ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

22ರ ವರೆಗೆ ಮಾತ್ರೆ ನುಂಗಿಸುವ ಕಾರ್ಯಕ್ರಮ

ಆನೆಕಾಲು ನಿಯಂತ್ರಣ ಮಾತ್ರೆಗಳಿಂದ ಅಡ್ಡಪರಿಣಾಮಗಳಿಲ್ಲ: ಡಾ.ಸೂರ್ಯಪ್ರಕಾಶ
Last Updated 12 ನವೆಂಬರ್ 2019, 15:33 IST
ಅಕ್ಷರ ಗಾತ್ರ

ಯಾದಗಿರಿ: ‘ಆನೆಕಾಲು ರೋಗಮುಕ್ತ ಸಮಾಜಕ್ಕಾಗಿ ಜಿಲ್ಲೆಯಾದ್ಯಂತ ನವೆಂಬರ್ 4ರಿಂದ 22ರವರೆಗೆ ಸಾಮೂಹಿಕವಾಗಿ ಡಿಇಸಿ, ಅಲ್ಬೆಂಡಜೋಲ್ ಹಾಗೂ ಐವರ್‍ಮೆಕ್ಟಿನ್ ಮಾತ್ರೆಗಳನ್ನು ನುಂಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಮಾತ್ರೆಗಳ ಸೇವನೆಯಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲ’ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಸೂರ್ಯಪ್ರಕಾಶ ಎಂ.ಕಂದಕೂರ ತಿಳಿಸಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಆನೆಕಾಲು ರೋಗ ನಿಯಂತ್ರಣದ ಕುರಿತು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಾಲೆಗಳಲ್ಲಿ ಶೇ.80ರಷ್ಟು ಸಾಧನೆ:

‘ನವೆಂಬರ್ 4ರಿಂದ 9ರವರೆಗೆ ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲಾ- ಕಾಲೇಜು, ವಸತಿ ನಿಲಯಗಳು, ಕಚೇರಿಗಳು, ಅಂಗನವಾಡಿ ಕೇಂದ್ರಗಳು, ಬೃಹತ್ ಕಟ್ಟಡ ನಿರ್ಮಾಣ ಸ್ಥಳಗಳು, ಕೈಗಾರಿಕೋದ್ಯಮ ಸ್ಥಳಗಳು, ವಲಸೆ ಜನರು ಬೀಡು ಬಿಟ್ಟ ಸ್ಥಳಗಳಿಗೆ ಭೇಟಿ ನೀಡಿ, ಈ ಮಾತ್ರೆಗಳನ್ನು ನುಂಗಿಸಲಾಗಿದೆ. ಶಾಲೆಗಳಲ್ಲಿ ಶೇ.80ರಷ್ಟು ಮತ್ತು ಅಂಗನವಾಡಿ ಕೇಂದ್ರಗಳ ಶೇ.60ರಷ್ಟು ಮಕ್ಕಳಿಗೆ ಮಾತ್ರೆಗಳನ್ನು ನುಂಗಿಸಲಾಗಿದೆ’ ಎಂದು ಹೇಳಿದರು.

‘ನ.13ರಿಂದ 15ರವರೆಗೆ ಮನೆಮನೆಗೆ ಭೇಟಿ ನೀಡಿ ಮಾತ್ರೆಗಳನ್ನು ನುಂಗಿಸಲಾಗುವುದು. ನ.16ರಿಂದ 22ರವರೆಗೆ ಪುನರ್ ಭೇಟಿ ಅನುಸರಣ ಕಾರ್ಯಕ್ರಮದ ಮೂಲಕ ಬಿಟ್ಟುಹೋದ ಮನೆಗಳಿಗೆ ಭೇಟಿ ನೀಡಿ, ಮಾತ್ರೆಗಳನ್ನು ನುಂಗಿಸಲಾಗುವುದು’ ಎಂದು ತಿಳಿಸಿದರು.

ರಾಜ್ಯಮಟ್ಟದ ಉದ್ಘಾಟನಾ ಸಮಾರಂಭ:

‘ಎನ್‍ವಿಬಿಡಿಸಿಪಿ ನಿರ್ದೇಶಾಲಯ ನವದೆಹಲಿ, ಆರೋಗ್ಯ ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಜಿಲ್ಲಾಡಳಿತ, ಡಿಎಚ್‍ಒ ಹಾಗೂ ಡಿವಿಬಿಡಿಸಿಒ ಯಾದಗಿರಿ ಹಾಗೂ ಪಿಸಿಐ ಸಂಯುಕ್ತಾಶ್ರಯದಲ್ಲಿ ಅನೆಕಾಲು ನಿಯಂತ್ರಣಕ್ಕಾಗಿ ಸಾಮೂಹಿಕ ಔಷದ ನುಂಗಿಸುವ ರಾಜ್ಯ ಮಟ್ಟದ ಉದ್ಘಾಟನಾ ಸಮಾರಂಭವನ್ನು ನವೆಂಬರ್ 13ರಂದು ಬೆಳಿಗ್ಗೆ 10 ಗಂಟೆಗೆ ಯಾದಗಿರಿಯ ಗಾಂಧಿ ವೃತ್ತದಲ್ಲಿರುವ ಪಂಪ ಮಹಾಕವಿ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಈ ವೇಳೆ ಪಿಸಿಐ ರಾಜ್ಯ ಮಟ್ಟದ ಕಾರ್ಯಕ್ರಮ ವ್ಯವಸ್ಥಾಪಕ ಶರತ್‍ಚಂದ್ರ, ಹಿರಿಯ ಆರೋಗ್ಯ ಸಹಾಯಕ ಪರಮರೆಡ್ಡಿ ಕಂದಕೂರ, ಶರಣಯ್ಯ ಸ್ವಾಮಿ, ಸಮಾಲೋಚಕ ಬಸವರಾಜ ಕಾಂತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT