ಗುರುವಾರ , ಆಗಸ್ಟ್ 18, 2022
24 °C
ಮೊದಲು ಎಲ್ಲ ವಿದ್ಯಾರ್ಥಿಗಳು ಪಾಸ್‌ ಎಂದಿದ್ದ ಸರ್ಕಾರ, ಪೋಷಕರು ಆಕ್ರೋಶ

ಸರ್ಕಾರದ ದ್ವಂದ್ವ ನಿರ್ಣಯ: ಪಿಯು ವಿದ್ಯಾರ್ಥಿಗಳು ಹೈರಾಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಅಂಕ ನೀಡುವ ಉದ್ದೇಶದಿಂದ ನಿಯೋಜನೆ ಕೆಲಸ (ಅಸೈನ್‌ಮೆಂಟ್‌) ನೀಡಿದ್ದು, ವಿದ್ಯಾರ್ಥಿಗಳ ಗೊಂದಲಕ್ಕೆ ಕಾರಣವಾಗಿದೆ.

ಈ ಮುಂಚೆ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣ ಎಂದು ಸರ್ಕಾರ ಹೇಳಿತ್ತು. ಇದನ್ನು ಕೇಳಿ ಖುಷಿ ಪಟ್ಟಿದ್ದ ವಿದ್ಯಾರ್ಥಿಗಳು ಈಗ ನಿಯೋಜನೆ ಕೆಲಸ ಎಂದು ಮತ್ತೆ ಪರೀಕ್ಷೆಗೆ ಸಿದ್ಧರಾಗಬೇಕಾಗಿದೆ.

ಈಗಾಗಲೇ ಕೆಲ ಕಾಲೇಜುಗಳು ವಿದ್ಯಾರ್ಥಿಗಳಿಗೆ ಅಸೈನ್‌ಮೆಂಟ್‌ ನೀಡಲಾಗಿದೆ. ಆದರೆ, ಇದು ಅಂಕಗಳಿಗೆ ಸಂಬಂಧಿಸಿದ್ದು ಎಂದು ಹೇಳಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಯಾವುದೇ ಮಾಹಿತಿ ಇಲ್ಲದಂತಾಗಿದೆ.

3 ತಿಂಗಳು ಆಫ್‌ಲೈನ್‌ ಕ್ಲಾಸ್‌:  ಜನವರಿ, ಫೆಬ್ರುವರಿ, ಮಾರ್ಚ್‌ನಲ್ಲಿ ಪಿಯು ವಿದ್ಯಾರ್ಥಿಗಳಿಗೆ ಆಫ್‌ಲೈನ್‌ ತರಗತಿ ನಡೆಸಲಾಗಿತ್ತು. ಶೇ 30ರಷ್ಟು ಪಠ್ಯ ಕಡಿತ ಮಾಡಿ ಬೋಧನೆ ಮಾಡಲಾಗಿತ್ತು. ಆದರೂ ಪೂರ್ಣ ಪ್ರಮಾಣದಲ್ಲಿ ಪಠ್ಯ ಮುಗಿಸಿಲ್ಲ. ಪರಿಸ್ಥಿತಿ ಹೀಗಿರುವಾಗ ಸರ್ಕಾರ ಮತ್ತೆ ಎರಡನೇ ಅಲೆಯಿಂದ ಕಾಲೇಜುಗಳನ್ನು ಏಕಾಏಕಿ ಮುಚ್ಚಲು ಆದೇಶ ಮಾಡಿತು. ಇದರಿಂದ ವಿದ್ಯಾರ್ಥಿಗಳಿಗೆ ಅತ್ತ ಬೋಧನೆಯೂ ಸಿಗಲಿಲ್ಲ. ಇತ್ತ ಪರೀಕ್ಷೆಯೂ ಆಗದಿದ್ದರಿಂದ ಮತ್ತೆ ಗೊಂದಲಕ್ಕೆ ಈಡಾಗುವಂತಾಗಿತ್ತು.

ಗ್ರಾಮೀಣ, ಕಲಾ ವಿದ್ಯಾರ್ಥಿಗಳಿಗೆ ತೊಂದರೆ: ಆಫ್‌ಲೈನ್‌ ತರಗತಿ ಬಂದ್‌ ಆಗಿದ್ದರಿಂದ ಗ್ರಾಮೀಣ ಮತ್ತು ಕಲಾ, ವಾಣಿಜ್ಯ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಿದೆ. ಕೆಲವರಲ್ಲಿ ಸ್ಮಾರ್ಟ್‌ ಫೋನ್‌ ಇಲ್ಲದಿರುವುದು ಆನ್‌ಲೈನ್‌ ಪಾಠ ಕೇಳಲು ಸಮಸ್ಯೆ ಆಗಿದೆ.

ವಾಟ್ಸ್‌ ಆ್ಯಪ್‌ ಮೂಲಕ ಪ್ರಶ್ನೆ ಪತ್ರಿಕೆ:  ವಿದ್ಯಾರ್ಥಿಗಳಿಗೆ ಆಯಾ ಕಾಲೇಜು ಆಡಳಿತ ಮಂಡಳಿಯವರು ವಾಟ್ಸ್‌ ಆ್ಯಪ್‌ ಮೂಲಕ ಪ್ರಶ್ನೆ ಪತ್ರಿಕೆ ಕಳಿಸಿದ್ದಾರೆ. ಅವುಗಳಿಗೆ ಉತ್ತರಿಸಿ ಮತ್ತೆ ಸಂಬಂಧಿಸಿದವರಿಗೆ ಕಳಿಸಬೇಕು. ಇದಾದ ನಂತರ ಉಪನ್ಯಾಸಕರು ಸರ್ಕಾರದ ಮಾನದಂಡದಂತೆ ಅಂಕಗಳನ್ನು ನೀಡುವ ಪ್ರಕ್ರಿಯೆ ಇದೆ.

ಸರ್ಕಾರದ ದ್ವಂದ್ವ ನೀತಿ:  ಸರ್ಕಾರ ಕಾಲೇಜುಗಳನ್ನು ಕೋವಿಡ್‌ ಕಾರಣದಿಂದ ಮುಚ್ಚಬೇಕಾದರೆ ಶಿಕ್ಷಣ ತಜ್ಞ, ಪ್ರಾಂಶುಪಾಲ, ಶಿಕ್ಷಣ ಸಂಸ್ಥೆ ಅಧ್ಯಕ್ಷರನ್ನು ಸಂಪರ್ಕಿಸಿಲ್ಲ. ಹೀಗಾಗಿ ಈಗ ಅಂಕಗಳು ನೀಡುವ ಉದ್ದೇಶದಿಂದ ಪರೀಕ್ಷೆಗಳನ್ನು ನಡೆಸುತ್ತಿದೆ.

‘ಸರ್ಕಾರದ ಸ್ಪಷ್ಟತೆ ಇಲ್ಲದ ನಿರ್ಧಾರದಿಂದ ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಯವರು ಗೊಂದಲಕ್ಕೆ ಸಿಲುಕಿ ಬೀಳುವಂತೆ ಆಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂಥ ನಿರ್ಧಾರದಿಂದ ಸಮಸ್ಯೆ ಆಗುತ್ತಿದೆ. ವಾಟ್ಸ್‌ ಆ್ಯಪ್‌ ಇಲ್ಲದವರು ಉತ್ತರ ಪತ್ರಿಕೆ ಸ್ಕ್ಯಾನ್‌ ಮಾಡಿ ಕಳಿಸಬೇಕು. ಇಂಥ ಕಾರಣದಿಂದ ವಿದ್ಯಾರ್ಥಿಗಳಿಗೆ ನಷ್ಟವೇ ಉಂಟಾಗುತ್ತಿದೆ’ ಎನ್ನುತ್ತಾರೆ ಡಿಡಿಯು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಭೀಮಣ್ಣ ಮೇಟಿ.

***

ಜಿಲ್ಲೆಯಲ್ಲಿರುವ ಕಾಲೇಜುಗಳು

ಯಾದಗಿರಿ;37

ಶಹಾಪುರ;30

ಸುರಪುರ;25

ವಿದ್ಯಾರ್ಥಿಗಳ ಸಂಖ್ಯೆ

ಯಾದಗಿರಿ;3,571

ಶಹಾಪುರ;2,896

ಸುರಪುರ;2,442

ಒಟ್ಟು;8,909

***

ಎರಡು ಹಂತದಲ್ಲಿ ಅಸೈನ್‌ಮೆಂಟ್‌ ನೀಡಿದ್ದು, ತಲಾ 100 ಅಂಕಗಳನ್ನು ನಿಗದಿ ಪಡಿಸಲಾಗಿದೆ. ಈಗಾಗಲೇ ವಿದ್ಯಾರ್ಥಿಗಳು ಬೇರೆ ರೀತಿಯ ಇಂಥ ಪರೀಕ್ಷೆಗಳನ್ನು ಎದುರಿಸಿದ್ದಾರೆ

- ಚಂದ್ರಕಾಂತ ಹಿಳ್ಳಿ, ಡಿಡಿಪಿಯು

***

ಪ್ರಶ್ನೆ ಪತ್ರಿಕೆ ಕೊಟ್ಟಿದ್ದಾರೆ. ಮಕ್ಕಳು ಬರೆಯಬೇಕು. ಅದನ್ನು ಕಾಲೇಜಿಗೆ ತರಲು ಆಗುವುದಿಲ್ಲ. ಹೀಗಾಗಿ ವಾಟ್ಸ್‌ ಆ್ಯಪ್‌ ಮೂಲಕ ಕಳಿಸಲು ವ್ಯವಸ್ಥೆ ಮಾಡಲಾಗಿದೆ

- ಡಾ.ಭೀಮಣ್ಣ ಮೇಟಿ, ‌ಡಿಡಿಯು ಶಿಕ್ಷಣ ಸಂಸ್ಥೆಯ ಅಧ್ಯಕ್ಷ

***

ದ್ವಿತೀಯ ಪಿಯು ಪರೀಕ್ಷೆ ರದ್ದು ಮಾಡಿದ ಮೇಲೆ ನಮ್ಮದು ಪರೀಕ್ಷೆ ಇರುವುದಿಲ್ಲ ಎಂದು ಭಾವಿಸಿದ್ದೀವಿ. ಈಗ ಮತ್ತೆ ಅಸೈನ್‌ಮೆಂಟ್‌ ನೀಡಿದ್ದಾರೆ

- ರಿತಿಕಾ ಆನಂದ, ಪಿಯು ವಿದ್ಯಾರ್ಥಿನಿ

**

ಮೊದಲು ಎಲ್ಲರೂ ಪಾಸ್‌ ಎಂದು ಘೋಷಣೆ ಮಾಡಿ ಈಗ ಪರೀಕ್ಷೆ ನಡೆಸುವುದು ಸರಿಯಲ್ಲ. ಮತ್ತೆ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಮಾನಸಿಕವಾಗಿ ಸಿದ್ಧರಿಲ್ಲ.

- ಶ್ರೀಶೈಲ ಸ್ವಾಮಿ, ಪೋಷಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು