ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮ: ಅಂಗವಿಕಲರಿಗೆ ಸರ್ಕಾರದ ಎಲ್ಲ ಸೇವೆ ಉಚಿತ

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸಾದಿಕ್‌ ಹುಸೇನ್‌ ಖಾನ್‌ ಮಾಹಿತಿ
Last Updated 28 ಸೆಪ್ಟೆಂಬರ್ 2022, 16:04 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸಾದಿಕ್‌ ಹುಸೇನ್‌ ಖಾನ್‌ ಅವರ ಜತೆ ಬುಧವಾರ ನಡೆದ ‘ಪ್ರಜಾವಾಣಿ’ಫೋನ್‌ಇನ್‌ ಕಾರ್ಯಕ್ರಮದಲ್ಲಿ ಓದುಗರು ಹಲವು ವಿಷಯಗಳ ಕುರಿತು ಮಾಹಿತಿ ಪಡೆದರು.

ಅಂಗವಿಕಲರ ಮಾಸಾಶನಕ್ಕೆ ಅರ್ಜಿ ಸಲ್ಲಿಕೆ ಹೇಗೆ?, ಅಂಗವಿಕಲರ ಬಸ್‌ಪಾಸ್, ರೈಲ್ವೆ ಪಾಸ್, ಅಂಗವಿಕಲರ ಸಾಧನ, ಸಲಕರಣೆಗಳನ್ನು ಪಡೆಯುವುದು, ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ –2007 ಬಗ್ಗೆ ಮಾಹಿತಿ ಸೇರಿದಂತೆ ಹಲವರು ಪ್ರಶ್ನೆಗಳನ್ನು ಕೇಳಿದರು.

ಅಂಗವಿಕಲರ ಸೇವೆಗಳು ಎಲ್ಲವೂ ಉಚಿತವಾಗಿದೆ. ಜಿಲ್ಲಾ ಅಂಗವಿಲಕರ ಕಲ್ಯಾಣ ಇಲಾಖೆಯಲ್ಲಿ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಅಹ್ವಾನಿಸಲಾಗಿದ್ದು, ಸೆಪ್ಟೆಂಬರ್ 30ರೊಳಗೆ ಅರ್ಜಿ ಸಲ್ಲಿಸಬೇಕು.

ಫೋನ್ಇನ್ವಿವರ ಹೀಗಿದೆ.

ಸಂಗನಗೌಡ ಧನರಡ್ಡಿ, ರಾಜನಕೋಳೂರು

ಪ್ರಶ್ನೆ; ಆರ್‌ಪಿಡಿ 2016ರ ಕಾಯ್ದೆ ಬಗ್ಗೆ ಯಾದಗಿರಿ ಜಿಲ್ಲೆಯಲ್ಲಿ ಕಾರ್ಯಾಗಾರ ಮತ್ತು ಜಾಗೃತಿ ನಡೆದಿಲ್ಲ. ಜಿಲ್ಲೆಯಾಗಿ 12 ವರ್ಷ ಕಳೆದರೂ ಅಂಗವಿಕಲರ ಪುನರ್ವಸತಿ ಕೇಂದ್ರ ಸ್ಥಾಪನೆ ಆಗಿಲ್ಲ.

ಉತ್ತರ; ಆರ್‌ಪಿಡಿ 2016ರ ಕಾಯ್ದೆ ಸಮಿತಿ ರಚನೆಯಾಗಿದೆ. ಕೂಡಲೇ ಜಿಲ್ಲಾ ಮಟ್ಟದಲ್ಲಿ ಸಭೆ ಮಾಡಬೇಕಿದೆ. ಪುನರ್ವಸತಿ ಕೇಂದ್ರದ ಬಗ್ಗೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ. ವೈದ್ಯಕೀಯ ಕಾಲೇಜು (ಯಿಮ್ಸ್‌) ಆದ ನಂತರ ಅನೇಕ ಸೌಲಭ್ಯಗಳು ಸಿಗಲಿವೆ.

ರಮೇಶ, ಕಿಲ್ಲನಕೇರಾ

ಪ್ರ; ವಿಆರ್‌ಡಬ್ಲ್ಯೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಜಾಗೃತಿ ಮೂಡಿಸುತ್ತಿಲ್ಲ.

ಉ; ಈ ಬಗ್ಗೆ ಪರಿಶೀಲಿಸಲಾಗುವುದು. ನಿಮಗೆ ಸೌಲಭ್ಯ ಸಿಗದಿರುವ ಬಗ್ಗೆ ಅರ್ಜಿ ಕೊಟ್ಟರೆ ಪರಿಶೀಲಿಸುತ್ತೇವೆ.

ಹಣಮಂತ, ಶಿವಪುರ

ಪ್ರ; ರಾಜ್ಯದಲ್ಲಿ ಅಂಗವಿಕಲರ ಮಾಸಾಶನ ಹೆಚ್ಚಿಸಬೇಕು. ಬೇರೆ ರಾಜ್ಯಗಳಲ್ಲಿದ್ದಂತೆ ಮಾಡಬೇಕು.

ಉ; ಮಾಸಾಶನ ಶೇ 75 ರಷ್ಟು ಅಂಗವೈಕಲ್ಯ ಇದ್ದವರಿಗೆ ₹1,400 ಇದೆ. ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ರೈಲ್ವೆ ಪಾಸ್‌ ಬಗ್ಗೆ ನಮ್ಮ ಇಲಾಖೆಗೆ ಬಂದು ಅರ್ಜಿ ಕೊಡಿ. ಅಂಗವಿಕಲರ ಸಹಾಯವಾಣಿ ಚಾಲ್ತಿಯಲ್ಲಿದೆ.

ಮಕ್ಬೂಲ್‌ ಪಟೇಲ್‌, ಯಾದಗಿರಿ

ಪ್ರ; 2016ರ ಆರ್‌ಪಿಡಿ ನ್ಯಾಯಾಲಯಗಳ ಸ್ಥಾಪನೆ ಆಗಬೇಕಿತ್ತು. ಅಂಗವಿಕಲರ ವಸತಿ ನಿಲಯ ಸೌಲಭ್ಯ ಕಲ್ಪಿಸಬೇಕು.

ಉ; ಅಂಗವಿಕಲರಿಗೆ ಜಿಲ್ಲಾ ನ್ಯಾಯಾಲಯ ಪ್ರತ್ಯೇಕವಾಗಿ ನಡೆಯುತ್ತಿದೆ. ನಿಮ್ಮ ದೂರುಗಳಿದ್ದರೆ ಜಿಲ್ಲಾ ಕಾನೂನು ಪ್ರಾಧಿಕಾರಕ್ಕೆ ನೀಡಬಹುದು. ಈಗಾಗಲೇ ಅಂಗವಿಕಲರ ವಸತಿ ನಿಲಯಕ್ಕೆ ಮೂರು ಬಾರಿ ಭೇಟಿ ನೀಡಿದ್ದೇನೆ. ಜಿಲ್ಲಾಡಳಿತ ಭವನದಲ್ಲಿ ಲಿಫ್ಟ್‌ ಅಳವಡಿಸುವ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು.

ಮಂಜುಳಾ, ಹುಣಸಗಿ

ಪ್ರ; ಅಂಗವಿಕಲೆಯಾಗಿದ್ದು, ಕಿರಣಾ ಅಂಗಡಿಗೆ ಸೌಲ ಸೌಲಭ್ಯ ಪಡೆಯುವುದು ಹೇಗೆ?

ಉ; ಈ ಮುಂಚೆ ಇಲಾಖೆಯಿಂದ ನೇರವಾಗಿ ಸಾಲ ಸೌಲಭ್ಯ ನೀಡಲಾಗುತ್ತಿತ್ತು. ಈಗ ಬ್ಯಾಂಕ್‌ ಮುಖಾಂತರ ನೀಡಲಾಗುತ್ತಿದೆ. ₹50 ಸಾವಿರ ರಿಯಾಯಿತಿ ಇದೆ. ಸೆಪ್ಟೆಂಬರ್‌ 30ರೊಳಗೆ ಇಲಾಖೆಗೆ ಅರ್ಜಿ ಸಲ್ಲಿಸಿ.

ರಾಘವೇಂದ್ರ ಭಕ್ರಿ, ಸುರಪುರ

ಪ್ರ; ಅಂಗವಿಲಕರ ಸಾಧನ ಸಲಕರಣೆ ಪಡೆಯುವುದು ಹೇಗೆ?

ಉ; ಅಂಗವಿಕಲರಿಗೆಗಾಗಿ ಇಲಾಖೆಯಿಂದ ಹಲವಾರು ಸೌಲಭ್ಯ ನೀಡಲಾಗುತ್ತಿದ್ದು, ಕಚೇರಿಗೆ ಬಂದು ಅರ್ಜಿ ಸಲ್ಲಿಸಿದರೆ ಪರಿಶೀಲನೆ ಮಾಡಿ ವಿತರಿಸಲಾಗುವುದು.

ರಾಜೇಂದ್ರ, ಶಹಾಪುರ

ಪ್ರ; ರೈಲ್ವೆ ಪಾಸ್‌, ತ್ರಿಚಕ್ರ ವಾಹನ ಪ‍ಡೆಯುವುದು ಹೇಗೆ?

ಉ; ರೈಲ್ವೆ ಪಾಸ್‌ಗಾಗಿ ನಿಗದಿತ ನಮೂನೆಯನ್ನು ಭರ್ತಿ ಮಾಡಿ ಗುಂತಕಲ್‌ ರೈಲ್ವೆ ವಿಭಾಗೀಯ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಬಿಪಿಎಲ್‌ ಕಾರ್ಡ್‌ ಇದ್ದರೆ ಉಚಿತವಾಗಿ ಕಾರ್ಡ್‌ ವಿತರಿಸಲಾಗುತ್ತಿದೆ. ಸರ್ಕಾರಿ ನೌಕರರಾದರೆ ಶೇ 75ರಷ್ಟು ಹಣ ಭರಿಸಬೇಕು. ಶೇ 25ರಷ್ಟು ಕರ್ತವ್ಯ ನಿರ್ವಹಿಸುವ ಇಲಾಖೆ ಭರಿಸಲಿದೆ.

ಬಸವರಾಜ, ಕಕ್ಕೇರಾ

ಪ್ರ; ನಮ್ಮ ಅಣ್ಣನ ಮಗ ಎಂಟು ವರ್ಷದ ಅಂಗವಿಕಲ ಬಾಲಕ ಇದ್ದು, ಯಾವುದೇ ಸೌಲಭ್ಯ ಸಿಕ್ಕಿಲ್ಲ.

ಉ; ಬಾಲಕರಿಗೆ ವಿಶಿಷ್ಟ ಗುರುತಿನ ಚೀಟಿ ಮಾಡಿಸಿ. ಅನಂತರ ವಿವಿಧ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಬಹುದು. ಪುರಸಭೆಯಲ್ಲಿ ನಮ್ಮ ಇಲಾಖೆಯ ಪ್ರತಿನಿಧಿಯನ್ನು ಭೇಟಿಯಾಗಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ.

ಬಸವರಾಜ ಶಾಖಾ‍ಪುರ

ಪ್ರ; ಅಂಗವಿಕಲರು ವಾಹನ ಸೌಲಭ್ಯ ಪಡೆಯುವುದು ಹೇಗೆ?

ಉ; ಸೆಪ್ಟೆಂಬರ್‌ 30ರೊಳಗೆ ಅರ್ಜಿ ಸಲ್ಲಿಸಿದರೆ ಪರಿಶೀಲಿಸಿ ಸೌಲಭ್ಯ ಕಲ್ಪಿಸಲಾಗುವುದು.

ಸಾಯಿಕೃಷ್ಣ, ಗುರುಮಠಕಲ್‌

ಪ್ರ; ಗುರುಮಠಕಲ್‌ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಅಂಗವಿಕಲರ ಸಾಧನ ಸಲಕರಣಗಳು ವಿತರಣೆಯಾಗಿಲ್ಲ

ಉ; ಫಲಾನುಭವಿಗಳಿಗೆ ತಲುಪಿಸಬೇಕಾದ ಸಾಮಾಗ್ರಿಗಳು ಪಂಚಾಯಿತಿಗಳಲ್ಲಿ ಕಿಲುಬುಹತ್ತಿರುವ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ಅವರ ಗಮನಕ್ಕೆ ತಂದು ವಿತರಿಸಲಾಗುವುದು.

ಸಿದ್ದಪ್ಪ, ರಾಮಸಮುದ್ರ

ಪ್ರ; ಅಂಗವಿಕಲರ ಪಾಸ್‌ ಪಡೆಯುವುದು ಹೇಗೆ?

ಉ; ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಡಿಪೋಗೆ ನಿಮ್ಮ ಎಲ್ಲ ದಾಖಲೆಗಳನ್ನು ಸಲ್ಲಿಸಿ ₹650 ಶುಲ್ಕ ಭರಿಸಿದರೆ ರಿಯಾಯಿತಿ ಪಾಸ್‌ ಸಿಗಲಿದೆ. ಕಾಶಿನಾಥ, ಸುರಪುರ

ಪ್ರ; ವಿಶಿಷ್ಟ ಗುರುತಿನ ಚೀಟಿ ಸೌಲಭ್ಯಗಳೇನು?

ಉ; ಈ ಗುರುತಿನ ಚೀಟಿಯಿಂದ ಅಂಗವಿಕಲರು ವಿವಿಧ ಸೌಲಭ್ಯಗಳನ್ನು ಪಡೆಯಬಹುದು.

ಇಕ್ಬಾಲ್‌ ಅಹ್ಮದ್‌, ಸುರಪುರ

ಪ್ರ; ಅಂಗವಿಕಲರಿಗೆ ಯಾವ ರೀತಿಯ ಸಾಧನ ಸಲಕರಣಗಳಿವೆ?

ಉ; 20 ಬಗೆಯ ಸಾಧನ ಸಲಕರಣಗಳಿವೆ. ನಿಮಗೆ ಬೇಕಾಗಿರುವ ಸಾಮಾಗ್ರಿ ₹15,000 ಒಳಗಿದ್ದರೆ ನೀಡಲಾಗುತ್ತಿದೆ. ಇದಕ್ಕಿಂತ ಹೆಚ್ಚಿದ್ದರೆ ಹೆಚ್ಚುವರಿ ಹಣ ಭರಿಸಬೇಕಾಗುತ್ತದೆ.

ಗಂಗಣ್ಣ, ಸುರ‍‍ಪುರ

ಪ್ರ; ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದು, ಇನ್ನೂ ಬಂದಿಲ್ಲ.

ಉ; ಅರ್ಜಿ ಸಲ್ಲಿಸಿದ ನಂತರ ನಿಮ್ಮ ಮೊಬೈಲ್‌ ಸಂಖ್ಯೆಗೆ ನಿಗದಿತ ದಿನಾಂಕದಂದು ವೈದ್ಯರ ಬಳಿ ಹಾಜರಾಗಿ ನಿಮ್ಮ ವೈಕಲ್ಯತೆ ಪರೀಕ್ಷೆ ಮಾಡಲು ಸೂಚಿಸಲಾಗುತ್ತಿದೆ. ಈ ಬಗ್ಗೆ ಪರಿಶೀಲಿಸಿಕೊಳ್ಳಿ.

ಹುಸೇನಪ್ಪ, ದೇವಪುರ, ಪ್ರಕಾಶ, ಶಹಾಪುರ, ಉಮರ್‌ ಚೌಧರಿ, ನಾರಾಯಣಪುರ

ಪ್ರ; ಅಪಘಾತ ಆಗಿದ್ದು, ಕೈ, ಕಾಲ ಊನಗೊಂಡಿದೆ. ಗುರುತಿನ ಚೀಟಿ ಸಿಕ್ಕಿಲ್ಲ.

ಉ; ನಿಮ್ಮ ತಾಲ್ಲೂಕು ವ್ಯಾಪ್ತಿಯ ಎಂಆರ್‌ಡಬ್ಲ್ಯೂ ಅವರನ್ನು ಭೇಟಿಯಾಗಿ ಮಾಹಿತಿ ಪಡೆದುಕೊಳ್ಳಿ. ಸ್ಮಾರ್ಟ್‌ ಕಾರ್ಡ್‌ ಮೂಲಕ ಅನೇಕ ಸೌಲಭ್ಯಗಳನ್ನು ಪಡೆಯಬಹುದು.

ಕಾಮಣ್ಣ, ಗೋಗಿ

ಪ್ರ; ವಿದ್ಯಾರ್ಥಿ ಅಂಗವಿಕಲ ಇದ್ದು, ಗುರುತಿನ ಚೀಟಿ ಮಾಡಿಸಲು ಅರ್ಜಿ ಸಲ್ಲಿಸಲಾಗಿದೆ. ಮುಂದೇನು ಮಾಡಬೇಕು?

ಉ; ಅರ್ಜಿ ಸಲ್ಲಿಸಿಡರುವ ಬಗ್ಗೆ ಸುವಿಧ ಪೋರ್ಟಲ್‌ನಲ್ಲಿ ಪರಿಶೀಲಿಸಿಕೊಳ್ಳಿ. ನಿಗದಿತ ದಿನಾಂಕದಲ್ಲಿ ವೈದ್ಯರಿಂದ ಪರೀಕ್ಷಿಸಿ. ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿ.

***

ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ – 2007

ಹಿರಿಯ ನಾಗರಿಕರನ್ನು ಮಕ್ಕಳು ಪಾಲನೆ, ಪೋಷಣೆ ಮಾಡದಿದ್ದರೆ ಈ ಕಾಯ್ದೆ ನೆರವಿಗೆ ಬರುತ್ತದೆ. ಇವರಿಗಾಗಿಯೇ ವಿಶೇಷ ನ್ಯಾಯಾಲಯ ಇದೆ. ತಂದೆ–ತಾಯಿಯ ಆಸ್ತಿ ಪಡೆದು ಮಕ್ಕಳು ಹೊರಹಾಕಿದ್ದರೆ ಅವರಿಗೆ ಭದ್ರತೆ ಒದಗಿಸುವ ಕಾಯ್ದೆ ಇದಾಗಿದೆ. ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದರೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಆಸ್ತಿ ಮತ್ತೆ ಹಿರಿಯ ನಾಗರಿಕರ ಹೆಸರಿಗೆ ಬದಲಾವಣೆ ಆಗುತ್ತದೆ. ಇದರ ಜೊತೆಗೆ ನಿರ್ಗತಿಕರಿಗೆ, ಹಿರಿಯ ನಾಗರಿಕರಿಗೆ ಹಗಲು ಕ್ಷೇಮ ಇದೆ. ವಿವಿಧ ಚಟುವಟಿಕೆ ಇಲ್ಲಿ ಮಾಡಿಸಲಾಗುತ್ತದೆ. 1090 ಸಹಾಯವಾಣಿ ಸಂಖ್ಯೆ ಇದೆ.


****

ಶ್ರವಣ ನ್ಯೂನತೆ ತಾಯಂದಿರ ತರಬೇತಿ ಕೇಂದ್ರ

ನಾಲ್ಕು ವರ್ಷದೊಳಗಿನ ಶ್ರವಣ ನ್ಯೂನತೆ ಹೊಂದಿರುವ ಮಕ್ಕಳ ತಾಯಂದಿರಿಗೆ ಕಲಬುರಗಿಯಲ್ಲಿ ತರಬೇತಿ ನೀಡಲಾಗುತ್ತಿದೆ. ಶ್ರವಣ ನ್ಯೂನತೆ ಹೊಂದಿರುವ ಪಾಲನೆ ಬಗ್ಗೆ ನೀಡುವ ತರಬೇತಿ ವೇಳೆ ಊಟ, ವಸತಿ, ಗೌರವಧನ ಕಲ್ಪಿಸಿಕೊಡಲಾಗುತ್ತಿದೆ. 50 ಜನರಿಗೆ ತರಬೇತಿ ನೀಡಲಾಗುತ್ತಿದೆ.

****

ನಾಗರಾಜ ಬಿರನೂರ, ಯಾದಗಿರಿ

ಪ್ರ; ನಗರಸಭೆಯಿಂದ ಫಲಾನುಭವಿಗಳು ತ್ರಿಚಕ್ರ ವಾಹನ ಪಡೆದು ಅದನ್ನು ಎರಡು ಚಕ್ರ ವಾಹನವಾಗಿ ಪರಿವರ್ತಿಸಿ ಓಡಾಡಿಸುತ್ತಿದ್ದಾರೆ. ಇದು ಸರಿಯೇ?

ಉ; ಇಲಾಖೆಯಿಂದ ಫಲಾನುಭವಿಗಳಿಗೆ ವಾಹನ ಸೌಲಭ್ಯ ನೀಡುವಾಗ ತ್ರಿಚಕ್ರ ವಾಹನ ಕಲ್ಪಿಸಲಾಗುತ್ತಿದೆ. ಕೆಲವರು ಎರಡು ಚಕ್ರ ವಾಹನದಂತೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಆದರೆ, ವಾಹನದ ಚಕ್ರ ತೆಗೆಯಬಾರದು ಎನ್ನುವ ನಿಯಮವಿಲ್ಲ. ಇದು ಅಂಗವಿಲಕರ ಸುರಕ್ಷತೆಗಾಗಿ ಇರುವ ವಾಹನ.

***

ಫೋನ್‌ ಇನ್‌ ನಿರ್ವಹಣೆ: ಬಿ.ಜಿ.ಪ್ರವೀಣಕುಮಾರ, ರಾಜಕುಮಾರ ನಳ್ಳಿಕರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT