ಅಶುದ್ಧ ನೀರು ಪೂರೈಕೆ: ಗ್ರಾಮಸ್ಥರ ಆತಂಕ

7

ಅಶುದ್ಧ ನೀರು ಪೂರೈಕೆ: ಗ್ರಾಮಸ್ಥರ ಆತಂಕ

Published:
Updated:
ಶಹಾಪುರ ತಾಲ್ಲೂಕಿನ ವನದುರ್ಗ ಗ್ರಾಮದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಕಾರ್ಯಾರಂಭವಾಗಿಲ್ಲ

ಶಹಾಪುರ: ‘ತಾಲ್ಲೂಕಿನ ವನದುರ್ಗದ ಕೆಲ ಬಡಾವಣೆಯಲ್ಲಿ ನಲ್ಲಿಯ ಮೂಲಕ ಸರಬರಾಜು ಮಾಡುತ್ತಿರುವ ನೀರು ಕುಡಿಯಲು ಯೋಗ್ಯವಾಗಿಲ್ಲ. ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಬಿಜೆಪಿಯ ರೈತ ಮೋರ್ಚಾದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಯಲ್ಲಯ್ಯ ನಾಯಕ ವನದುರ್ಗ ಅವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವಿನಾಶ್ ಮೆನನ್‌ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.

‘ಐದು ತಿಂಗಳ ಹಿಂದೆ ನೀರು ತಪಾಸಣೆ ತಂಡ ಗ್ರಾಮಕ್ಕೆ ಭೇಟಿ ನೀಡಿ, ನೀರನ್ನು ಪರೀಕ್ಷೆಗೆ ಒಳಪಡಿಸಿದಾಗ ನೀರು ಅಶುದ್ಧವಾಗಿದ್ದು, ಸಂಸ್ಕರಣ ಮಾಡಬೇಕು ಎಂದು ಗ್ರಾಮ ಪಂಚಾಯಿತಿ ಇಲಾಖೆ ಎಚ್ಚರವಹಿಸಲು ಮೌಖಿಕವಾಗಿ ಸೂಚಿಸಿತ್ತು. ಪೂರೈಕೆಯಾಗುತ್ತಿರುವ ನೀರು ತುಂಬಾ ಗಡಸಾಗಿದ್ದು, ಕುಡಿದರೆ ಕೆಟ್ಟ ವಾಸನೆ ಬರುತ್ತಿದೆ. ಇದರಿಂದ ನಾವು ಹೆದರಿ ಗ್ರಾಮದ ಆರು ಕಿ.ಮೀ ದೂರದ ಮಾಲಗತ್ತಿ ಗ್ರಾಮಕ್ಕೆ ತೆರಳಿ ಶುದ್ಧ ನೀರು ತರುವ ದುಸ್ಥಿತಿ ಎದುರಾಗಿದೆ’ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

‘ವರ್ಷದ ಹಿಂದೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಕೆಲಸ ಆರಂಭಿಸಿದ್ದಾರೆ. ಕೇವಲ ಶೆಡ್‌ ಹಾಗೂ ಒಂದಿಷ್ಟು ಸಣ್ಣಪುಟ್ಟ ಕಾಮಗಾರಿ ನಡೆದಿವೆ. ಆದರೆ, ಇಂದಿಗೂ ಘಟಕ ಕಾರ್ಯಾರಂಭ ಮಾಡಿಲ್ಲ. ದಾಖಲೆಯಲ್ಲಿ ಕೆಲಸ ಪ್ರಗತಿಯಲ್ಲಿ ಇದೆ ಎಂದು ಮೂಲಸೌಕರ್ಯ ಕುಡಿಯುವ ನೀರು ಗ್ರಾಮೀಣಭಿವೃದ್ಧಿ ಇಲಾಖೆಯ ಎಂಜಿನಿಯರ್ ಮೇಲಧಿಕಾರಿಗೆ ತಪ್ಪು ಮಾಹಿತಿ ನೀಡುತ್ತಲೆ ಕಾಲ ಹರಣ ಮಾಡಿ ಗ್ರಾಮಸ್ಥರನ್ನು ವಂಚಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಗ್ರಾಮಕ್ಕೆ ನೀರು ತಪಾಸಣೆಯ ತಂಡ ಬಂದ ಬಗ್ಗೆ ಮಾಹಿತಿ ಇಲ್ಲ. ಪಂಪ್ ಅಪರೇಟರ್ ಬಳಿ ಮಾಹಿತಿ ಪಡೆಯುವೆ. ಶುದ್ಧ ಕುಡಿಯುವ ನೀರಿನ ಘಟಕದ ಕೆಲಸ ಆರಂಭಕ್ಕೆ ಸಂಬಂಧಪಟ್ಟ ಅಧಿಕಾರಿಗೆ ಪತ್ರ ಬರೆಯುವೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೀಮಣ್ಣಗೌಡ ಬಿರಾದಾರ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !