ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸಗೊಬ್ಬರ ಅಂಗಡಿಗಳಲ್ಲಿ ಕಳಪೆ ಔಷಧಿ ಮಾರಾಟ; ತನಿಖೆಯಿಂದ ಬಯಲು

ಒಂದು ವರ್ಷದ ಹಿಂದೆ ಪರಿಶೀಲಿಸಿದ್ದ ಅಧಿಕಾರಿಗಳು
Last Updated 22 ಫೆಬ್ರುವರಿ 2021, 4:03 IST
ಅಕ್ಷರ ಗಾತ್ರ

ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ರೈತರು ರಸಗೊಬ್ಬರ ಮತ್ತು ಕ್ರಿಮಿನಾಶಕ ಔಷಧಿ ಹೆಚ್ಚು ಬಳಸುವರು ಎಂಬುದನ್ನೇ ಬಂಡವಾಳ ಮಾಡಿಕೊಂಡು ಕೆಲ ರಸಗೊಬ್ಬರ ಮತ್ತು ಕ್ರಿಮಿನಾಶಕ ಅಂಗಡಿಯ ಮಾಲೀಕರು ಕಳೆಪ ರಸಗೊಬ್ಬರ ಹಾಗೂ ಕಳಪೆ ಪುಡಿ (ಕ್ರಿಮಿನಾಶಕ ಔಷಧಿ) ಮಾರುತ್ತಾರೆ ಎಂಬ ಅಂಶ ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ತನಿಖೆ ನಡೆಸಿದ ವೇಳೆ ಬೆಳಕಿಗೆಬಂದಿದೆ.

‘ನಾವು ಒಂದು ವರ್ಷದ ಹಿಂದೆ ವಿವಿಧ ರಸಗೊಬ್ಬರ ಅಂಗಡಿಗಳಿಗೆ ತೆರಳಿ ತಪಾಸಣೆ ಮಾಡಿದಾಗ, ಕಳಪೆ ರಸಗೊಬ್ಬರ ಮತ್ತು ಕ್ರಿಮಿನಾಶಕ ಔಷಧಿ ಮಾರಾಟ ಮಾಡುತ್ತಿರುವುದನ್ನು ಪತ್ತೆ ಮಾಡಿದೆವು. ಅದರ ಸತ್ಯಾಸತ್ಯತೆ ಅರಿಯಲು ರಾಯಚೂರಿನ ಗುಣಮಟ್ಟ ವಿಶ್ಲೇಷಣಾ ಪ್ರಯೋಗಾಲಯಕ್ಕೆ ಕಳುಹಿಸಿದ್ದೆವು. ವರದಿಯಲ್ಲಿ ಗುಣಮಟ್ಟವಲ್ಲದ ರಸಗೊಬ್ಬರ ಮತ್ತು ಕೀಟನಾಶಕ ಔಷಧಿ ಮಾರಾಟ ಮಾಡಿದ ಬಗ್ಗೆ ನಮೂದಿಸಿದ್ದಾರೆ. ಅದರಂತೆ ಕೀಟನಾಶಕ ಕಾಯ್ದೆಯಡಿ ಮಾರಾಟ ಮಾಡಿದ ಮಾಲೀಕರ ವಿರುದ್ಧನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಲಾಗಿದೆ’ ಎಂದು ರೈತ ಸಂಪರ್ಕ ಕೃಷಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

2019 ಅಕ್ಟೋಬರ್ 16ರಂದು ಶಹಾಪುರ ರೈತ ಸಂಪರ್ಕ ಕೃಷಿ ಅಧಿಕಾರಿ ಸುರೇಶ ಪಾಡಮುಖಿ ಅವರು ನಗರದ ವಿಜಯ ಅಗ್ರೋ ಟ್ರೇಡರ್ಸ್ ಮಳಿಗೆಗೆ ಭೇಟಿ ನೀಡಿದಾಗ ‘ಮಿತ್ರ’ ಜೈವಿಕ ಹೆಸರಿನಡಿಯಲ್ಲಿ ತಯಾರಿಕಾ ಪರವಾನಗಿ ಪಡೆಯದೆ ಮತ್ತು ಮಾರಾಟ ಪರವಾನಗಿ ಪಡೆಯದೆ ಗುಣಮಟ್ಟವಲ್ಲದ ಪೀಡೆನಾಶಕಗಳನ್ನು ಮಿಶ್ರಣ ಮಾಡಿ ಮಾರಾಟ ಹಾಗೂ ಸಂಗ್ರಹ ಮಾಡಿದ ಬಗ್ಗೆ ಪತ್ತೆ ಹಚ್ಚಿದ್ದರು.

ವಿಶ್ಲೇಷಣಾ ವರದಿ ಆಧಾರದ ಮೇಲೆ ವಿಜಯ ಅಗ್ರೋ ಟ್ರೇಡರ್ಸ್ ಮಾಲೀಕ ವಿಜಯ ಮಾಗನೂರ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದೆ ಎಂದು ಸದರಿ ಪ್ರಕರಣದ ಸಾಕ್ಷಿದಾರ ಶರಣು ಹತ್ತಿಗೂಡೂರ ತಿಳಿಸಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ವಿಜಯ ಅಗ್ರೋ ಟ್ರೇಡರ್ಸ್ ಮಾಲೀಕ ವಿಜಯ ಮಾಗನೂರ ವಿರುದ್ಧ ‘ಸಿಕ್ಸರ್’ ಹೆಸರಿನ ಕೀಟನಾಶಕ ಮಾರಾಟ ಮಾಡಿದ ಬಗ್ಗೆ ಶಹಾಪುರ ರೈತ ಸಂಪರ್ಕ ಕೇಂದ್ರದ ಕೀಟನಾಶಕ ಪರಿವೀಕ್ಷಕ ಪ್ರಕಾಶ ಪಟ್ಟಣಶೆಟ್ಟಿ ಖಾಸಗಿ ದೂರು ದಾಖಲಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಅಲ್ಲದೆ ನಗರದ ಪವನ ಅಗ್ರೋ ಟ್ರೇಡರ್ಸ್ ಮಾಲೀಕ ಇನಾಮೂರಿ ಭ್ರಹಮೈ ಅವರು ‘ಪ್ರೋಟಾನ್’ ಕಳಪೆಮಟ್ಟದ ಕ್ರಿಮಿನಾಶಕ ಔಷಧಿ ಮಾರಾಟ ಮತ್ತು ಸಂಗ್ರಹ ಮಾಡಿದ್ದಾರೆ ಎಂದು ಕೀಟನಾಶಕ ಪರಿವೀಕ್ಷಕ ಅಧಿಕಾರಿ ರೂಪಾದೇವಿ ಖಾಸಗಿ ದೂರು ದಾಖಲಿಸಿದ್ದಾರೆ.

ನಗರದ ಬುರಾನಜಿ ಏಜೆನ್ಸಿಯವರು ಸಂಗ್ರಹಿಸಿದ ಕಳಪೆ ಮಟ್ಟದ 260 ಬ್ಯಾಗ್ (13 ಟನ್) ರಸಗೊಬ್ಬರ ಪತ್ತೆಯಾಗಿದೆ. ಹೈಯ್ಯಾಳದ ಜುವಾರಿ ಅಗ್ರೋ ಕೆಮಿಕಲ್ ಕಂಪನಿಯ ಮಾಲೀಕರ ವಿರುದ್ಧ ಡಿಎಪಿ 1080 ಬ್ಯಾಗ್ (54 ಟನ್) ಕಳಪೆಮಟ್ಟದ ರಸಗೊಬ್ಬರ ಸಂಗ್ರಹವಾದ ಬಗ್ಗೆ ಎರಡು ಪ್ರತ್ಯೇಕ ದೂರು ದಾಖಲಾಗಿವೆ.

ತಪ್ಪಿತಸ್ಥ ರಸಗೊಬ್ಬರ ಮತ್ತು ಕ್ರಿಮಿನಾಶಕ ಔಷಧಿ ಮಳಿಗೆಯ ಮಾಲೀಕರ ವಿರುದ್ಧ ತಕ್ಷಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ರೈತ ಮುಖಂಡ ಶರಣು ಹತ್ತಿಗೂಡೂರ ಮನವಿ ಮಾಡಿದ್ದಾರೆ.

* ವಿವಿಧ ರಸಗೊಬ್ಬರ ಮಾರಾಟ ಮಾಡಿದ ಅಗ್ರೋ ಕಂಪನಿಯ ಮಾಲೀಕರು ಕಳಪೆ ರಸಗೊಬ್ಬರ ಮತ್ತು ಕಳಪೆ ರಸಾಯನಿಕ ಪುಡಿ ಮಾರಾಟ ಮಾಡಿದ ಬಗ್ಗೆ ನ್ಯಾಯಾಲಯದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಖಾಸಗಿ ದೂರು ದಾಖಲಿಸಿದ್ದಾರೆ

-ವಿನಾಯಕ ಕೋಡ್ಲಾ, ಸಹಾಯಕ ಅಭಿಯೋಜಕ, ಶಹಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT