ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ನೂತನ ಪಠ್ಯ ಕ್ರಮ ಕೈಬಿಡಲು ಆಗ್ರಹ

ಪಠ್ಯ ಪರಿಷ್ಕರಣ ವಿರೋಧಿ ಸಮಿತಿ ಸಮಿತಿ ಬೃಹತ್‌ ಪ್ರತಿಭಟನೆ, ಮಠಾಧೀಶರು, ಪಕ್ಷಾತೀತವಾಗಿ ಮುಖಂಡರು ಭಾಗಿ
Last Updated 28 ಜೂನ್ 2022, 5:06 IST
ಅಕ್ಷರ ಗಾತ್ರ

ಯಾದಗಿರಿ: ‘ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣೆಯ ನೆಪದಲ್ಲಿ ಮಾಡಿದ ಪಠ್ಯವನ್ನು ಕೈಬಿಡಬೇಕು’ ಎಂದು ಒತ್ತಾಯಿಸಿ ಪಠ್ಯ ಪರಿಷ್ಕರಣ ವಿರೋಧಿ ಸಮಿತಿ ಸಮಿತಿಯಿಂದ ಸೋಮವಾರ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ವಿವಿಧ ಮಠಾಧೀಶರು, ಪ್ರಗತಿಪರರು, ರೈತ ಮುಖಂಡರು, ಕನ್ನಡ ಹಾಗೂ ದಲಿತ ಪರ ಸಂಘಟನೆಗಳು, ಸೂಫಿ ಪರಂಪರೆ ಬೆಂಬಲಿಸುವವರು ಸೇರಿದಂತೆ ಕಾರ್ಮಿಕ ಸಂಘಟನೆಗಳ ಮುಖಂಡರು ನಗರದ ಮೈಲಾಪುರ ಆಗಸಿಯಿಂದ ಮಹಾತ್ಮ ಗಾಂಧಿ ವೃತ್ತದವರೆಗೆ ಪಾದಯಾತ್ರೆ ಮಾಡಿದರು. ಗಾಂಧಿ ವೃತ್ತದಲ್ಲಿ ಮಹಾತ್ಮ ಗಾಂಧಿಗೆ ಮಾಲಾರ್ಪಣೆ ಮಾಡಿ ಧರಣಿಯನ್ನು ಆರಂಭಿಸಿದರು.

ಈ ವೇಳೆ ಮಾತನಾಡಿದ ಪ್ರಮುಖರು, ರೋಹಿತ್‌ ಚಕ್ರತೀರ್ಥ ಸಮಿತಿ ರಚಿಸಿದ ಪಠ್ಯ ಹಲವಾರು ಅಧ್ವಾನಗಳನ್ನು ಒಳಗೊಂಡಿದ್ದು, ನಾಡಿನಾದ್ಯಂತ ತೀವ್ರ ಖಂಡನೆಗೆ ಗುರಿಯಾಗಿದೆ. ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆಯನ್ನು ಅಪಂಭ್ರಂಶ‌ಗೊಳಿಸಿದ್ದನ್ನು ಖುಷಿಪಟ್ಟ ವ್ಯಕ್ತಿ ಈತ. ಪ್ರಸ್ತುತ ಸಮಿತಿ ರೂಪಿಸಿದ ಪಠ್ಯದಲ್ಲಿ ಮಹಾ ಮಾನವತಾವಾದಿ ಬಸವಣ್ಣನವರ ಕುರಿತು ಐತಿಹಾಸಿಕವಲ್ಲದ ಸಂಗತಿಯನ್ನು ಪ್ರಸ್ತಾಪಿಸಲಾಗಿದೆ. ಬ್ರಾಹ್ಮಣ್ಯವನ್ನು ತೊರೆದು ಬಂದ ಬಸವಣ್ಣನವರಿಗೆ ಉಪನಯನ ಮಾಡಿಸಲಾಗಿದೆ. ನಮ್ಮ ದೇಶದ ಸಂವಿಧಾನ ಜನಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಅಂದಿನ ಸಂವಿಧಾನ ರಚನಾ ಸಮಿತಿಯ ಸದಸ್ಯರೊಬ್ಬರಾದ ಕೃಷ್ಣಾಮಾಚಾರ್ಯರು ಯೋಗ್ಯತೆಯನ್ನು ಕಂಡುಕೊಟ್ಟ ಬಿರುದು ಸಂವಿಧಾನ ಶಿಲ್ಪಿ ಎಂಬ ವಿಶೇಷತೆಯನ್ನು ಪದವನ್ನು ಕೈ ಬಿಡಲಾಗಿದೆ. ಇದು ಸಲ್ಲದು ಎಂದರು.

ಪಠ್ಯ ಪರಿಷ್ಕರಣೆಯ ಹೆಸರಿನಲ್ಲಿ ನಮ್ಮ ನಾಡಿನ ಅಸ್ಮಿತೆಯಾದ ವಿಶ್ವಗುರು ಬಸವಣ್ಣನವರ ಇತಿಹಾಸವನ್ನು ಸರಿಯಾಗಿ ಕಟ್ಟಿಕೊಡುವಲ್ಲಿ ರೋಹಿತ್‌ ಚಕ್ರತೀರ್ಥ ಸೋತಿದ್ದಾರೆ. ಬ್ರಾಹ್ಮಣಿಕೆಯ ಸಂಕೇತವಾದ ಉಪನಯನವನ್ನು ಧಿಕ್ಕರಿಸಿ ಬಂದ ಬಸವಣ್ಣನವರಿಗೆ ಉಪನಯನವಾಗಿತ್ತು ಎಂದು ಹೇಳಿ ಇತಿಹಾಸಕ್ಕೆ ಅಪಚಾರವೆಸಿಗಿದ್ದಾರೆ. ಡಾ.ಬಿ.ಆರ್‌.ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಎಂದು ವಿಶ್ವವೇ ಕೊಂಡಾಡುತ್ತಿದೆ. ಇದನ್ನು ಪರಿಷ್ಕರಣ ಸಮಿತಿ ತೆಗೆದು ಹಾಕಿದ್ದು ಐತಿಹಾಸಿಕ ಸತ್ಯವನ್ನು ಮರೆಮಾಚುವ ಯತ್ನವಲ್ಲವೇ ಎಂದು ಪ್ರಶ್ನಿಸಿದರು.

ಕನ್ನಡನಾಡಿನ ಅಸ್ಮಿತೆಯನ್ನು ಹೇಳುವ ಮೌಲ್ಯಗಳನ್ನು ಮಕ್ಕಳ ಮನಸ್ಸಿನಲ್ಲಿ ತುಂಬುವ 12ನೇ ಶತಮಾನದ ಶರಣೆ ಅಕ್ಕಮಹಾದೇವಿ, ಕನಕದಾಸರು, ಶರಣ ಅಂಬಿಗರ ಚೌಡಯ್ಯ ವಚನಗಳು ತೆಗೆದುಹಾಕುವುದು ನಮ್ಮ ನಾಡಿನ ಸಂಸ್ಕೃತಿ ಕಡೆಗಣಿಸಿದಂತೆ ಆಗಿದೆ. ಭಗತ್ ಸಿಂಗ್, ಕೇರಳದ ನಾರಾಯಣ ಗುರು ಮತ್ತು ಪೆರಿಯಾರ್‌ ಕಂದಾಚಾರಗಳು ಧಿಕ್ಕರಿಸಿ ಹೊಸ ಮನ್ವಂತರ ಬರೆದವರು. ಪರಂಪರೆಯ ನೆಪದಲ್ಲಿ ಭಾರತೀಯ ಮೌಲ್ಯಗಳನ್ನು ಮೂಲೆಗುಂಪು ಮಾಡುವ ಶಕ್ತಿಗಳ ವಿರುದ್ಧ ಹೋರಾಟ ಮಾಡಿದವರು. ಈ ಮಹನೀಯರ ಬದುಕು ಆದರ್ಶವಲ್ಲವೇ. ಇದನ್ನು ಚಕ್ರತಿರ್ಥ ಸಮಿತಿ ತೆಗೆದುಹಾಕಿದ್ದಾರೆ ಎಂದರು.

ಅಕ್ಷರದವ್ವ ಎಂದೇ ಕರೆಯಲ್ಪಡುವ ಸಾವಿತ್ರಿಬಾಯಿ ಫುಲೆ ಅವರ ಹೋರಾಟದ ಬದುಕು ಹಲವರಿಗೆ ಸ್ಫೂರ್ತಿ. ಸನಾತನ ವ್ಯವಸ್ಥೆ ವಿರುದ್ಧ ಸಿಡಿದು ತಳ ಸಮುದಾಯದ ಜನತೆಗೆ ಅಕ್ಷರವನ್ನು ಬಿತ್ತಿದ ಮಹಾಮಾತೆ ಈ ತಾಯಿಯ ಪಾಠ ತೆಗೆಯಬೇಕಾದ ಜರೂರ್ ಏನಿತ್ತು ಎನ್ನುವುದು ನಮಗೆಲ್ಲ ಈಗಲೂ ಚಿದಂಬರ ರಹಸ್ಯವಾಗಿ ಕಾಡುತ್ತಿದೆ ಎಂದು ಆರೋಪಿಸಿದರು.

ಒಟ್ಟಿನಲ್ಲಿ ಪೂರ್ವಗ್ರಹ ಪೀಡಿತ ದೃಷ್ಟಿಯನ್ನು ಇಟ್ಟುಕೊಂಡು ರೂಪಿಸಿದ ಪಠ್ಯಪುರಿಷ್ಕರಣೆಯನ್ನು ಪ್ರತಿಭಟಿಸಿ ರಸ್ತೆ ಇಳಿದು ಹೋರಾಟ ಮಾಡಿದ್ದೇವೆ. ಈ ಸಾತ್ವಿಕ ಹೋರಾಟವನ್ನು ಗಮನಿಸಿ ರೋಹಿತ್ ಚಕ್ರವರ್ತಿ ಮಾಡಿದ ಪಠ್ಯ ಪರಿಷ್ಕರಣೆಯನ್ನು ಕೈಬಿಡಬೇಕು. ಹೋರಾಟದ ಗಂಭೀರವನ್ನು ಅರಿಯದೆ ಹೋದರೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ನಂತರ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಮಠಾಧೀಶರು, ಮುಖಂಡರು ಭಾಗಿ
ಪ್ರತಿಭಟನೆಯಲ್ಲಿ ಗುರುಮಠಕಲ್ ಖಾಸಾ ಮಠದ ಪೀಠಾಧಿಪತಿ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ, ಪಶ್ಚಿಮಾದ್ರಿ ವಿರಕ್ತ ಮಠದ ನೇರಡಗಂ ಸಿದ್ದಲಿಂಗಸ್ವಾಮೀಜಿ, ಸಿದ್ದಬಸವ ಕಬೀರ ಸ್ವಾಮೀಜಿ ಚಿಗರಹಳ್ಳಿ, ಗುರುಪಾದೇಶ್ವರ ಸ್ವಾಮೀಜಿ ಫಕಿರೇಶ್ವರಮಠ, ಮಾಜಿ ಎಂಎಲ್ಸಿ ಚನ್ನಾರೆಡ್ಡಿಪಾಟೀಲ ತುನ್ನೂರು, ಕೆ.ನೀಲಾ, ವಿಮಲಾ, ಮಲ್ಲಿಕಾರ್ಜುನ ಸತ್ಯಂಪೇಟ, ಎ.ಸಿ.ಕಾಡ್ಲೂರು, ಡಾ.ಭೀಮಣ್ಣ ಮೇಟಿ, ವಿಶ್ವಾರಾಧ್ಯ ಸತ್ಯಂಪೇಟ, ಹನುಮೇಗೌಡ ಬೀರನಕಲ್, ಡಾ.ಶರಣಬಸವಪ್ಪ ಕಾಮರೆಡ್ಡಿ, ಗುಂಡಪ್ಪ‌ ಕಲಬುರ್ಗಿ, ನಾಗಣ್ಣ ಕಲ್ಲದೇವನಹಳ್ಳಿ, ವಿಶ್ವನಾಥ ಶಿರವಾರ, ಶರಣು ನಾಟೇಕರ್, ಮಾಣಿಕರೆಡ್ಡಿ ಕುರಕುಂದಾ, ಮರೆಪ್ಪ ಚಟ್ಟರಕರ್, ಮೌಲಾಲಿ ಅನಪುರ, ಶಿವಣ್ಣ ಇಜೇರಿ, ನಾಗರತ್ನ ಅನಪುರ, ಚನ್ನಪ್ಪಗೌಡ ಮೋಸಂಬಿ, ಲಾಯಕ್ ಹುಸೇನ್ ಬಾದಲ್, ನಿಜಮುದ್ದೀನ್ ಯಾದಗಿರಿ, ದಾವಲ್ ಸಾಬ್ ನದಾಫ್, ಮುಮ್ತಾಜ್, ರಂಗಮ್ಮ ಕಟ್ಟಿಮನಿ, ಬಾಷುಮಿಯಾ ವಡಗೇರಾ, ಗುಲಾಮ ಜಿಲಾನಿ ಅಘ್ಘಾನಿ, ವಿಶ್ವನಾಥ್ ಗೊಂದಡಿಗಿ, ಚನ್ನಪ್ಪ ಆನೆಗುಂದಿ ಮತ್ತಿತರಿದ್ದರು.

***

ಸುರಪುರ ಸಂಸ್ಥಾನದ ಇತಿಹಾಸ ಹಾಗೂ ಮಹರ್ಷಿ ವಾಲ್ಮೀಕಿ ಕುರಿತ ಇತಿಹಾಸವೂ ಪಠ್ಯವನ್ನು ಬಿಟ್ಟು ಅನಾವಶ್ಯಕವಾಗಿ ದೇಶಕ್ಕೆ ಯಾವ ಕೊಡುಗೆಯನ್ನು ನೀಡಿದ ವ್ಯಕ್ತಿಗಳ ಚಿತ್ರಣದಲ್ಲಿ ಸೇರಿಸಲಾಗಿದೆ. ಇದು ಸರಿಯಲ್ಲ.
–ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ, ‌ಪೀಠಾಧಿಪತಿ, ಗುರುಮಠಕಲ್ ಖಾಸಾ ಮಠ,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT