ ಇರುವ ಮೊತ್ತವನ್ನು ಪಾವತಿ ಮಾಡಬೇಕು ಎಂದು ಆಗ್ರಹಿಸಿದರು.

ಚುನಾವಣೆ ಕೆಲಸಕ್ಕೆ ಕಾರ್ಯಕರ್ತೆಯರಿಗೆ ನೀಡುವ ಗೌರವಧನ ಹೆಚ್ಚಳಕ್ಕೆ ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನುಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೊಟಪ್ಪಗೊಳ ಮನವಿ ಪತ್ರ ಸ್ವೀಕರಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪ್ರಭಾಕರ ಕವಿತಾಳ ಮನವಿ ಪತ್ರ ಸ್ವೀಕರಿಸಿ ‘ರಾಜ್ಯದಿಂದ ಅನುದಾನ ಬಿಡುಗಡೆ ಆಗಿದೆ. ಇನ್ನೆರಡು ದಿನಗಳಲ್ಲಿ ಬಾಕಿ ಇರುವ ಗೌರವಧನ ಮತ್ತು ಕೇಂದ್ರಗಳ ಬಾಡಿಗೆ ಹಣವನ್ನು ಪಾವತಿ ಮಾಡಲಾಗುತ್ತದೆ. ಇನ್ನುಳಿದ ಬೇಡಿಕೆಗಳ ಬಗ್ಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಈ ವೇಳೆ ಸಂಘ ಜಿಲ್ಲಾ ಅಧ್ಯಕ್ಷೆ ಡಿ.ಉಮಾದೇವಿ, ಜಿಲ್ಲಾ ಕಾರ್ಯದರ್ಶಿ ರೇಣುಕಾ ಪಾಟೀಲ, ಜಿಲ್ಲಾ ಸಮಿತಿ ಪದಾಧಿಕಾರಿಗಳಾದ ಅಯ್ಯಮ್ಮ ಜಕಾತೆ, ಶ್ರೀದೇವಿ, ಬಸಮ್ಮ, ರಾಧಾ ರೆಡ್ಡಿ, ಗಿರಿಜಾ ಪಾಟೀಲ, ಸಾವಿತ್ರಿ, ಶಾರದಾದೇವಿ, ಶೈಲಜಾ ಪಾಟೀಲ, ಶಶಿಕಲಾ, ಮಮತಾ, ಪ್ರತಿಮಾದೇವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT