ಭಾನುವಾರ, ಆಗಸ್ಟ್ 1, 2021
25 °C

ಹುಣಸಗಿ: ಭತ್ತ ನಾಟಿಗೆ ಸಿದ್ಧತೆ

ಭೀಮಶೇನರಾವ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಹುಣಸಗಿ (ಯಾದಗಿರಿ ಜಿಲ್ಲೆ): ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಯಾದಗಿರಿ, ಕಲಬುರ್ಗಿ, ರಾಯಚೂರು ಮತ್ತು ವಿಜಯಪುರ ಈ ನಾಲ್ಕು ಜಿಲ್ಲೆಗಳ ರೈತರಿಗೆ ನೀರು ಒದಗಿಸುತ್ತಿರುವ ಆಲಮಟ್ಟಿ ಮತ್ತು ನಾರಾಯಣಪುರ ಬಸವಸಾಗರ ಜಲಾಶಯಗಳು ಭರ್ತಿಯಾಗಿದ್ದು, ಕಾಲುವೆಗೆ ನೀರು ಹರಿಸುವ ದಿನವನ್ನೇ ರೈತರು ಕಾಯುತ್ತಿದ್ದಾರೆ.

ಈಗಾಗಲೇ ಮಳೆಯಾಶ್ರಿತ ಪ್ರದೇಶದಲ್ಲಿ ಕೊಡೇಕಲ್ಲ ವಲಯದಲ್ಲಿ ತೊಗರಿ, ಸಜ್ಜೆ, ಹೆಸರು ಬಿತ್ತನೆ ಮಾಡಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿದ್ದರಿಂದಾಗಿ ಬಿತ್ತಿದ ಬೆಳೆ ಕೂಡ ಚೆನ್ನಾಗಿದೆ. ಹುಣಸಗಿ ವಲಯದಲ್ಲಿ ಭತ್ತ ನಾಟಿಗಾಗಿ ರೈತರು ಅಗತ್ಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಹಿಂಗಾರು ಹಂಗಾಮಿನಲ್ಲಿ ಅಚ್ಚುಕಟ್ಟು ಪ್ರದೇಶದಲ್ಲಿ ಸಮರ್ಪಕವಾಗಿ ನೀರು ಲಭ್ಯವಾಗಿದ್ದರೂ ಕೂಡಾ ನಿರೀಕ್ಷಿತ ಪ್ರಮಾಣದಲ್ಲಿ ಧಾರಣೆ ಇಲ್ಲದೇ ಇದ್ದುದರಿಂದಾಗಿ ಭತ್ತ ಬೆಳೆಗಾರರು ಬೆಲೆ ಕುಸಿತದಿಂದಾಗಿ ಕಂಗಾಲಾಗಿದ್ದರು. ಅಲ್ಲದೇ ಸಾಕಷ್ಟು ನಷ್ಟ ಅನುಭವಿಸಿ ಕೈ ಸುಟ್ಟುಕೊಂಡಿದ್ದರು.

ಆದರೂ, ಮತ್ತೆ ತಾಲ್ಲೂಕಿನಲ್ಲಿ ಬಹುತೇಕ ನೀರಾವರಿ ಕ್ಷೇತ್ರದಲ್ಲಿ ರೈತರು ಭತ್ತ ನಾಟಿಗಾಗಿ ಸೋನಾ ಹಾಗೂ ಕಾವೇರಿ ಸೋನಾ, ಆರ್.ಎನ್.ಆರ್ ತಳಿಯ ಭತ್ತ ನಾಟಿಗಾಗಿ ಸಸಿ ಹಾಕಿಕೊಂಡಿದ್ದು, ಒಂದು ತಿಂಗಳ ಸಸಿ ನಾಟಿಗೆ ಸಿದ್ಧವಾಗಿವೆ ಎಂದು ಕಾಮನಟಗಿ ಗ್ರಾಮದ ರೈತ ಬಸವರಾಜ ಡಂಗಿ ಹೇಳಿದರು.

‘ಈಗಾಗಲೇ ಎರಡು ಭಾರಿ ಟಿಲ್ಲರ್ ಹೊಡೆದು ಹೊಲವನ್ನು ಹದಮಾಡಿಕೊಂಡಿದ್ದು, ಮಳೆಯಾಗಿದ್ದರಿಂದಾಗಿ ಹೊಲ ಕೂಡಾ ಹಸಿಯಾಗಿದೆ. ಇದರಿಂದಾಗಿ ಕಾಲುವೆಗೆ ನೀರು ಬಂದ ತಕ್ಷಣವೇ ಪಟ್ಲರ್ ಹೊಡೆಯಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ‘ ಎಂದು ವಜ್ಜಲ ಗ್ರಾಮದ ನಿಂಗನಗೌಡ ಬಸನಗೌಡ್ರ ತಿಳಿಸಿದರು.

ಕೃಷ್ಣಾ ನದಿ ಪಾತ್ರದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯದಲ್ಲಿ ಗುರುವಾರ 29.70 ಟಿಎಂಸಿ ಅಡಿ ನೀರಿನ ಸಂಗ್ರಹವಾಗಿದ್ದು, 50 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಇದರಿಂದಾಗಿ ಜಲಾಶಯದ ಮಟ್ಟ 491.45 ಕಾಯ್ದುಕೊಂಡು 9 ಗೇಟ್‌ಗಳ ಮುಖಾಂತರ 57 ಸಾವಿರ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ಆದರೂ ಕಾಲುವೆಗೆ ನೀರು ಹರಿಸಲು ಐಸಿಸಿ ಸಭೆಯಲ್ಲಿಯೇ ದಿನಾಂಕ ನಿರ್ಧಾರವಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

 

ಐಸಿಸಿ ಸಭೆ ನಾಳೆ

ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ನೀರು ಹರಿಸುವ ಕುರಿತಂತೆ ಜುಲೈ 17 (ಶನಿವಾರ)ರಂದು ಐಸಿಸಿ ಸಭೆ ನಡೆಯಲಿದ್ದು, ಈ ಸಭೆಯ ನಿರ್ಣಯದಂತೆ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ನೀರು ಹರಿಸಲಾಗುತ್ತದೆ ಎಂದು ಕೆಬಿಜೆಎನ್ಎಲ್ ಅಧಿಕಾರಿಗಳು ಹೇಳುತ್ತಾರೆ.

ಕಳೆದ ವರ್ಷದ ಮುಂಗಾರು ಹಂಗಾಮಿನಲ್ಲಿ ಜುಲೈ 21 ರಂದು ನೀರು ಹರಿಸಲಾಗಿತ್ತು.

ನಿರಂತರ ನೀರು ಹರಿಸಲಿ: ಈಗಾಗಲೇ ಮಳೆಯ ಪ್ರಮಾಣದ ಅಧಿಕವಾಗಿದ್ದು, ಅವಳಿ ಜಲಾಶಯಗಳಲ್ಲಿ ಮುಂಗಾರು ಹಂಗಾಮಿಗೆ ಅಗತ್ಯವಿರುವ ನೀರು ಲಭ್ಯವಿದೆ. ಇದರಿಂದಾಗಿ ರೈತರಿಗೆ ಅನುಕೂಲವಾಗುವಂತೆ ಮುಂಗಾರು ಹಂಗಾಮಿನಲ್ಲಿ ಕಾಲುವೆಗಳಿಗೆ ನಿರಂತರವಾಗಿ ನೀರು ಹರಿಸುವ ಮೂಲಕ ರೈತರಿಗೆ ಅಧಿಕಾರಿಗಳು ಸಹಕಾರಿಯಾಗಬೇಕು ಎಂದು ಭಾರತೀಯ ಕಿಸಾನ ಸಂಘದ ತಾಲ್ಲೂಕು ಅಧ್ಯಕ್ಷ ರುದ್ರಗೌಡ ಗುಳಬಾಳ ಹಾಗೂ ರಾಜ್ಯ ರೈತ ಸಂಘದ ಪ್ರಮುಖರದ ಮಲ್ಲಿಕಾರ್ಜುನ ಸತ್ಯಂಪೇಟೆ ಹಾಗೂ ಮುದ್ದಣ್ಣ ಅಮ್ಮಾಪುರ ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.