ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಗ್ಗಿದ ಮುದ್ರಣ ಘಟಕಗಳ ವಹಿವಾಟು

ಮುದ್ರಕರಿಗೂ ತಟ್ಟಿದ ಚುನಾವಣೆ ನೀತಿ ಸಂಹಿತೆ ಬಿಸಿ, ಕಟ್ಟುನಿಟ್ಟಿನ ಕ್ರಮ
Last Updated 7 ಮೇ 2018, 12:20 IST
ಅಕ್ಷರ ಗಾತ್ರ

ಕಲಬುರ್ಗಿ: ಚುನಾವಣಾ ನೀತಿ ಸಂಹಿತೆ ಬಿಸಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳಿಗೆ ಅಥವಾ ರಾಜಕೀಯ ಮುಖಂಡರಿಗೆ ಅಷ್ಟೇ ಅಲ್ಲ, ಫ್ಲೆಕ್ಸ್, ಬ್ಯಾನರ್ ಮತ್ತು ಕರಪತ್ರ ಮುದ್ರಣ ಘಟಕದವರಿಗೂ ತಟ್ಟಿದೆ.

ನೀತಿ ಸಂಹಿತೆ ಜಾರಿಯಾದ ದಿನದಿಂದ ಮಹಾನಗರ ಪಾಲಿಕೆಯು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಇದಕ್ಕೆ ಪೂರಕವಾಗಿ ನಗರದ ವಿವಿಧೆಡೆ ಪಕ್ಷಗಳು ಅಳವಡಿಸಿದ್ದ ಕಟೌಟ್‌, ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದೆ.

ಚುನಾವಣಾ  ಆಯೋಗದ ಕಟ್ಟುನಿಟ್ಟಿನ ಕ್ರಮದಿಂದ ಮುದ್ರಣ ಘಟಕಗಳ ವಹಿವಾಟು ಕಳೆದ ಚುನಾವಣೆಗೆ ಹೋಲಿಸಿದರೆ ಶೇ 90ರಷ್ಟು ಕಡಿಮೆ ಆಗಿದೆ. ಚುನಾವಣೆ ಸಮಯದಲ್ಲಿ ಹೆಚ್ಚು ವಹಿವಾಟು ನಡೆಯುತ್ತದೆ. ಆದರೆ, ಈ ಬಾರಿ ಅದು ಸಾಧ್ಯವಾಗುತ್ತಿಲ್ಲ.

‘ಕಳೆದ ಚುನಾವಣೆಯಲ್ಲಿ 2 ಲಕ್ಷ ಕರಪತ್ರಗಳನ್ನು ಮುದ್ರಣ ಮಾಡಲಾಗಿತ್ತು. ಆದರೆ, ಈ ಬಾರಿ ಕೇವಲ ವಿವಿಧ ರಾಜಕೀಯ ಪಕ್ಷಗಳು, ಪಕ್ಷೇತರ ಅಭ್ಯರ್ಥಿಗಳಿಂದ ಕರಪತ್ರ ಮುದ್ರಣಕ್ಕೆ ಅಷ್ಟಾಗಿ ಬೇಡಿಕೆ ಬಂದಿಲ್ಲ. ಇದುವರೆಗೆ ಕೇವಲ 40 ಸಾವಿರ ಕರಪತ್ರ ಮುದ್ರಿಸಲಾಗಿದೆ’ ಎನ್ನುತ್ತಾರೆ ಅಲ್ಲಮ ಪ್ರಿಂಟರ್ಸ್‌ನ ರಾಜಶೇಖರ.

‘ಚುನಾವಣಾ ಆಯೋಗವು ಅಭ್ಯರ್ಥಿಗಳ ಪ್ರಚಾರ ವೆಚ್ಚವನ್ನು ₹28 ಲಕ್ಷಕ್ಕೆ ಮಿತಿಗೊಳಿಸಿದೆ. ಆದರೆ, ‘ಎ4’ ಅಳತೆಯ ಕರಪತ್ರ ಮುದ್ರಿಸಲು ₹5 ತಗುಲುತ್ತದೆ. ಇದರಿಂದ ಅಭ್ಯರ್ಥಿಗಳಿಗೆ ಹೆಚ್ಚಿನ ಹೊರೆ ಆಗುವುದಿಲ್ಲ. ನಾವೇ ಹೋಗಿ ಕೇಳಿದರೂ ಅವರು ಕರಪತ್ರ ಮುದ್ರಿಸಲು ಆಸಕ್ತಿ ತೋರುತ್ತಿಲ್ಲ’ ಎನ್ನುವುದು ಅವರ ಅಸಮಾಧಾನ.

‘ಹಿಂದಿನ ಚುನಾವಣೆಗಳಲ್ಲಿ ಕಡಿಮೆ ಕರಪತ್ರ ಮುದ್ರಿಸಲು ಅನುಮತಿ ಪಡೆದು ನಮ್ಮ ಬಳಿ ಹೆಚ್ಚಿನ ಕರಪತ್ರಗಳನ್ನು ಮುದ್ರಿಸಿಕೊಂಡು ಹೋಗುತ್ತಿದ್ದರು. ಚುನಾವಣಾ  ಆಯೋಗಕ್ಕೆ ಪ್ರತಿಯೊಂದಕ್ಕೂ ನಾವು ಲೆಕ್ಕ ಕೊಡಬೇಕಾಗಿದೆ. ಹೀಗಾಗಿ ನಾವು ಎಷ್ಟು ಅನುಮತಿ ಪಡೆದಿದ್ದಾರೋ ಅಷ್ಟೇ ಮುದ್ರಿಸಿ ಕೊಡುತ್ತೇವೆ’ ಎಂದು ಈಶ್ವರಿ ಪ್ರಿಂಟರ್ಸ್‌ನ ಮಾಲೀಕ ಅಶೋಕ ಪಾಟೀಲ ಹೇಳುತ್ತಾರೆ.

‘ಆಯೋಗದ ಅಧಿಕಾರಿಗಳು ಯಾವಾಗ ದಾಳಿ ನಡೆಸುತ್ತಾರೋ ಎಂಬ ಭಯ ಇರುತ್ತದೆ. ನಿಯಮ ಉಲ್ಲಂಘಿಸಿರುವುದು ಕಂಡುಬಂದರೆ ಅನುಮತಿ ರದ್ದುಪಡಿಸುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ನಾವು ತುಂಬಾ ಎಚ್ಚರಿಕೆ ವಹಿಸುತ್ತಿದ್ದೇವೆ’ ಎಂದು ಅವರು ಹೇಳುತ್ತಾರೆ.

‘ಚುನಾವಣಾ ಪೂರ್ವದಲ್ಲಿ ವಿವಿಧ ರಾಜಕೀಯ ಪಕ್ಷಗಳ ಸಮಾವೇಶಗಳಿಗೆ ₹5 ಲಕ್ಷ ಮೌಲ್ಯದ ಬೃಹತ್ ಗಾತ್ರದ ಫ್ಲೆಕ್ಸ್, ಬ್ಯಾನರ್‌ಗಳನ್ನು ಮುದ್ರಿಸಿದ್ದೆವು. ಚುನಾವಣೆ ದಿನಾಂಕ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಅವುಗಳಿಗೂ ಬೇಡಿಕೆ ಕಡಿಮೆ ಆಗಿದೆ. ಈಗ ಕೇವಲ ಪ್ರಚಾರಕ್ಕೆ ಅನುಮತಿ ಪಡೆದಿರುವ ವಾಹನಗಳಿಗೆ ಅಳವಡಿಸಲು ಮಾತ್ರ ಫ್ಲೆಕ್ಸ್‌ಗಳಿಗೆ ಬೇಡಿಕೆ ಬರುತ್ತಿದೆ’ ಎಂದು ವಿವರಿಸುತ್ತಾರೆ.

‘ನೀತಿ ಸಂಹಿತೆಯಿಂದಾಗಿ ವಹಿವಾಟು ಬಹುತೇಕ ಕಡಿಮೆ ಆಗಿದೆ. ಆದರೆ, ಮದುವೆ ಹಾಗೂ ಇತರೆ ಸಮಾರಂಭಗಳಿಗೆ ಬೇಡಿಕೆಯಿದ್ದು, ಇದೇ ಸದ್ಯ ನಮ್ಮ ಕೈ ಹಿಡಿದಿದೆ’ ಎಂದು ನಿರಾಳತೆಯಿಂದ ಹೇಳುತ್ತಾರೆ.

**
ಚುನಾವಣೆ ಮುಗಿದ ನಂತರವೂ ನಗರದಲ್ಲಿ ಫ್ಲೆಕ್ಸ್, ಕಟೌಟ್ ಬ್ಯಾನರ್‌ಗಳನ್ನು ಹಾಕದಂತೆ ಮಹಾನಗರ ಪಾಲಿಕೆ ಕ್ರಮ ಕೈಗೊಳ್ಳಬೇಕು
- ಅಭಿಷೇಕ್, ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT