ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ತೇಲುವ ದೋಣಿಯಲ್ಲಿ ಕವನ ವಾಚನ

ಲುಂಬಿನಿ ಕೆರೆಯಲ್ಲಿ ಸ್ನೇಹದ ಕಡಲಲ್ಲಿ ಕವಿಗೋಷ್ಠಿ
Last Updated 13 ಏಪ್ರಿಲ್ 2022, 16:22 IST
ಅಕ್ಷರ ಗಾತ್ರ

ಯಾದಗಿರಿ: ಸಗರದ ಕಲಾನಿಕೇತನ ಟ್ರಸ್ಟ್ ವತಿಯಿಂದ ಬುಧವಾರ ನಗರದ ಲುಂಬಿನಿ ವನದ ಕೆರೆಯ ದೋಣಿಯಲ್ಲಿ ಕುಳಿತು ‘ಸ್ನೇಹದ ಕಡಲಲ್ಲಿ ಕವಿಗೋಷ್ಠಿ’ ನಡೆಸಲಾಯಿತು.

ಜಿಲ್ಲೆಯ ಯುವ ಕವಿಗಳು, ಸಾಹಿತಿಗಳು ಕೆರೆಯ ದೋಣಿಯಲ್ಲಿ ಕುಳಿತು ಕವಿಗೋಷ್ಠಿ ನಡೆಸಿ, ಪಯಣದ ಉದ್ದಕ್ಕೂ ತಮ್ಮ ಕವನಗಳ ವಾಚನ ಮಾಡಿದರು.

ಈ ವೇಳೆ ಮಾತನಾಡಿದ ಸಾಹಿತಿ ಸಿದ್ದರಾಮ ಹೊನ್ಕಲ್‌, ಸಾಹಿತ್ಯ ಲೋಕದಲ್ಲಿ ಸುಮಾರು ನಲವತ್ತು ವರ್ಷಗಳ ಅನುಭವದ ಮೇಲೆ ನಾನು ಇಂತಹ ಕವಿಗೋಷ್ಠಿ ಎಲ್ಲೂ ಕಂಡಿಲ್ಲ. ಇದೊಂದು ಹೊಸ ಅನುಭವ. ದೋಣಿ ವಿಹಾರದ ಜತೆಗೆ ಸಾಮರಸ್ಯ ಹಾಗೂ ಏಕತಾ ಮನೋಭಾವನೆ ಬೀರಿ ಸಮಾಜದಲ್ಲಿನ ಓರೆ ಕೋರೆಗಳು ತಿದ್ದುವಂತಹ ಕವನಗಳನ್ನು ವಾಚಿಸಿರುವುದು ಖುಷಿ ತಂದಿದೆ ಎಂದರು.

ಬಂಡಾಯ ಸಾಹಿತಿ ಡಾ.ಗಾಳೆಪ್ಪ ಪೂಜಾರಿ ಮಾತನಾಡಿ, ಬದುಕಿನ ಜಂಜಾಟವನ್ನು ಮರೆತು ಇಂಥ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸುವುದೇ ಭಾಗ್ಯ. ಕಲ್ಯಾಣ ಕರ್ನಾಟಕದಲ್ಲಿ ಇದೊಂದು ವಿನೂತನ ಕಾರ್ಯಕ್ರಮ. ಬೇರೆ ಕವಿಗೋಷ್ಠಿಗಳಿಗೆ ಇದು ಮಾದರಿ ಎಂದು ಹೇಳಿದರು.

ಕವಿಯ ಮನಸ್ಸು ಪ್ರಕೃತಿಯಂತೆ ಬಹಳ ವೈವಿಧ್ಯಮಯವಾದದ್ದು. ಅಸಂಖ್ಯಾತ ಸಾಧ್ಯತೆಗಳನ್ನು ತೋರುವ ಸಾಮರ್ಥ್ಯ ಕವಿಗಳಲ್ಲಿ ಇದೆ. ಅಂತಹ ಅನೇಕ ಕವಿಗಳು ನಮ್ಮ ನಡುವೆ ಇದ್ದಾರೆ ಎಂದರು.

ಟ್ರಸ್ಟ್ ಅಧ್ಯಕ್ಷ ಬಸವರಾಜ ಸಿನ್ನೂರ ಮಾತನಾಡಿ, ಪ್ರತಿಯೊಬ್ಬ ಕವಿ, ಲೇಖಕ ತನ್ನೊಳಗೆ ಬಾಹ್ಯ ಪ್ರಪಂಚವನ್ನು ಗ್ರಹಿಸಿಕೊಳ್ಳಪುತ್ತಾನೆ. ತನ್ನ ಬದುಕಲ್ಲಿ ತಾನು ಅನುಭವಿಸಿದ್ದ ಸಿಹಿ, ಕಹಿ ಘಟನೆಗಳಿಗೆ ಸ್ಫೂರ್ತಿ ಸಿಕ್ಕಾಗ ಕಾವ್ಯ ಸ್ವರೂಪದೊಂದಿಗೆ, ಲಯ ಪ್ರಾಸಗಳೊಂದಿಗೆ, ಅಭಿವ್ಯಕ್ತಿಗೊಳಿಸಿದಾಗ ಮಾತ್ರ ಅದು ಕವಿತೆಯಾಗಿ ಹೊರಹೊಮ್ಮಲು ಸಾಧ್ಯ ಎಂದು ವಿಶ್ಲೇಷಿಸಿದರು.

ಜಿಲ್ಲೆಯಲ್ಲಿ ಎಲೆಮರೆ ಕಾಯಿಯಂತೆ ಇರುವ ಯುವ ಕವಿ ಮನಸ್ಸುಗಳಿಗೆ ಪ್ರೇರಣೆಯಾಗಲಿ ಎಂಬ ಉದ್ದೇಶದಿಂದ ಇಂತಹ ವಿಶಿಷ್ಟ ಪ್ರಯೋಗ ಮಾಡಲಾಯಿತು ಎಂದರು.

ಜಲಚರಗಳಿಗೆ ಧಾನ್ಯಗಳನ್ನು ಎರಚಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕವಿಗಳಾದ ಗುರುಪ್ರಸಾದ ವೈದ್ಯ, ಶಂಕರ್ ಹುಲಕಲ್, ಬಿ.ಎನ್.ದೊಡ್ಡಮನಿ, ದುರ್ಗಪ್ಪ ಪೂಜಾರಿ, ನಾನೆಗೌಡ ಚಂದಾಪುರ, ಬಸವರಾಜ್ ಮಾನೇಗಾರ್, ಶರಣಗೌಡ ಚಂದಾಪುರ ಸ್ವರಚಿತ ಕವನ ವಾಚಿಸಿದರು.

ಸಂಜು ಬೊಮ್ಮಣ್ಣಿ ‘ಕಾಣದ ಕಡಲಿಗೆ’, ಬೂದಯ್ಯ ಹಿರೇಮಠ ’ಆನಂದ ಪರಮಾನಂದ’, ಮಹೇಶ್ ಶಿರವಾಳ ‘ನಗುವಾ ನಯನಾ ಮಧುರಾ ಮೌನ’ ಗೀತೆಗಳನ್ನು ಹಾಡಿದರು. ಬೋಟ್ ಸಿಬ್ಬಂದಿ ಅಬ್ದುಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT