ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿನ ಸರ್ಕಾರಗಳು ಜಾತಿ, ಮತ ಬ್ಯಾಂಕ್‌ ರಾಜಕಾರಣ ಮಾಡುತ್ತಿದ್ದವು: ಪ್ರಧಾನಿ ಮೋದಿ

‘ಘೋಷಣೆಯಲ್ಲ, ಅಭಿವೃದ್ಧಿ ಮಾಡುತ್ತಿದ್ದೇವೆ’
Last Updated 19 ಜನವರಿ 2023, 13:55 IST
ಅಕ್ಷರ ಗಾತ್ರ

ಯಾದಗಿರಿ/ಹುಣಸಗಿ: ‘ಹಿಂದಿನ ಸರ್ಕಾರದ ಯೋಜನೆಗಳು ಘೋಷಣೆಗೆ ಮಾತ್ರ ಸೀಮಿತವಾಗಿದ್ದವು. ಆದರೆ, ನಮ್ಮ ಸರ್ಕಾರ ಯೋಜನೆ ಘೋಷಿಸಿ ಅಭಿವೃದ್ಧಿ ಮಾಡುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಜಿಲ್ಲೆಯ ಹುಣಸಗಿ ತಾಲ್ಲೂಕಿನ ಕೊಡೇಕಲ್ಲನಲ್ಲಿ ಗುರುವಾರ ಸ್ಕಾಡಾ ತಂತ್ರಜ್ಞಾನದ ಮೂಲಕ ಬಸವಸಾಗರ ಜಲಾಶಯದ ಕಾಲುವೆಯ ಗೇಟ್‌ಗಳನ್ನು ಕಂಟ್ರೋಲ್ ರೂಂ ಮೂಲಕ ನಿಯಂತ್ರಿಸುವ ಯೋಜನೆ, ಎಕ್ಸ್‌ಪ್ರೆಸ್‌ ವೇ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿದಂತೆ ₹10 ಸಾವಿರ ಕೋಟಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾವೀಗ ಅಮೃತ ಮಹೋತ್ಸವ ಕಾಲದಲ್ಲಿದ್ದೇವೆ. ಇದಕ್ಕಾಗಿ ದೇಶದಲ್ಲಿ ಹೊಸ ಸಂಕಲ್ಪ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ನವ ಭಾರತ ನಿರ್ಮಾಣ ಮಾಡಬೇಕಿದೆ. ದೇಶದ ಪ್ರತಿಯೊಬ್ಬರಿಗೂ ಸೌಲಭ್ಯ ಕಲ್ಪಿಸಬೇಕಿದೆ‌.‌ ಹೊಲದಲ್ಲಿ ಕೆಲಸ ಮಾಡುವ ರೈತನಿಗೂ, ಉದ್ಯೋಗ ಮಾಡುವವರಿಗೂ ಸಕಲ ಸೌಲಭ್ಯ ಕೊಡುವುದು ನಮ್ಮ ಗುರಿ’ ಎಂದರು.

‘ಹಿಂದಿನ ಸರ್ಕಾರಗಳು ವೋಟ್ ಬ್ಯಾಂಕ್ ರಾಜಕಾರಣ, ಜಾತಿ ರಾಜಕಾರಣ ಮಾಡುತ್ತಿದ್ದರು. ಆದರೆ, ನಮ್ಮ ಸರ್ಕಾರ ವೋಟ್ ಬ್ಯಾಂಕ್ ಪರ ಇಲ್ಲ. ಅಭಿವೃದ್ಧಿ ಮಾತ್ರ. ಸೂರತ್- ಚೈನ್ನೈ ಎಕ್ಸ್‌ಪ್ರೆಸ್‌ ವೇ ಮೂಲಕ ಇಲ್ಲಿನ ಲಕ್ಷಾಂತರ ರೈತರಿಗೆ ಹಾಗೂ ಉದ್ಯಮಕ್ಕೆ ಸಹಕಾರಿಯಾಗಲಿದ್ದು, ಭಾರತಮಾಲಾ ಯೋಜನೆಯಿಂದ ಈ ಭಾಗದ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ’ ಎಂದು ಹೇಳಿದರು.

ಮೂರು ಜಿಲ್ಲೆಯ ರೈತರಿಗೆ ಸಹಕಾರಿ: ‘ಯಾದಗಿರಿ, ಕಲಬುರಗಿ, ವಿಜಯಪುರ ಜಿಲ್ಲೆಗಳ ಲಕ್ಷಾಂತರ ರೈತರಿಗೆ ನಾರಾಯಣಪುರ ಎಡದಂತೆ ಕಾಲುವೆ ಯೋಜನೆಯಿಂದ ಅನುಕೂಲವಾಗಲಿದೆ. ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಿಂದ ಕೃಷ್ಣಾ ನದಿಯ ನಾರಾಯಣಪುರ ಆಣೆಕಟ್ಟಿನಿಂದ 14.93 ಲಕ್ಷ ಜನರು ಸಂಸ್ಕರಿಸಿದ ನೀರನ್ನು ಪಡೆಯುತ್ತಾರೆ. ಈ ಯೋಜನೆಯಿಂದ 710 ಗ್ರಾಮೀಣ ವಸತಿಗಳು ಮತ್ತು 3 ಪಟ್ಟಣಗಳು ಸುಸ್ಥಿರ ಶುದ್ದ ಕುಡಿಯುವ ನೀರನ್ನು ಪಡೆಯಲಿವೆ ಹಾಗೂ 117 ಎಂಎಲ್‌ಡಿ ನೀರು ಸಂಸ್ಕರಣ ಘಟಕ ನಿರ್ಮಿಸಲಾಗುವುದು. ಈ ಯೋಜನೆಯಿಂದಾಗಿ ಲಕ್ಷಾಂತರ ಮನೆಗಳಿಗೆ ಶುದ್ಧ ಕುಡಿಯುವ ನೀರು ಸಿಗಲಿದೆ‘ ಎಂದು ತಿಳಿಸಿದರು.

‘ನಮ್ಮ ಸರ್ಕಾರ ಕರ್ನಾಟಕ ರಾಜ್ಯದಲ್ಲಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.‌ ಮತ್ಸ್ಯ ಸಂಪದ ಯೋಜನೆ, ನ್ಯಾನೋ ಯುರಿಯಾ, ಡ್ರೋನ್‌ ತಂತ್ರಜ್ಞಾನದ ಮೂಲಕ ಸೌಲಭ್ಯ ತಲುಪಿಸಲಾಗುತ್ತಿದೆ. ಅಮೃತ ಸರೋವರ,‌ ಮುದ್ರಾ ಯೋಜನೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ‘ ಎಂದರು.

‘ಕೊನೆ ಭಾಗದ ರೈತರಿಗೂ ನೀರಿನ ವ್ಯವಸ್ಥೆ ಸ್ಕಾಡಾ ಮೂಲಕ ನಡೆಯಲಿದೆ. ಪಿಎಂ ಕಿಸಾನ್ ಯೋಜನೆಯಿಂದ ಕೇಂದ್ರದಿಂದ ₹6 ಸಾವಿರ, ರಾಜ್ಯ ಸರ್ಕಾರದಿಂದ ₹4 ಸಾವಿರ ನೀಡಲಾಗುತ್ತಿದೆ‘ ಎಂದು ತಿಳಿಸಿದರು.

‘ಉತ್ತರ ಕರ್ನಾಟಕದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅವರ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ‘ ಎಂದು ತಿಳಿಸಿದರು.

ಇದೇ ವೇಳೆ ಪ್ರಧಾನಿಯವರು ₹4,699 ಕೋಟಿ ವೆಚ್ಚದಲ್ಲಿ ನಾರಾಯಣಪುರ ಎಡದಂಡೆ ಕಾಲುವೆಯ ವಿಸ್ತರಣೆ, ಪುನಃಶ್ಚೇತನ ಹಾಗೂ ಆಧುನೀಕರಣ ಯೋಜನೆಯನ್ನು ಲೋಕಾರ್ಪಣೆಗೊಳಿಸಿದರು. ಸ್ಕಾಡಾ, ಭಾರತ ಮಾಲಾ ಯೋಜನೆ, ಬಹುಗ್ರಾಮ ಕುಡಿಯುವ ನೀರಿನ ಕುರಿತು ಕಿರು ಚಿತ್ರವನ್ನು ಪ್ರದರ್ಶಿಸಲಾಯಿತು.

****

ಸಮರ್ಥ ಇತಿಹಾಸ ಹೊಂದಿದ ಜಿಲ್ಲೆ

ಯಾದಗಿರಿ ಜಿಲ್ಲೆ ಸಮರ್ಥ ಇತಿಹಾಸ ಹೊಂದಿದೆ. ಉನ್ನತ ಪರಂಪರೆಯ, ಸಂಸ್ಕೃತಿ ಹೊಂದಿರುವ ಜಿಲ್ಲೆಯಾಗಿದೆ. ನಮ್ಮ ಪೂರ್ವಜರ ಸಾಮರ್ಥ್ಯದ ಪ್ರತೀಕವಾಗಿದೆ. ಇಲ್ಲಿ ಸಾವಿರಾರು ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಪ್ರಧಾನಿ ಹೇಳಿದರು.

ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ದೇಶದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಅವರ ಬಗ್ಗೆ ನಮಗೆ ಹೆಮ್ಮೆ ಇದೆ. ಇಂಥವರನ್ನು ಸ್ಮರಿಸಬೇಕು ಎಂದರು.

ನಾರಾಯಣಪುರ ಬಸವಸಾಗರ ಜಲಾಶಯದ ಬಳಿ ವೆಂಕಟಪ್ಪ ನಾಯಕ ಪುತ್ಥಳಿ ಸ್ಥಾಪನೆ ಬಗ್ಗೆ ಪ್ರಧಾನಿಯವರು ಯಾವುದೇ ಮಾತು ಆಡಲಿಲ್ಲ.

***

ಟಾಪ್‌ ಹತ್ತು ಜಿಲ್ಲೆಗಳಲ್ಲಿ ಯಾದಗಿರಿ!

2014ರಲ್ಲಿ ನಮಗೆ ಅಧಿಕಾರ ಕೊಟ್ಟಿದ್ದೀರಿ.‌ ಅತಿ ಹಿಂದುಳಿದ ಜಿಲ್ಲೆ ಯಾದಗಿರಿ ಜಿಲ್ಲೆಯನ್ನು ಮಹಾತ್ವಕಾಂಕ್ಷಿ ಜಿಲ್ಲೆ ಎಂದು ಯೋಜನೆ ರೂಪಿಸಿ ಅಭಿವೃದ್ಧಿ ಮಾಡಲಾಗಿದೆ. ಈಗ ಹತ್ತರೊಳಗೆ ಸ್ಥಾನ ಪಡೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

‘ವಿವಿಧ ಸೂಚ್ಯಂಕಗಳಲ್ಲಿ ಯಾದಗಿರಿ ಜಿಲ್ಲೆಯೂ 10ರೊಳಗೆ ಸ್ಥಾನ ಪಡೆದಿರುವು ಕಾರಣ ಈ ಭಾಗದ ಜನಪ್ರತಿನಿಧಿಗಳು, ಜಿಲ್ಲಾಡಳಿತ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಶ್ಲಾಘಿಸಿದರು.

***

ಕನ್ನಡದಲ್ಲೇ ಮಾತು ಆರಂಭಿಸಿದ ಪ್ರಧಾನಿ

ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮಕ್ಕೆ ಕೊಡೇಕಲ್ಲಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಎಲ್ಲ ಸಹೋದರ, ಸಹೋದರಿಯರಿಗೆ ನನ್ನ ವಂದನೆಗಳು ಎಂದು ಕೈ ಮುಗಿದು ಕನ್ನಡದಲ್ಲಿ ಭಾಷಣ ಆರಂಭಿಸಿದರು. ಸಭಿಕರು ಹರ್ಷೋದ್ಘಾರ ಮಾಡಿ ಬೆಂಬಲ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT