ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಜಿಲ್ಲೆಗೆ ಅಂಚೆ ವಿಭಾಗ ಮಂಜೂರು

ಇದೇ ಏಪ್ರಿಲ್‌ನಲ್ಲಿ ಹೊಸ ಕಚೇರಿ ಆರಂಭವಾಗುವ ನಿರೀಕ್ಷೆ, ತಪ್ಪಿದ ಸಿಬ್ಬಂದಿ ಅಲೆದಾಟ
Last Updated 23 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಾಗಿ 11 ವರ್ಷ ಕಳೆದಿದ್ದರೂ ಪ್ರತ್ಯೇಕ ಅಂಚೆ ವಿಭಾಗ ಇರಲಿಲ್ಲ. ಕಲಬುರಗಿಯಿಂದಲೇ ಕಾರ್ಯ ನಿರ್ವಹಣೆ ಮಾಡಲಾಗುತ್ತಿದ್ದು, ಫೆ.21ರಂದು ನೂತನ ಅಂಚೆ ವಿಭಾಗ ಜಿಲ್ಲೆಗೆ ಮಂಜೂರಾಗಿದೆ.

ಕೇಂದ್ರ ಸರ್ಕಾರದ ಮಿನಿಸ್ಟ್ರಿ ಆಫ್ ಕಮ್ಯುನಿಕೇಶನ್, ಪೋಸ್ಟಲ್ ಇಲಾಖೆ ನವದೆಹಲಿಯ ಪೋಸ್ಟಲ್ ವಿಭಾಗದ ಸಹಾಯಕ ಮಹಾನಿರ್ದೇಶಕ ಅವರು ಚೀಫ್ ಪೋಸ್ಟ್ ಮಾಸ್ಟರ್ ಜನರಲ್, ಕರ್ನಾಟಕ ವೃತ್ತ ಬೆಂಗಳೂರಿಗೆ ಪತ್ರ ಬರೆದು ಸಮಗ್ರ ಹಣಕಾಸು ವಿಭಾಗದ ಒಪ್ಪಿಗೆಯೊಂದಿಗೆ ಯಾದಗಿರಿ ಪೋಸ್ಟಲ್ ಡಿವಿಜನ್‌ಗೆ ಹೊಸ ವಿಭಾಗೀಯ ಮುಖ್ಯಸ್ಥರನ್ನು ನಿಯೋಜನೆ ಮಾಡಿ ಆದೇಶ ಮಾಡಿದ್ದಾರೆ. ಇದರಿಂದ ಜಿಲ್ಲೆಗೆ ನೂತನ ಕಚೇರಿ ಆರಂಭವಾಗುವುದರ ಜತೆ ಸಿಬ್ಬಂದಿ ಹೊರೆಯೂ ತಗ್ಗಲಿದೆ.

ಈ ಹಿಂದೆ ಕಲಬುರಗಿ ಅಂಚೆ ಅಧೀಕ್ಷಕರಿಂದಲೇ ಸಹಿ, ಮಂಜೂರಾಗಿ ಸಾಕಷ್ಟು ಸಮಯ ವ್ಯರ್ಥವಾಗುತ್ತಿತ್ತು. ಜಿಲ್ಲೆಯೂ 6 ತಾಲ್ಲೂಕುಗಳನ್ನು ಹೊಂದಿದ್ದು, ಸರ್ಕಾರಿ ಇಲಾಖೆಯ ಪತ್ರ ವ್ಯವಹಾರ ಬಹುತೇಕ ಅಂಚೆಯಿಂದಲೇ ನಡೆಯುತ್ತದೆ. ಇದರಿಂದವೂ ಈಗ ಅನುಕೂಲವಾಗಲಿದೆ.

ನೂತನ ಜಿಲ್ಲೆಯಾಗಿದ್ದರೂ ಅಂಚೆ ವಿಭಾಗೀಯ ಕಚೇರಿ ಮಾತ್ರ ಹೊಂದರಲಿಲ್ಲ. ಯಾದಗಿರಿ ವಿಭಾಗವೂ ಕಲಬುರಗಿ ಜಿಲ್ಲೆಯ ಚಿತ್ತಾಪುರ, ಸೇಡಂ ವ್ಯಾಪ್ತಿಯನ್ನು ಹೊಂದಿದೆ.

ಏಪ್ರಿಲ್‌ಗೆ ನೂತನ ಕಚೇರಿ: ಎಲ್ಲ ಅಂದುಕೊಂಡಂತೆ ಆದರೆ ಜಿಲ್ಲೆಯಲ್ಲಿ ಏಪ್ರಿಲ್‌ 1ರಿಂದಲೇ ವಿಭಾಗೀಯ ಕಚೇರಿ ಆರಂಭವಾಗಲಿದೆ. ನಗರದ ಅಂಬೇಡ್ಕರ್‌ ವೃತ್ತದ ಸಮೀಪ ಯಾದಗಿರಿ ಪ್ರಧಾನ ಅಂಚೆ ಕಚೇರಿ ಇದೆ. ಈಗ ಇಲ್ಲಿಯೇ ಹೊಸ ವಿಭಾಗೀಯ ಕಚೇರಿ ಆರಂಭವಾಗಲಿದೆ. ಇದರಿಂದ ಕಚೇರಿ ಕಾರ್ಯಗಳು ಶೀಘ್ರವೇ ಇತ್ಯರ್ಥ್ಯವಾಗಲಿವೆ. ಆಗ ಕಲಬುರಗಿ ಪ್ರಧಾನ ಅಂಚೆ ಕಚೇರಿಗೆ ಅಲೆದಾಡುವುದು ತಪ್ಪಲಿದೆ. ಸಾರ್ವಜನಿಕರ ಕೆಲಸ ಕಾರ್ಯಗಳು ಇಲ್ಲಿಂದಲೇ ಪೂರ್ಣಗೊಳ್ಳುವ ಕಾರಣ ಮತ್ತೆ ಕಲಬುರಗಿ ಕಚೇರಿಗೆ ತೆರಳುವ ಅವಶ್ಯವಿಲ್ಲ.

ಕಲಬುರಗಿ ಅಂಚೆ ವಿಭಾಗದ ವರಿಷ್ಠ ಅಂಚೆ ಅಧೀಕ್ಷಕ ಬಿ.ಆರ್‌.ನನಜಗಿ ಅವರೇ ಏಪ್ರಿಲ್‌ ತನಕ ಕಾರ್ಯಭಾರ ಮಾಡಲಿದ್ದಾರೆ.

ಹೊಸ ಸಿಬ್ಬಂದಿ ನಿಯೋಜನೆ: ನೂತನ ಅಂಚೆ ವಿಭಾಗಕ್ಕೆ ತಕ್ಕಂತೆ ಸಿಬ್ಬಂದಿಯನ್ನು ನಿಯೋಜನೆಯಾಗಲಿದೆ. ಅಂಚೆ ಅಧೀಕ್ಷಕ, ಸಹಾಯಕ ಅಂಚೆ ಅಧೀಕ್ಷಕ, ಸಿಐಸಿ, 6 ಜನ ಕಚೇರಿ ಸಹಾಯಕರು, ಎಂಟಿಸಿ, ಗ್ರೂಪ್‌ ಡಿ ಸಿಬ್ಬಂದಿ ನಿಯೋಜನೆಯಾಗಲಿದೆ. ಇದರಿಂದ ಯಾದಗಿರಿ ಅಂಚೆ ವಿಭಾಗದಿಂದ ಸಾರ್ವಜನಿಕರಿಗೆ ಉಪಯೋಗವಾಗಲಿದೆ.

ಸಿಬ್ಬಂದಿ ಸಂಭ್ರಮಾಚರಣೆ: ಯಾದಗಿರಿಗೆ ಪ್ರತ್ಯೇಕ ಪೋಸ್ಟಲ್ ಡಿವಿಜನ್ ಮಂಜೂರು ಆಗಿರುವ ಕಾರಣ ಎಲ್ಲಾ ಸಿಬ್ಬಂದಿ ಸೇರಿ ಸಂಭ್ರಮಾಚರಣೆ ಮಾಡಿದ್ದಾರೆ.

***

ಸಂಬಂಧಿಸಿದ ಕೇಂದ್ರ ಸಚಿವರಿಗೆ ಜಿಲ್ಲೆಯ ಬಗ್ಗೆ ಸಂಪೂರ್ಣ ವಿವರ ನೀಡಿ ಕಲಬುರಗಿ ಪೋಸ್ಟಲ್ ವಿಭಾಗದಿಂದ ಯಾದಗಿರಿ ಜಿಲ್ಲೆಯನ್ನು ವಿಭಜನೆ ಮಾಡಿ ಹೊಸ ಅಂಚೆ ವಿಭಾಗದ ರಚನೆ ಮತ್ತು ನಿರ್ಮಾಣಕ್ಕೆ ಮನವಿ ಮಾಡಲಾಗಿತ್ತು. ಈಗ ಮಂಜೂರು ಮಾಡಲಾಗಿದೆ.

–ರಾಜಾ ಅಮರೇಶ ನಾಯಕ, ರಾಯಚೂರು ಸಂಸದ

***

ಎಐಪಿಇಯು ಗ್ರೂಪ್‌ ಸಿ ಸಂಘದ ಯಾದಗಿರಿ ಶಾಖೆಯ ಪರವಾಗಿ ಸತತವಾಗಿ 20 ವರ್ಷಗಳಿಂದ ನಡೆದ ಅವಿರತ ಹೋರಾಟಕ್ಕೆ ಸಿಕ್ಕ ಜಯ ಇದಾಗಿದೆ. ಇದಕ್ಕೆ ಕಾರಣರಾದ ರಾಯಚೂರು ಎಂಪಿ ರಾಜಾ ಅಮರೇಶ ನಾಯಕ ಇವರಿಗೆ ಧನ್ಯವಾದ ಸಲ್ಲಿಸುತ್ತೇವೆ.

– ಕುಪೇಂದ್ರ ವಠಾರ್, ಕಾರ್ಯದರ್ಶಿ ಎಐಪಿಇಯು ಪಿ-3 ಯಾದಗಿರಿ ಶಾಖೆ

**

ಯಾದಗಿರಿಯಲ್ಲಿ ನೂತನ ಪೋಸ್ಟಲ್ ವಿಭಾಗ ಪ್ರಾರಂಭ ಮಾಡಲು ಸಂಬಂಧಿಸಿದ ಸಚಿವರು ತಿಳಿಸಿದ್ದಾರೆ. ಆಡಳಿತಾತ್ಮಕ ಹಿತದೃಷ್ಟಿಯಿಂದ ಇದು ಅಂಚೆ ಸಿಬ್ಬಂದಿಗೆ ಪ್ರಯೋಜನವಾಗಲಿದೆ. ಸಿಬ್ಬಂದಿಯ ಹೊರೆ ಕಡಿಮೆಯಾಗಲಿದೆ.

– ಬಿ.ಆರ್‌.ನನಜಗಿ, ಕಲಬುರಗಿ ಅಂಚೆ ವಿಭಾಗದ ವರಿಷ್ಠ ಅಂಚೆ ಅಧೀಕ್ಷಕ

***

ಸಂಸದರ ಸತತ ಪ್ರಯತ್ನ!

ರಾಯಚೂರು ಸಂಸದ ರಾಜಾ ಅಮರೇಶ ನಾಯಕ ಅವರ ಸತತ ಪ್ರಯತ್ನದಿಂದ ಅಂಚೆ ವಿಭಾಗ ಮಂಜೂರು ಆಗಿದೆ. 2021ರ ಜುಲೈ ತಿಂಗಳಿಂದ ಸಂಬಂಧಿಸಿದ ಕೇಂದ್ರ ಸಚಿವರಿಗೆ ಆಗಾಗ ಮನವಿ ಪತ್ರ ಸಲ್ಲಿಸುವ ಮೂಲಕ ವಿಭಾಗೀಯ ಕಚೇರಿಗೆ ಮಂಜೂರುಗೆ ಕಾರಣರಾಗಿದ್ದಾರೆ.

ಕೇಂದ್ರ ರೈಲ್ವೆ, ಸಂವಹನ ಮತ್ತು ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಅಶ್ವಿನಿ ವೈಷ್ಣವಿ ಅವರಿಗೆ ಭೇಟಿಯಾಗಿ ಜಿಲ್ಲೆಗೆ ಕಚೇರಿ ಮಂಜೂರು ಮಾಡವ ಬಗ್ಗೆ ಮನವರಿಕೆ ಮಾಡಿದ್ದಾರೆ. ಅಲ್ಲದೇ ಈ ಕುರಿತು ಪತ್ರ ವ್ಯವಹಾರ ಕೂಡ ಮಾಡಿದ್ದರಿಂದ ಇದು ಸಾಧ್ಯವಾಗಿದೆ.
****

‘ಪ್ರಜಾವಾಣಿ’ ವರದಿ ಪರಿಣಾಮ

2021ರ ಜುಲೈ 8ರಂದು ‘ಅಂಚೆ ವಿಭಾಗ’ ವಂಚಿತ ಜಿಲ್ಲೆ ಎನ್ನುವ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ಪ್ರತ್ಯೇಕ ಅಂಚೆ ವಿಭಾಗದ ಇಲ್ಲದ ಕಾರಣ ಸಿಬ್ಬಂದಿ, ಸಾರ್ವಜನಿಕರಿಗೆ ಉಂಟಾಗಿರುವ ತೊಂದರೆ ಬಗ್ಗೆ ಬೆಳಕು ಚೆಲ್ಲಲಾಗಿತ್ತು.

ಕಲಬುರಗಿಯಿಂದ ಜಿಲ್ಲೆಯಾಗಿ ಮಾರ್ಪಟ್ಟಿದ್ದರೂ ಯಾದಗಿರಿಗೆ ಪ್ರತ್ಯೇಕ ವಿಭಾಗ ಇರಲಿಲ್ಲ. ಇದರಿಂದ ಸಿಬ್ಬಂದಿ ಅಸಮಾಧಾನಕ್ಕೂ ಕಾರಣವಾಗಿತ್ತು. ಪತ್ರ ವ್ಯವಹಾರ ಸೇರಿ ಸಿಬ್ಬಂದಿ ರಜೆ ಮಂಜೂರಿಗೂ ಕಲಬುರಗಿಯತ್ತ ಮುಖ ಮಾಡಬೇಕಿತ್ತು ಎನ್ನುವುದನ್ನು ಎತ್ತಿ ಹಿಡಿದಿತ್ತು. ಈಗ ಹೊಸ ಕಚೇರಿ ಆರಂಭಕ್ಕೆ ಅನುಮತಿಸಿದ್ದರಿಂದ ಸಿಬ್ಬಂದಿ ಖುಷಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT