ಬುಧವಾರ, ಆಗಸ್ಟ್ 10, 2022
25 °C
ರಾಜಾದ್ಯಂತ ಎಸ್‌ಯುಸಿಐ ಹೋರಾಟ

ಭ್ರಷ್ಟಾಚಾರ ವಿರೋಧಿಸಿ ಜು.13ರಂದು ಪ್ರತಿಭಟನಾ ಮೆರವಣಿಗೆ: ಸೋಮಶೇಖರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಬೆಲೆ ಏರಿಕೆ, ಭ್ರಷ್ಟಾಚಾರ, ನಿರುದ್ಯೋಗ ವಿರೋಧಿಸಿ ಜುಲೈ 13ರಂದು ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ವೃತ್ತದಲ್ಲಿ ಪ್ರತಿಭಟನಾ ಮೆರವಣಿಗೆ ಮತ್ತು ಧರಣಿ ನಡೆಸಿ, ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಕಾರ್ಯದರ್ಶಿ ಎಸ್‌ಯುಸಿಐ (ಸಿ) ಕೆ.ಸೋಮಶೇಖರ್ ತಿಳಿಸಿದರು.

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ (ಎಲ್‌ಪಿಜಿ), ಅಡುಗೆ ಎಣ್ಣೆ, ದವಸ ಧಾನ್ಯಗಳು, ಪಾತ್ರೆಗಳು, ಚಪ್ಪಲಿಗಳು, ಔಷಧಿಗಳು, ಮನೆ ಬಾಡಿಗೆ, ಕಟ್ಟಡ ಸಾಮಗ್ರಿಗಳು ಮುಂತಾದ ಜನಾವಶ್ಯಕತೆಗಳ ಬೆಲೆಗಳು ತೀವ್ರವಾಗಿ ಏರಿಕೆಯಾಗಿದೆ. ಉಕ್ರೇನ್ ಯುದ್ಧದ ನೆಪವನ್ನು ನೀಡಿ ಜನರನ್ನು ಲೂಟಿ ಹೊಡೆಯಲಾಯಿತು. ರಷ್ಯಾದಿಂದ ಕಡಿಮೆ ದರದಲ್ಲಿ ಕಚ್ಚಾ ತೈಲ ಖರೀದಿ ಮಾಡಿದರೂ ಅದರ ಲಾಭ ಅಂಬಾನಿಯ ರಿಲಯನ್ಸ್‌ನಂಥ ಖಾಸಗಿ ತೈಲ ಕಂಪನಿಗಳ ಪಾಲಾಗುತ್ತಿದೆ. ಜನರ ಕಣ್ಣೊರೆಸಲು ಪುಡಿಗಾಸಿನ ತೆರಿಗೆ ಕಡಿತ ಮಾಡಿ ತಾನು ಜನಪರ ಎಂದು ತೋರಿಸಿ ಕೊಳ್ಳಲು ಸರ್ಕಾರಗಳು ಯತ್ನಿಸುತ್ತಿವೆ ಎಂದು ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭ್ರಷ್ಟಾಚಾರದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಿ. ಉದ್ಯೋಗ ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸಿ. ಸರ್ಕಾರದ ವಿವಿಧ ಇಲಾಖೆಗಳ ಹೊರಗುತ್ತಿಗೆ ನೇಮಕಾತಿಯಲ್ಲಿ ಸುಲಿಗೆಯನ್ನು ನಿಲ್ಲಿಸಿ. ಯಾವುದೇ ರೀತಿಯ ಉದ್ಯೋಗ ನಾಶಕ ಯೋಜನೆಗಳನ್ನು ಕೈಬಿಟ್ಟು, ಎಲ್ಲರಿಗೂ ಉದ್ಯೋಗ ನೀಡಿ. ಜನರನ್ನು ಕೋಮು-ಜಾತಿ ಆಧಾರದಲ್ಲಿ ಪ್ರಚೋದಿಸಿ ಜನರ ಒಗ್ಗಟ್ಟನ್ನು ಮುರಿಯುವ ಶಕ್ತಿಗಳನ್ನು ನಿಯಂತ್ರಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.

ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಹಣದುಬ್ಬರವನ್ನು ನಿಯಂತ್ರಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲಗಳ ಮೇಲಿನ ತೆರಿಗೆ ರದ್ದುಮಾಡಿ, ಮೂಲ ಬೆಲೆಯಲ್ಲಿ ಒದಗಿಸಬೇಕು. ಅಗತ್ಯ ವಸ್ತುಗಳನ್ನು ಪಡಿತರ ಕಾರ್ಡ್ ಮೂಲಕ ವಿತರಿಸುವಂತೆ ವ್ಯವಸ್ಥೆ ಬಲಪಡಿಸಬೇಕು ಎಂದರು.

ಸರ್ಕಾರಿ ಕಾಮಗಾರಿಗಳಲ್ಲಿ ಶೇ 40 ಕಮಿಷನ್ ವ್ಯವಹಾರದ ಬಗ್ಗೆ ರಾಜ್ಯ ಗುತ್ತಿಗೆದಾರರ ಸಂಘವೇ ದೂರು ನೀಡಿದೆ. ಇದೇ ಕಾರಣಕ್ಕೆ ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವೂ ನಡೆದಿದೆ. ನಾವು ಕಟ್ಟುವ ತೆರಿಗೆ ಹಣ ಭ್ರಷ್ಟರ ಪಾಲಾಗುತ್ತಿದೆ. ತೆರಿಗೆ ಎಷ್ಟು ಕಟ್ಟಿದರೂ ಸರ್ಕಾರದ ಖಜಾನೆ ತುಂಬುವುದಿಲ್ಲ. 2014ಕ್ಕೆ ಮುಂಚೆ ಪ್ರಧಾನಿ ಮೋದಿ ಮತ್ತು ಬಿಜೆಪಿಯ ನಾಯಕರು ಬೆಲೆ ಏರಿಕೆ-ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದು ಬರೇ ಬೋಗಳೆ ಎಂಬುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ ಎಂದರು.

ಈ ಉದ್ದೇಶದಿಂದ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ರಾಜ್ಯ ಸಮಿತಿಯು ರಾಜ್ಯವ್ಯಾಪಿ ಜನಾಂದೋಲನ ಹಮ್ಮಿಕೊಂಡಿದೆ. ರಾಜ್ಯ ಸಮಿತಿಯ ಕರೆಯಂತೆ, ಜಿಲ್ಲೆಯ ವಿವಿಧ ಬಡಾವಣೆಗಳು, ಹಳ್ಳಿಗಳು, ಹೋಬಳಿ, ತಾಲ್ಲೂಕುಗಳಲ್ಲಿ ವ್ಯಾಪಕ ಪ್ರಚಾರ ಮತ್ತು ಚರ್ಚೆಗಳನ್ನು ಏರ್ಪಡಿಸಿ, ಪ್ರತಿಭಟನೆಗಳನ್ನೂ ನಡೆಸಲಾಗುತ್ತಿದೆ. ನಂತರ ಜಿಲ್ಲಾ ಕೇಂದ್ರದಲ್ಲಿ ಮಾಡಲಾಗುತ್ತಿದೆ
ಎಂದರು.

ಈ ವೇಳೆ ಎಸ್‌ಯುಸಿಐ (ಸಿ) ಜಿಲ್ಲಾ ಸಮಿತಿ ಸದಸ್ಯರಾದ ಡಿ.ಉಮಾದೇವಿ, ರಾಮಲಿಂಗಪ್ಪ ಬಿ.ಎನ್., ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು