ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ಭವನ ನಿರ್ಮಾಣ ನನೆಗುದಿಗೆ: ಪ್ರತಿಭಟನೆ

Last Updated 26 ಅಕ್ಟೋಬರ್ 2018, 15:32 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ವಿವಿಧ ಕಡೆಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನಗಳ ಕಾಮಗಾರಿಗಳು ಅಪೂರ್ಣಗೊಂಡಿದ್ದು, ಅಧಿಕಾರಿ ಮತ್ತು ಗುತ್ತಿಗೆದಾರರ ವಿರುದ್ಧ ಜಿಲ್ಲಾಧಿಕಾರಿ ಕ್ರಮ ಜರುಗಿಸುವಂತೆ ಆಗ್ರಹಿಸಿ ಶುಕ್ರವಾರ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಮಿತಿಯ ಜಿಲ್ಲಾ ಘಟಕದ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ,‘ಡಾ.ಬಿ.ಆರ್. ಅಂಬೇಡ್ಕರ್ ಭವನಗಳ ಕಾಮಗಾರಿಗಳು ಹತ್ತು ವರ್ಷಗಳಿಂದ ನನೆಗುದಿಗೆ ಬಿದ್ದಿವೆ. ಸುರಪುರ ತಾಲ್ಲೂಕಿನ ಮಾಳನೂರು, ಯಾದಗಿರಿ ತಾಲ್ಲೂಕಿನ ಗೌಡಗೇರಾದಲ್ಲಿ ನಿವೇಶನ ಖರೀದಿಸಿದ್ದರೂ, ಇದುವರೆಗೂ ಭವನ ನಿರ್ಮಾಣಕ್ಕೆ ಇಲಾಖೆ ಮುಂದಾಗಿಲ್ಲ. ಸುರಪುರ ತಾಲ್ಲೂಕಿನ ಅಮಲಿಹಾಳದಲ್ಲಿ ಕೇವಲ ಬುನಾದಿ ಹಾಕಿ ಕೈತೊಳೆದುಕೊಂಡಿದೆ. ಯಾದಗಿರಿ ತಾಲ್ಲೂಕಿನ ತಳಕ ಗ್ರಾಮದಲ್ಲಿ ಅಂಬೇಡ್ಕರ್ ಭವನ ಕಾಮಗಾರಿ ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

‘ಕೂಡಲೇ ಎಲ್ಲ ಕಾಮಗಾರಿಗಳನ್ನು ಪುನರಾರಂಭಿಸಿ ಮುಂದಿನ ಏಪ್ರಿಲ್ 14ರೊಳಗೆ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು’ ಎಂದು ಎಚ್ಚರಿಸಿದರು.

ವಿಜಯಕುಮಾರ ವಡಗೇರಾ, ಅಜೀಜ್ ಐಕೂರು, ತಿಪ್ಪಣ್ಣ ಲಂಡನಕರ್, ಮಲ್ಲಿಕಾರ್ಜುನ ಆಶನಾಳ, ಮರೆಪ್ಪ ಹಾಲಗೇರಾ, ತಾಯಪ್ಪ ಲಿಂಗೇರಿ, ಮರೆಪ್ಪ ಕ್ರಾಂತಿ, ಮಲ್ಲಪ್ಪ ಅಕರೇರಿ, ಮಲ್ಲಿಕಾರ್ಜುನ ಶಾಖನವರ, ಭೀಮಣ್ಣ ಕೊಂಗಂಡಿ, ಶರಣಪ್ಪ ಪೂಜಾರಿ, ರಮೇಶ ಹುಂಡೇಕಲ್, ದೇವಪ್ಪ ಹಾಲಗೇರಾ, ಶಿವರುದ್ರ ಕೋಟಗಾರವಾಡ, ಸಂತೋಷ ರಾಠೋಡ, ಅಜ್ಮೀರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT