ಹುಣಸಗಿ: ಹಲವು ದಶಕಗಳಿಂದ ನನೆಗುದಿಗೆ ಬಿದ್ದಿರುವ ಆಲಮಟ್ಟಿ–ಹುಣಸಗಿ–ಯಾದಗಿರಿ ರೈಲು ಮಾರ್ಗ ನಿರ್ಮಾಣ ಕಾಮಗಾರಿಗೆ ವೇಗ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಆಗ್ರಹಿಸಿ ರಾಯಚೂರು ಸಂಸದ ಜಿ.ಕುಮಾರ ನಾಯಕ ಅವರಿಗೆ ಹುಣಸಗಿ ತಾಲ್ಲೂಕು ರೈಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್ ಮಾತನಾಡಿ,‘ಈ ಕುರಿತು ಸಂಬಂಧಿಸಿದ ಸಚಿವರ ಜೊತೆ ಚರ್ಚಿಸಬೇಕು’ ಎಂದು ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶರಣಗೌಡ ಪಾಟೀಲ ಮಾತನಾಡಿ,‘ಬ್ರಿಟಿಷರ ಅವಧಿಯಲ್ಲಿಯೂ ಯಾದಗಿರಿ–ಆಲಮಟ್ಟಿ ರೈಲ್ವೆ ಮಾರ್ಗದ ನೀಲನಕ್ಷೆ ಸಿದ್ಧಪಡಿಸಲಾಗಿತ್ತು. ಬಳಿಕ ಸರ್ವೆ ಮಾಡಿ ಕಾಮಗಾರಿ ಆರಂಭಿಸಲಾಗಿತ್ತು. ಬಳಿಕ ಇಚ್ಛಾಶಕ್ತಿಯ ಕೊರತೆಯಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಕೂಡಲೇ ಈ ಕಾಮಗಾರಿಗೆ ಮತ್ತೆ ಚಾಲನೆ ನೀಡಿದಲ್ಲಿ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗಲಿದೆ’ ಎಂದು ಹೇಳಿದರು.
ಸಂಸದ ಜಿ.ಕುಮಾರ ನಾಯಕ ಮಾತನಾಡಿ,‘ಸಮಗ್ರವಾಗಿ ಅಧ್ಯಯನ ನಡೆಸಿ ಸಾಧ್ಯವಾದಷ್ಟು ಬೇಗ ಸರ್ಕಾರದ ಮಟ್ಟದಲ್ಲಿ ಒತ್ತಡ ತಂದು ಕಾಮಗಾರಿಗೆ ವೇಗ ನೀಡಲು ಪ್ರಯತ್ನಿಸಲಾಗುವುದು’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಪಾಟೀಲ, ಮಹಾಂತೇಶ ಮಲಗಲದಿನ್ನಿ, ಬಾಳಾಸಾಹೇಬ ದೇಶಮುಖ, ಚನ್ನಕುಮಾರ ದಿಂಡವಾರ ಹಾಗೂ ಇತರರು ಹಾಜರಿದ್ದರು.