ಭಾನುವಾರ, ಮೇ 16, 2021
22 °C
ಕಾಲಜ್ಞಾನಿ ಕೊಡೇಕಲ್ಲ ಬಸವೇಶ್ವರ ಕ್ಷೇತ್ರದಲ್ಲಿ ಸಂಭ್ರಮ

ಸಮಾನತೆಯ ಕ್ಷೇತ್ರದಲ್ಲಿ ಮೀಸಲು ನೀರು ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಡೇಕಲ್ಲ (ಹುಣಸಗಿ): ಭಾವೈಕ್ಯತೆ ಮತ್ತು ಸಮಾನತೆಯ ತಾಣವಾಗಿರುವ ಕಾಲಜ್ಞಾನಿ ಕೊಡೇಕಲ್ಲ ಬಸವೇಶ್ವರ ಕ್ಷೇತ್ರದಲ್ಲಿ ಯುಗಾದಿ ಅಮಾವಾಸ್ಯೆ ಅಂಗವಾಗಿ ಕೃಷ್ಣಾ ನದಿಯಿಂದ ಪರಿಶಿಷ್ಟರು ಹೊತ್ತು ತಂದ ಪನ್ನೀರಿನ (ಮೀಸಲು ನೀರು) ಮೆರವಣಿಗೆಯು ಶ್ರದ್ಧಾ ಭಕ್ತಿಯಿಂದ ಸೋಮವಾರ ಜರುಗಿತು.

ಈ ಸಂದರ್ಭದಲ್ಲಿ ಬಸವ ಪೀಠಾಧಿಪತಿ ವೃಷಬೇಂದ್ರ ಅಪ್ಪ ಅವರು ಅಶ್ವಾರೂಢರಾಗಿ ಭಕ್ತರೊಂದಿಗೆ ಕೃಷ್ಣೆಯ ದಡಕ್ಕೆ ಆಗಮಿಸಿ ಪೂಜಾ ಕಾರ್ಯವನ್ನು ಮುಗಿಸಿಕೊಂಡು ಗ್ರಾಮಕ್ಕೆ ಆಗಮಿಸಿ ಅಪ್ಪನವರ ಕಟ್ಟೆಯಲ್ಲಿ ಪವಡಿಸಿದ್ದರು. ಗ್ರಾಮದ ಗುರು-ಹಿರಿಯರು, ಸುಮಂಗಲಿಯರು, ಸುತ್ತಲಿನ ಗ್ರಾಮಗಳ ಭಕ್ತರೊಂದಿಗೆ ಬಾಜಾ ಭಜಂತ್ರಿಯೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣೆಗೆ ಸಾಗಿದ್ದು ಮೆರವಣಿಗೆಗೆ ಮೆರಗು ನೀಡಿತು.

ಮೆರವಣೆಗೆಯಲ್ಲಿ ಸಾಗಿ ಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಿ ಅಲ್ಲಿ ನಾಲ್ಕು ಬಿಂದಿಗೆಯನ್ನು ಇಟ್ಟು ಉಳಿದ ನೀರನ್ನು ತಮ್ಮ ತಮ್ಮ ಮನೆಗಳಿಗೆ ತೆಗೆದುಕೊಂಡು ಹೋಗುತ್ತಾರೆ. ನಂತರ ಅಹೋರಾತ್ರಿ ನಡೆಯುವ ಬಸವಣ್ಣನವರ ಗದ್ದುಗೆಯ ಜಲಾಭಿಷೇಕ ಹಾಗೂ ಗಂಧಾಭಿಷೇಕಕ್ಕೆ ಈ ಮೀಸಲು ನೀರನ್ನೆ ಬಳಸುವುದು ಇಲ್ಲಿನ ವಿಶೇಷ.

ಪಾಂಡ್ಯದಿನ ಬಸವೇಶ್ವರ ಕರ್ತು ಸೇರಿದಂತೆ ಬಸವ ಪರಂಪರೆಯಲ್ಲಿದ್ದವರ ಗದ್ದುಗೆಗೆ ಗಂಧ ಅರೆಯುವುದು ವಾಡಿಕೆಯಾಗಿದೆ.

ಪ್ರತಿ ವರ್ಷದ ಪದ್ಧತಿಯಂತೆ ಯುಗಾದಿ ಅಮಾವಾಸ್ಯೆಯಂದು ಕೃಷ್ಣಾ ನದಿಯ ನೀರನ್ನು ಹೊತ್ತು ತಂದು ಬಸವ ಪೀಠಾಧಿಪತಿ ಅಶ್ವಾರೋಹಣದ ಜತೆಗೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಮೆರವಣಿಗೆಯಲ್ಲಿ ಸಾಗಿ ಬಸವಣ್ಣನವರ ಐಕ್ಯಸ್ಥಳವಾದ ಊರು ಒಳಗಿನ ಮಂದಿರವನ್ನು ತಲುಪಿ ಕರ್ತು ಗದ್ದುಗೆಯ ದರ್ಶನ ಮಾಡಿಕೊಂಡು ವಿಶೇಷ ಪೂಜೆ ಸಲ್ಲಿಸಿದ ನಂತರವೇ ಪ್ರಸಾದ ತೆಗೆದುಕೊಳ್ಳುವುದು ಇಲ್ಲಿನ ವಾಡಿಕೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.