ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಂ ಸ್ವನಿಧಿ ಯೋಜನೆ ಬೀದಿ ಬದಿ ವ್ಯಾಪಾರಿಗಳಿಗೆ ಆಶಾಕಿರಣ: ಜಿಲ್ಲಾಧಿಕಾರಿ

ಬೀದಿ ಬದಿ ವ್ಯಾಪಾರಿಗಳಿಗೆ ಕ್ಯುಆರ್‌ ಕೋಡ್‌ ಲೋಗೊ ವಿತರಿಸಿದ ಜಿಲ್ಲಾಧಿಕಾರಿ
Last Updated 4 ಮಾರ್ಚ್ 2021, 16:41 IST
ಅಕ್ಷರ ಗಾತ್ರ

ಯಾದಗಿರಿ: ಕೋವಿಡ್-19 ಹಾಗೂ ಲಾಕ್‌ಡೌನ್ ಬೀದಿ ಬದಿ ವ್ಯಾಪಾರಸ್ಥರ ಜೀವನೋಪಾಯದ ಮೇಲೆ ಪರಿಣಾಮ ಬೀರಿದ್ದು, ಬೀದಿ ವ್ಯಾಪಾರಿಗಳ ಅಭಿವೃದ್ಧಿಗಾಗಿ ಹಾಗೂ ಅವರ ವ್ಯವಹಾರವನ್ನು ಪುನರ್ ಪ್ರಾರಂಭಿಸಲು ಪಿ.ಎಂ ಸ್ವನಿಧಿ ಯೋಜನೆ ಆಶಾಕಿರಣವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್., ಅವರು ಅಭಿಪ್ರಾಯಪಟ್ಟರು.

ನಗರದ ವಿದ್ಯಾ ಮಂಗಲ ಕಾರ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕೌಶಲಾಭಿವೃದ್ಧಿ ಇಲಾಖೆ, ನಗರಸಭೆ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಸಂಯುಕ್ತಾಶ್ರದಲ್ಲಿ ಗುರುವಾರ ನಡೆದ ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿ (ಪಿಎಂ ಸ್ವನಿಧಿ) ಡಿಜಿಟಲ್ ವಹಿವಾಟಿನ ತರಬೇತಿ ವಿಶೇಷ ಅಭಿಯಾನ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಡಿಜಿಟಲ್ ಯುಗದಲ್ಲಿ ಬೀದಿ ಬದಿ ವ್ಯಾಪಾರಿಗಳು ಸಹ ಕ್ಯಾಶ್ ಬ್ಯಾಕ್ ವಿಧಾನ ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಈ ಯೋಜನೆಯ ವಿಧಾನದ ಬಗ್ಗೆ ಬೀದಿ ಬದಿ ವ್ಯಾಪಾರಿಗಳಿಗೆ ಮಾಹಿತಿ ನೀಡುವುದು ಅವಶ್ಯಕ ಎಂದು ಹೇಳಿದರು.

ಈ ಯೋಜನೆಯ ಲಾಭ ಪಡೆಯುವುದಕ್ಕಾಗಿ ಆಧಾರ್‌ ಕಾರ್ಡ್, ಬೀದಿ ಬದಿ ವ್ಯಾಪಾರಿ ಎಂಬ ಸರ್ಟಿಫಿಕೇಟ್ ಸೇರಿದಂತೆ ಇತರ ದಾಖಲಾತಿಗಳನ್ನು ನೀಡಿ ಸಾಲದ ಸೌಲಭ್ಯ ಪಡೆಯಬಹುದು. ಮುಂದಿನ ದಿನಗಳಲ್ಲಿ ಉಳಿದ ಅರ್ಜಿಗಳಿಗೂ ಸಾಲ ನೀಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ರೇಖಾ ಮ್ಯಾಗೇರಿ ಪ್ರಾಸ್ತಾವಿಕ ಮಾತನಾಡಿ, ಪಿಎಂ ಸ್ವನಿಧಿ ಯೋಜನೆಯಲ್ಲಿ ಅತಿ ಕಡಿಮೆ ಬಂಡವಾಳ ಹೂಡಿ ವ್ಯಾಪಾರ ಮಾಡಬಹುದಾಗಿದೆ. ಹೀಗಾಗಿ ಎಲ್ಲ ಬೀದಿ ಬದಿ ವ್ಯಾಪಾರಿಗಳು ಈ ಯೋಜನೆಯ ಲಾಭವನ್ನು ಪಡೆಯಬೇಕೆಂದು ಹೇಳಿದರು.

ನಗರಸಭೆ ಅಧ್ಯಕ್ಷ ವಿಲಾಸ ಬಿ.ಪಾಟೀಲ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಿಗಳು ತುತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಅದಕ್ಕಾಗಿಯೇ ಪ್ರಧಾನಮಂತ್ರಿಯವರು ಈ ಸ್ವನಿಧಿ ಜಾರಿಗೊಳಿಸಿದ್ದಾರೆ. ಅರ್ಹ ವ್ಯಾಪಾರಿಗಳೆಲ್ಲರೂ ಈ ನಿಧಿಯನ್ನು ಪೂರ್ಣಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಬೇಕೆಂದರು.

ನಗರಸಭೆ ಉಪಾಧ್ಯಕ್ಷೆ ಪ್ರಭಾವತಿ ಮಾರುತಿ ಕಲಾಲ್‌, ನಗರಸಭೆ ಪೌರಾಯುಕ್ತ ಭೀಮಣ್ಣ ಟಿ.ನಾಯಕ, ಲೀಡ್ ಬ್ಯಾಂಕ್ ಮ್ಯಾನೇಜರ್ ಭೀಮರಾವ್ ಪಾಂಚಾಳ, ಕರ್ನಾಟಕ ಗ್ರಾಮೀಣ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಹನುಮಂತಪ್ಪ, ಡಿಎಸ್‌ಎಚ್, ಎಸ್‌ಬಿಐ ಮುಖ್ಯ ವ್ಯವಸ್ಥಾಪಕ ಶ್ರೀನಿವಾಸ್, ನಗರ ಅಭಿಯಾನ ವ್ಯವಸ್ಥಾಪಕ ವಿಠೋಬ ಬಿ, ವಿಜಯಕುಮಾರ್ ಪಾಟೀಲ ಸೇರಿದಂತೆ ಫಲಾನುಭವಿಗಳಿದ್ದರು.

***

ಜಿಲ್ಲೆಯಲ್ಲಿ ಈಗಾಗಲೇ ಪಿಎಂ ಸ್ವನಿಧಿ ಯೋಜನೆಯಡಿಯಲ್ಲಿ 2,500 ಅರ್ಜಿಗಳು ಬಂದಿದ್ದು, ಅವುಗಳಲ್ಲಿ ಸುಮಾರು 1,500 ಅರ್ಜಿಗಳಿಗೆ ಸಾಲದ ಸೌಲಭ್ಯ ನೀಡಲಾಗಿದೆ

ಡಾ.ರಾಗಪ್ರಿಯಾ ಆರ್.,ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT