ಗುರುವಾರ , ಡಿಸೆಂಬರ್ 1, 2022
21 °C
ಶಿಕ್ಷಕರ ಕಿರುಕುಳ ಆರೋಪ; ವಿದ್ಯಾರ್ಥಿ ಆತ್ಮಹತ್ಯೆ ಯತ್ನ ಪ್ರಕರಣ

ತಪ್ಪಿತಸ್ಥರಿಗೆ ಶಿಕ್ಷೆಗೆ ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುರುಮಠಕಲ್: ಈಚೆಗೆ ಪಟ್ಟಣದ ಖಾಸಗಿ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಶಿಕ್ಷಕರ ಕಿರುಕುಳದ ಆರೋಪ ಮಾಡಿ ವಿಷ ಸೇವಿಸಿದ ಪ್ರಕರಣದ ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಮತ್ತು ಕಾನೂನು ಪಾಲಿಸದ ಶಾಲೆಯ ಪರವಾನಿಗೆ ರದ್ಧುಗೊಳಿಸಲು ಆಗ್ರಹಿಸಿ ಸರ್ವ ಸಂಘಟನೆಗಳ ಒಕ್ಕೂಟದ ವತಿಯಿಂದ ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ಜರುಗಿತು.

ಪಟ್ಟಣದ ಸಿಹಿನೀರ ಬಾವಿಯಿಂದ ಮುಖ್ಯರಸ್ತೆಯ ಮೂಲಕ ಬಸವೇಶ್ವರ ವೃತ್ತದವೆರೆಗೆ ಪ್ರತಿಭಟನಾ ಮೆರವಣಿಗೆಯ ಮೂಲಕ ಆಗಮಿಸಿ, ಜಮಾವಣೆಗೊಂಡ ಪ್ರತಿಭಟನಾಕಾರರು, ಪರಿಶಿಷ್ಟ ಜಾತಿಯ ವಿದ್ಯಾರ್ಥಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದು ಸಹಿಸಲಾಗದು. ನೆಪ ಮಾತ್ರಕ್ಕೆ ಬಂಧಿಸಿದರೆ ಸಾಕಾಗದು, ಶಾಲಾ ಪರವಾನಿಗೆ ರದ್ದುಗೊಳಿಸಬೇಕು ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.

ಮುಖಂಡರಾದ ಭೀಮಶಪ್ಪ ಗುಡಿಸೆ, ವೀರಪ್ಪ ಪ್ಯಾಟಿ ಹಾಗೂ ಆಶನ್ನ ಬುದ್ಧ ಮಾತನಾಡಿ, ಶಿಕ್ಷಣ ಹಕ್ಕು ಕಾಯ್ದೆಯ ಮೂಲಕ ಆಯ್ಕೆಯಾಗಿದ್ದರಿಂದ ಆ ವಿದ್ಯಾರ್ಥಿಯನ್ನು ಪ್ರತ್ಯೇಕವಾಗಿಸಿದ್ದರೇ ಅಥವಾ ಪರಿಶಿಷ್ಟ ಜಾತಿಯವನೆಂದು ಕಿರುಕುಳ ನೀಡಿದ್ದರೋ? ವಿದ್ಯಾರ್ಥಿ ಕಿರುಕುಳ ತಾಳಲಾಗದೆ ವಿಷ ಸೇವಿಸಿದ್ದು ಮಾತ್ರ ನಿಜ. ಶಾಲೆಯಲ್ಲಿ ಸರ್ಕಾರದ ನಿಯಮದಂತೆ ಅರ್ಹರು ಮಾತ್ರ ಪಾಠ ಮಾಡುವುದು, ಮಕ್ಕಳ ಹಕ್ಕುಗಳ ಪಾಲನೆ, ಸಮಾನತೆ ಸೇರಿದಂತೆ ವಿವಿಧ ಕಾನೂನುಗಳ ಉಲ್ಲಂಘಿಸಿದ್ದು ಕಾಣಬಹುದು. ಆದ್ದರಿಂದ ಶಾಲೆಯ ಆಡಳಿತ ಮಂಡಳಿಯ ಮೇಲೆ ಕಠಿಣ ಕ್ರಮ ಕೈಗೊಳ್ಳಿ ಮತ್ತು ಪರವಾನಿಗೆ ರದ್ದುಗೊಳಿಸಿ ಎಂದು ಆಗ್ರಹಿಸಿದರು.

ಶಿಕ್ಷಣ ಕಾಯ್ದೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಂದ ಶಿಕ್ಷಣ ಸಂಸ್ಥೆಗಳು ಶುಲ್ಕ ವಸೂಲಿ ಮಾಡುವುದನ್ನು ನಿಲ್ಲಿಸಬೇಕು, ಪುಸ್ತಕ, ನೋಟ್ ಬುಕ್, ಸಮಸ್ತ್ರದ ಹೆಸರಲ್ಲಿಯೂ ಹಣ ವಸೂಲಿ ಮಾಡುವುದು ನಿಲ್ಲಿಸಬೇಕು. ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಉಲ್ಲಂಘಿಸುವ ಶಾಲೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ಲಕ್ಷ್ಮಪ್ಪ ಲಿಕ್ಕಿ, ಲಾಲಪ್ಪ ತಲಾರಿ, ಗುರುನಾಥ ತಲಾರಿ, ಚಂದ್ರಪ್ಪ ಮುನಿಯಪ್ಪನವರ, ತಾಯಪ್ಪ ಬಂಡಾರಿ, ಬಾಬು ನಜರಾಪುರ, ಭೀಮಶಪ್ಪ ತಲಾರಿ, ಡಾ.ಬಾಲಪ್ಪ, ಭೀಮಶಪ್ಪ ಶನಿವಾರಂ, ಮುರುಳಿ, ಶಿವಾಜಿ ಬಡಿಗೇರ, ರಂಗಸ್ವಾಮಿ, ಸುರೇಶ ಚಿನ್ನರಾಠೋಡ್, ವಿಶ್ವನಾಥ ನಾಂಚಾಲ, ಸೇರಿದಂತೆ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು