ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ವಾಹನಕ್ಕೆ 5 ಟೈರ್‌ ಖರೀದಿ!

ಒಂದೇ ಕೆಲಸಕ್ಕೆ ಎರಡು ಬಾರಿ ಹಣ ಪಾವತಿ, ತಪ್ಪು ಲೆಕ್ಕ ತೋರಿಸಿದ ಅಧಿಕಾರಿಗಳು– ಆರೋಪ
Last Updated 4 ನವೆಂಬರ್ 2022, 7:02 IST
ಅಕ್ಷರ ಗಾತ್ರ

ಶಹಾಪುರ: ನಗರಸಭೆಯ ವಾಹನ ಸಂಖ್ಯೆ ಕೆ.ಎ 33 ಎ 7820 ವಾಹನಕ್ಕೆ ಐದು ಟೈರ್ ಖರೀದಿ ಮಾಡಲು ₹21,888 ವೆಚ್ಚ ಮಾಡಲಾಗಿದೆ. ಜಾತ್ರೆಯ ಹೆಸರಿನಲ್ಲಿ ಒಂದೇ ಕೆಲಸಕ್ಕೆ ಎರಡು ಬಾರಿ ಹಣ ನಮೂದಿಸಿರುವುದು. ಮೋಟಾರ ಸಾಮಗ್ರಿಗಳ ಖರೀದಿಗಿಂತ ದುರಸ್ತಿಯೇ ದುಬಾರಿ...

ಇದು ಶನಿವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಮಂಡಿಸಿದ (ಜೂನ್‌ನಿಂದ ಸೆಪ್ಟಂಬರ್) ಖರ್ಚುವೆಚ್ಚ. ‘ಹೀಗೆಬೇಕಾಬಿಟ್ಟಿ ಖರ್ಚು ವೆಚ್ಚ ಮಾಡಿರುವುದನ್ನು ಗಮನಿಸಿದರೆ ಅಕ್ರಮದ ವಾಸನೆ ಬರುತ್ತಿದೆ’ ಎಂಬುದು ನಗರ ಜನರ
ಆರೋಪ.

ಜೂನ್ ತಿಂಗಳ ಖರ್ಚಿನಲ್ಲಿಯೇ ಕನ್ನಡ ರಾಜ್ಯೋತ್ಸವದಂದು ಕಚೇರಿಗೆ ಸೀರಿಯಲ್ ಲೈಟ್ ಹಾಕಿಸಿದ ಬಿಲ್ ಎಂದು ವೆಚ್ಚ ಮಾಡಿರುವುದರಲ್ಲಿ ಅಧಿಕಾರಿಗಳ ಕೈಚಳಕ ಎದ್ದು ಕಾಣುತ್ತದೆ.

ನಗಸರಭೆ ಅಧಿಕಾರಿಗಳಿಗೆ ದುರಸ್ತಿಯೇ ಲಾಭದಾಯಕ ಕೆಲಸವಾದಂತಿದೆ. ಕೈಪಂಪ್‌, ಪೈಪ್ ಲೈನ್ ದುರಸ್ತಿಗಾಗಿ ನಾಲ್ಕು ತಿಂಗಳಲ್ಲಿ ₹5.71 ಲಕ್ಷ ನಮೂದಿಸಿದ್ದಾರೆ. ಜುಲೈ ತಿಂಗಳಲ್ಲಿ ನೀರು ಶುದ್ಧಿಕರಣ ಘಟಕದಲ್ಲಿ 25ಎಚ್‌ಪಿಸ್ಟಾಟರ್ ದುರಸ್ತಿ ಹಾಗೂ 50 ಎಚ್‌ಪಿ ಸ್ಟಾಟರ್ ದುರಸ್ತಿಗೆ ₹84,972 ಖರ್ಚು ಮಾಡಿದ್ದಾರೆ. ಕಂದಾಯ ಶಾಖೆಗೆ ಹೊಸದಾಗಿ ಪ್ರಿಂಟರ್, 2 ಹೊಸ ಮಾನಿಟರ್, ಸಿ.ಪಿ ದುರಸ್ತಿ ಮಾಡಿಸಿದ ಬಿಲ್ ₹41,409 ಆಗಿದೆ. ಕಂದಾಯ ಅಧಿಕಾರಿ ಮೈಸೂರಿಗೆ ತರಬೇತಿಗೆ ತೆರಳಲು ಪ್ರಯಾಣ ಭತ್ಯೆ ಮುಂಗಡವಾಗಿ ₹10ಸಾವಿರ ನೀಡಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎನ್ನುತ್ತಾರೆ ನಗರದ ನಿವಾಸಿ ಉಮೇಶ
ಮುಡಬೂಳ.

ನಗರದ ಚರಬಸವೇಶ್ವರ ಜಾತ್ರೆಗೆ ಕುಡಿಯುವ ನೀರಿನ ವ್ಯವಸ್ಥೆ ಸಲುವಾಗಿ 2 ಹೊಸ ಟ್ಯಾಂಕ್ ಖರೀದಿಸಿದ ಬಿಲ್ಲು ₹9,794(ಜೂನ್ ತಿಂಗಳಲ್ಲಿ). ಮತ್ತೆ ಅದೇ ತಿಂಗಳಲ್ಲಿ ಅದೇ ಜಾತ್ರೆಗೆ ಕುಡಿಯುವ ನೀರಿನ ವ್ಯವಸ್ಥೆ ಸಲುವಾಗಿ 2 ಹೊಸ ಟ್ಯಾಂಕ್ ಖರೀದಿಸಿದ ಬಿಲ್ಲು ₹9,794 ಎಂದು ನಮೂದಿಸಿದ್ದಾರೆ. ಅಲ್ಲದೆ ನಗರಸಭೆಯ 59 ಮಳಿಗೆಗಳ ಪ್ರಕರಣದ ವಕೀಲರ ಶುಲ್ಕ ₹8.77 ಲಕ್ಷ ಪಾವತಿಸಿದ್ದಾರೆ.

ವಾಹನಕ್ಕೆ ಐದು ಟೈರ್ ಖರೀದಿಸಲಾಗಿದೆ ಎಂದು ತೋರಿಸಿರುವ ಅಧಿಕಾರಿಗಳು ವಾಹನಕ್ಕೆ ನಾಲ್ಕೇ ಚಕ್ರಗಳು ಇರುತ್ತವೆ ಎಂಬುದನ್ನು ಮರೆತಂತಿದೆ’ ಎಂದು ಲೇವಡಿ ಮಾಡುತ್ತಾರೆ ಸಾಮಾಜಿಕ ಕಾರ್ಯಕರ್ತ ಮಾನಪ್ಪ ಹಡಪದ ಲೇವಡಿ ಮಾಡಿದ್ದಾರೆ.

ನಗರಸಭೆ ವ್ಯಾಪ್ತಿಯ ಮುಖ್ಯ ರಸ್ತೆಗಳಲ್ಲಿನ ಹಂಪ್ಸ್‌ಗಳಿಗೆ ಥರ್ಮಾಪ್ಲಾಸ್ಟ್ ಮಾಡಿಸಿದ ಬಿಲ್ ₹44,152, ಮರಮ್ ಹಾಕಿಸಿದ್ದು
₹51 ಸಾವಿರ, ಆರೋಗ್ಯ ಶಾಖೆಯಲ್ಲಿರುವ ಸಕ್ಕಿಂಗ್ ಮಷೀನ್ ದುರಸ್ತಿ ಮಾಡಿಸಿದ ಬಿಲ್ ₹60,606. ನಗರಸಭೆಯ ವಾಹನಗಳಿಗೆ ರೂಟ್ ಮ್ಯಾಪ್ ಅಪ್ಲಿಕೇಷನ್ ಅಳವಡಿಸಲು ₹92,536 ಹೀಗೆ ನಾಲ್ಕು ತಿಂಗಳಲ್ಲಿ ನಗರಸಭೆಯ ಅಧಿಕಾರಿಗಳು ಬೇಕಾಬಿಟ್ಟಯಾಗಿ ಖರ್ಚು ವೆಚ್ಚ ಮಾಡಿರುವುದನ್ನು ಸಮಗ್ರವಾಗಿ ಜಿಲ್ಲಾ ನಗರಭಿವೃದ್ದಿ ಕೋಶದ ಇಲಾಖೆಯ ಅಧಿಕಾರಿಯು ತನಿಖೆ ನಡೆಸಬೇಕು ಎಂದು ಜಿಲ್ಲಾಧಿಕಾರಿಗೆ ನಗರದ ಜನತೆ ಮನವಿ
ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT