ವಿವಿಧ ಬೇಡಿಕೆಗೆ ಆಗ್ರಹಿಸಿ ‘ಜೈಲ್‌ಭರೋ’

7
ಕರ್ನಾಟಕ ಪ್ರಾಂತ ರೈತ ಸಂಘ, ಕಾರ್ಮಿಕ ಸಂಘಟನೆಗಳು, ಸ್ತ್ರೀ ಶಕ್ತಿ ಸಂಘನೆಗಳಿಂದ ಪ್ರತಿಭಟನೆ

ವಿವಿಧ ಬೇಡಿಕೆಗೆ ಆಗ್ರಹಿಸಿ ‘ಜೈಲ್‌ಭರೋ’

Published:
Updated:
Deccan Herald

ಯಾದಗಿರಿ: ರೈತರ ಜತೆಗೆ ಕೂಲಿಕಾರ್ಮಿಕರ, ದಲಿತರ, ಮತ್ತು ಸ್ತ್ರೀಶಕ್ತಿ ಸಂಘಗಳ ಎಲ್ಲಾ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ, ಕಾರ್ಮಿಕ ಸಂಘಟನೆಗಳು, ಸ್ತ್ರೀ ಶಕ್ತಿ ಸಂಘನೆಗಳು ಗುರುವಾರ ಜೈಲ್‌ಭರೋ ಚಳವಳಿ ನಡೆಸಿದವು.

ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಸಾಗರ್ ಮಾತನಾಡಿ,‘ರೈತರಿಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸಬೇಕು. ಉತ್ಪಾದನಾ ವೆಚ್ಚದ ಶೇ 50ರಷ್ಟು ಲಾಭಾಂಶವನ್ನು ಕನಿಷ್ಠ ಬೆಂಬಲ ಬೆಲೆಯ ಜತೆಗೆ ನೋಡಬೇಕು. ಈ ಕುರಿತು ಮಸೂದೆ ಮಂಡನೆಯಾಗಿ ಕಾಯ್ದೆ ಜಾರಿಯಾಗಬೇಕು. ನಿವೇಶನ ರಹಿತರಿಗೆ ಸೂರು ಒದಗಿಸಬೇಕು. ತೋಟಗಾರಿಕೆ, ಹೈನುಗಾರಿಕೆ, ಪಶುಪಾಲನೆಗೆ ಯೋಜನೆ ರೂಪಿಸಬೇಕು’ ಎಂದು ಆಗ್ರಹಿಸಿದರು.

‘ಬೇಸಾಯ ಮಾಡುವವರಿಗೆ ಐದು ಎಕರೆ ಭೂಮಿ ನೀಡಬೇಕು. ಅದಕ್ಕಾಗಿ ಪರಿಶಿಷ್ಟರ ಮತ್ತು ಇತರರ ಜನಸಂಖ್ಯೆಗೆ ಅನುಗುಣವಾಗಿ ಅನುದಾನದಲ್ಲಿ ಶೇ30ರಷ್ಟು ಅನುದಾನ ಮೀಸಲಿಡಬೇಕು. ಈ ಹಿಂದೆ ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಗೆ ವರ್ಗಾಯಿಸಿದ ಜಮೀನುಗಳುನ್ನು ವಾಪಸ್ ಪಡೆದು ಬಡವರಿಗೆ ಹಂಚಿಕೆ ಮಾಡಬೇಕು. ಬಗರ್ ಹುಕುಂ ಸಾಗುವಳಿದಾರರಿಗೆ ಕೂಡಲೆ ಹಕ್ಕುಪತ್ರ ನೀಡಬೇಕು’ ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

‘ಉದ್ಯೋಗ ಖಾತ್ರಿ ಯೋಜನೆಯನ್ನು ಕಡ್ಡಾಯವಾಗಿ 100 ದಿನ ನೀಡಬೇಕು. ಉದ್ಯೋಗ ಪಡೆಯಲಾಗದ ಕುಟುಂಬಗಳಿಗೆ ಕಡ್ಡಾಯವಾಗಿ ನಿರುದ್ಯೋಗ ಭತ್ಯೆ ನೀಡಬೇಕು. ಕೆಲಸದ ದಿನಗಳನ್ನು ಕನಿಷ್ಠ 200 ದಿನಗಳಿಗೆ ಮತ್ತು ನಗರ ಪ್ರದೇಶಗಳಿಗೂ ವಿಸ್ತರಿಸಬೇಕು. ಕೂಲಿ ಮೊತ್ತವನ್ನು ಕನಿಷ್ಠ ₹600ಗೆ ಹೆಚ್ಚಿಸಬೇಕು. ಕನಿಷ್ಠ 50 ದಿನ ಉದ್ಯೋಗ ಖಾತ್ರಿ ಕೆಲಸ ನಿರ್ವಹಿಸಿದ ಎಲ್ಲರನ್ನೂ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ವ್ಯಾಪ್ತಿಗೆ ಸೇರಿಸಬೇಕು’ ಎಂದು ಆಗ್ರಹಿಸಿದರು.

‘ಬೆಳೆ ವಿಮೆಯನ್ನು ರೈತಸ್ನೇಹಿ ಆಗಿಸಬೆಕು. ರೈತರು, ಕೂಲಿಕಾರರು, ಮತ್ತು ಕಸುಬುದಾರರಿಗೆ ತಲಾ ₹500 ಮಾಸಿಕ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು. ಅಂಗನವಾಡಿ ನೌಕರರ ಪಂಚಾಯಿತಿ ನೌಕರರನ್ನು ಹಾಗೂ ಅಕ್ಷರ ದಾಸೋಹ ನೌಕರರನ್ನು ಕಾಯಂಗೊಳಿಸಬೇಕು. ಜೆಡಿಸಿಸಿ ಬ್ಯಾಂಕಿನ ಭ್ರಷ್ಟಾಚಾರ ತಡೆಗಟ್ಟಿ ಅವ್ಯವಹಾರವನ್ನು ಸಮಗ್ರ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಯವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ನಂತರ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ವಾಹನದಲ್ಲಿ ಠಾಣೆಯತ್ತ ಕೊಂಡೊಯ್ದರು.

ಚನ್ನಪ್ಪ ಆನೆಗುಂದಿ, ಚಂದ್ರಶೇಖರ ಚೌಹಾಣ್, ಗಣೇಶ ಅನವಾರ ಇತರರು ಜೈಲ್ ಭರೋ ಚಳವಳಿಯಲ್ಲಿ ಭಾಗವಹಿಸಿದ್ದರು.

ಶಹಾಪುರ ವರದಿ: ಕೇಂದ್ರ ಸರ್ಕಾರದ ವೈಫಲ್ಯ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಹಿಸಿ ಗುರವಾರ ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ್ಮಿಕರ ಸಂಘ, ಸಿಐಟಿಯು ಸಂಘಟನೆಗಳ ಮುಖಂಡರು ಜೈಲ್‌ ಭರೋ ಚಳವಳಿ ನಡೆಸಿದರು.

ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ, ಸ್ವಾಮಿನಾಥನ್‌ ವರದಿ ಜಾರಿ, ಖಾಸಗೀಕರಣ ಪದ್ಧತಿ ರದ್ದು, ಕಾರ್ಮಿಕ ಸ್ನೇಹಿ ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ದಾವಲಾಸಾಬ್‌ ನದಾಫ್, ಮಲ್ಲಪ್ಪಬಾದ್ಯಾಪುರ, ಜೈಲಾಲ ತೋಟದಮನಿ, ಮಲ್ಲಯ್ಯ ಪೋಲಂಪಲ್ಲಿ, ಹಣಮಂತ ಗೋನಾಲ, ಬಸವಲಿಂಗಮ್ಮ ನಾಟೇಕಾರ , ಗುಲಾಮ್ ಹುಸೇನ್‌ ಇತತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !