ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ಮಳೆ; 300 ಮನೆಗಳಿಗೆ ನುಗ್ಗಿದ ನೀರು

ಜಿಲ್ಲೆಯಾದ್ಯಂತ ಭಾರೀ ಮಳೆ; ಶಹಾಪುರದಲ್ಲಿ 300 ಮಿಲಿ ಮೀಟರ್ ಮಳೆ
Last Updated 28 ಜೂನ್ 2020, 16:50 IST
ಅಕ್ಷರ ಗಾತ್ರ

ಶಹಾಪುರ: ನಗರದಲ್ಲಿ ಶನಿವಾರ ರಾತ್ರಿ ಸುರಿದ ಭಾರೀ ಮಳೆಯಿಂದ ತಗ್ಗು ಪ್ರದೇಶದ 300ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಅಲ್ಲದೆ ಎಂಟು ಮನೆಗಳು ಭಾಗಶಃ ಕುಸಿದಿವೆ. ಯಾವುದೇ ಪ್ರಾಣ ಹಾನಿಯಾಗಿಲ್ಲ. 300 ಮಿಲಿಮೀಟರ್ ಮಳೆಯಾಗಿದೆ ಎಂದು ತಹಶೀಲ್ದಾರ್ ಜಗನಾಥರಡ್ಡಿ ತಿಳಿಸಿದ್ದಾರೆ.

ಅಲ್ಲದೆ ನಗರದ ಬಸವೇಶ್ವರ ವೃತ್ತದಲ್ಲಿ ಅಕ್ಕಪಕ್ಕದ ಮಳಿಗೆಗಳಿಗೆ ನೀರು ನುಗ್ಗಿದೆ. ಇಲ್ಲಿ ಚರಂಡಿ ಮೇಲೆ ಮಳಿಗೆ ನಿರ್ಮಿಸಿರುವುದು ಹಾಗೂ ಅವೈಜ್ಞಾನಿಕ ಚರಂಡಿ ನಿರ್ಮಾಣ ಮತ್ತು ತ್ಯಾಜ್ಯ ವಸ್ತುಗಳನ್ನು ಚರಂಡಿಯಲ್ಲಿ ಎಸೆದಿರುವುದರಿಂದ ಚರಂಡಿಯಲ್ಲಿ ಮಳೆ ನೀರು ಸರಾಗವಾಗಿ ಸಾಗದೆ ರಸ್ತೆಯ ತಗ್ಗು ಪ್ರದೇಶಕ್ಕೆ ನೀರು ನುಗ್ಗಿದೆ. ನಗರದ ಮಾವಿನ ಕೆರೆ ಹಾಗೂ ನಾಗರ ಕೆರೆ ಭರ್ತಿಯಾಗಿವೆ. ಎರಡು ಬೆಟ್ಟಗಳ ನಡುವೆ ಸೀಳಿ ಬರುವ ನೀರಿನ ಮಧ್ಯದಲ್ಲಿ ನಗರದ ಮಕ್ಕಳು, ಮಹಿಳೆಯರು ತೆರಳಿ ಈಜಾಡಿದರು.

ನಗರದ ಹೃದಯ ಭಾಗದಲ್ಲಿ ಸೀಳಿಕೊಂಡು ಹೋಗಿರುವ ಹಳೆ ಬಸ್ ನಿಲ್ದಾಣ- ಬಸವೇಶ್ವರ ನಗರ ಮಧ್ಯದ ಹಳ್ಳವನ್ನು ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಿಸಲಾಗಿತ್ತು. ಹಳ್ಳಕ್ಕೆ ತಡೆಗೋಡೆ ನಿರ್ಮಿಸಿದ್ದರಿಂದ ನೀರಿನ ರಭಸವು ಹೆಚ್ಚಾಗಿ ಹಳ್ಳದ ಅಕ್ಕ ಪಕ್ಕದ ಮನೆಗಳಿಗೆ ನೀರು ನುಗ್ಗಿದೆ. ಅಲ್ಲದೆ ಹಳ್ಳದ ತಗ್ಗು ಪ್ರದೇಶದಲ್ಲಿದ್ದ ಅಂಗಡಿಯಲ್ಲಿ ನೀರು ನಿಂತಿದೆ. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೈದಾನದಲ್ಲಿ ನೀರು ಸಂಗ್ರಹವಾಗಿದೆ.ಬೀದರ‌್ -ಶ್ರೀರಂಗಪಟ್ಟಣದ ಹೆದ್ದಾರಿಯ ಮೇಲೆ ನೀರು ಹರಿದ ಪರಿಣಾಮ ಕೆಲ ಹೊತ್ತು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಮನೆಯ ಮುಂದೆ ನಿಲ್ಲಿಸಿದ ಐದಕ್ಕೂ ಹೆಚ್ಚು ಕಾರುಗಳು ನೀರಿನಲ್ಲಿ ಸಿಲುಕಿಕೊಂಡಿದ್ದರಿಂದ ಹೊರ ತೆಗೆಯಲು ಪರದಾಡಬೇಕಾಯಿತು. ಹಳ್ಳದ ಪಕ್ಕದಲ್ಲಿ ಶೆಡ್ ಹಾಕಿಕೊಂಡು ನೆಲೆಸಿದ್ದ ಗಿಸಾಡಿ ಸಮುದಾಯದ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿದರು. ನಿರಾಶ್ರಿತರ ಕೇಂದ್ರ ಸ್ಥಾಪಿಸಿ ಉಪಾಹಾರದ ವ್ಯವಸ್ಥೆಯನ್ನು ನಗರಸಭೆಯ ಪರಿಸರ ಇಲಾಖೆಯ ಎಂಜಿನಿಯರ್ ಹರೀಶ ಸಜ್ಜನಶೆಟ್ಟಿ ವ್ಯವಸ್ಥೆ ಮಾಡಿದರು.

ನಗರದ ವಿವಿಧ ಪ್ರದೇಶಗಳಿಗೆ ಶಾಸಕ ಶರಣಬಸಪ್ಪ ದರ್ಶನಾಪುರ ಭೇಟಿ ನೀಡಿ ನಂತರ ಮಾತನಾಡಿದ ಅವರು, ತಿಂಗಳ ಹಿಂದೆ ಕೃಷ್ಣಾ ಕಾಡಾದಿಂದ ₹40 ಲಕ್ಷ ವೆಚ್ಚದಲ್ಲಿ ಹಳ್ಳವನ್ನು ಸ್ವಚ್ಛಗೊಳಿಸಿದ್ದರಿಂದ ನೀರು ಸರಾಗವಾಗಿ ಸಾಗಿದೆ. ಇದರಿಂದ ಹೆಚ್ಚು ಹಾನಿಯಾಗಿಲ್ಲ. ಬಸವೇಶ್ವರ ನಗರದ ಹತ್ತಿರದ ಸೇತುವೆ ಹಾಳಾಗಿದೆ. ಕೊಚ್ಚಿ ಹೋದ ರಸ್ತೆಗಳನ್ನು ತ್ವರಿತವಾಗಿ ದುರಸ್ತಿಗೊಳಿಸಲಾಗುವುದು ಎಂದರು.

ಕಾಂಗ್ರೆಸ್ ಬ್ಲಾಕ್ ಘಟಕದ ಅಧ್ಯಕ್ಷ ಚಂದ್ರಶೇಖರ ಆರಬೋಳ, ಶಿವಮಹಾಂತ ಚಂದಾಪುರ, ಗುಂಡಪ್ಪ ತುಂಬಿಗಿ, ಬಸವರಾಜ ಹೇರುಂಡಿ, ಬಸವರಾಜಪ್ಪಗೌಡ ತಂಗಡಗಿ ಇದ್ದರು.

ಸಗರ: ತಾಲ್ಲೂಕಿನ ಸಗರ ಹಾಗೂ ಹತ್ತಿಗೂಡೂರ ಗ್ರಾಮದ ಸುತ್ತಮುತ್ತ ಉತ್ತಮ ಮಳೆಯಾಗಿದೆ. ತಗ್ಗು ಪ್ರದೇಶದ ಜಮೀನುಗಳಿಗೆ ನೀರು ನುಗ್ಗಿದೆ. ಬಿತ್ತನೆ ಮಾಡಿದ ಹತ್ತಿ, ತೊಗರಿ, ಹೆಸರು ಬೆಳೆ ಹಾನಿಯಾಗಿವೆ.

***

ಶಹಾಪುರ ಇತಿಹಾಸದಲ್ಲಿ ಇಷ್ಟೊಂದು ಭೀಕರ ಮಳೆಯಾಗಿರಲಿಲ್ಲ. ಹಳ್ಳವನ್ನು ಸ್ವಚ್ಛಗೊಳಿಸಿದ್ದರಿಂದ ನೀರು ಸರಾಗವಾಗಿ ಸಾಗಿದ್ದರಿಂದ ಯಾವುದೇ ಜೀವ ಹಾನಿಯಾಗಿಲ್ಲ.
–ಶರಣಬಸಪ್ಪ ದರ್ಶನಾಪುರ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT