ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗತ್ಯ ವಸ್ತು ಖರೀದಿಗೆ ಮುಗಿಬಿದ್ದ ಜನ

ಸುರಕ್ಷಿತ ಅಂತರ, ಮಾಸ್ಕ್‌ ಮರೆತ ಜನ; ಕೋವಿಡ್‌ ಹೆಚ್ಚಳದ ಆತಂಕ
Last Updated 29 ಏಪ್ರಿಲ್ 2021, 6:39 IST
ಅಕ್ಷರ ಗಾತ್ರ

ಶಹಾಪುರ: ಲಾಕ್‌ಡೌನ್ ಜಾರಿ ಕಾರಣ ಬುಧವಾರ ನಗರದ ಜನತೆ ವಿವಿಧ ಕಡೆ ಸ್ಥಾಪಿಸಿರುವ ತರಕಾರಿ ಮಾರಾಟ ಕೇಂದ್ರಗಳಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಲು ಮುಗಿಬಿದ್ದರು.

ಸುರಕ್ಷಿತ ಅಂತರ ಹಾಗೂ ಮಾಸ್ಕ್ ಧರಿಸುವುದನ್ನು ಮರೆತು ಗುಂಪುಗುಂಪಾಗಿ ವಸ್ತುಗಳನ್ನು ಖರೀದಿಸುವುದು ಸಾಮಾನ್ಯವಾಗಿತ್ತು. ಅಲ್ಲದೆ, ತರಕಾರಿ ಮಾರಾಟಗಾರರು ಸಹ ಮಾಸ್ಕ್ ಧರಿಸದೆ ವ್ಯಾಪಾರ ನಡೆಸುತ್ತಿರುವುದು ಕಂಡು ಬಂದಿತು.

‘ರಂಜಾನ್‌ ಹಬ್ಬದ ಸಂದರ್ಭವಾಗಿದ್ದರಿಂದ ಮುಸ್ಲಿಂ ಮಹಿಳೆಯರು ಹೆಚ್ಚಾಗಿ ಮಾರುಕಟ್ಟೆಗೆ ಆಗಮಿಸಿ ಅಗತ್ಯ ವಸ್ತುಗಳನ್ನು ಖರೀದಿಸಿದರು’ ಎನ್ನುತ್ತಾರೆ ತರಕಾರಿ ವ್ಯಾಪಾರಿ ಮಹಿಬೂಬು ಸಾಬ್.

‘ಕಿರಾಣಿ ಹಾಗೂ ಇನ್ನಿತರ ಅಂಗಡಿಯ ಮುಂದೆ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಯಾವುದೇ ಗುರುತು ಹಾಕಿರಲಿಲ್ಲ. ಮಾಸ್ಕ್‌ ಸಹ ಧರಿಸಿರಲಿಲ್ಲ. ಗುಂಪಾಗಿ ನಿಂತು ವಸ್ತುಗಳನ್ನು ಖರೀದಿಸಲು ಮುಗಿಬಿದ್ದಿದ್ದರು’ ಎಂದು ನಗರದ ನಿವಾಸಿ ಶರಣಪ್ಪ ಅಸಮಾಧಾನ ವ್ಯಕ್ತಪಡಿಸಿದರು.

‘ನಗರಸಭೆ ಹಾಗೂ ಪೊಲೀಸ್ ಸಿಬ್ಬಂದಿ ಧ್ವನಿವರ್ಧಕದ ಮೂಲಕ ಸಾರ್ವಜನಿಕರಲ್ಲಿ ಎಚ್ಚರಿಕೆ ನೀಡುತ್ತಾ, ಸರ್ಕಾರದ ಮಾರ್ಗಸೂಚಿ ಪಾಲಿಸಲು ಜಾಗೃತಿ ಮೂಡಿಸುತ್ತಿದ್ದರೂ ಸಹ ಯಾವುದೇ ಪ್ರಯೋಜನ ಆಗಲಿಲ್ಲ’ ಎಂದು ಅಮರೇಶ ದೂರಿದ್ದಾರೆ.

ನಿಗದಿಪಡಿಸಿದ ಅವಧಿ ಮುಕ್ತಾಯವಾದಂತೆ ರಸ್ತೆಗಳಿಂದ ಡಿವೈಎಸ್ಪಿ ವೆಂಕಟೇಶ ಹೊಗಿಬಂಡಿ ಹಾಗೂ ತಹಶೀಲ್ದಾರ್‌ ಜಗನ್ನಾಥರಡ್ಡಿ ಅವರು ನಗರದ ಬಸವೇಶ್ವರ ವೃತ್ತ, ಸಿ.ಬಿ.ಕಮಾನ, ಮೋಚಿಗಡ್ಡೆ, ಹೊಸ ಬಸ್ ನಿಲ್ದಾಣ ಮುಂತಾದ ಕಡೆ ಭೇಟಿ ನೀಡಿ ಅಂಗಡಿ ಮುಂಗಟ್ಟು ಬಂದ್ ಮಾಡಿಸುವುದರ ಜೊತೆಗೆ ಅನವಶ್ಯವಾಗಿ ವಾಹನ ಸವಾರರ ಓಡಾಟಕ್ಕೆ ಬ್ರೇಕ್ ಹಾಕಿದರು. ದ್ವಿಚಕ್ರ ವಾಹನ ಸವಾರರನ್ನು ಹಿಡಿದು ಬಸ್ಕಿ ಹೊಡೆಸಿದರು.

‘ಮೊದಲ ದಿನವಾದ ಕಾರಣ ಜನರಿಕೆ ಎಚ್ಚರಿಕೆ ನೀಡಿ ಕಳುಹಿಸಿದೆ. ನಾಳೆಯಿಂದ ದಂಡ, ಬಲಪ್ರಯೋಗ, ವಾಹನ ಜಪ್ತಿ ಹೀಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT