ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮೇಳನದಲ್ಲಿ ರೈತರಿಗೆ ಸಿಗದ ಪ್ರಾತಿನಿಧ್ಯ

ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ ಅಸಮಾಧಾನ
Last Updated 24 ಡಿಸೆಂಬರ್ 2018, 15:42 IST
ಅಕ್ಷರ ಗಾತ್ರ

ಯಾದಗಿರಿ: ‘ನಾಲ್ಕನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿನ ಗೋಷ್ಠಿಗಳಲ್ಲಿ ರೈತರ ಸಮಸ್ಯೆ–ಸವಾಲುಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಸಮ್ಮೇಳನದ ಅಧ್ಯಕ್ಷರು ರೈತರನ್ನು ಸಂಪೂರ್ಣ ಕಡೆಗಣಿಸಿದ್ದಾರೆ’ ಎಂದು ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವಂತೆ ಜಿಲ್ಲೆಯ ರೈತರಿಗೆ ಆಹ್ವಾನ ನೀಡಿಲ್ಲ. ಆದರೂ, ಸಮಾವೇಶದಲ್ಲಿ ರೈತಗೀತೆಯನ್ನು ಹಾಡಿಸಲಾಗಿದೆ. ರೈತರಿಗೆ ಗೌರ ನೀಡದವರು ರೈತಗೀತೆ ಹಾಡಿಸುವುದರಿಂದ ರೈತರಿಗೆ ಯಾವ ಪ್ರಯೋಜನವೂ ಇಲ್ಲ. ರೈತರಿಗೆ ಸಮ್ಮೇಳನದಲ್ಲಿ ಸ್ಥಳ ಇಲ್ಲದ ಮೇಲೆ ರೈತಗೀತೆ ಏಕೆ ಹಾಡಿಸಬೇಕು? ಎಂದು ಸತ್ಯಂಪೇಟೆ ಪ್ರಶ್ನಿಸಿದ್ದಾರೆ.

‘ಜಿಲ್ಲೆಯಲ್ಲಿ ಬರ ಕಾಲುಚಾಚಿಕೊಂಡಿದೆ. ಒಂದೂ ಬೆಳೆ ರೈತರ ಕೈಸೇರಿಲ್ಲ. ರಾಜ್ಯದಲ್ಲಿ ಯಥೇಚ್ಚು ರೈತರ ಆತ್ಮಹತ್ಯೆಗಳು ಜಿಲ್ಲೆಯಲ್ಲಿ ನಡೆದಿವೆ. ಕುಡಿಯಲು ಹನಿ ನೀರಿನ ಹಾಹಾಕಾರ ಇದೆ. ಇಂಥಾ ಜ್ವಲಂತ ಸಮಸ್ಯೆಗಳು ಜಿಲ್ಲೆಯನ್ನು ಕಾಡುತ್ತಿದ್ದರೂ, ಸಮ್ಮೇಳನದ ಚಿಂತನಾ ಮತ್ತು ಚರ್ಚಾಗೋಷ್ಠಿಯಲ್ಲಿ ರೈತರ ಸಮಸ್ಯೆಗಳ ಬಗ್ಗೆ ಆದ್ಯತೆ ನೀಡಿಲ್ಲ. ರೈತರನ್ನು ಸಮ್ಮೇಳನದ ಪದಾಧಿಕಾರಿಗಳು ಸಂಪೂರ್ಣ ಮರೆತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸಾಹಿತಿಗಳು ಜೀವಪರವಾಗಿರಬೇಕು ಎಂದರೆ ಮೊದಲು ಒಕ್ಕಲಿಗರ ಏಳು–ಬೀಳುಗಳ ಬಗ್ಗೆ ಅರಿವಿರಬೇಕು. ಆದರೆ, ಬೇಸಾಯಗಾರರ ಬದುಕನ್ನೇ ಈಗಿನ ಸಮ್ಮೇಳನ ಕಡೆಗಣಿಸಿದೆ. ಆಡಂಬರದ ಮೆರವಣಿಗೆ ಹಾಗೂ ಹಾರ–ತುರಾಯಿಗಳಿಂದ ಸಮಾಜ ಸುಧಾರಣೆ, ಅಭಿವೃದ್ಧಿ ಸಾಧ್ಯವಿಲ್ಲ ಎಂಬುದನ್ನು ಸಾಹಿತಿಗಳು ಮನಗಾಣಬೇಕು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT