ಶನಿವಾರ, ಸೆಪ್ಟೆಂಬರ್ 26, 2020
26 °C

ಜನಪ್ರತಿನಿಧಿಗಳ ಖಾಸಗಿ ಆಸ್ಪತ್ರೆ ವಾಸ್ತವ್ಯ: ಜನರ ಟೀಕಾಪ್ರಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಕೊರೊನಾ ಸೋಂಕಿತರಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕೆಲವು ಜನಪ್ರತಿನಿಧಿಗಳು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗಳ ಬದಲು, ಖಾಸಗಿ ಆಸ್ಪತ್ರೆಗೆ ದಾಖಲಾಗಿರುವುದಕ್ಕೆ ಜಿಲ್ಲೆಯ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಯ್ದ ಕೆಲವು ಪ್ರತಿಕ್ರಿಯೆಗಳು ಇಂತಿವೆ.

‘ಕಾನೂನು ಜಾರಿಯಾಗಲಿ’
ಜನಪ್ರತಿನಿಧಿಗಳು ಖಾಸಗಿ ಆಸ್ಪತ್ರೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದು ಅವರ ಆಡಳಿತದ ಲೋಪದೋಷಗಳನ್ನು ಎತ್ತಿ ತೋರಿಸುತ್ತಿದೆ. ದೇಶದಲ್ಲಿ ಕೋವಿಡ್‌ ಸೋಂಕಿತರ ಪೈಕಿ ಶೇ 70ರಿಂದ 80 ರಷ್ಟು ಜನ ಸರ್ಕಾರಿ ಆಸ್ಪತ್ರೆಗಳನ್ನೇ ನೆಚ್ಚಿಕೊಂಡಿದ್ದಾರೆ. ಜನಪ್ರತಿನಿಧಿಗಳು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಬಡಜನರಿಗೆ ಆತ್ಮವಿಶ್ವಾಸ ಹೆಚ್ಚಿಸುವಂಥ ಕೆಲಸ ಮಾಡಬಹುದಿತ್ತು. ಅಲ್ಲಿನ ಸಮಸ್ಯೆಗಳನ್ನು ಕೂಡ ಅರಿಯಬಹುದಿತ್ತು. ಜನಪ್ರತಿನಿಧಿಗಳು ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಪಡೆಯಬೇಕೆಂಬ ಕಾನೂನು ಜಾರಿಗೊಳಿಸಬೇಕು.
-ವಿಜಯರೆ‌ಡ್ಡಿ ಪರವನ್, ಗೋಗಿ (ಕೆ)

**
ಸೌಲಭ್ಯ, ಚಿಕಿತ್ಸೆ ಬಗ್ಗೆ ನಂಬಿಕೆ ಇಲ್ಲವೇ?
ಕೋವಿಡ್ ಸೋಂಕಿತ ಜನಪ್ರತಿನಿಧಿಗಳು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಇದು ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರತೆಗಳಿವೆ ಎಂಬುದನ್ನು ಸಾರ್ವಜನಿಕರಿಗೆ ಪರೋಕ್ಷವಾಗಿ ತೋರಿಸಿದಂತಾಗಿದೆ. ಎಲ್ಲರಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಸೌಲಭ್ಯಗಳೊಂದಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಹೇಳುವ ಜನಪ್ರತಿನಿಧಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿನ ಸೌಲಭ್ಯ, ಚಿಕಿತ್ಸೆ ಬಗ್ಗೆ ನಂಬಿಕೆಯಿಲ್ಲವೆ?
-ರಮೇಶ್ ನಾಯಕ ಚಿನ್ನಾಕಾರ, ಯಾದಗಿರಿ

*
ನಮಗೊಂದು ನ್ಯಾಯ, ನಿಮಗೊಂದು ನ್ಯಾಯ
ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಸುಮಾರು 6 ತಿಂಗಳಿನಿಂದ ರಾಜ್ಯ ಸರ್ಕಾರವು ‘ನಿಮಗೆ ಯಾವುದೇ ಆರೋಗ್ಯ ಸಮಸ್ಯೆ ಬಂದರೆ ಕೂಡಲೇ ಸಮೀಪದ ಸರ್ಕಾರಿ ಅರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ’ ಎಂದು ಪ್ರಚಾರ ಮಾಡುತ್ತಿದೆ. ಇನ್ನೊಂದೆಡೆ ಜನಪ್ರತಿನಿಧಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಮಾನ್ಯರಿಗೆ ಒಂದು ನ್ಯಾಯ, ಜನಪ್ರತಿನಿಧಿಗಳಿಗೊಂದು ನ್ಯಾಯವೇ?
-ಸಂಜು ಅಳೆಗಾರ್‌, ಮಲ್ಲಯ್ಯಕಟ್ಟ ಗುರುಮಠಕಲ್

*
ಜನಸಾಮಾನ್ಯರ ಗತಿಯೇನು?
ನಮ್ಮ ಜನಪ್ರತಿನಿಧಿಗಳು ಮೊದಲು ತಾವು ಚೆನ್ನಾಗಿರೋದನ್ನ ಮಾತ್ರ ನೋಡಿಕೊಳ್ಳುತ್ತಾರೆ. ಜನಪ್ರತಿನಿಧಿಗಳಿಗೆ ಸೋಂಕು ತಗುಲಿದಾಗ ಅವರು ಸಹ ಜನಸಾಮಾನ್ಯರಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಒಳಪಡಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವ ರೀತಿಯ ಸೌಲಭ್ಯಗಳಿವೆ ಹಾಗೂ ಏನೇನು ಕೊರತೆಗಳಿವೆ ಮತ್ತು ಜನಸಾಮಾನ್ಯರಿಗೆ ಯಾವ ರೀತಿ ಚಿಕಿತ್ಸೆ ನೀಡಲಾಗುತ್ತದೆ ಎಂಬುದನ್ನು ಇದರಿಂದ ಅರಿಯಬಹುದು. ಜನಪ್ರತಿನಿಧಿಗಳು ತಾವು ಮಾತ್ರ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಒಳಪಟ್ಟು ಗುಣಮುಖರಾದರೆ, ನಿಮ್ಮನ್ನು ಜನಪ್ರತಿನಿಧಿಗಳನ್ನಾಗಿ ಮಾಡಿದ ಜನಸಾಮಾನ್ಯರ ಗತಿಯೇನು?
-ಜೇಜು ನಾಯಕ, ಸುರಪುರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು