ಭಾನುವಾರ, ಫೆಬ್ರವರಿ 28, 2021
31 °C
ಮುಖ್ಯ ಕಾಲುವೆ ದುರಸ್ತಿ ಕಾರ್ಯ

ಭರದಿಂದ ಸಾಗಿದ ಆರ್.ಸಿ.ಸಿ ಲೈನಿಂಗ್  

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸಗಿ ತಾಲ್ಲೂಕಿನ ಅಗ್ನಿ ಗ್ರಾಮದ ಬಳಿ ಕುಸಿತವಾಗಿದ್ದ ಮುಖ್ಯ ಕಾಲುವೆ ಆರ್.ಸಿಸಿ ಲೈನಿಂಗ್ ಕಾರ್ಯ ಭರದಿಂದ ನಡೆದಿರುವದು

ಹುಣಸಗಿ: ಮೂರು ತಿಂಗಳ ಹಿಂದೆ ತಾಲ್ಲೂಕಿನ ಅಗ್ನಿ ಬಳಿ ಕುಸಿತ ಕಂಡ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಯ ದುರಸ್ತಿ ಕಾರ್ಯ ಮುಕ್ತಾಯದ ಹಂತದಲ್ಲಿದೆ.

ಕಾಲುವೆ ಕುಸಿತದ ಭಾಗದಲ್ಲಿನ ಮಣ್ಣನ್ನು ತೆಗೆದು, ಬಳಿಕ ಬೆಡ್‌ನಿಂದ ತಳಭಾಗದಲ್ಲಿ 1.5 ಮೀಟರ್‌ನಷ್ಟು ಮಣ್ಣು ತೆರವುಗೊಳಿಸಿ ಅಲ್ಲಿಂದಲೇ ಮುರಮ್ ತುಂಬಿಕೊಂಡು ರೂಲಿಂಗ್ ಮತ್ತು ಟ್ರಿಮ್ಮಿಂಗ್ ಮಾಡಲಾಗಿದೆ. ‘ಒಂದು ತಿಂಗಳಿನಿಂದ ಎಡೆಬಿಡದೇ ನಿರಂತರ ಕೆಲಸ ನಿರ್ವಹಿಸಿದ್ದರಿಂದ ಶೀಘ್ರವೇ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದೆ’ ಎಂದು ಪ್ರಭಾರಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರವಿಕುಮಾರ ತಿಳಿಸಿದರು.

‘ಅಂದಾಜು 120 ಮೀಟರ್‌ನಷ್ಟು ಉದ್ದ ಆರ್‌ಸಿಸಿ ಲೈನಿಂಗ್ ಹಾಕಲು ಅಗತ್ಯ ವ್ಯವಸ್ಥೆ ಮಾಡಲಾಗಿದ್ದು, ನಾಲ್ಕು ದಿನಗಳಲ್ಲಿ ಸಂಪೂರ್ಣ ದುರಸ್ತಿ ಕಾರ್ಯ ಪೂರ್ಣಗೊಳ್ಳಲಿದೆ’ ಎಂದು ವಿವರಿಸಿದರು.  ಈಗಾಗಲೇ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ನಾಟಿಗಾಗಿ ರೈತರು ಅಣಿಯಾಗಿದ್ದು, ಜಮೀನುಗಳಲ್ಲಿ ಎರಡು ಬಾರಿ ಟಿಲ್ಲರ್ ಹೊಡೆದುಕೊಂಡು ಹೊಲ, ಗದ್ದೆಗಳನ್ನು ಹದಗೊಳಿಸುವುದರಲ್ಲಿ ತೊಡಗಿಕೊಂಡಿದ್ದಾರೆ. ಜೂನ್ ಮೂರನೇ ವಾರದಲ್ಲಿ ಭತ್ತದ ಸಸಿಗಳನ್ನು ಹಾಕಿಕೊಂಡಿದ್ದು, ಯಾವುದೇ ವೇಳೆ ಕಾಲುವೆಗೆ ನೀರು ಹರಿಸಿದರೂ ಕೂಡ ನಾಟಿ ಮಾಡಿಕೊಳ್ಳಲು ತಯಾರಿ ನಡೆಸಿದ್ದಾರೆ.

ಸಭೆಗೆ ಒತ್ತಾಯ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯಾಗದಿದ್ದರೂ ಕೂಡ ಮಹಾರಾಷ್ಟ್ರದ ಕೃಷ್ಣಾ ಮತ್ತು ಕೊಯ್ನಾ ನದಿ ಪಾತ್ರದಲ್ಲಿ ಅಪಾರ ಪ್ರಮಾಣದಲ್ಲಿ ಮಳೆಯಾಗಿದೆ. ಇದರಿಂದ ಕೃಷ್ಣಾ ನದಿಯಿಂದ ಆಲಮಟ್ಟಿ ಲಾಲ್‍ ಬಹದ್ದೂರ ಶಾಸ್ತ್ರಿ ಜಲಾಶಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

‘ಒಂದು ವಾರದಿಂದ ಹರಿವು ಹೆಚ್ಚಾಗಿದೆ. ಸದ್ಯ ಅಂದಾಜು 60 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಿದೆ. ಆದ್ದರಿಂದ ಜುಲೈ ಮೂರನೇ ವಾರದಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ರೈತರಿಗೆ ಅಗತ್ಯ ನೀರು ಹರಿಸಲು ಅಧಿಕಾರಿಗಳು ಮುಂದಾಗಬೇಕು’ ಎಂದು ರಾಜ್ಯ ರೈತ ಸಂಘದ ಮುಖಂಡ ಮಲ್ಲಿಕಾರ್ಜುನ ಸತ್ಯಂಪೇಟೆ ಒತ್ತಾಯಿಸಿದ್ದಾರೆ.

‘ಈಗಾಗಲೇ ಮೃಗಶೀರಾ ಮಳೆಯಾಗಿದ್ದರಿಂದ ರೈತರು ತೊಗರಿ ಬಿತ್ತನೆ ಮಾಡಿದ್ದಾರೆ. ಆದರೆ ಮತ್ತೆ ಮಳೆಯಾಗದೇ ಮೋಡಕವಿದ ವಾತಾವರಣವಿದ್ದು, ಗಾಳಿ ಬೀಸುತ್ತಿದೆ. ಇದರಿಂದಾಗಿ ಬಿತ್ತನೆ ಮಾಡಿದ್ದ ಸಸಿಗಳು ಬಾಡುತ್ತಿದೆ. ಆದ್ದರಿಂದ ಶೀಘ್ರದಲ್ಲೇ ಐಸಿಸಿ ಸಭೆ ನಡೆಸಬೇಕು ಎಂದು ಮುಖಂಡರದ ಅಯ್ಯಣ್ಣ ಹಾಲಬಾವಿ ಮತ್ತು ಮಹಾದೇವಿ ಬೇನಾಳಮಠ ಆಗ್ರಹಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು