ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ| ₹10,863 ಕೋಟಿ ಕಾಮಗಾರಿಗಳಿಗೆ ಪಿಎಂ ಚಾಲನೆ

Last Updated 19 ಜನವರಿ 2023, 14:04 IST
ಅಕ್ಷರ ಗಾತ್ರ

ಯಾದಗಿರಿ/ಹುಣಸಗಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ಕೋಡೆಕಲ್ಲ ಬಳಿ ಏರ್ಪಡಿಸಿದ್ದ ಬೃಹತ್ ಕಾರ್ಯಕ್ರಮದಲ್ಲಿ ₹10,863 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುರುವಾರ ಚಾಲನೆ ನೀಡಿದರು.

ಈ ಮೂಲಕ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿಯೇ ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವಕ್ಕೆ ನಾಂದಿ ಹಾಡಿದರು. ಕಾಲಜ್ಞಾನಿಯ ನಾಡಿನಲ್ಲಿ ಈ ಅಪರೂಪದ ಕ್ಷಣಕ್ಕೆ ಯಾದಗಿರಿ,ರಾಯಚೂರು, ವಿಜಯಪುರ ಜಿಲ್ಲೆಯ ಅಸಂಖ್ಯಾತ ಜನರು ಸಾಕ್ಷಿಯಾದರು. ಜಿಲ್ಲೆಯಾದ ನಂತರ ಈ ರೀತಿಯ ಬೃಹತ್ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿರುವುದು ಇದೆ ಮೊದಲು.

₹4,699 ಕೋಟಿ ವೆಚ್ಚದಲ್ಲಿ ನಾರಾಯಣಪುರ ಎಡದಂಡೆ ಕಾಲುವೆಯ ವಿಸ್ತರಣೆ, ಪುನಃಶ್ಚೇತನ ಹಾಗೂ ಆಧುನೀಕರಣ ಯೋಜನೆಯನ್ನು ಲೋಕಾರ್ಪಣೆಗೊಳಿಸಿದರು.

ನಾರಾಯಣಪುರ ಎಡದಂಡೆ ಕಾಲುವೆ ಜಾಗದಲ್ಲಿ ರೈತರಿಗೆ ನೀರನ್ನು ಬೇಡಿಕೆಯಾನುಸಾರ ಸಮನಾಂತರವಾಗಿ ಹಂಚಿಕೆ ಮಾಡಿ ನೀರಾವರಿ ಸೌಲಭ್ಯ ವಂಚಿತ ಪ್ರದೇಶಕ್ಕೆ ನೀರನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ.

ನಾರಾಯಣಪುರ ಎಡದಂಡೆ ಕಾಲುವೆಯು 10 ಸಾವಿರ ಕ್ಯುಸೆಕ್‌ ನೀರು ಹರಿವಿನ ಸಾಮರ್ಥ್ಯವನ್ನು ಹೊಂದಿದ್ದು, ಉತ್ತರ ಕರ್ನಾಟಕದ ಬರಪೀಡಿತ ವಿಜಯಪುರ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ 4.50 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ಹುಣಸಗಿ ಶಾಖಾ ಕಾಲುವೆ, ಶಹಾಪುರ ಶಾಖಾ ಕಾಲುವೆ ಹಾಗೂ ಜೇವರ್ಗಿ, ಇಂಡಿ ಏತ ನೀರಾವರಿ ಕಾಲುವೆಗಳ ಮುಖಾಂತರ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ.

₹4ಸಾವಿರ ಕೋಟಿ ವೆಚ್ಚದಲ್ಲಿ ಪ್ರವೇಶ ನಿಯಂತ್ರಿತ ಗ್ರೀನ್ ಫೀಲ್ಡ್ ಹೆದ್ದಾರಿ(ಸೂರತ್-ಚೆನ್ನೈ) ಕಾಮಗಾರಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಿದರು.
₹1,999.24 ಕೋಟಿ ವೆಚ್ಚದಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 65ಕಿ.ಮೀ ಉದ್ದದ ಗ್ರೀನ್ ಫೀಲ್ಡ್ ಹೆದ್ದಾರಿ ಹಾಗೂ ₹2,110.52 ಕೋಟಿ ವೆಚ್ಚದಲ್ಲಿ ಕಲಬುರಗಿ ಜಿಲ್ಲೆಯಲ್ಲಿ 71 ಕಿ.ಮೀ ಉದ್ದದ ಪ್ರವೇಶ ನಿಯಂತ್ರಿತ ಗ್ರೀನ್ ಫೀಲ್ಡ್ ಹೆದ್ದಾರಿ ಇರಲಿದೆ.

********

ಕಣ್ಣು ಹಾಯಿಸಿದೆಡೆಯಲ್ಲೆಲ್ಲ ಜನವೋ ಜನ:

ಪ್ರಧಾನಿ ನರೇಂದ್ರ ಮೋದಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಕೋಡೆಕಲ್ಲ ಗ್ರಾಮದ ಹೊರವಲಯದ ಬಳಿ ಏರ್ಪಡಿಸಲಾಗಿರುವ ಕಾರ್ಯಕ್ರಮದ ಬಳಿ ಕಣ್ಣು ಹಾಯಿಸಿದೆಡೆಯಲ್ಲೆಲ್ಲ ಜನವೋ ಜನ...ಒಂದು ರೀತಿಯಲ್ಲಿ ಜನಸಾಗರ.. ಕಂಡು ಬಂತು.

ಪ್ರಧಾನಿ ಹೆಲಿಕಾಪ್ಟರ್‌ನಿಂದ ಆಗಮಿಸುವ ವೇಳೆ ಮೇಲಿಂದಲೇ ನಾಲ್ಕು ದಿಕ್ಕುಗಳಿಂದ ಹರಿದುಬಂದು ನಿಂತಿದ್ದ ಜನಸಾಗರವನ್ನು ಕಣ್ತುಂಬಿಕೊಂಡು ಪ್ರಧಾನಿ ಮೋದಿ ಅವರು ಇಳಿದ ನಂತರ ಜನರೆಡೆಗೆ ಕೈಬಿಸಿದರು.
ಇದನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿ ನಾಲ್ಕು ದಿಕ್ಕುಗಳಿಂದ ಹರಿದುಬಂದು ನಿಂತಿರುವ ಜನಸಾಗರದ ಪ್ರೀತಿ, ಆಶೀರ್ವಾದವೇ ನಮಗೆ ತಾಕತ್ತು ಎಂದು ಹೇಳಿದರು.

ಆಶೀರ್ವಾದ ಮಾಡಲು ಬಂದ ಜನರಿಗೆ ನನ್ನ ನಮನಗಳು. ಯಾದಗಿರಿ ಸಮೃದ್ಧ ಇತಿಹಾಸವನ್ನು ಹೊಂದಿದೆ. ರಟ್ಟಿಹಳ್ಳಿಯ ಹಳೆಯ ಕೋಟೆ ನಮ್ಮ ಪೂರ್ವಜರ ಪ್ರತೀಕವಾಗಿದೆ. ಯಾದಗಿರಿ ಸಮೃದ್ಧ ಇತಿಹಾಸವನ್ನು ಹೊಂದಿದೆ. ಪ್ರತಿ ಕ್ಷೇತ್ರವೂ ನಮ್ಮ ಸಂಸ್ಕೃತಿ ಪರಂಪರೆಯೊಂದಿಗೆ ಹೊಂದಿಕೊಂಡಿದೆ. ತಮ್ಮ ಆಡಳಿತದ ಮೂಲಕ ವೆಂಕಟಪ್ಪ ನಾಯಕರು ಯಾದಗಿರಿಯನ್ನು ದೇಶಾದ್ಯಂತ ವಿಖ್ಯಾತಿಗೊಳಿಸಿದರು ಎಂದರು.

****

ರಾಜೂಗೌಡಗೆ ಬೆನ್ನುತಟ್ಟಿದ ಪಿಎಂ

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣ ಮುಕ್ತಾಯದ ಬಳಿಕ ಸುರಪುರ ಶಾಸಕ ರಾಜೂಗೌಡ (ನರಸಿಂಹ ನಾಯಕ) ಅವರಿಗೆ ಬೆನ್ನುತಟ್ಟಿ ಪ್ರೋತ್ಸಾಹ ವ್ಯಕ್ತಪಡಿಸಿದರು. ಆಗ ಜನತೆ ಉತ್ಸಾಹ ಎಲ್ಲೆ ಮೀರಿತ್ತು. ಇದರ ಜೊತೆಗೆ ವೇದಿಕೆ ಮೇಲಿದ್ದ ಜನಪ್ರತಿನಿಧಿಗಳು ಮೋದಿಯವರು ಶುಭ ಹಾರೈಸಿ ಹೊರಟರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಕೇಂದ್ರ ಸಚಿವ ಭಗವಂತ ಖೂಬಾ, ಪ್ರಮುಖ ಮತ್ತು ಮಧ್ಯಮ ನೀರಾವರಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಂಸದ ರಾಜಾ ಅಮರೇಶ್ವರ ನಾಯಕ, ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಗೈರು ಎದ್ದು ಕಾಣುತಿತ್ತು.

***

ಭೂರಿ ಭೋಜನ ವ್ಯವಸ್ಥೆ

ಹುಬ್ಬಳ್ಳಿಯ ಗೋಕುಲ ಕ್ಯಾಟರಿಂಗ್ ಅವರಿಂದ ಸುಮಾರು 3 ಲಕ್ಷಕ್ಕೂ ಅಧಿಕ ಸಭಿಕರಿಗೆ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು. 200 ಕ್ವಿಂಟಲ್ ಗೋಧಿ ಹುಗ್ಗಿ, 100 ಕ್ವಿಂಟಲ್ ಮೊಸರನ್ನ ಹಾಗೂ 300 ಕ್ವಿಂಟಲ್ ಪುಲಾವ್ ತಯಾರಿಸಲಾಗಿತ್ತು ಎಂದು ಕ್ಯಾಟರಿಂಗ್ ಮಾಲಿಕ ಶಂಭು ಹೇಳಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನರಿಗೆ ಕಾರ್ಯಕ್ರವನ್ನು ಸರಿಯಾದ ರೀತಿಯಲ್ಲಿ ವೀಕ್ಷಿಸಲು ಸುಮಾರು 30 ಕ್ಕೂ ಹೆಚ್ಚು ಎಲ್‌ಇಡಿ ಟಿವಿ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರವನ್ನು ವೀಕ್ಷಿಸಲು ಸುಮಾರು ಎರಡು ತಾಸಿಗೂ ಹೆಚ್ಚು ಕಾಲ ತಂಡೋಪ ತಂಡವಾಗಿ ಜನರು ಆಗಮಿಸುತ್ತಿದ್ದರು.
ತಾಲ್ಲೂಕು ಸೇರಿದಂತೆ ಯಾದಗಿರಿ, ವಿಜಯಪುರ ಹಾಗೂ ರಾಯಚೂರು ಜಿಲ್ಲೆಯ ಅಭಿಮಾನಿಗಳು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಭರ್ಜರಿ ವ್ಯಾಪಾರ

ಕಾರ್ಯಕ್ರಮ ಆರಂಭಕ್ಕೂ ಮುನ್ನ ರಸ್ತೆಯ ಇಕ್ಕೆಲಗಳಲ್ಲಿ ಕಲ್ಲಂಗಡಿ, ಪೇರಲ, ಪೈನಾಪಲ್, ಶೇಂಗಾ, ಐಸ್ಕ್ರೀಂ ಮತ್ತು ನೀರಿನ ವ್ಯಾಪಾರ ಭರ್ಜರಿಯಾಗಿತ್ತು. ಬಾಯಾರಿಕೆಯಾದ ಸಂದರ್ಭದಲ್ಲಿ ಹೆಚ್ಚಿನ ಜನರು ಕಲ್ಲಂಗಡಿ ಮೊರೆ ಹೋಗಿದ್ದರು.

***

ಅರ್ಧ ಗಂಟೆ ಮಾತನಾಡಿದ ಪಿಎಂ

ಪ್ರಧಾನಿ ನರೇಂದ್ರ ಮೋದಿಯವರು ಬೆಳಿಗ್ಗೆ 11.50ಕ್ಕೆ ಸಮಯಕ್ಕೆ ಸರಿಯಾಗಿ ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಹೆಲಿಪ್ಯಾಡ್‌ಗೆ ಆಗಮಿಸಿದರು. ಈ ವೇಳೆ ಜಿಲ್ಲಾಡಳಿತದಿಂದ ಸ್ವಾಗತಿಸಲಾಯಿತು. ಮೋದಿಯವರನ್ನು ಕಂಡು ಮೋದಿ ಮೋದಿ ಎಂದು ಸಾರ್ವಜನಿಕರು ಜೈಕಾರ ಹಾಕಿದರು‌.‌

12 ಗಂಟೆ ವೇಳೆಗೆ ವೇದಿಕೆಗೆ ಬಂದ ಪ್ರಧಾನಿ 12.38 ನಿಮಿಷಕ್ಕೆ ಭಾಷಣ ಆರಂಭಿಸಿದರು. 1.08 ನಿಮಿಷಕ್ಕೆ ಭಾಷಣ ಮುಕ್ತಾಯಗೊಳಿಸಿದರು. 1.20ಕ್ಕೆ ಹೆಲಿಕ್ಯಾಪ್ಟರ್‌ ಮೂಲಕ ಸೇಡಂಗೆ ನಿರ್ಗಮಿಸಿದರು. ಪ್ರಧಾನಿಯವರ ಜೊತೆಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವರು ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT