ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷದಲ್ಲಿ ಸಾವಿರ ಅಪಘಾತಗಳು!

ಯಾದಗಿರಿ– ಸುರಪುರ– ಶಹಾಪುರ ನಗರಗಳಲ್ಲಿ ವಿಸ್ತರಣೆ ಆಗದ ರಸ್ತೆಗಳು
Last Updated 15 ಅಕ್ಟೋಬರ್ 2018, 19:30 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಯಾದಗಿರಿ, ಶಹಾಪುರ, ಸುರಪುರ ನಗರ ಪ್ರದೇಶಗಳಲ್ಲಿ ರಸ್ತೆ ನಿಯಮಗಳ ಪಾಲನೆ ಹಾಗೂ ರಸ್ತೆ ವಿಸ್ತರಣೆಯಾಗದ ಪರಿಣಾಮ ಪ್ರಸಕ್ತ ವರ್ಷದಲ್ಲಿ ಅಪಘಾತ ಪ್ರಕರಣಗಳ ಸಂಖ್ಯೆ ಸಾವಿರ ಗಡಿದಾಟುವ ಮೂಲಕ ಹುಬ್ಬೇರುವಂತೆ ಮಾಡಿದೆ.

ದ್ವಿಚಕ್ರ ಹಾಗೂ ಆಟೊಗಳ ಮಧ್ಯೆ ಹೆಚ್ಚಾಗಿ ಅಪಘಾತ ಪ್ರಕರಣಗಳು ನಡೆದಿವೆ. ಪ್ರಸಕ್ತ ವರ್ಷದಲ್ಲಿ ಈ ಮೂರು ನಗರ ಪ್ರದೇಶಗಳಲ್ಲಿ ಏಪ್ರಿಲ್ ತಿಂಗಳಿಂದ ಅಕ್ಟೋಬರ್‌ 15ರವರೆಗೆ ಬರೋಬ್ಬರಿ 1,006 ಅಪಘಾತ ಪ್ರಕರಣಗಳು ಘಟಿಸಿವೆ. ಸಂಭವಿಸಿರುವ 800 ಲಘು ಅಪಘಾತ ಪ್ರಕರಣಗಳಲ್ಲಿ 47ಕ್ಕೂ ಹೆಚ್ಚು ಜನರು ಕೈ, ಕಾಲು ಮುರಿದುಕೊಂಡಿದ್ದಾರೆ. 340 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಲಘು ಅಪಘಾತಗಳಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಆದರೆ, ನಗರಗಳ ಮಧ್ಯೆ ಹಾದುಹೋಗಿರುವ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಘಟಿಸಿರುವ ಅಪಘಾತ ಪ್ರಕರಣಗಳು ಒಟ್ಟು 190. ಅವುಗಳಲ್ಲಿ 26 ಮಂದಿ ಅಸುನೀಗಿದ್ದಾರೆ. ಅವರಲ್ಲಿ 6 ಮಂದಿ ಮಕ್ಕಳು ಸೇರಿದ್ದಾರೆ. ಸುರಪುರ ನಗರದಲ್ಲಿ 367, ಯಾದಗಿರಿಯಲ್ಲಿ 433 ಹಾಗೂ ಶಹಾಪುರದಲ್ಲಿ 206 ಅಪಘಾತ ಪ್ರಕರಣಗಳು ಸಂಭವಿಸಿವೆ.

ಜಿಲ್ಲೆಯ ನಗರ ಪ್ರದೇಶಗಳಲ್ಲಿ ಇಷ್ಟೊಂದು ಅಪಘಾತ ಪ್ರಕರಣಗಳು ಘಟಿಸಲು ಕಿಷ್ಕಿಂಧೆ ರಸ್ತೆಗಳು, ಹೆಚ್ಚುತ್ತಿರುವ ಜನಸಂಚಾರ ಪ್ರಮುಖ ಕಾರಣವಾಗಿದೆ. ಸುರಪುರ, ಯಾದಗಿರಿ ನಗರಗಳಲ್ಲಿ ಕಿಷ್ಕಿಂಧೆ ರಸ್ತೆಗಳನ್ನು ಹೆಚ್ಚಾಗಿ ಕಾಣಬಹುದು. ಜಿಲ್ಲಾಕೇಂದ್ರವಾಗಿರುವ ಯಾದಗಿರಿ ನಗರದಲ್ಲಿ 31 ಬಡಾವಣೆಗಳು ಕಿಷ್ಕಿಂಧೆ ರಸ್ತೆಗಳನ್ನು ಹೊಂದಿವೆ. ಸ್ಟೇಷನ್‌ ಬಜಾರ್, ವಿವೇಕಾನಂದ ಬಡಾವಣೆ, ಚಕ್ರಕಟ್ಟ, ಮುಸ್ಲಿಂಪುರ, ಕನಕ ನಗರ, ಬಸವೇಶ್ವರ ನಗರಗಳಲ್ಲಿ ಕಿಷ್ಕಿಂಧೆ ರಸ್ತೆಗಳೇ ಹೆಚ್ಚಿವೆ. ಶಹಾಪುರ– ಸುರಪುರಗಳಲ್ಲಿನ ಬಡಾವಣೆ ಸಂಪರ್ಕ ರಸ್ತೆಗಳು ಅಧೋಗತಿಯಲ್ಲಿವೆ. ದ್ವಿಚಕ್ರ ವಾಹನ ಸಂಚಾರಕ್ಕೂ ಯೋಗ್ಯವಾಗಿಲ್ಲ. ಮಳೆಗಾಲದಲ್ಲಿ ಈ ರಸ್ತೆಗಳು ಭೀತಿ ಹುಟ್ಟಿಸುತ್ತವೆ. ನಗರೋತ್ಥಾನ ಅನುದಾನವನ್ನು ಸ್ಥಳೀಯ ಸಂಸ್ಥೆಗಳು ಯಾವ ಕಾಮಗಾರಿಗಳಿಗೆ ಬಳಸುತ್ತಿವೆ ಎಂಬುದೇ ತಿಳಿಯುತ್ತಿಲ್ಲ. ಜಿಲ್ಲಾಧಿಕಾರಿ ಇದನ್ನೆಲ್ಲ ಏಕೆ ಪರಾಮರ್ಶಿಸುವುದಿಲ್ಲ! ಎಂಬುದಾಗಿ ಯಾದಗಿರಿಯ ವಿವಿಧ ಬಡಾವಣೆಗಳ ನಿವಾಸಿಗಳಾದ ವೀರೇಶ್, ರಾಜ್‌ಕುಮಾರ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಕಿಷ್ಕಿಂಧೆ ರಸ್ತೆಗಳು ಒಂದೆಡೆಯಾದರೆ; ಬಿಗಿಗೊಳ್ಳದ ಸಂಚಾರ ನಿಯಮಗಳು, ರಸ್ತೆ ನಿಯಮ ಉಲ್ಲಂಘಿಸಿದವರಿಗೆ ಜರುಗದ ಕಠಿಣ ಕ್ರಮ, ಸಂಚಾರ ಪೊಲೀಸರ ನಿರ್ಲಕ್ಷ್ಯ, ಬೇಕಾಬಿಟ್ಟಿ ವಾಹನ ಚಾಲನೆ.. ನಿರಂತರ ಅಪಘಾತಗಳಿಗೆ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಿತ್ಯ ಅಪಘಾತ ಪ್ರಕರಣಗಳು ಘಟಿಸುತ್ತಿವೆ. ಜಿಲ್ಲಾಕೇಂದ್ರದಲ್ಲಿ ಹೆಲ್ಮೆಟ್ ಕಡ್ಡಾಯ ನಿಯಮ ಗಾಳಿಗೆ ತೂರಲಾಗಿದೆ. ಹಲ್ಮೆಟ್‌ ಧರಿಸದೇ ದ್ವಿಚಕ್ರ ವಾಹನ ಚಲಾಯಿಸುವವರ ಸಂಖ್ಯೆ ನಗರಗಳಲ್ಲಿ ಹೆಚ್ಚುತ್ತಿದೆ. ಪೊಲೀಸ್ ಇಲಾಖೆಯ ದಿವ್ಯ ನಿರ್ಲಕ್ಷ್ಯ ಇದಕ್ಕೆ ಕಾರಣ ಎಂದೇ ಟೋಕ್ರೆಕೋಲಿ ಸಮಾಜದ ಜಿಲ್ಲಾ ಅಧ್ಯಕ್ಷ ಉಮೇಶ್‌ ಮುದ್ನಾಳ ಆರೋಪಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT