ಗುರುವಾರ , ಜೂನ್ 30, 2022
23 °C
ಹಲವೆಡೆ ರಾಶಿ ಮಾಡಿದ್ದ ಬೆಳೆ ಹಾನಿ

ವರುಣನ ಆರ್ಭಟ: ಮಳೆಗೆ ರೈತರ ಹರ್ಷ; ಜನಜೀವನ ಅಸ್ತವ್ಯಸ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಂಭಾವಿ: ವಲಯದಲ್ಲಿ ಶನಿವಾರ ಗುಡುಗು ಮಿಂಚು ಸಹಿತ ಧಾರಾಕಾರ ಮಳೆಯಾಗಿದ್ದು, ಮುಂಗಾರು ಹಂಗಾಮಿನ ಬಿತ್ತನೆಗಾಗಿ ಮಳೆ ನಿರೀಕ್ಷೆಯಲ್ಲಿದ್ದ ರೈತರ ಮೊಗದಲ್ಲಿ ಸಂತಸ ಮೂಡಿದೆ.

ಶನಿವಾರ ಬೆಳಿಗ್ಗೆಯಿಂದ ಇಡೀ ದಿನ ಸೆಕೆಯ ಅನುಭವವಿತ್ತು. ಸಂಜೆ 5 ಗಂಟೆ ಸುಮಾರಿಗೆ ಆರಂಭವಾದ ಮಳೆ ಸುಮಾರು 45 ನಿಮಿಷ ಎಡಬಿಡದೆ ಸುರಿಯಿತು. ಬಿಸಿಲ ಬೇಗೆಯಿಂದ ಬಸವಳಿದಿದ್ದ ಜನರಿಗೆ ಮಳೆಯು ಹಿತಾನುಭವ ನೀಡಿತು. ಉತ್ತಮ ಮಳೆಗೆ ಜಮೀನುಗಳು ಹದವಾದವು.

ಮತ್ತೊಂದೆಡೆ ವರುಣದೇವ ಭತ್ತ ಬೆಳೆದ ರೈತರಿಗೆ ಕಣ್ಣೀರು ತರಿಸಿದ್ದು, ಲಾಕ್‌ಡೌನ್ ಪರಿಣಾಮ ವರ್ತಕರು ಇಲ್ಲದೆ ರಸ್ತೆ ಪಕ್ಕ, ಶಾಲೆ ಮೈದಾನ, ಜಮೀನುಗಳಲ್ಲಿ ರಾಶಿ ಮಾಡಿದ ರೈತರು ಧಾರಾಕಾರ ಮಳೆಯಿಂದ ಕಂಗಾಲಾಗಿದ್ದಾರೆ.

ಜನಜೀವನ ಅಸ್ತವ್ಯಸ್ತ: ಭಾರಿ ಮಳೆಗೆ ಕೆಂಭಾವಿ ವಲಯದ ಜನಜೀವನ ಅಸ್ತವ್ಯಸ್ತವಾಯಿತು. ಮಳೆಯಿಂದಾಗಿ ಚರಂಡಿ ಭರ್ತಿಯಾಗಿ ಕೊಳಚೆ ನೀರು ರಸ್ತೆಗಳ ಮೇಲೆ ಹರಿಯಿತು.

ತಗ್ಗು ಪ್ರದೇಶದ ಹಲವು ಬಡಾವಣೆಗಳಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ಸಾಕಷ್ಟು ಅವಾಂತರ ಸೃಷ್ಟಿಸಿದೆ. ನಿವಾಸಿಗಳು ಮಳೆ ನೀರನ್ನು ಮನೆಯಿಂದ ಹೊರ ಹಾಕುವುದರಲ್ಲೇ ರಾತ್ರಿ ಕಳೆದರು.

ಉತ್ತಮ ಮಳೆ

ಹುಣಸಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಶುಕ್ರವಾರ ರಾತ್ರಿ ಮತ್ತು ಶನಿವಾರ ಸಂಜೆ ಗುಡುಗು ಸಹಿತ ಮಳೆಯಾಗಿದ್ದು, ಬೇಸಿಗೆಯಿಂದ ಬಿಸಿಯಾಗಿದ್ದ ಭೂಮಿ ತಂಪಾಗಿದೆ.

ಮಳೆಯಿಂದಾಗಿ ಯಾವುದೇ ಹಾನಿಯಾಗಿಲ್ಲ. ಆದರೆ ತಗ್ಗು ಪ್ರದೇಶದ ಅಂಗಡಿ ಮತ್ತು ಸ್ಥಳಗಳಿಗೆ ನೀರು ನುಗ್ಗಿದ್ದರಿಂದಾಗಿ ಬೆಳಿಗ್ಗೆ ಪಟ್ಟಣದಲ್ಲಿ ಅಂಗಡಿ ಮಾಲಿಕರು ನೀರು ಹೊರ ಹಾಕುವ ಕಾರ್ಯದಲ್ಲಿ ನಿರತರಾಗಿದ್ದರು.

ಹುಣಸಗಿ 33 ಮಿ.ಮೀ, ನಾರಾಯಣಪುರ 18 ಮಿ.ಮೀ, ಕಕ್ಕೇರಾ 47 ಮಿ.ಮೀ ಮಳೆ ಬಿದ್ದಿದೆ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿ. ಮುಂಗಾರು ಬಿತ್ತನೆಗೆ ಭೂಮಿ ಹದ ಮಾಡಿಟ್ಟುಕೊಂಡಿರುವ ರೈತರಿಗೆ ಈ ಮಳೆ ಅನುಕೂಲವಾಗಲಿದೆ ಎಂಬ ಮಾತುಗಳು ಮಳೆಯಾಶ್ರಿತ ಪ್ರದೇಶದ ರೈತವಲಯದಲ್ಲಿ ಕೇಳಿ ಬರುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು