ಖಾಲಿ ಕುರ್ಚಿಗಳ ಮುಂದೆ ಪ್ರತಿಭಾ ಪ್ರದರ್ಶನ

7
ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಅವಾಂತರ

ಖಾಲಿ ಕುರ್ಚಿಗಳ ಮುಂದೆ ಪ್ರತಿಭಾ ಪ್ರದರ್ಶನ

Published:
Updated:
Deccan Herald

ಯಾದಗಿರಿ: ಆ ಮಕ್ಕಳ ಸಂಭ್ರಮಕ್ಕೆ ಎಡೆ ಇರಲಿಲ್ಲ. ಏಕೆಂದರೆ ಶಾಲೆ, ವಿಭಾಗ ಮತ್ತು ತಾಲ್ಲೂಕು ಮಟ್ಟಗಳಲ್ಲಿ ಪ್ರತಿಭೆ ಪ್ರದರ್ಶಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದರು. ಈ ಆಯ್ಕೆ ಸಂದರ್ಭದಲ್ಲಿ ವೇದಿಕೆಗಳ ಮುಂದೆ ನೆರೆದ ಸ್ನೇಹಿತರ, ಗ್ರಾಮಸ್ಥರ, ಹಿರಿ–ಕಿರಿಯರ ಮುಂದೆ ಪ್ರತಿಭೆ ಪ್ರದರ್ಶಿಸಿದ ಆತ್ಮತೃಪ್ತಿಯೂ ಅವರಲ್ಲಿ ಇತ್ತು. ಆದರೆ, ಗುರುವಾರ ನಗರದಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಸಮಾರಂಭದಲ್ಲಿ ಆ ಮಕ್ಕಳೆಲ್ಲ ನಿರಾಶರಾಗಿದ್ದರು. ಪ್ರತಿಸ್ಪರ್ಧಿಗಳ –ತೀರ್ಪುಗಾರರ ಮುಂದಷ್ಟೇ ಪ್ರತಿಭೆ ಪ್ರದರ್ಶಿಸಬೇಕಲ್ಲ ಎಂಬುದು ಅವರ ನಿರಾಸೆಗೆ ಕಾರಣವಾಗಿತ್ತು.

ಸರ್ಕಾರದ ಆದೇಶ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಗುರುವಾರ ಪ್ರೌಢಶಾಲೆಗಳಿಗೆ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾಟಾಚಾರ ಎಂಬಂತೆ ಹಮ್ಮಿಕೊಂಡಿತ್ತು. ಇದನ್ನು ಕಂಡು ಪ್ರತಿಭಾನ್ವಿತ ಮಕ್ಕಳಿಗೂ ದಂಗುಬಡಿಯಿತು. ಇಂಥಾ ಕಾರ್ಯಕ್ರಮಕ್ಕೆ ಇಷ್ಟೊಂದು ಖರ್ಚು ಮಾಡಿ ಅದ್ಧೂರಿ ವೇದಿಕೆ, ಮೈಕ್, ಕುರ್ಚಿ, ಅಲಂಕಾರಿಕ ವೇದಿಕೆ ಅಗತ್ಯವಿತ್ತೆ ಎಂಬುದಾಗಿ ಶಿಕ್ಷಕರಲ್ಲೇ ಚರ್ಚೆ ನಡೆದಿತ್ತು.

‘ಗ್ರಾಮೀಣ ಶಾಲೆಗಳಲ್ಲಿ ನಡೆಯುವ ಹೋಬಳಿಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಹೆಚ್ಚೆಚ್ಚು ವಿದ್ಯಾರ್ಥಿಗಳು, ಗ್ರಾಮಸ್ಥರು ಸಮಾರಂಭದಲ್ಲಿ ಭಾಗವಹಿಸಿ ಉತ್ಸಾಹ ತುಂಬುತ್ತಾರೆ. ಆದರೆ, ಇಲ್ಲಿ ಕೇವಲ ನಾಲ್ಕು ಗೋಡೆಗಳ ಮಧ್ಯೆ ತೀಪುಗಾರರ ಎದುರು ಪ್ರತಿಭಾ ಪ್ರದರ್ಶನ ನಡೆಸಿದ್ದು ಬೇಸರ ಉಂಟು ಮಾಡಿದೆ’ ಎಂದು ಸುರಪುರದ ಖಾಸಗಿ ಪ್ರೌಢಶಾಲೆ ವಿದ್ಯಾರ್ಥಿನಿಯೊಬ್ಬರು ಬೇಸರ ವ್ಯಕ್ತಪಡಿಸಿದರು. ಅವರ ಜತೆಗೆ ಆಗಮಿಸಿದ್ದ ಶಿಕ್ಷಕಿಯೂ ಅಸಮಾಧಾನ ಹೊರಹಾಕಿದರು.

ಮಕ್ಕಳಿಗೆ ವೇದಿಕೆ ಆಗದ ಪ್ರತಿಭಾ ಕಾರಂಜಿ: ಪರೀಕ್ಷೆ ಬರೆಯುವಂತಹ ಆತಂಕದ ಸಮಯದಲ್ಲಿ ಮಕ್ಕಳಿಗೆ ಇಂಥಾ ಸ್ಪರ್ಧೆ ಏರ್ಪಡಿಸುವುದು ಎಷ್ಟು ಸರಿ? ಇದರಿಂದ ಮಕ್ಕಳ ನೈಜ ಪ್ರತಿಭೆ ಹೊರಹೊಮ್ಮುವುದಿಲ್ಲ. ಶಿಕ್ಷಕರ ಆಗ್ರಹಕ್ಕೆ ಮಣಿದು ಮಕ್ಕಳು ವೇದಿಕೆ ಏರುವಂತಾಗಿದೆ. ಇದು ಬಲವಂತದ ಕಾಟಾಚಾರದ ಕಾರ್ಯಕ್ರಮ ಎಂಬುದಾಗಿ ವಿದ್ಯಾರ್ಥಿ ಪೋಷಕರು ಬೇಸರ ವ್ಯಕ್ತಪಡಿಸಿದರು.

ಈಗಿನ ಸರ್ಕಾರದ ಮುಖ್ಯ ಕಾರ್ಯದರ್ಶಿ ಆಗಿರುವ ಟಿ.ಎಂ. ವಿಜಯಭಾಸ್ಕರ್‌ ಅವರು 2002ರಲ್ಲಿ ಶಿಕ್ಷಣ ಇಲಾಖೆ ಆಯುಕ್ತರಾಗಿದ್ದ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಸ್ಫೂರ್ತಿ ಪಡೆದು ಪ್ರತಿಭಾ ಕಾರಂಜಿಯನ್ನು ರಾಜ್ಯಕ್ಕೂ ಪರಿಚಿಯಿಸಿದ್ದರು. ಆರಂಭದಲ್ಲಿ ಮಕ್ಕಳ ಪ್ರೀತಿಗೆ ಪಾತ್ರವಾಗಿದ್ದ ಕಾರಂಜಿ ಸ್ಪರ್ಧೆ ಸಕಾಲದಲ್ಲಿ ನಡೆಯದೇ ಮಕ್ಕಳ ಅಸಮಾಧಾನಕ್ಕೂ ಕಾರಣವಾಗಿದೆ ಎಂದು ಮಕ್ಕಳೊಂದಿಗೆ ಬಂದಿದ್ದ ಶಹಾಪುರದ ವಿದ್ಯಾರ್ಥಿ ಪೋಷಕ ಸುರೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಪರೀಕ್ಷೆಗೆ ಮೈಕಾಸುರನ ಕಿರಿಕಿರಿ:
ಒಂದೆಡೆ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯುತ್ತಿದ್ದರೆ; ಇನ್ನೊಂದೆಡೆ ಡಾನ್‌ ಬಾಸ್ಕೊ ಶಾಲೆಯಲ್ಲಿ ಅರ್ಧ ವಾರ್ಷಿಕ ಪರೀಕ್ಷೆ ಬರೆಯುತ್ತಿದ್ದ ಮಕ್ಕಳು ಮೈಕಾಸುರನ ಕಿರಿಕಿರಿ ಅನುಭವಿಸಿದರು.

ಅರ್ಧವಾರ್ಷಿಕ ಪರೀಕ್ಷೆ ಬೆಳಿಗ್ಗೆ 10.30ಕ್ಕೆ ಆರಂಭಗೊಂಡಿತ್ತು. ಪ್ರತಿಭಾ ಕಾರಂಜಿ ಸಮಾರಂಭ ಬೆಳಿಗ್ಗೆ 11ಕ್ಕೆ ಉದ್ಘಾಟನೆಯಾಯಿತು. ಅಲ್ಲಿಂದ ಪರೀಕ್ಷೆ ಮುಗಿಯುವವರೆಗೂ ಪರೀಕ್ಷೆ ಬರೆಯುವ ಮಕ್ಕಳು ಕಿರಿಕಿರಿ ಅನುಭವಿಸಿ ಹಿಡಿಶಾಪ ಹಾಕಿದರು.

ಯಾವ ಆದೇಶ ಪಾಲಿಸಬೇಕು ಹೇಳಿ?:

ಅರ್ಧ ವಾರ್ಷಿಕ ಪರೀಕ್ಷೆ ನಡೆಸುವಂತೆ ಕೂಡ ಸರ್ಕಾರವೇ ಆದೇಶಿಸಿದೆ. ಇದರ ಜತೆಗೆ ಪ್ರತಿಭಾ ಕಾರಂಜಿ ಹಮ್ಮಿಕೊಳ್ಳುವಂತೆಯೂ ಸರ್ಕಾರವೇ ಸುತ್ತೋಲೆ ಹೊರಡಿಸಿದೆ. ಜಿಲ್ಲಾಮಟ್ಟದ ಅಧಿಕಾರಿಗಳು ಯಾವ ಆದೇಶ ಪಾಲಿಸಬೇಕು ಹೇಳಿ? ಹಾಗಾಗಿ, ಅತ್ತ ಪರೀಕ್ಷೆಯೂ; ಇತ್ಯ ಮಕ್ಕಳ ಪ್ರತಿಭಾನ್ವೇಷಣೆಯೂ ನಡೆದಿದೆ. ಇದು ಸರ್ಕಾರದ ವಿವೇಚನಾ ರಹಿತ ನಿರ್ಧಾರಗಳು. ಇದಕ್ಕೆ ಜಿಲ್ಲೆಯ ಅಧಿಕಾರಿಗಳು ಉತ್ತರದಾಯಿ ಆಗಬೇಕಿದೆ ಎಂದು ಹೆಸರು ಹೇಳಲಿಚ್ಚಿಸದ ಶಿಕ್ಷಣಾಧಿಕಾರಿ ಸಮಾರಂಭ ಹಮ್ಮಿಕೊಂಡದ್ದನ್ನು ಸಮರ್ಥಿಸಿಕೊಂಡರು.

ಡಿಡಿಪಿಐ ಸಾಹೇಬ್ರು ಫುಲ್‌ ಬ್ಯುಸಿ: ಸಮಾರಂಭಕ್ಕೂ ಗೈರು ಹಾಜರಾಗಿದ್ದ ಸಾರ್ವಜನಿಕ ಶಿಕ್ಷಣ ಇಲಾಕೆ ಉಪ ನಿರ್ದೇಶಕ ಶ್ರೀಶೈಲ ಎಸ್‌. ಬಿರಾದಾರ ಹಲವು ಬಾರಿ ಕರೆ ಮಾಡಿದರೂ, ಕರೆ ಸ್ವೀಕರಿಸಲಿಲ್ಲ. ಅವರ ಕಚೇರಿ ಸಿಬ್ಬಂದಿ,‘ ಸಾಹೇಬ್ರು ಡಿಸಿ ಆಫೀಸಿಗೆ ಹೋಗಿದ್ದಾರೆ’ ಎಂದು ಉತ್ತರಿಸಿದರು.

ಕನ್ನಡ ಜಾಗೃತಿ ಸಮಿತಿ ಸಭೆಗೂ ಡಿಡಿಪಿಐ ಗೈರು ಹಾಜರಾಗಿ ಡಯೆಟ್‌ನ ಉಪನ್ಯಾಸಕರೊಬ್ಬರನ್ನು ಸಭೆಗೆ ಕಳುಹಿಸಿದ್ದರು. ‘ಸಾಹೇಬ್ರು ವಿಸಿಯಲ್ಲಿ ಬ್ಯುಸಿ ಆಗಿದ್ದಾರೆ’ ಎಂದು ಉಪನ್ಯಾಸಕರು ಸಭೆಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !