ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಮಳೆ; ಹಿಂಗಾರು ಬಿತ್ತನೆ ಚುರುಕು

ಹುಣಸಗಿ, ವಡಗೇರಾ, ಶಹಾಪುರ, ಕೆಂಭಾವಿ ಸುತ್ತಮುತ್ತ ತುಂತುರು ಮಳೆ
Last Updated 17 ಅಕ್ಟೋಬರ್ 2018, 12:10 IST
ಅಕ್ಷರ ಗಾತ್ರ

ಯಾದಗಿರಿ: ಒಂದು ತಿಂಗಳಿಂದ ಬಿಸಿಲಿನ ಧಗೆಯಿಂದ ತತ್ತರಿಸಿದ್ದ ಜಿಲ್ಲೆಯ ಜನರಿಗೆ ಮಂಗಳವಾರ ರಾತ್ರಿ ಸುರಿದ ಮಳೆ ತಂಪೆರೆಯಿತು. ಹುಣಸಗಿ, ಗುರುಮಠಕಲ್, ವಡಗೇರಾ, ಶಹಾಪುರ ತಾಲ್ಲೂಕಿನ ಹಲವೆಡೆ ಸಾಧಾರಣ ಮಳೆಯಾಗಿದೆ. ಯಾದಗಿರಿ ನಗರದಲ್ಲಿ ಮಧ್ಯರಾತ್ರಿ ಆರಂಭಗೊಂಡ ಮಳೆ ನಸುಕಿನವರೆಗೂ ಸುರಿದು ನಾಗರಿಕರನ್ನು ನಿರಾಳವಾಗಿಸಿದೆ.

ಗಣೇಶ ಚತುರ್ಥಿ ಮುಗಿದ ಮೇಲೆ ಜಿಲ್ಲೆಯಲ್ಲಿ ಮಳೆ ಬಿಡುವು ನೀಡಿತ್ತು. ಇದರಿಂದ ಸಂಪೂರ್ಣ ಬೇಸಿಗೆಯ ವಾತಾವರಣ ಸೃಷ್ಟಿಯಾಗಿತ್ತು. ತೇವಾಂಶದ ಕೊರತೆಯಿಂದ ಈಗಾಗಲೇ ಬಿತ್ತನೆ ಮಾಡಿದ್ದ ಹತ್ತಿ, ತೊಗರಿ ಬೆಳೆಗಳು ಒಣಗಲು ಪ್ರಾರಂಭಿಸಿದ್ದವು. ಹಿಂಗಾರು ಹಂಗಾಮಿನ ಬಿತ್ತನೆಗೂ ಮಳೆ ಕೊರತೆ ಅಡ್ಡಿಯಾಗಿತ್ತು. ಮಂಗಳವಾರ ಸುರಿದ ಮಳೆ ಬೆಳೆಗಳಿಗೆ ಮರುಜೀವ ನೀಡಿದೆ. ಇದರಿಂದಾಗಿ ಹಿಂಗಾರು ಬಿತ್ತನೆಗೆ ರೈತರು ಸಿದ್ಧತೆ ನಡೆಸಿದ್ದಾರೆ.

ಹಿಂಗಾರು; ಬಿತ್ತನೆ ಕುಂಠಿತ:
ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 2.65 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ನಿಗದಿಪಡಿಸಲಾಗಿತ್ತು. ಆದರೆ, ಮಳೆ ಕೊರತೆಯಿಂದಾಗಿ ಶೇ 2.5 ಲಕ್ಷ ಹೆಕ್ಟೇರ್ ಮಾತ್ರ ಬಿತ್ತನೆಯಾಗಿತ್ತು. ಹಿಂಗಾರು ಹಂಗಾಮು ಬಿತ್ತನೆಗಾಗಿ ಭೂಮಿ ಹದಗೊಳಿಸಿ ಸಿದ್ಧತೆ ಮಾಡಿಕೊಂಡಿದ್ದ ರೈತರು ಮಳೆ ಇಲ್ಲದೆ ನಿತ್ಯ ಆಕಾಶ ದಿಟ್ಟಿಸುತ್ತಿದ್ದರು. ಮಂಗಳವಾರ ಸುರಿದ ಮಳೆ ನೇಗಿಲಯೋಗಿಗಳಲ್ಲಿ ಭರವಸೆ ಮೂಡಿಸಿದೆ.

ಹೋದ ವರ್ಷ ಹಿಂಗಾರು– ಮುಂಗಾರು ಮಳೆ ಫಲಪ್ರದವಾಗಿದ್ದವು. 592 ಎಂಎಂ ವಾಡಿಕೆಗಿಂತ ಹೆಚ್ಚು ಮಳೆಯಾಗಿತ್ತು. ಕೆರೆ–ಕಟ್ಟೆಗಳು ತುಂಬಿ ಕೋಡಿ ಒಡೆದಿದ್ದವು. ಆದರೆ, ಈ ಸಲ ಇಲ್ಲಿಯವರೆಗೆ ಕೃಷಿ ಇಲಾಖೆ ಮಾಹಿತಿ ಪ್ರಕಾರ ಕೇವಲ 300 ಎಂಎಂ ಮಾತ್ರ ಮಳೆ ಬಿದ್ದಿದೆ. ಜಿಲ್ಲೆಯಲ್ಲಿ ಶೇ 49ರಷ್ಟು ಮಳೆ ಕೊರತೆ ಉಂಟಾಗಿದೆ.

‘ಮುಂಗಾರಿನಲ್ಲಿ ಆಗಿರುವ ನಷ್ಟವನ್ನು ರೈತರು ಹಿಂಗಾರು ಬೆಳೆಗಳಲ್ಲಿ ಪಡೆದುಕೊಳ್ಳುವ ಯೋಚನೆಯಲ್ಲಿ ಇದ್ದಾರೆ. ಈ ಬಾರಿ 1.65 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹಿಂಗಾರು ಬಿತ್ತನೆ ಗುರಿ ಇದೆ. ಈಗಾಗಲೇ 29 ಸಾವಿರ ಹೆಕ್ಟೇರ್ ಭೂಮಿಯಲ್ಲಿ ರೈತರು ಶೇಂಗಾ, ಸೂರ್ಯಪಾನ, ಬಿಳಿಜೋಳ ಬಿತ್ತಿದ್ದಾರೆ’ ಎಂದು ಜಂಟಿ ಕೃಷಿ ನಿರ್ದೇಶಕಿ ಆರ್.ದೇವಿಕಾ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT