ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

21ಕ್ಕೆ ಮೀಸಲಾತಿ ವರ್ಗೀಕರಣಕ್ಕೆ ಆಗ್ರಹಿಸಿ ಧರಣಿ

ಎರಡು ತಿಂಗಳು ಸಮಯ ಕೇಳಿದ್ದ ಸಿಎಂ ವಿರುದ್ಧ ಪ್ರತಿಭಟನೆ: ಹನುಮಂತಪ್ಪ ಬಳ್ಳಾರಿ
Last Updated 19 ಜೂನ್ 2019, 16:46 IST
ಅಕ್ಷರ ಗಾತ್ರ

ಯಾದಗಿರಿ: ಕಳೆದ 25 ವರ್ಷದಿಂದ ಮೀಸಲಾತಿ ವರ್ಗೀಕರಣಕ್ಕೆ ಹೋರಾಟ ನಡೆಸುತ್ತಿದ್ದರೂ ಆಡಳಿತ ನಡೆಸಿದ ಯಾವ ಪಕ್ಷಗಳು ಮಾದಿಗರಿಗೆ ನ್ಯಾಯ ಒದಗಿಸಿಲ್ಲ. ಹೀಗಾಗಿ ಸಿಎಂ ಗ್ರಾಮ ವಾಸ್ತವ್ಯದ ವೇಳೆ ಧರಣಿ ಕೈಗೊಳ್ಳಲಾಗುವುದು ಎಂದು ಎಂಆರ್‌ಎಚ್‌ಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಹನುಮಂತಪ್ಪ ಬಳ್ಳಾರಿ ಎಚ್ಚರಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹಿಸುತ್ತಿದ್ದರೂ ಆಡಳಿತ ನಡೆಸುವ ಯಾರು ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಜೂನ್ 21ರಂದು ಜಿಲ್ಲೆಗೆ ಆಗಮಿಸುತ್ತಿರುವ ಸಿಎಂ ಕುಮಾರಸ್ವಾಮಿ ವಿರುದ್ಧ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸದಾಶಿವ ಆಯೋಗ ವರದಿ ಶಿಫಾರಸು ಮಾಡುವ ಭರವಸೆ ನೀಡಿದ್ದರು. ಅವರ ಮೇಲೆ ಮಾದಿಗರು ಭರವಸೆ ಇಟ್ಟಿದ್ದರು. ಆದರೆ, ಮಾದಿಗರಿಗೆ ಸಿದ್ದರಾಮಯ್ಯ ದ್ರೋಹ ಮಾಡಿದ್ದಾರೆ. ಕೊಟ್ಟ ಮಾತಿಗೆ ತಪ್ಪಿದ್ದಾರೆ ಎಂದು ಅವರ ವಿರುದ್ಧ ಕಿಡಿಕಾರಿದರು.

ಕೂಡಲ ಸಂಗಮದಿಂದ ಬೆಂಗಳೂರು ವರೆಗೆ ಪಾದಯಾತ್ರೆ ಮೂಲಕ ಸುಮಾರು 3 ಲಕ್ಷ ಜನ ಸೇರಿ ಈ ಬಗ್ಗೆ ಒತ್ತಾಯ ಮಾಡಲಾಗಿತ್ತು. ಆದರೆ, ಅಂದು ಎರಡು ತಿಂಗಳು ಭರವಸೆ ನೀಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಈಗಲೂ ಬೇಡಿಕೆ ಈಡೇರಿಸಿಲ್ಲ. ಎಂಟು ತಿಂಗಳು ಕಳೆದರೂ ಈ ಬಗ್ಗೆ ಚಕಾರ ಎತ್ತಿಲ್ಲ. ಜೆಡಿಎಸ್ ಪಕ್ಷದ ಪ್ರಣಾಳಿಕೆಯಲ್ಲಿ ಮೂರು ಬಾರಿ ಈ ಬಗ್ಗೆ ಪ್ರಸ್ತಾಪಿಸಲಾಗಿದೆ. ಆದರೆ, ಈ ಬಗ್ಗೆ ಜಾರಿಗೆ ತರಲು ಹಿಂದೇಟು ಹಾಕಲಾಗುತ್ತಿದೆ ಎಂದು ಆಪಾದಿಸಿದರು.

ಮುಂದಿನ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿ ಮಂಡಿಸಿ ಸರ್ವಾನುಮತದಿಂದ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು.

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿ ಸಮನ್ವಯ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಮುತ್ತಣ್ಣ ಬೆಣ್ಣೂರು ಮಾತನಾಡಿ, ಕೇಂದ್ರ ರಾಜ್ಯ ಸರ್ಕಾರಗಳು ಮಾದಿಗರನ್ನು ತುಳಿಯುವ ಕೆಲಸ ಮಾಡುತ್ತಿವೆ. ದ್ರೋಹ ಮಾಡಿ ಮೀಸಲಾತಿ ಬಗ್ಗೆ ತಪ್ಪು ತಿಳಿವಳಿಕೆ ಬರುವಂತೆ ಮಾಡುತ್ತಿವೆ. ಹೀಗಾಗಿ ಸದನದಲ್ಲಿ ಈ ಬಗ್ಗೆ ವಿಸ್ತೃತ ಚರ್ಚೆ ಮಾಡಿ ಮೀಸಲಾತಿ ಬಗ್ಗೆ ತಪ್ಪು ತಿಳಿವಳಿಕೆ ಹೋಗಲಾಡಿಸಬೇಕು ಎಂದರು.

ನ್ಯಾಯಮೂರ್ತಿ ಸದಾಶಿವ ಅಯೋಗ ಲಭ್ಯವಿರುವ ಮೀಸಲಾತಿಯನ್ನು ಜನಸಂಖ್ಯೆ ಆಧಾರಿತವಾಗಿ ಮಾದಿಗ ಸಂಬಂಧಿತ 58 ಉಪಜಾತಿಗಳಿಗೆ ಶೇಕಡ 6ರಷ್ಟು, ಹೊಲೆಯ ಜಾತಿ ಸಂಬಂಧಿತ 28 ಉಪಜಾತಿಗಳಿಗೆ ಶೇಕಡ 5ರಷ್ಟು ಸ್ಪೃಶ್ಯ ಸಂಬಂಧಿತ 16 ಉಪಜಾತಿಗಳಿಗೆ ಶೇಕಡ 3ರಷ್ಟು ಹಾಗೂ ಅಲೆಮಾರಿ ಸಮುದಾಯದವರಿಗೆ ಶೇಕಡ 1ರಷ್ಟು ಮೀಸಲಾತಿ ನೀಡಿ ಶಿಫಾರಸು ಮಾಡಿದ್ದಾರೆ. ಹೀಗಾಗಿ ಇಂಥ ವಿಷಯವನ್ನು ಚರ್ಚಿಸಬೇಕು ಎಂದು ಆಗ್ರಹಿಸಿದರು.

ಸಮಿತಿ ಗೌರವಾಧ್ಯಕ್ಷ ಎಸ್‌.ಮಾರೆಪ್ಪ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಜೂಕಾಗಿ ಮಾದಿಗರನ್ನು ವಂಚಿಸಿದ್ದಾರೆ. ಈಗ ಸಮ್ಮಿಶ್ರ ಸರ್ಕಾರದಲ್ಲಿ ವರದಿ ಜಾರಿಗೆ ತರಲು ಇಚ್ಛಾಶಕ್ತಿ ಕೊರತೆ ಇದೆ. ಹೀಗಾಗಿ ಸರ್ಕಾರ ಶೀಘ್ರ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು.

ಎಂಆರ್‌ಎಚ್‌ಎಸ್ ರಾಜ್ಯ ಉಪಾಧ್ಯಕ್ಷ ದೇವಿಂದ್ರನಾಥ ಕೆ.ನಾದ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಖಂಡಪ್ಪ ದಾಸನ್, ಎಂಆರ್‌ಎಚ್‌ಎಸ್ ರಾಜ್ಯ ಕಾರ್ಯದರ್ಶಿ ಶಿವರಾಯ ಅಕ್ಕರಕಿ, ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ಜಿಲ್ಲಾ ಪಂಚಾಯಿತಿ ಸದಸ್ಯ ಶಿವಲಿಂಗಪ್ಪ ಪುಟಗಿ, ಮುಖಂಡರಾದ ಅಂಬಣ್ಣ ಅರೋಲಿಕರ್, ನಾಗರಾಜ ಕೋಡಿಹಳ್ಳಿ, ನಗರಸಭೆ ಸದಸ್ಯರಾದ ಸ್ವಾಮಿದೇವ ದಾಸನಕೇರಿ, ಗಣೇಶ ದುಪ್ಪಲ್ಲಿ ಶಿವು ಮುದ್ನಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT