ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ಬಿಲ್‌ ಬಿಳಂಬ; ಎಂಜಿನಿಯರ್‌ಗಳಿಗೆ ತರಾಟೆ

ಭೌತಿಕ ಸಾಧನೆಗೆ ತಕ್ಕಂತೆ ಸಾಗದ ಆರ್ಥಿಕ ಪ್ರಗತಿ; ಎಚ್‌ಕೆಆರ್‌ಡಿಬಿ ಕಾರ್ಯದರ್ಶಿ ಸುಭೋದ ಯಾದವ್ ಎಚ್ಚರಿಕೆ
Last Updated 23 ಜನವರಿ 2019, 15:35 IST
ಅಕ್ಷರ ಗಾತ್ರ

ಯಾದಗಿರಿ: ‘ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳ ನಿರ್ಲಕ್ಷ್ಯದಿಂದಾಗಿ ಮೈಕ್ರೋ-ಮ್ಯಾಕ್ರೋ ಯೋಜನೆಗೆ ಹಿನ್ನಡೆ ಆಗುತ್ತಿದೆ’ ಎಂದು ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಸುಭೋದ್‌ ಯಾದವ್ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲೆಯ ಎಚ್‌ಕೆಆರ್‌ಡಿಬಿ ಮೈಕ್ರೋ-ಮ್ಯಾಕ್ರೋ ಕಾಮಗಾರಿಗಳ ಕುರಿತು ನಡೆದ ಇಲಾಖಾವಾರು ಪ್ರಗತಿ ಪರಿಶೀಲಿಸಿದರು.

‘ಎಚ್‌ಕೆಆರ್‌ಡಿಬಿಯ ಮೈಕ್ರೋ-ಮ್ಯಾಕ್ರೋ ಯೋಜನೆ ಅಡಿ ಜಿಲ್ಲೆಯಲ್ಲಿ ಪ್ರತಿ ತಿಂಗಳು ₹12 ಕೋಟಿಯಷ್ಟು ಅನುದಾನವನ್ನು ಅಭಿವೃದ್ಧಿಗೆ ವೆಚ್ಚ ಮಾಡಬೇಕು ಎಂಬುದಾಗಿ ಮಂಡಳಿಯ ನಿರ್ದೇಶನ ಇದ್ದರೂ, ಪ್ರಮುಖವಾಗಿ ಲೋಕೋಪಯೋಗಿ ಇಲಾಖೆ ಕೇವಲ ₹42 ಲಕ್ಷ ಮಾತ್ರ ವೆಚ್ಚ ಮಾಡಿದೆ’ ಎಂದರು.

ಲೋಕೋಪಯೋಗಿ ಇಲಾಖೆಯ 2018–19ನೇ ಸಾಲಿನಲ್ಲಿ ಒಟ್ಟು 236 ಕಾಮಗಾರಿಗಳಲ್ಲಿ 141 ಕಾಮಗಾರಿಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ. ಅದರಲ್ಲಿ 76 ಕಾಮಗಾರಿಗಳ ಟೆಂಡರ್‌ಗಳಿಗೆ ಅನುಮತಿ ನೀಡಿದರೂ 42 ಕಾಮಗಾರಿಗಳು ಮಾತ್ರ ಆರಂಭವಾಗಿವೆ. ಉಳಿದ 34 ಕಾಮಗಾರಿಗಳು ಏಕೆ ಆರಂಭಿಸಿಲ್ಲ? ಎಂದು ಪ್ರಶ್ನಿಸಿದರು.

‘ಟೆಂಡರ್ ಪಡೆದ ಗುತ್ತಿಗೆದಾರರು ಹಣ ವೆಚ್ಚ ಮಾಡಿ ಕಾಮಗಾರಿ ಪೂರ್ಣಗೊಳಿಸುತ್ತಾರೆ. ಆದರೆ, ಅವರಿಗೆ ಬಿಲ್‌ ಪಾವತಿ ಆಗದೇ ಇದ್ದರೆ ಹೇಗೆ? ಗುತ್ತಿಗೆದಾರರು ಹಂತಹಂತವಾಗಿ ಪೂರ್ಣಗೊಳಿಸಿದ ಕಾಮಗಾರಿಗೆ ಹಂತಹಂತವಾಗಿಯೇ ಬಿಲ್‌ ಪಡೆದು ಹಣ ಪಾವತಿಸಬೇಕು ಎಂಬುದಾಗಿ ಮಂಡಳಿಯ ಟೆಂಡರ್‌ ನಿಯಮ ಸೂಚಿಸುತ್ತದೆ. ಆದರೆ, ನೀವು ಕೊಟ್ಟ ಭೌತಿಕ ಸಾಧನೆಗೆ ತಕ್ಕಂತೆ ಆರ್ಥಿಕ ಸಾಧನೆ ಆಗಿಲ್ಲ. ಇದರಿಂದಾಗಿ ಕಾಮಗಾರಿಗಳ ವೇಗ ಕೂಡ ಕುಸಿದಿದೆ’ ಎಂದು ಸುಭೋದ್ ಯಾದವ್‌ ಲೋಕೋಪಯೋಗಿ ಇಲಾಖೆ ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್ ಚನ್ನಬಸಪ್ಪ ಮೆಕಾಲೆ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಗುರುಮಠಕಲ್‌ ತಾಲ್ಲೂಕಿನಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಿಲ್ಲ. ಹಲವು ಕಾಮಗಾರಿಗಳನ್ನು ಆರಂಭಿಸಿಲ್ಲ. ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಪೂರ್ಣ ಬಿಲ್‌ ಪಾವತಿಯಾಗದ ಸಂಗತಿ ತಿಳಿದು ಯಾದವ್ ಎಂಜಿನಿಯರ್‌ ಅವರ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ಕಾಮಗಾರಿಗಳ ಭೌತಿಕ ಪ್ರಗತಿ ಸಾಧಿಸಿರುವುದಕ್ಕೆ ಅನುಗುಣವಾಗಿ ಸಂಬಂಧಪಟ್ಟ ಇಲಾಖೆಯವರು ಎಚ್‌ಕೆಆರ್‌ಡಿಬಿಗೆ ಬಿಲ್ ಕಳುಹಿಸುತ್ತಿಲ್ಲ. ಇದರಿಂದ ಗುತ್ತಿಗೆದಾರರು ಕೂಡ ಕಾಮಗಾರಿಗಳನ್ನು ವಿಳಂಬ ಮಾಡುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಂಡಳಿಯಿಂದ ಹೈದರಾಬಾದ್ ಕರ್ನಾಟಕ ವ್ಯಾಪ್ತಿಯ ಮಂಡಳಿಗಳಿಗೆ ಪ್ರತಿ ತಿಂಗಳು ಒಟ್ಟಾರೆ ಖರ್ಚಾಗಬೇಕಿದ್ದ ₹100 ಕೋಟಿಗೂ ಅಧಿಕ ಹಣ ಖರ್ಚಾಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ಅವಸ್ಥೆ ಪಂಚಾಯತ್‌ರಾಜ್‌ ಇಲಾಖೆಯಲ್ಲೂ ಇತ್ತು. ಬಹುತೇಕ ಕಾಮಗಾರಿಗಳಿಗೆ ಬಿಲ್‌ ಪಾವತಿಯಾಗದಿರುವುದು ಕಂಡುಬಂತು. 2018-19ನೇ ಸಾಲಿನ 1–5 ಕಾಮಗಾರಿಗಳಲ್ಲಿ 58 ಟೆಂಡರ್ ಕರೆಯಲಾಗಿದೆ. ಜ.25ರಂದು ಟೆಂಡರ್ ಕರೆಯಲಾಗುವುದು ಎಂದು ವಿಭಾಗದ ತಾಂತ್ರಿಕ ಸಹಾಯಕ ಮುಕ್ತಾರ್ ಅವರು ಮಾಹಿತಿ ನೀಡಿದರು. ಆಗ ಮಂಡಳಿಯ ಕಾರ್ಯದರ್ಶಿ ಮಾತನಾಡಿ,‘ಉಳಿದ 47 ಕಾಮಗಾರಿಗಳಿಗೆ ಅಂದಾಜು ಪತ್ರಿಕೆ ತಯಾರಿಸದ ಕಾರಣ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಕಾಮಗಾರಿ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ, ಅಂದಾಜು ಪತ್ರಿಕೆ ತಯಾರಿಸುವಂತೆ ನಿರ್ದೇಶಿಸಿದರು.

ಕೆಲ ಇಲಾಖೆಗಳಿಗೆ ವಹಿಸಿದ ₹10 ಲಕ್ಷ ಅನುದಾನದ ಕಾಮಗಾರಿಗಳು ಕೂಡ ಬಾಕಿ ಉಳಿದಿವೆ. ಒಂದು ಅಂಗನವಾಡಿ ಕಟ್ಟಡ ನಿರ್ಮಿಸಲು 5-6 ವರ್ಷ ತೆಗೆದುಕೊಂಡರೆ ಪ್ರಗತಿ ನಿರೀಕ್ಷೆ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ ಅವರು, ಕಾಮಗಾರಿಗಳ ಭೌತಿಕ ಪ್ರಗತಿ ಬಗ್ಗೆ ಪರಿಶೀಲಿಸುವಂತೆ ಎಚ್‌ಕೆಆರ್‌ಡಿಬಿ ಶಾಖೆಯ ಪ್ರಾಜೆಕ್ಟ್ ಅಧಿಕಾರಿ ವಿಶ್ವನಾಥ ಚಳಗೇರಿ ಅವರಿಗೆ ಸೂಚಿಸಿದರು.

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ತೆಗೆದುಕೊಂಡ 31ಕಾಮಗಾರಿಗಳಲ್ಲಿ 20 ಪೂರ್ಣಗೊಂಡಿವೆ. ಉಳಿದ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಮಾರ್ಚ್ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ವರದಿ ಒಪ್ಪಿಸಿದರು.

ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಎಚ್‌ಕೆಆರ್‌ಡಿಬಿ ಜಂಟಿ ನಿರ್ದೇಶಕ ಬಸವರಾಜ, ಉಪ ವಿಭಾಗಾಧಿಕಾರಿ ಡಾ.ಬಿ.ಎಸ್.ಮಂಜುನಾಥ ಸ್ವಾಮಿ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಗುರುನಾಥ ಹಾಗೂ ಜಿಲ್ಲಾಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT