ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ। ಗಡಿ ಭಾಗದ ಬದುಕು ಬವಣೆ ಪುಟಪಾಕ: ಮಳೆಗಾಲದಲ್ಲೂ ಸಿಗದು ನೀರು

ಕರ್ನಾಟಕ ಗಡಿ ಗ್ರಾಮದಲ್ಲಿ 30 ವರ್ಷಗಳಿಂದ ನೀಗದ ಕುಡಿಯುವ ನೀರಿನ ಸಮಸ್ಯೆ
Last Updated 15 ನವೆಂಬರ್ 2022, 4:07 IST
ಅಕ್ಷರ ಗಾತ್ರ

ಯಾದಗಿರಿ: ಕರ್ನಾಟಕ, ತೆಲಂಗಾಣ ಗಡಿಯ ಗುರುಮಠಕಲ್‌ ತಾಲ್ಲೂಕಿನ ಕಟ್ಟಕಡೆಯ ಪುಟಪಾಕ ಎಂಬ ಗ್ರಾಮದಲ್ಲಿ ಸದಾ ನೀರಿಗಾಗಿ ಜನ ಪರಿತಪಿಸುತ್ತಾರೆ.

ಸುಮಾರು 5,670 ಜನಸಂಖ್ಯೆಯುಳ್ಳ ಗ್ರಾಮದಲ್ಲಿ, 17 ಪಂಚಾಯಿತಿ ಸ್ಥಾನಗಳನ್ನು ಹೊಂದಿದೆ.‌ ಪುಟಪಾಕ, ಮಲ್ಲಾ‍ಪುರ, ದಂತಾಪುರ, ಜವಾಹರನಗರ ಪಂಚಾಯಿತಿ ವ್ಯಾಪ್ತಿ ಹೊಂದಿದೆ.

‘9 ಜನರ ಸದಸ್ಯ ಬಲ ಮತ್ತು ಗಾಮ ಪಂಚಾಯಿತಿಯ ಕೇಂದ್ರವಾದ ಪುಟಪಾಕ ಗ್ರಾಮದಲ್ಲಿ ಎಲ್ಲಾ ಋತುಮಾನಗಳಲ್ಲಿ ನೀರಿಗಾಗಿ ಪರದಾಡುವ ಸ್ಥಿತಿ ಇದೆ. ನಿತ್ಯವೂ ನೀರಿಗಾಗಿ ಅಲವತ್ತುಕೊಂಡರೂ ಸಮಸ್ಯೆ ನೀಗದು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಹ ಸ್ಪಂದಿಸುತ್ತಿಲ್ಲ’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ವರ್ಷವಿಡೀ ಸಮಸ್ಯೆಯೇ ಇದೆ. ಬೇಸಿಗೆಯ ಸಮಯದಲ್ಲಂತೂ ನಮ್ಮ ಪರಿಸ್ಥಿತಿ, ಸಮಸ್ಯೆಯನ್ನು ಯಾರಿಗೂ ಹೇಳಲಾಗದು. ಪರಿಹಾರ, ಭರವಸೆಗಳನ್ನು ಹಲವು ಬಾರಿ ನೀಡಲಾಗಿದೆ. ಆದರೆ, ಸಮಸ್ಯೆ ಮಾತ್ರ ಹಾಗೇ ಉಳಿದಿದೆ’ ಎಂದು ಗ್ರಾಮದ ಮಹಿಳೆಯರು ಅಸಹಾಯಕತೆ ತೋಡಿಕೊಂಡರು.

‘ಭೀಮಾ ನದಿ ಯೋಜನೆಯ ನೀರನ್ನು ನೀಡಲಾಗುವುದು, ಪೈಪ್‌ಲೈನ್‌ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ಆದರೆ, ಅದು ಕೇವಲ ಪ್ರಾಯೋಗಿಕ ಸರಬರಾಜಿಗೆ ಸೀಮಿತವಾಯಿತು. ಈಗ ಜಲ ಜೀವನ್‌ ಮಿಷನ್ ಮೂಲಕ ಜಲೋತ್ಸವ ಎಂದು ಅನುಷ್ಠಾನ ಮಾಡಲಾಗುತ್ತಿದೆ. ಆದರೆ, ಅದೂ ಕಳಪೆಯಾಗಿದೆ. ಅನುದಾನದ ಬಳಕೆಗೆ ಮಾತ್ರ ಸೀಮಿತ ಎನ್ನುವ ಅನುಮಾನ ಕಾಡುತ್ತಿದೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರೊಬ್ಬರು ವಿವರಿಸಿದರು.

‘ಗ್ರಾಮದಲ್ಲಿ ‌ನೀರಿನ ಸಮಸ್ಯೆ ನೀಗಿಸಲು ಹನ್ನೊಂದು ಕೊಳವೆ ಬಾವಿಗಳಿವೆ. ಅಲ್ಲಲ್ಲಿ ಸಿಂಗಲ್ ಫೇಸ್ ವಿದ್ಯುತ್ ಮೋಟಾರ್ ಅಳವಡಿಸಲಾಗಿದೆ. ಆದರೆ, ಪದೇ ಪದೇ ಮೋಟರ್ ಅಥವಾ ಅದರ ಸ್ಟಾರ್ಟರ್ ಸುಟ್ಟುಹೋಗುತ್ತಿದ್ದು, ಮತ್ತೆ ಸಮಸ್ಯೆ ಮುಂದುವರೆಯುತ್ತದೆ. ಗ್ರಾಮದ ನೀರಿನ ಟ್ಯಾಂಕ್‌ನಿಂದ ತಗ್ಗು ಪ್ರದೇಶದ ಮನೆಗಳಿಗೆ ಮಾತ್ರ ನೀರು ಹರಿಯುತ್ತಿವೆ’ ಎಂದು ಮಹಿಳೆಯೊಬ್ಬರು ತಿಳಿಸಿದರು.

ಗ್ರಾಮದ ಹೊರವಲಯದ ಲೋಕಪಲ್ಲಿ ರಸ್ತೆಯಲ್ಲಿರುವ ಸುಮಾರು 30 ವರ್ಷಗಳಿಗೂ ಹಳೆಯ ನೀರೆತ್ತುವ ಘಟಕದಿಂದ ನೀರು ಗ್ರಾಮಕ್ಕೆ ತಲುಪಿದಷ್ಟು ತಲುಪುತ್ತದೆ. ಉಳಿದ್ದು ಅಲ್ಲೇ ಪೋಲಾಗುತ್ತದೆ.

‘ನೀರಿನ ಸಮಸ್ಯೆ ನಮ್ಮೂರಿನಷ್ಟೇ ಹಳೆಯದಿರಬೇಕು, ಯಾವಾಗಲೂ ಸಮಸ್ಯೆ ಇದ್ದಿದ್ದೆ. ಬೇಸಿಗೆಯ ಸಮಯದಲ್ಲಿ ನೀರೆಂದರೆ ಭಯವಾಗಬೇಕು. ಹಾಗಾಗಿದೆ ನಮ್ಮ ಸ್ಥಿತಿ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್‌ ಖದೀರ್‌ ಹೇಳಿದರು.

‘ಗ್ರಾಮದಲ್ಲಿ ಹಲವಾರು ವರ್ಷಗಳಿಂದ ನೀರಿನ ಸಮಸ್ಯೆ ಕುರಿತು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಅವಲತ್ತುಕೊಂಡಿದ್ದರೂ ಸಮಸ್ಯೆ ನೀಗಿಲ್ಲ. ಮಳೆಗಾಲದಲ್ಲೂ ನಮ್ಮ ಗ್ರಾಮದಲ್ಲಿ ನೀರಿನ ಸಮಸ್ಯೆ ಇರುತ್ತದೆ ಎಂದರೆ ಬೇರೆಯವರಿಗೆ ಹಾಸ್ಯ ಅನಿಸಬಹುದು’ ಗ್ರಾಮಸ್ಥ ಅಬ್ದುಲ್ ಅಹೀಜ್ ಹೇಳುತ್ತಾರೆ.

ಆರೋಗ್ಯಕ್ಕೆ ತೆಲಂಗಾಣ: ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡರೆ ಗುರುಮಠಕಲ್ ಆಸ್ಪತ್ರೆಗೆ ಬಂದರೆ ಸೂಕ್ತ ಚಿಕಿತ್ಸೆ ಸಿಗದು. ಯಾದಗಿರಿ, ಕಲಬುರಗಿ, ರಾಯಚೂರಿಗೆ ಹೋಗಬೇಕು. ಅದರ ಬದಲಿಗೆ ತೆಲಂಗಾಣದ ನಾರಾಯಣಪೇಟಕ್ಕೆ ಹೋಗುವುದೇ ನಮಗೆ ಸುಲಭದ ಕೆಲಸ ಎಂದು ಗ್ರಾಮಸ್ಥರು ತಿಳಿಸಿದರು.

***

ಪ್ರತಿನಿತ್ಯವೂ ನಮಗೆ ನೀರಿನ ಸಮಸ್ಯೆ ಕಾಡುತ್ತಿದೆ. ಜೆಜೆಎಂಗಾಗಿ ರಸ್ತೆ ಅಗೆದಿದ್ದು, ನಡೆದಾಡಲು ಕಷ್ಟವಾಗಿದೆ. ಕೂಡಲೇ ಶಾಶ್ವತ ಪರಿಹಾರ ಕಲ್ಪಿಸಬೇಕು
ಹುಸೇನಿ ಬಿ, ಪುಟಪಾಕ ನಿವಾಸಿ

***

ಗ್ರಾಮದಲ್ಲಿ ಪ್ರತಿ ಮನೆಗೂ ನೀರು ಬರುವುದಿಲ್ಲ. ಇದರಿಂದ ಮಸೀದಿ ಅಕ್ಕಪಕ್ಕದ ನಿವಾಸಿಗಳು ಅಲ್ಲಿಂದಲೇ ನೀರು ತೆಗೆದುಕೊಳ್ಳುತ್ತಾರೆ ‌
ಅಬ್ದುಲ್‌ ಖದೀರ್‌, ಗ್ರಾಮ ಪಂಚಾಯಿತಿ ಸದಸ್ಯ, ಪುಟಪಾಕ

***

ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ನಡೆಯುತ್ತಿರುವ ಕಾರಣ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಮೂರು–ನಾಲ್ಕು ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು
ಸೂರ್ಯಕಾಂತ ಆವಂಟಿ, ಪುಟಪಾಕ ಪಿಡಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT