ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ಹಳ್ಳ ಸಂರಕ್ಷಣೆಗೆ ಜನರ ಆಗ್ರಹ

ಶಹಾಪುರ: ಹಳ್ಳ ಒತ್ತುವರಿ, ಮನೆಗಳಿಗೆ ನುಗ್ಗಿದ ನೀರು, ಕ್ರಮಕ್ಕೆ ಆಗ್ರಹ
Last Updated 7 ಜುಲೈ 2020, 3:33 IST
ಅಕ್ಷರ ಗಾತ್ರ

ಶಹಾಪುರ: ನಗರದ ಹೃದಯ ಭಾಗವನ್ನು ಸೀಳಿಕೊಂಡು ಹರಿಯುತ್ತಿರುವ ಹಳೆ ಬಸ್ ನಿಲ್ದಾಣ-ಬಸವೇಶ್ವರ ನಗರ ರಸ್ತೆಯ ಹಳ್ಳವು ಒತ್ತುವರಿಯಾಗಿ ನೀರು ಸರಾಗವಾಗಿ ಸಾಗುತ್ತಿಲ್ಲ.ಹಳ್ಳಕ್ಕೆ ಹೊಂದಿಕೊಂಡಂತೆ ಎಡ ಮತ್ತು ಬಲ ಭಾಗದಲ್ಲಿನ ಒತ್ತುವರಿ ಜಾಗವನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ನಗರದಲ್ಲಿ ಈಚೆಗೆ ಸುರಿದ ಮಳೆಯಿಂದ ನೂರಾರು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು. ಹಳೆ ಬಸ್ ನಿಲ್ದಾಣ- ಬಸವೇಶ್ವರ ನಗರಕ್ಕೆ ತೆರಳುವ ಮಾರ್ಗದಲ್ಲಿರುವ ಸೇತುವೆ ಬಳಿ ಪ್ರಭಾವಿ ರಾಜಕೀಯ ವ್ಯಕ್ತಿಯೊಬ್ಬರು ಹಳ್ಳವನ್ನು ಒತ್ತುವರಿ ಮಾಡಿ ಕಬ್ಬಿಣದ ರಾಡ್‌ಗಳಿಂದ ತಳಪಾಯ ಹಾಕುವುದರ ಜೊತೆಗೆ ಸುಮಾರು ಮೂರು ಅಡಿ ಎತ್ತರ ಕಟ್ಟಿ ಕಟ್ಟಡ ನಿರ್ಮಿಸಲು ಮುಂದಾಗಿದ್ದಾರೆ. (ಈಗ ಅರ್ಧಕ್ಕೆ ನಿಲ್ಲಿಸಿದ್ದಾರೆ). ಇದರಿಂದ ನೀರು ಹರಿಯುವ ಹಳ್ಳದ ಹಾದಿ ಕಿರಿದಾಗಿದೆ.

ಈಚೆಗೆ ನಗರದಲ್ಲಿ 300 ಮಿ.ಮೀ ಸುರಿದ ಮಳೆಗೆ ಹೆಚ್ಚಿನ ನೀರು ಹಳ್ಳಕ್ಕೆ ಹರಿದು ಬಂದಿದ್ದರಿಂದ ಅಲ್ಲಿನ ನಿವಾಸಿಗರು ಸಂಕಷ್ಟ ಎದುರಿಸುವಂತೆ ಆಯಿತು. ವಿಚಿತ್ರವೆಂದರೆ ಇಂದಿಗೂ ಹಳ್ಳದಲ್ಲಿ ನಿರ್ಮಿಸಿದ ಅನಧಿಕೃತ ಕಟ್ಟಡವನ್ನು ತೆರವುಗೊಳಿಸುವ ಕಾರ್ಯಕ್ಕೆ ತಹಶೀಲ್ದಾರ್ ಆಗಲೀ ಪೌರಾಯುಕ್ತರಾಗಲೀ ಮುಂದಾಗಿಲ್ಲ. ಮುಂದೆ ಮಳೆ ಅನಾಹುತವನ್ನು ತಡೆಯುವ ಕ್ರಮಕ್ಕೆ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ಸರಿಯಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಸಿದ್ದಯ್ಯ ಹಿರೇಮಠ ಆರೋಪಿಸಿದರು.

ಸುಮಾರು 15 ಕಿ.ಮೀಗೂ ಹೆಚ್ಚು ಉದ್ದ ಹರಿಯುವ ಹಳ್ಳದ ಸ್ವಚ್ಛತಾ ಕಾರ್ಯವನ್ನು ಮೂರು ತಿಂಗಳ ಹಿಂದೆ ₹60 ಲಕ್ಷ ವೆಚ್ಚದಲ್ಲಿ ಕೃಷ್ಣಾ ಕಾಡಾದ ಅನುದಾನದಲ್ಲಿ ಕೈಗೆತ್ತಿಕೊಂಡಿದ್ದರಿಂದ ಮಳೆ ನೀರು ತುಸು ಸರಾಗವಾಗಿ ಸಾಗಿತ್ತು. ಇಲ್ಲದೆ ಹೋದರೆ ದೊಡ್ಡ ಅನಾಹುತ ಸೃಷ್ಟಿಯಾಗುತ್ತಿತ್ತು. ಹಳ್ಳದ ಎಡ ಮತ್ತು ಬಲ ಭಾಗದಲ್ಲಿ ಒತ್ತುವರಿ ಮಾಡಿ ಮಳಿಗೆ, ಮನೆ, ಅಂಗಡಿ ನಿರ್ಮಿಸಿಕೊಂಡಿದ್ದವರನ್ನು ಹೊರ ಹಾಕುವ ಕೆಲಸ ತುರ್ತಾಗಿ ನಡೆಯಬೇಕಾಗಿದೆ. ಅಲ್ಲದೆ ಬಸವೇಶ್ವರ ವೃತ್ತದ ಬಳಿಯು ಚರಂಡಿ ಮೇಲೆ ಮಳಿಗೆ ನಿರ್ಮಿಸಿದ್ದರಿಂದ ಮಳೆ ನೀರು ಸಾಗುತ್ತಿಲ್ಲ. ಹಳ್ಳ ತೆರವು ಕಾರ್ಯಾಚರಣೆ ಸಂದರ್ಭದಲ್ಲಿಯೇ ಚರಂಡಿ ಮೇಲೆ ನಿರ್ಮಿಸಿದ ಮಳಿಗೆ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಬೇಕಾಗಿದೆ ಎನ್ನುತ್ತಾರೆ ನಗರಸಭೆಯ ಅಧಿಕಾರಿಯೊಬ್ಬರು.

ಹಳ್ಳಕ್ಕೆ ಮಳೆ ನೀರು ಹಾಗೂ ಶಹಾಪುರ ಶಾಖಾ ಕಾಲುವೆಯ (ಎಸ್ಬಿಸಿ) ಹೆಚ್ಚುವರಿ ನೀರು ಬಂದು ಸೇರಿಕೊಳ್ಳುತ್ತದೆ. ಇದರಿಂದ ಹಳ್ಳದಲ್ಲಿ ಸದಾ ನೀರು ಹರಿಯುತ್ತದೆ. ಅನಾವಶ್ಯಕವಾಗಿ ನೀರು ಪೋಲಾಗುವುದನ್ನು ತಡೆಯಬೇಕು. ಇದರಿಂದ ಅಂತರ್ಜಲ ಮಟ್ಟ ಹೆಚ್ಚುವುದು. ತ್ಯಾಜ್ಯ ವಸ್ತು ಎಸೆಯದಂತೆ ಹಳ್ಳದ ಎಡ ಮತ್ತು ಬಲ ಭಾಗದದಲ್ಲಿ ಮುಳ್ಳು ತಂತಿ ಬೇಲಿ ಹಾಕಬೇಕು ಎಂದು ನಗರದ ಜನರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT