ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಚಂದ್ರಪ್ಪ ಕಟ್ಟಿಮನಿಗೆ ಒಲಿದ ಬಯಲಾಟ ಅಕಾಡೆಮಿ ಪ್ರಶಸ್ತಿ

Last Updated 17 ಸೆಪ್ಟೆಂಬರ್ 2022, 5:02 IST
ಅಕ್ಷರ ಗಾತ್ರ

ಸುರಪುರ: ‘ಎಲ ಹೀ ದೃಷ್ಟ, ತಡಮಾಡದೆ ಯುದ್ಧಕ್ಕೆ ನಿಲ್ಲು ಭಂಡ, ಹಾರಿಸುವೆನು ನಿನ್ನ ರುಂಡ’ ಇಂತಹ ರೋಷಾವೇಶದ ಮಾತುಗಳಿಂದ ಪ್ರೇಕ್ಷಕರನ್ನು ಸೆಳೆಯುತ್ತಿದ್ದ ತಾಲ್ಲೂಕಿನ ಕರಡಕಲ್ ಗ್ರಾಮದ ರಾಮಚಂದ್ರಪ್ಪ ಕಟ್ಟಿಮನಿ ಅವರಿಗೆ ಪ್ರಸ್ತುತ ಸಾಲಿನ ಕರ್ನಾಟಕ ಬಯಲಾಟ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಲಭಿಸಿದೆ.

ತಾತಾ ಯಂಕಪ್ಪ, ತಂದೆ ಗೋಪಣ್ಣ ಇಬ್ಬರೂ ದೊಡ್ಡಾಟ ಕಲಾವಿದರು. ಗೋಪಣ್ಣ ದೊಡ್ಡಾಟ ಮಾಸ್ತರು. 8 ವರ್ಷದ ಮಗ ರಾಮಚಂದ್ರಪ್ಪ ಅವರನ್ನು ದೊಡ್ಡಾಟಕ್ಕೆ ಸೇರಿಸಿಯೇ ಬಿಟ್ಟರು.

ಬಾಲಗೋಪಾಲ, ಗಣಪತಿ ಪಾತ್ರಗಳನ್ನು ಅದ್ಭುತವಾಗಿ ನಿರ್ವಹಿಸಿದ ರಾಮಚಂದ್ರಪ್ಪ ಹಿಂತಿರುಗಿ ನೋಡಲಿಲ್ಲ.

75ರ ಹರೆಯದ ರಾಮಚಂದ್ರಪ್ಪ, ಕೃಷ್ಣಾರ್ಜುನರ ಕಾಳಗದಲ್ಲಿ ಸುಭದ್ರೆಯ ಪಾತ್ರ, ಐರಾವಣ ಮೈರಾವಣದಲ್ಲಿ ಮೈರಾವಣ ಪಾತ್ರ, ಕುರುಕ್ಷೇತ್ರದಲ್ಲಿ ದ್ರೌಪದಿ, ಕೃಷ್ಣ ಕಪಟದಲ್ಲಿ ದುಯೋರ್ಧನ, ಶುಂಭ ನಿಶುಂಭ ಮರ್ಧನದಲ್ಲಿ ದೇವಿ ಇತರ ಪಾತ್ರಗಳನ್ನು ಅನನ್ಯವಾಗಿ ನಿಭಾಯಿಸಿದ್ದಾರೆ.

ಹಾವ ಭಾವ, ಕಂಚಿನ ಕಂಠ, ಸ್ತ್ರೀ, ಪುರುಷ ಪಾತ್ರಗಳೆರಡರಲ್ಲಿನಅಭಿನಯ, ಪರಕಾಯ ಪ್ರವೇಶ ಮಾಡುತ್ತಿದ್ದ ರಾಮಚಂದ್ರಪ್ಪ ಎರಡು ಮೂರು ದಿವಸಗಳವರೆಗೂ ಪಾತ್ರದ ಗುಂಗಿನಿಂದ ಹೊರಬರುತ್ತಿರಲಿಲ್ಲ ಎನ್ನುತ್ತಾರೆ ಕಲಾವಿದ ಭೀಮಣ್ಣ ಚಾಮನೂರ.
ಕೃಷಿಕರಾದ ಅವರು, ಕಿರಾಣಿ ಅಂಗಡಿಯನ್ನು ಇಟ್ಟುಕೊಂಡಿದ್ದಾರೆ. ಇಡೀ ಜೀವನವನ್ನು ದೊಡ್ಡಾಟದಲ್ಲೆ ಕಳೆದಿದ್ದಾರೆ.

ಅವರಿಗೆ ಪ್ರಶಸ್ತಿ ದೊರಕಿದ ಬಗ್ಗೆ ಗೊತ್ತಿರಲಿಲ್ಲ. ‘ಪ್ರಜಾವಾಣಿ’ಯೇ ಮೊದಲು ಈ ವಿಷಯ ತಿಳಿಸಿದಾಗ ಅವರಿಗೆ ಆದ ಸಂತಸಕ್ಕೆ ಪಾರವೇ ಇರಲಿಲ್ಲ.

ಆಧುನಿಕತೆ ಭರಾಟೆಯಲ್ಲಿ ದೊಡ್ಡಾಟ ಕಣ್ಮರೆಯಾಗಿವೆ. ರಾಮಚಂದ್ರಪ್ಪ 15 ವರ್ಷದ ಹಿಂದೆ ಮಾಡಿದ್ದ ಶುಂಭ ನಿಶುಂಭರ ಮರ್ಧನದ ದೇವಿ ಪಾತ್ರವೇ ಅವರ ಕೊನೆಯ ದೊಡ್ಡಾಟ. ಪತ್ನಿ, ಪುತ್ರ, ಪುತ್ರಿ, ಇಬ್ಬರು ಮೊಮ್ಮಕ್ಕಳ ಸುಖಿ ಕುಟುಂಬದಲ್ಲಿ ಇರುವ ಅವರು ಇನ್ನೂ ದೊಡ್ಡಾಟದ ಛಾಯೆಯಿಂದ ಹೊರಬಂದಿಲ್ಲ. ಅವರಿಗೆ ಪ್ರಶಸ್ತಿ ದೊರಕಿರುವುದು ದೊಡ್ಡಾಟ ಪ್ರೇಮಿಗಳಿಗೆ ಸಂತೋಷ
ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT