ಯಾದಗಿರಿ: ನಿಷೇಧದ ಮಧ್ಯೆಯೂ ನಗರದಲ್ಲಿ ಪಿಒಪಿ ಗಣೇಶ ಮೂರ್ತಿಗಳ ಮಾರಾಟ

7
ವಿಸರ್ಜನೆಗೆ ನಿರ್ಮಾಣಗೊಳ್ಳದ ಕೃತಕ ಹೊಂಡಗಳು

ಯಾದಗಿರಿ: ನಿಷೇಧದ ಮಧ್ಯೆಯೂ ನಗರದಲ್ಲಿ ಪಿಒಪಿ ಗಣೇಶ ಮೂರ್ತಿಗಳ ಮಾರಾಟ

Published:
Updated:
Deccan Herald

ಯಾದಗಿರಿ: ಸರ್ಕಾರದ ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆಗೆ ನಿಷೇಧ ಹೇರಿದ್ದರೂ, ಜಿಲ್ಲಾಡಳಿತ ನಿರ್ಲಕ್ಷ್ಯದಿಂದಾಗಿ ನಗರದಲ್ಲಿ ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌(ಪಿಒಪಿ)ಯಿಂದ ತಯಾರಾಗಿರುವ ಗಣೇಶ ಮೂರ್ತಿಗಳು ಭರ್ಜರಿ ಮಾರಾಟ ಆಗುತ್ತಿವೆ.

ಪರಿಸರಸ್ನೇಹಿ ಗಣೇಶೋತ್ಸವ ಆಚರಣೆ ಕೈಗೊಳ್ಳುವಂತೆ ಪೂರ್ವಭಾವಿಯಾಗಿ ಮಣ್ಣಿನ ಗಣೇಶ ಮೂರ್ತಿ ತಯಾರಿಸಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು ಎಂಬುದಾಗಿ ಸರ್ಕಾರ ಸೂಚಿಸಿದೆ. ಆದರೆ, ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ನಗರಸಭೆ ಟಾಂ ಟಾಂ ಹೊಡೆಸಿ ಕೈತೊಳೆದುಕೊಂಡಿವೆ. ಇದರಿಂದಾಗಿ, ಮಣ್ಣಿನ ಮೂರ್ತಿಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿಲ್ಲ. ಅನಿವಾರ್ಯವಾಗಿ ಜನರು ಪಿಒಪಿ ಮೂರ್ತಿಗಳನ್ನೇ ಖರೀದಿಸುವಂತಾಗಿದೆ.

ನಗರದ ವಿವಿಧ ಬಡಾವಣೆಗಳಲ್ಲಿ ಕನಿಷ್ಠ 200ಕ್ಕೂ ಹೆಚ್ಚು ಮೂರ್ತಿಗಳು ಪ್ರತಿಷ್ಠಾಪನೆಯಾಗಲಿವೆ. ಆದರೆ, ನಗರದಲ್ಲಿ ಮಣ್ಣಿನ ಮೂರ್ತಿಗಳು ದೊರೆಯದ ಕಾರಣ ಗಣೇಶ ಉತ್ಸವ ಸಮಿತಿ ಪಿಒಪಿ ಮೂರ್ತಿಗಳನ್ನೇ ಪ್ರತಿಷ್ಠಾಪನೆಗೆ ಮುಂದಾಗಿವೆ. ಅಲದೆ ನಗರದ ಹೊರವಲಯದಲ್ಲಿ ಮೂರ್ತಿಗಳ ವಿಸರ್ಜನೆಗೆ ನಗರಸಭೆ ಕೃತಕ ಹೊಂಡಗಳನ್ನು ಸಹ ನಿರ್ಮಾಣಗೊಳಿಸಿಲ್ಲ. ಇದರಿಂದ, ಕೆರೆ, ಬಾವಿ, ಹಳ್ಳಗಳ ಒಡಲಲ್ಲಿ ಪಿಒಪಿ ಮೂರ್ತಿಗಳು ವಿಸರ್ಜನೆಗೊಳ್ಳಲಿವೆ. ಇದರಿಂದ ಅಮೂಲ್ಯ ಜಲಮೂಲ ಕಲುಷಿತಗೊಳ್ಳುವ ಭೀತಿ ಎದುರಾಗಿದೆ.

ಹೋದ ವರ್ಷ ಗಣೇಶ ಚತುರ್ಥಿ ಎರಡು ವಾರ ಇರುವಾಗಲೇ ಜಿಲ್ಲಾಡಳಿತ ಪೂರ್ವಭಾವಿ ಸಭೆ ನಡೆಸಿ ಬಿಗಿಕ್ರಮ ಅನುಸರಿಸಿತ್ತು. ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸಲು ಮಣ್ಣಿನ ಮೂರ್ತಿಗಳನ್ನು ತಯಾರಿಸಲು ಆಸಕ್ತರಿಗೆ, ಎನ್‌ಜಿಒಗಳಿಗೆ ಆಹ್ವಾನ ನೀಡಿತ್ತು. ಅಲ್ಲದೇ ನಗರದಲ್ಲಿ ಪಿಒಪಿ ಮೂರ್ತಿ ತಯಾರಿಸಿದ್ದ ಮಹಾರಾಷ್ಟ್ರ ಮೂಲದ ವ್ಯಾಪಾರಿಗಳಿಗೆ ನೊಟೀಸ್‌ ನೀಡಿ ಕನಿಷ್ಠ ₹70 ಸಾವಿರ ದಂಡ ವಿಧಿಸಿತ್ತು. ಆದರೆ, ಈ ಸಲ ಜಿಲ್ಲಾಡಳಿತ ಬಿಗಿಕ್ರಮ ಕೈಚೆಲ್ಲಿದ್ದು, ನಗರದಲ್ಲಿ ಪಿಒಪಿ ಗಣೇಶ ಮೂರ್ತಿಗಳು ವಿಜೃಂಭಿಸಲು ಅನುವು ಮಾಡಿಕೊಟ್ಟಿದೆ.

ನಗರದ ಲಿಂಗೇರಿ ಕೋನಪ್ಪ, ಎನ್‌ವಿಎಂ ಹೊಟೇಲ್, ಹೈದರಾಬಾದ್ ಸಂಪರ್ಕ ರಸ್ತೆಬದಿ ಪಿಒಪಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ. ವ್ಯಾಪಾರಿಗಳಿಗೆ ನಗರಸಭೆ ಔಪಚಾರಿಕವಾಗಿ ನೊಟೀಸ್ ನೀಡಿರುವುದು ಬಿಟ್ಟರೆ, ಬಿಗಿಕ್ರಮ ಅನುಸರಿಸಿಲ್ಲ. ಹಾಗಾಗಿ, ವಿಷಕಾರಿ ರಾಸಾಯನಿಕ ಒಳಗೊಂಡಿರುವ ಪಿಒಪಿಗಳು ನಗರದ ಸುತ್ತಮುತ್ತಲಿನ ಜಲಮೂಲಗಳು ಮಲಿನಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಜಿಲ್ಲಾಡಳಿತ ಗಣೇಶೋತ್ಸವ ಆಚರಣೆ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಇರುವುದರಿಂದ ನಗರದಲ್ಲಿ ಅಪಾಯಕಾರಿ ವಿದ್ಯುತ್ ಸಂಪರ್ಕ, ಭಾರೀ ಶಬ್ದ ಹೊಮ್ಮಿಸುವ ಧ್ವನಿವರ್ಧಕ (ಡಿಜೆ) ಬಳಕೆ, ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗುವಂತೆ ಮೂರ್ತಿ ಸ್ಥಾಪನೆ ಹೆಚ್ಚಲಿದೆ. ಇದರಿಂದ ಈ ಬಾರಿ ಗಣೇಶೋತ್ಸವ ನಗರದ ಜನರಿಗೆ ಕಿರಿಕಿರಿ ಉಂಟು ಮಾಡುವ ಸಾಧ್ಯತೆ ಹೆಚ್ಚಿದೆ.

ಮೂವರಿಗೆ ನೋಟಿಸ್‌

ನಗರದ ವಿವಿಧ ಕಡೆ ಪಿಒಪಿ ಗಣೇಶ ಮಾರಾಟ ಮಾಡುತ್ತಿದ್ದ ಮೂವರು ವ್ಯಾಪಾರಿಗಳಿಗೆ ನಗರಸಭೆ ನೊಟೀಸ್‌ ಜಾರಿ ಮಾಡಿದೆ. ಕಳೆದ ಬಾರಿಗಿಂತ ಈ ಸಲ ಪಿಒಪಿ ಗಣೇಶ ಮೂರ್ತಿ ತಯಾರಿಕೆ ಮೇಲೆ ಬಿಗಿಕ್ರಮ ಕೈಗೊಳ್ಳಲಾಗಿದೆ. ಇದರಿಂದ ಈ ವರ್ಷ ಪಿಒಪಿ ಮೂರ್ತಿ ಪ್ರತಿಷ್ಠಾಪನೆ ಕಡಿಮೆಯಾಗಲಿದೆ ಎಂದು ನಗರಸಭೆ ಪರಿಸರ ಎಂಜಿನಿಯರ್ ಮಲ್ಲಿಕಾರ್ಜುನ್ ತಿಳಿಸಿದರು.

* ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಕುರಿತು ಜಿಲ್ಲಾಡಳಿತ ಮತ್ತು ನಗರಸಭೆ ಬಿಗಿಕ್ರಮ ಅನುಸರಿಸಿವೆ. ಜನರು ಸ್ವತಃ ಪಿಒಪಿ ಮೂರ್ತಿ ಖರೀದಿಸದೆ, ತಿರಸ್ಕರಿಸಬೇಕು.
–ಮಲ್ಲಿಕಾರ್ಜುನ, ಪರಿಸರ ಎಂಜಿನಿಯರ್, ನಗರಸಭೆ

ಮುಖ್ಯಾಂಶಗಳು

* ನಗರದಲ್ಲಿ ದೊರೆಯದ ಮಣ್ಣಿನ ಮೂರ್ತಿಗಳು

* ಪಿಒಪಿ ಮೂರ್ತಿಗಳನ್ನೇ ಪ್ರತಿಷ್ಠಾಪಿಸಲು ಮುಂದಾದ ಜನರು

* ನಗರದಲ್ಲಿ ಕನಿಷ್ಠ 200 ಮೂರ್ತಿಗಳ ಪ್ರತಿಷ್ಠಾಪನೆ ಸಾಧ್ಯತೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !