ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋನ್‌ ಇನ್‌ ಕಾರ್ಯಕ್ರಮ; ಶಿಷ್ಯ ವೇತನ, ಸರ್ಕಾರಿ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚನ್ನಬಸವ ಮಾಹಿತಿ
Last Updated 10 ನವೆಂಬರ್ 2021, 15:30 IST
ಅಕ್ಷರ ಗಾತ್ರ

ಯಾದಗಿರಿ: ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್‌.ಎಸ್.ಚನ್ನಬಸವ ಜೊತೆಗೆ ‘ಪ್ರಜಾವಾಣಿ’ ಯುಬುಧವಾರ ಹಮ್ಮಿಕೊಂಡಿದ್ದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಹಲವಾರು ಓದುಗರು ಪ್ರಶ್ನೆಗಳನ್ನು ಕೇಳುವ ಮೂಲಕ ಸಂದೇಹಗಳನ್ನು ಬಗೆಹರಿಸಿಕೊಂಡರು. ಶಿಷ್ಯ ವೇತನ, ಪ್ರೈಜ್‌ ಮನಿ ಬಗೆಗಿನ ಗೊಂದಲಗಳನ್ನು ಬಗೆಹರಿಸಿ, ಮಾರ್ಗದರ್ಶನ ನೀಡಿದರು.

ಮಲ್ಲಿಕಾರ್ಜುನ ದೋರನಹಳ್ಳಿ:

ನನ್ನ ಮಗ 6 ನೇ ತರಗತಿ ಓದುತ್ತಿದ್ದಾನೆ. ವಸತಿ ನಿಲಯ ಪ್ರವೇಶ ಪಡೆಯುವುದು ಹೇಗೆ?

* ಆರನೇ ತರಗತಿ ಓದುವ ವಿದ್ಯಾರ್ಥಿಗಳಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರವೇಶ ಪರೀಕ್ಷೆ ಬರೆದು ಪ್ರವೇಶ ಪಡೆಯಬೇಕು. ಇಲ್ಲದಿದ್ದರೆ ಶಹಾಪುರದಲ್ಲಿ ನಮ್ಮ ಇಲಾಖೆಯ ಮೆಟ್ರಿಕ್ ಪೂರ್ವ ವಸತಿ‌ ನಿಲಯಗಳು ಇವೆ. ಅಲ್ಲಿ ಸೇರಿಸಿ.

ರಾಘವೇಂದ್ರ ಭಕ್ತಿ, ಸುರಪುರ:

ವಿದ್ಯಾರ್ಥಿಗಳಿಗೆ ಎಸ್‌ಸಿ, ಎಸ್‌ಟಿ ಅನುದಾನದಲ್ಲಿ ಸರಿಯಾಗಿ ಸಹಾಯಧನ ಬರುತ್ತಿಲ್ಲ.

* ವಿದ್ಯಾರ್ಥಿಯ ಸಹಾಯಧನವು ನೇರವಾಗಿ ಅವರ ಖಾತೆಗೆ ಜಮಾ ಆಗುತ್ತದೆ. ಅವರ ಬ್ಯಾಂಕ್‌ ಖಾತೆಗೆ ಆಧಾರ್ ಕಾರ್ಡ್ ಜೋಡಣೆ ಆಗದಿದ್ದರೆ ಹಣ ಜಮಾ ಆಗಿರುವುದಿಲ್ಲ. ಅದನ್ನು ಪರಿಶೀಲಿಸಿ.

ಕಿರಣಕುಮಾರ ಕೊಂಕಲ್:

ನಾನು ಪದವಿ ಓದುವಾಗ ಪ್ರೈಸ್ ಮನಿ ಅರ್ಜಿ ಹಾಕಿದ್ದೆ. ತಿರಸ್ಕೃತಗೊಂಡಿದೆ, ಇದಕ್ಕೆ ಪರಿಹಾರ ಏನು?

* ಪದವಿ ಓದುವ ಸಮಯದಲ್ಲಿ ಒಂದು ವಿಷಯದಲ್ಲಿ ಅನುತ್ತೀರ್ಣಗೊಂಡರೆ ಅಂತವರಿಗೆ ಪ್ರೈಸ್ ಮನಿ ಬರುವುದಿಲ್ಲ. ಎಲ್ಲಾ ವಿಷಯದಲ್ಲಿ ಒಂದೇ ಬಾರಿ ಪಾಸಾದವರಿಗೆ ಮಾತ್ರ ಪ್ರೈಸ್ ಮನಿ ಬರುತ್ತದೆ.

ವೈಜನಾಥ ಹಿರೇಮಠ:

ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ. ಯಾಕೆ?

* ಜಾತಿ ಪ್ರಮಾಣ ಪತ್ರವನ್ನು ಕಂದಾಯ ಇಲಾಖೆ ವತಿಯಿಂದ ಪಡೆಯಬೇಕು. ಅದು ನಮ್ಮ ಇಲಾಖೆಗೆ ಬರುವುದಿಲ್ಲ. ಒಂದು ವೇಳೆ ಕಂದಾಯ ಅಧಿಕಾರಿಗಳಿಗೆ ಅನುಮಾನ ಬಂದರೆ ನಮಗೆ ತಿಳಿಸುತ್ತಾರೆ. ನಾವು ಅದನ್ನು ಪರಿಶೀಲನೆ ಮಾಡುತ್ತೇವೆ.

ಅಭಿಷೇಕ್ ದಾನಕೇರಿ ಯಾದಗಿರಿ:

ಪ್ರೈಜ್ ಮನಿ ಸಮರ್ಪಕವಾಗಿ ಸಿಗುತ್ತಿಲ್ಲ. ಇದಕ್ಕೆ ಪರಿಹಾರವೇನು?

* ಬಹುತೇಕ ವಿದ್ಯಾರ್ಥಿಗಳಿಗೆ ಈಗಾಗಲೇ ವಿದ್ಯಾರ್ಥಿ ಸಹಾಯಧನ ನೀಡಲಾಗಿದೆ. ಇನ್ನುಳಿದ 224 ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರ ಮಾಹಿತಿಗಳ ಸಮಸ್ಯೆಯಾಗಿದೆ. ಅದನ್ನು ಪರಿಶೀಲನೆ ನಡೆಸಲಾಗುತ್ತಿದೆ. ನಂತರದಲ್ಲಿ ಅವರ ಖಾತೆಗೆ ಹಣ ಜಮಾ ಮಾಡಲಾಗುತ್ತದೆ.

ಮರಿಸ್ವಾಮಿ ಗೋನಾಲ:

ಉದ್ಯಮಶೀಲತೆ ಯೋಜನೆಯಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ನೀಡುತ್ತಿದ್ದ ಅನುದಾನ ಕಡಿಮೆಯಾಗಿದೆ ಯಾಕೆ?

* ವಿವಿಧ ನಿಗಮಗಳು ಇರುವುದರಿಂದ ಆಯಾಯ ನಿಗಮದಲ್ಲಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಅನುದಾನ ಕಡಿಮೆಯಾದ ಕುರಿತು ಮೇಲಧಿಕಾರಿಗಳಿಗೆ ಹಾಗೂ ಸರ್ಕಾರದ ಗಮನಕ್ಕೆ ತರಲಾಗುತ್ತದೆ.

ಆಕಾಶ್‌ ಚವಾಣ್ ಯಾದಗಿರಿ:

ಪ್ರೈಸ್ ಮನಿ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ ಮಾಡಿ?

* ಫಲಿತಾಂಶದ ದಿನಾಂಕ ತಡವಾಗಿದ್ದರಿಂದ ಅರ್ಜಿ ಸಲ್ಲಿಸಲು ಈಗ ಬರುವುದಿಲ್ಲ. ಇದರ ಕುರಿತು ಈಗಾಗಲೇ ಮೇಲಧಿಕಾರಿಗಳಿಗೆ ಹಾಗೂ ವಿಶ್ವವಿದ್ಯಾಲಯಕ್ಕೆ ಪತ್ರ ಬರೆಯಲಾಗಿದೆ.

ಸಿದ್ದು ಶಹಾಪುರ:

ಎಸ್‌ಸಿ, ಎಸ್‌ಟಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್, ಸ್ಪೋಕನ್ ಇಂಗ್ಲಿಷ್ ತರಬೇತಿ ನೀಡಿ.

* ಮೆಟ್ರಿಕ್ ನಂತರದ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಈಗಾಗಲೇ ಪರಿಣತ ಬೋಧಕರಿಂದ ಕಂಪ್ಯೂಟರ್ ತರಬೇತಿ ಹಾಗೂ ಸ್ಪೋಕನ್ ಇಂಗ್ಲೀಷ್ ಕೊಡಿಸಲಾಗುತ್ತಿದೆ.

ಗುರುನಾಥ ನಾಟೇಕಾರ ವಡಗೇರಾ:

ವಡಗೇರಾ ತಾಲ್ಲೂಕಿನ 72 ಗ್ರಾಮಗಳಲ್ಲಿ ದಲಿತ ಸಮುದಾಯದ ಜನರಿಗೆ ಸೌಲಭ್ಯಗಳು ಸಿಗುತ್ತಿಲ್ಲ. ಕೆಲವು ಗ್ರಾಮಗಳಲ್ಲಿ ಅಸ್ಪೃಶ್ಶತೆ ತಾಂಡವವಾಡುತ್ತಿದೆ. ಇದಕ್ಕೆ ಪರಿಹಾರವೇನು?

* ಈಗಾಗಲೇ ನಮ್ಮ ಇಲಾಖೆ ವತಿಯಿಂದ ಅಸ್ಪೃಶ್ಯತೆ ಕಂಡುಬಂದ ಗ್ರಾಮಗಳಲ್ಲಿ ಅಧಿಕಾರಿಗಳು ಮಾರುವೇಷದಲ್ಲಿ ಹೋಗಿ ಗಮನಿಸುತ್ತಿದ್ದಾರೆ. ಪೊಲೀಸ್ ಇಲಾಖೆ ಜೊತೆ ನಮ್ಮ ಅಧಿಕಾರಿಗಳು ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ.

ಶರಣು ಕಲ್ಮನಿ ಶಹಾಪುರ:

2020-21 ನೇ ಸಾಲಿನ ವಿದ್ಯಾರ್ಥಿ ಸಹಾಯಧನ ಬಜೆಟ್‌ನಲ್ಲಿ ವಿದ್ಯಾರ್ಥಿಗಳಿಗೆ ಕೇವಲ ₹6,200 ಬಂದಿದೆ. ಇನ್ನುಳಿದ ಹಣ ಬಂದಿಲ್ಲ.

* ಸಹಾಯಧನ ನೀಡುವಲ್ಲಿ ಎರಡು ವಿಧದ ಅಕೌಂಟ್ ಇರುತ್ತದೆ. ಒಂದು ಕಾಲೇಜಿನ ಪ್ರಾಂಶುಪಾಲರ ಖಾತೆ ಇರುತ್ತದೆ. ಮತ್ತೊಂದು ವಿದ್ಯಾರ್ಥಿಗಳ ಅಕೌಂಟ್ ಇರುತ್ತದೆ. ಆದ್ದರಿಂದ ಇನ್ನುಳಿದ ಹಣ ಪ್ರಾಂಶುಪಾಲರ ಖಾತೆಗೆ ಹೋಗುತ್ತದೆ. ಉಳಿದವರಿಗೆ ಇನ್ನೂ ಹದಿನೈದು ದಿನದಲ್ಲಿ ಜಮಾ ಆಗುತ್ತದೆ.

ಬಸನಗೌಡ ಜಡಿ ವಡಗೇರಾ:

ವಸತಿ ನಿಲಯಗಳಲ್ಲಿ ಮೂಲ ಸೌಲಭ್ಯಗಳ ಕೊರತೆ ಇದೆ.

* ವಸತಿ ನಿಲಯಗಳಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಲು ವಾರ್ಡ್‌ನ್‌ ಮತ್ತು ಅಧಿಕಾರಿಗಳಗೆ ಮತ್ತೊಮ್ಮೆ ಸೂಚನೆ ನೀಡಲಾಗುವುದು.

ಸರಸ್ವತಿ ಯಾದಗಿರಿ:

ಯಾದಗಿರಿ ನಗರದ ವಸತಿ ನಿಲಯದಲ್ಲಿದ್ದೇವೆ. ನಮಗೆ ಎರಡು ವರ್ಷದಿಂದ ವಿದ್ಯಾರ್ಥಿ ಸಹಾಯಧನ ಬಂದಿಲ್ಲ.

* ಅರ್ಜಿ ಸಲ್ಲಿಸುವ ಸಮಯದಲ್ಲಿ ದಾಖಲಾತಿ ತಪ್ಪಾಗಿದ್ದರೆ ಪರಿಶೀಲಿಸಿಕೊಳ್ಳಿ. ಒಮ್ಮೆ ತಾಲ್ಲೂಕು ಕಚೇರಿಗೆ ತೆರಳಿ ಪರಿಶೀಲನೆ ಮಾಡಿಸಿ.

ಶಿವರಾಜ ಶಹಾಪುರ:

ಗಂಗಾ ಕಲ್ಯಾಣ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ್ದೇವೆ. ಅದು ಇನ್ನೂ ನಮಗೆ ಬಂದಿಲ್ಲ.

* ಗಂಗಾ ಕಲ್ಯಾಣ ಯೋಜನೆಯು ನಮ್ಮ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ. ಅಂಬೇಡ್ಕರ್ ನಿಗಮದಲ್ಲಿ ವಿಚಾರಿಸಿ.

ಮಂಜುನಾಥ ಶಹಾಪುರ:

ನಾವು ಅಲೆಮಾರಿ ಗೊಲ್ಲ ಸಮುದಾಯವರು. ನಿರುದ್ಯೋಗಿ ಇದ್ದು, ಉದ್ಯೋಗ ಮಾಡಲು ಯಾವುದಾದರೂ ಯೋಜನೆ ಇದೆಯೇ?

* ನೀವು ಹಿಂದುಳಿದ ವರ್ಗ ಅಥವಾ ದೇವರಾಜ ಅರಸು ನಿಗಮದಲ್ಲಿ ಯೋಜನೆಗಳ ಸೌಲಭ್ಯ ಪಡೆಯಬಹುದು.

ಕಿಶಾನ್‌ :

ವಿಧವಾ ವೇತನ ಮಾಡಿಸಲು ಪತಿ ಮರಣ ಪ್ರಮಾಣ ಪತ್ರ ಇಲ್ಲ. ಅದು ಹೇಗೆ ಪಡೆಯಬೇಕು?

* ನೀವು ಕಂದಾಯ ಇಲಾಖೆಗೆ ತೆರಳಿ ಅಲ್ಲಿ ವಿಚಾರಿಸಿ. ಇದು ನಮ್ಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ವಿಧವೆ ಮರು ವಿವಾಹವಾದರೆ ನಮ್ಮ ಇಲಾಖೆಯಿಂದ ಪ್ರೋತ್ಸಾಹ ಧನ ನೀಡಲಾಗುತ್ತಿದೆ.

ಡಾ.ಕೊದಂಡರಾಮ:

ಯಾದಗಿರಿ ಜಿಲ್ಲೆಯಲ್ಲಿ ದಲಿತ ಸಮುದಾಯದ ಮೇಲೆ ಇತ್ತೀಚಿಗೆ ದೌರ್ಜನ್ಯ ಹೆಚ್ಚುತ್ತಿದೆ. ಇದಕ್ಕೆ ನಿಮ್ಮ ಇಲಾಖೆ ಏನು ಕ್ರಮ ತೆಗೆದುಕೊಳ್ಳುತ್ತಿದೆ?

* ಜಿಲ್ಲೆಯಲ್ಲಿ ಈಗಾಗಲೇ ಪೊಲೀಸ್ ಇಲಾಖೆಯಿಂದ ಮತ್ತು ನಮ್ಮ ಇಲಾಖೆಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲಾಧಿಕಾರಿಯವರು ಇತ್ತೀಚೆಗೆ ನೀಲಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಯವರಿಗೆ ದೇವಸ್ಥಾನ ಪ್ರವೇಶ ಕಲ್ಪಿಸಿದ್ದಾರೆ. ಅದೇ ರೀತಿ ವಿವಿಧ ಸಂಘಟನೆಗಳು ನಮ್ಮ ಜೊತೆ ಕೈ ಜೋಡಿಸಿದರೆ ಅಸ್ಪೃಶ್ಯತೆ ಹೋಗಲಾಡಿಸಲು ಸಾಧ್ಯ.

ಕಾಮಣ್ಣ ಜೆ.ಕೆ ಶಹಾಪುರ:

ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಪ್ರೈಸ್ ಮನಿ ಅರ್ಜಿ ಸಲ್ಲಿಸುವ ವಿಧಾನ ಹೇಗೆ?

* ನಮ್ಮ ಇಲಾಖೆಯಿಂದ ಈಗಾಗಲೇ ತಾಲ್ಲೂಕು ಅಧಿಕಾರಿಗಳಿಂದ ಹಾಗೂ ಹಾಸ್ಟೆಲ್ ವಾರ್ಡ್‌ನ್‌ಗಳಿಂದ ಕಾಲೇಜುಗಳಿಗೆ ತೆರಳಿ ಅರ್ಜಿ ಸಲ್ಲಿಸುವ ಕುರಿತು ಮಾಹಿತಿ ನೀಡಲಾಗುತ್ತಿದೆ. ಕಚೇರಿಗೆ ತೆರಳಿ ಮಾಹಿತಿ ಪಡೆಯಬಹುದು.

ಮಲ್ಲಿಕಾರ್ಜುನ ಹೊಸಮನಿ, ಶಹಾಪುರ:

ನರ್ಸಿಂಗ್‌ ಕಾಲೇಜಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಂದಿಲ್ಲ. ಯಾವಾಗ ಬರುತ್ತದೆ?

* ಜಿಲ್ಲೆಯಲ್ಲಿ ಈಗಾಗಲೇ ಬಹುತೇಕ ವಿದ್ಯಾರ್ಥಿಗಳಿಗೆ ವೇತನ ನೀಡಲಾಗಿದೆ. ಕೆಲವೊಂದು ವಿದ್ಯಾರ್ಥಿಗಳಿಗೆ ತಾಂತ್ರಿಕ ದೋಷದಿಂದ ಇನ್ನೂ ಬಂದಿಲ್ಲ. ಇದನ್ನು ಸರಿಪಡಿಸಿ ಶೀಘ್ರವೇ ನೀಡಲಾಗುತ್ತದೆ.

ಶರಣರಡ್ಡಿ, ಹತ್ತಿಗೂಡುರು:

ವಸತಿ ನಿಲಯದಲ್ಲಿ ಶೌಚಾಲಯ, ತರಕಾರಿ, ಕುಡಿಯುವ ನೀರಿನ ಸಮಸ್ಯೆ ಇದೆ. ಇದಕ್ಕೆ ಕ್ರಮ ಕೈಗೊಳ್ಳಿ.

* ಎಲ್ಲ ವಸತಿ ನಿಲಯಗಳಲ್ಲಿ ಈಗಾಗಲೇ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ತರಕಾರಿ ಮೂರು ದಿನಗಳಿಗೆ ಒಮ್ಮೆ ತರಬೇಕು. ಅಲ್ಲಿ ಫ್ರಿಡ್ಜ್ ವ್ಯವಸ್ಥೆಯೂ ಕಲ್ಪಿಸಲಾಗಿದೆ. ಶೌಚಾಲಯಗಳ ಸ್ವಚ್ಛತೆ ಬಗ್ಗೆ ಈಗಾಗಲೇ ಅಧಿಕಾರಿಗಳಿಗೆ ತಿಳಿಸಲಾಗಿದೆ.

ಮಹಾಂತೇಶ, ಸುರಪುರ:

ಪರಿಶಿಷ್ಟ ಪಂಗಡದ ಮಹಿಳೆಯರು ಪುನರ್ ವಿವಾಹವಾದರೆ ಪ್ರೋತ್ಸಾಹ ಧನ ಎಷ್ಟು ಇದೆ?

* ₹ 3 ಲಕ್ಷ ಇದೆ. ಅದು ಅವರ ಜಂಟಿ ಖಾತೆಗೆ ನೇರವಾಗಿ ಮಾಡಲಾಗುತ್ತದೆ.

***

‘ಫ್ರೀಶಿಪ್‌ ಕಾರ್ಡ್‌’ ಸದ್ಬಳಕೆಯಾಗಲಿ

ಕೆಲ ವರ್ಷಗಳ ಹಿಂದೆ ಖಾಸಗಿ ಕಾಲೇಜುಗಳು ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಎಂದು ಬೋರ್ಡ್‌ ಹಾಕಿಕೊಂಡು ಪ್ರವೇಶ ನೀಡುತ್ತಿದ್ದವು. ನಂತರ ಸಮಾಜ ಕಲ್ಯಾಣ ಇಲಾಖೆಯಿಂದ ಪಾವತಿ ಆಗುತ್ತಿದ್ದ ಶಿಷ್ಯವೇತನವನ್ನು ಶುಲ್ಕಕ್ಕೆ ಜಮಾ ಮಾಡಿಕೊಳ್ಳುತ್ತಿದ್ದವು. ಕೆಲವರಿಗೆ ಶಿಷ್ಯ ವೇತನ ಬಾರದಿದ್ದವರಿಗೆ ಪರೀಕ್ಷೆಗೆ ಅನುವು ಮಾಡಿಕೊಟ್ಟಿರಲಿಲ್ಲ. ಶುಲ್ಕ ತುಂಬುವಂತೆ ಎಚ್ಚರಿಕೆ ನೀಡಿದ್ದರು. ಇದನ್ನು ಅರಿತ ಸರ್ಕಾರ ಈಗ ‘ಫ್ರೀಶಿಪ್‌ ಕಾರ್ಡ್‌’ ಯೋಜನೆ ಜಾರಿಗೆ ತಂದಿದೆ. ಪ್ರವೇಶ ಪಡೆಯುವಾಗ ಈ ಕಾರ್ಡ್‌ ತೋರಿಸಿ ಪ್ರವೇಶ ಪಡೆಯಬಹುದಾಗಿದೆ.

2021-22ನೇ ಸಾಲಿನ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಅಗತ್ಯ ದಾಖಲಾತಿಗಳನ್ನು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ವಿದ್ಯಾರ್ಥಿ ವೇತನದ ಫ್ರೀಶಿಪ್‌ ಕಾರ್ಡ್‌ ಪಡೆದುಕೊಳ್ಳಬಹುದಾಗಿದೆ. ಫ್ರೀಶಿಪ್‌ ಕಾರ್ಡ್‌ ಪಡೆದ ವಿದ್ಯಾರ್ಥಿಗಳ ಪ್ರವೇಶಾತಿ ಸಮಯದಲ್ಲಿ ಯಾವುದೇ ಶುಲ್ಕ ಕಾಲೇಜಿನವರು ಪಡೆಯಬಾರದು.

ಫ್ರೀಶಿಪ್‌ ಕಾರ್ಡ್‌ ಕಾರ್ಡ್‌ ಪಡೆಯಲು ವಿದ್ಯಾರ್ಥಿ ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್‌ ಕಾರ್ಡ್, ಕಾಲೇಜಿನ ಶುಲ್ಕದ ಪ್ರತಿ ಇನ್ನಿತರ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಥಿಗಳು ಕಡ್ಡಾಯವಾಗಿ ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಗೆ ಆಧಾರನ್ನು ಎನ್‌ಪಿಸಿಐನಲ್ಲಿ ಜೋಡಣೆ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ಅಂತರ್ಜಾಲ ತಾಣ: https://ssp.postmatric.karnataka.gov.in ನೋಡಬಹುದು.

****

ಅಸ್ಪೃಶ್ಯತೆ ವಿರುದ್ಧ ಜಾಗೃತಿ ಅಭಿಯಾನ

ಜಿಲ್ಲೆಯಲ್ಲಿ ಅಸ್ಪೃಶ್ಯತೆ ಆಚರಿಸುವವರ ವಿರುದ್ಧ ಉನ್ನತ ಅಧಿಕಾರಿಗಳೇ ಜಾಗೃತಿ ಮೂಡಿಸುವಲ್ಲಿ ನಿರತರಾಗಿದ್ದಾರೆ.

ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್‌,. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಮತ್ತು ಬೀಟ್‌ ಪೊಲೀಸರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಗ್ರಾಮಗಳಿಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ.

ಅಸ್ಪೃಶ್ಯತೆ ವಿರುದ್ಧ ಹಲವಾರು ಸಭೆಗಳನ್ನು ಮಾಡಿ ಜನ ಜಾಗೃತಿ ಮೂಡಿಸುವುದರ ಜೊತೆಗೆ ಹೊಟೇಲ್‌ಗಳಲ್ಲಿ ಅಸ್ಪೃಶ್ಯತೆ ಆಚರಿಸದಂತೆ ಮುಚ್ಚಳಿಕೆ ಪತ್ರ ಬರೆದುಕೊಳ್ಳುತ್ತಾರೆ. ಅಸ್ಪೃಶ್ಯತೆ ಆಚರಿಸದಂತೆ ತಿಳಿ ಹೇಳುತ್ತಾರೆ.
***
ಸಮಾಜ ಕಲ್ಯಾಣ ಹಾಸ್ಟೆಲ್‌ ವಿವರ

ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ನಿಲಯಗಳು

ತಾಲ್ಲೂಕು;ಸಂಖ್ಯೆ

ಯಾದಗಿರಿ, ಗುರುಮಠಕಲ್‌; 24

ಶಹಾಪುರ,ವಡಗೇರಾ;6

ಸುರಪುರ, ಹುಣಸಗಿ;8

ಒಟ್ಟು;38

ಮೆಟ್ರಿಕ್‌ ನಂತರ ವಿದ್ಯಾರ್ಥಿನಿಲಯಗಳು

ತಾಲ್ಲೂಕು;ಸಂಖ್ಯೆ

ಯಾದಗಿರಿ, ಗುರುಮಠಕಲ್‌;06

ಶಹಾಪುರ,ವಡಗೇರಾ;05

ಸುರಪುರ, ಹುಣಸಗಿ;3

ಒಟ್ಟು;14

**

ಫೋನ್‌ ಇನ್‌ ಕಾರ್ಯಕ್ರಮ ನಿರ್ವಹಣೆ:ಬಿ.ಜಿ.ಪ್ರವೀಣಕುಮಾರ, ರಾಜಕುಮಾರ ನಳ್ಳಿಕರ, ಪರಮೇಶ ರೆಡ್ಡಿ, ಶರಣಗೌಡ ಅರಿಕೇರಿ, ದೇವಿಂದ್ರಪ್ಪ ಕ್ಯಾತನಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT