ಮಂಗಳವಾರ, ಸೆಪ್ಟೆಂಬರ್ 21, 2021
25 °C

ನೀರಿಗೆ ಕ್ರಿಮಿನಾಶಕ ಪ್ರಕರಣ: ವೃದ್ಧೆ ಸಾವು, ವರದಿ ಸಲ್ಲಿಸಲು ಸಿಎಂ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಹುಣಸಗಿ ತಾಲ್ಲೂಕು ತೆಗ್ಗಳ್ಳಿಯಲ್ಲಿ ಕ್ರಿಮಿನಾಶಕ ಬೆರೆತ ನೀರನ್ನು ಕುಡಿದು ಅಸ್ವಸ್ಥರಾಗಿದ್ದ ಕೂಲಿ ಕಾರ್ಮಿಕ ಮಹಿಳೆ ಹೊನ್ನಮ್ಮ ಮಲ್ಲಪ್ಪ ಪೂಜಾರಿ (75) ಗುರುವಾರ ಮೃತಪಟ್ಟರು.

ಅವರಿಗೆ ಬುಧವಾರ ರಾತ್ರಿ ತೀವ್ರವಾಗಿ ವಾಂತಿಯಾಗಿದ್ದು, ರಕ್ತ ಕೂಡ ಬಿದ್ದಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಕಲಬುರ್ಗಿಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟರು.

‘ಅಸ್ವಸ್ಥರಾಗಿರುವ ಮಾಳಮ್ಮ, ನಾಗಮ್ಮ, ಸುರೇಶ್, ಕಾಳಮ್ಮ, ಜಯಮ್ಮ, ಹಳ್ಳಮ್ಮ, ರಾಯಪ್ಪ, ಪಂಪ್‌ ಆಪರೇಟರ್‌ ಮೌನೇಶ್ ಅವರನ್ನು ಹುಣಸಗಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಹಬೀಬ್ ಉಸ್ಮಾನ್‌ ಪಟೇಲ್ ತಿಳಿಸಿದ್ದಾರೆ.

ಬಾವಿ ಬಳಿ ನಿತ್ಯ ಇಸ್ಪೀಟ್ ಆಡುತ್ತಿದ್ದ ಕೆಲ ಜೂಜುಕೋರರು ಹಾಗೂ ಪಂಪ್‌ ಆಪರೇಟರ್‌ ಮೌನೇಶ ಮಧ್ಯೆ ಜಗಳವಾಗಿತ್ತು. ಇದೇ ಕಾರಣಕ್ಕೆ ಜೂಜುಕೋರರು ಮುದನೂರಿನಿಂದ ಗ್ರಾಮ ಪಂಚಾಯಿತಿ ಪೂರೈಸುವ ನೀರಿಗೆ ವಿಷ ಬೆರೆಸಿರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದರು.

ವರದಿ ಸಲ್ಲಿಸಲು ಸಿಎಂ ಸೂಚನೆ

ಬೆಂಗಳೂರು: ಯಾದಗಿರಿ ಜಿಲ್ಲೆಯ ಮುದನೂರು ಗ್ರಾಮದಲ್ಲಿ ಕುಡಿಯುವ ನೀರಿಗೆ ಕೀಟ ನಾಶಕ ಬೆರೆಸಿದ್ದರಿಂದ ಮಹಿಳೆಯೊಬ್ಬರು ಮೃತಪಟ್ಟು, ಹಲವರು ಅಸ್ವಸ್ಥರಾದ ಘಟನೆಗೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಯಾದಗಿರಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚಿಸಿದ್ದಾರೆ.

ತ್ವರಿತವಾಗಿ ತನಿಖೆ ನಡೆಸಿ, ದುಷ್ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು