ಯಾದಗಿರಿ, ಸುರಪುರದಲ್ಲಿ ಅರಳಿದ ಕಮಲ, ಚುಕ್ಕಾಣಿ ಹಿಡಿಯಲು ಸಜ್ಜು

7
ಗುರುಮಠಕಲ್ ಪುರಸಭೆ: ಅಧಿಪತ್ಯದ ಸಾಧಿಸಿದ ಕಾಂಗ್ರೆಸ್, ಜೆಡಿಎಸ್‌ಗೆ ಹಿನ್ನಡೆ

ಯಾದಗಿರಿ, ಸುರಪುರದಲ್ಲಿ ಅರಳಿದ ಕಮಲ, ಚುಕ್ಕಾಣಿ ಹಿಡಿಯಲು ಸಜ್ಜು

Published:
Updated:
Deccan Herald

ಯಾದಗಿರಿ: ಇಲ್ಲಿನ ಮೂರು ನಗರ ಸಂಸ್ಥಳೀಯ ಸಂಸ್ಥೆಗಳ ಚುಣಾವಣಾ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ನಿರೀಕ್ಷೆಯಂತೆ ಯಾದಗಿರಿ ಮತ್ತು ಸುರಪುರದಲ್ಲಿ ಬಿಜೆಪಿ ಸ್ಪಷ್ಟಬಹುಮತ ಪಡೆಯುವ ಮೂಲಕ ಆಡಳಿತ ಚುಕ್ಕಾಣಿ ಹಿಡಿಯಲು ಸಜ್ಜುಗೊಂಡಿವೆ. ಆದರೆ, ಸ್ಥಳೀಯವಾಗಿ ಜೆಡಿಎಸ್‌ ಅಧಿಕಾರ ಇರುವ ಗುರುಮಠಕಲ್‌ ನಲ್ಲಿ ಕಾಂಗ್ರೆಸ್‌ ಒಟ್ಟು 23 ಸ್ಥಾನಗಳ ಪೈಕಿ 12 ಸ್ಥಾನಗಳನ್ನು ಪಡೆಯುವ ಮೂಲ ಪಾರಮ್ಯ ಮೆರೆದಿದೆ.

ಯಾದಗಿರಿ ನಗರಸಭೆಯಲ್ಲಿ ಒಟ್ಟು 31 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. 15ನೇ ವಾರ್ಡಿನಲ್ಲಿ ಶಾಹಿಸ್ತಾ ಸುಲ್ತಾನ್ ಅವರು ಬಿಜೆಪಿಯಿಂದ ಅವಿರೋಧವಾಗಿ ಆಯ್ಕೆಯಾಗಿದ್ದರು. ನಂತರ ಒಟ್ಟು 30 ಸ್ಥಾನಗಳಿಗೆ ಚುನಾವಣೆ ಘೋಷಿಸಲಾಯಿತು. ಚುನಾವಣೆಯಲ್ಲಿ ಬಿಜೆಪಿ ಒಟ್ಟು 15 ಸ್ಥಾನಗಳನ್ನು ಗೆಲ್ಲುವ ಮೂಲಕ ಒಟ್ಟು 16 ಸ್ಥಾನಗಳನ್ನು ಪಡೆದಿದೆ.

ನಂತರದ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾಂಗ್ರೆಸ್‌ ಒಟ್ಟು 11ಸ್ಥಾನಗಳನ್ನು ಪಡೆಯುವ ಮೂಲಕ ಬಿಜೆಪಿಗೆ ತೀವ್ರ ಪೈಪೋಟಿ ನೀಡಿತು. ಎರಡನೇ ಸುತ್ತಿನಲ್ಲಿ ಕಾಂಗ್ರೆಸ್‌ ಎರಡು ಸ್ಥಾನ ಹಾಗೂ ಬಿಜೆಪಿ ಒಂದು ಸ್ಥಾನಗಳನ್ನು ಗೆದ್ದಾಗ ಮತ್ತೆ ನಗರಸಭೆ ಆಡಳಿತ ಕಾಂಗ್ರೆಸ್‌ ತೆಕ್ಕೆ ಬೀಳಲಿದೆ ಎಂದೇ ಕಾರ್ಯಕರ್ತರು ವಿಶ್ಲೇಷಿಸತೊಡಗಿದರು. ಆದರೆ, ನಾಲ್ಕನೇ ಸುತ್ತಿನ ಮತ ಎಣಿಕೆ ಮುಗಿದಾಗ ಬಿಜೆಪಿ ಗೆಲುವಿನಿ ಅಂಕಿಯನ್ನು 6ಕ್ಕೆ ಹೆಚ್ಚಿಕೊಂಡಿತು. ಕಾಂಗ್ರೆಸ್‌ ಆಗ ಮೂರಂಕಿ ಕೂಡ ದಾಟಿರಲಿಲ್ಲ.

ಮತ ಎಣಿಕೆ ಕೊಠಡಿಯಿಂದ ಗೆದ್ದ ಬಿಜೆಪಿ ಅಭ್ಯರ್ಥಿಗಳು ಒಬ್ಬೊಬ್ಬರಾಗಿ ಹೊರಬಂದು ಬಿಜೆಪಿ ಮುಖಂಡರಾದ ಲಲಿತಾ ಅನಪುರ ಅವರ ಕಾಲಿಗೆ ಬಿದ್ದು ನಮಸ್ಕಾರ ಮಾಡುತ್ತಾ ಹೊರನಡೆದಂತೆ ಬಿಜೆಪಿಯ ಪಾರಮ್ಯ ಕಾಣಿಸತೊಡಗಿತು. ಮಂಜುನಾಥ್ ದಾಸನಕೇರಿ, ಸ್ವಾಮಿದೇವ ದಾಸನಕೇರಿ, ಹಣಮಂತ ಇಟಗಿ ಹೀಗೆ ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಸಾಲು ಬೆಳೆಯಿತು. ಅಂತಿಮವಾಗಿ ಎಂಟನೇ ಸುತ್ತು ಮುಗಿದಾಗ ಬಿಜೆಪಿ ಸ್ಪಷ್ಟಬಹುತ ಕಂಡುಬಂತು.

ಸುರಪುರದಲ್ಲಿ ಕಾಂಗ್ರೆಸ್‌ –ಬಿಜೆಪಿ ಜಿದ್ದಾಜಿದ್ದು

ಪ್ರಥಮ ಬಾರಿಗೆ ಚುನಾವಣೆ ಎದುರಿಸಿದ ಸುರಪುರ ನಗರಸಭೆಯಲ್ಲಿ ಗೆಲುವಿಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಜಿದ್ದಾಜಿದ್ದಿನ ಹೋರಾಟ ನಡೆಸಿದವು. ಒಟ್ಟು 31ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಬಿಜೆಪಿ 16 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್‌ 15 ಸ್ಥಾನಗಳಲ್ಲಿ ಜಯಗಳಿಸಿದೆ. ಇಲ್ಲಿ ಕಾಂಗ್ರೆಸ್‌ ಒಂದು ಸ್ಥಾನ ಕಳೆದುಕೊಂಡು ಕೂದಲೆಳೆಯ ಅಂತರದಲ್ಲಿ ಬಹುಮತ ಕಳೆದುಕೊಂಡಿದೆ.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಭಾರೀ ಮುಖಭಂಗ ಅನುಭವಿಸಿತ್ತು. ಅದನ್ನೇ ಸವಾಲಾಗಿ ಸ್ವೀಕರಿಸಿದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮನೆಮನೆಗೆ ತಿರುಗಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದರು. ಆದರೆ, ಬಿಜೆಪಿ ಶಾಸಕ ರಾಜೂಗೌಡ (ನರಸಿಂಹ ನಾಯಕ) ಕೂಡ ವಾರ್ಡುಗಳಲ್ಲಿ ಬೆವರು ಹರಿಸಿದ್ದರು. ಪಕ್ಷ ಮತ್ತು ಪ್ರತಿಷ್ಠೆಗಾಗಿಯೇ ಈ ಇಬ್ಬರೂ ನಾಯಕರು ಚುನಾವಣೆಯಲ್ಲಿ ತಂತ್ರ–ಪ್ರತಿತಂತ್ರ ರೂಪಿಸಿದ್ದರು. ಆದರೆ, ಅಂತಿಮವಾಗಿ ಒಂದು ಹೆಚ್ಚುವರಿ ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ನಗರಸಭೆಯ ಆಡಳಿತ ಚುಕ್ಕಾಣಿ ಹಿಡಿದಿದೆ.

ಗುರುಮಠಕಲ್‌ನಲ್ಲಿ ಜೆಡಿಎಸ್ ಗೆ ಹಿನ್ನಡೆ

ವಿಧಾನಸಭೆ ಚುನಾವಣೆಯಲ್ಲಿ ಗುರುಮಠಕಲ್‌ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್‌ ಅನ್ನು ಹೆಡೆಮುರಿದು ಕಟ್ಟಿದ್ದ ಜೆಡಿಎಸ್‌ ಶಾಸಕ ನಾಗನಗೌಡ ಕಂದಕೂರ ಅವರು, ವಾರ್ಡುಗಳಲ್ಲಿ ಹಗಲಿರುಳು ಬೆವರು ಹರಿಸಿದ್ದರು. ಆದರೂ, ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ ಹಿನ್ನಡೆ ಅನುಭವಿಸಿದೆ. ಕಾಂಗ್ರೆಸ್‌ 12 ಸ್ಥಾನಗಳನ್ನು ಪಡೆದರೆ, ಜೆಡಿಎಸ್ ಕೇವಲ 8 ಸ್ಥಾನಗಳಿಸಲಷ್ಟೇ ಶಕ್ತವಾಗಿದೆ.

ಕಾಂಗ್ರೆಸ್‌ನ ಬಾಬುರಾವ ಚಿಂಚನಸೂರ್‌ ಅವರು ಬಿಜೆಪಿಗೆ ಸೇರ್ಪಡೆಯಾದ ಮೇಲೆ ಖರ್ಗೆ ಅವರು ಪುರಸಭೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಅವರ ಅಳಿಯ ರಾಧಾಕೃಷ್ಣ ಅವರನ್ನು ಗುರುಮಠಕಲ್ ಚುನಾವಣಾ ಮೇಲ್ವಿಚಾರಕರಂತೆ ಬಳಸುವ ಮೂಲಕ ಪುರಸಭೆಯಲ್ಲಿ ಕೈ ಅರಳಿಸಿದ್ದಾರೆ. ಇಲ್ಲಿನ ಚುನಾವಣಾ ಫಲಿತಾಂಶ ಖರ್ಗೆ ಅವರ ವರ್ಚಸ್ಸಿಗೆ ಹಿಡಿದ ಕನ್ನಡಿ ಎಂದೇ ಕಾಂಗ್ರೆಸ್‌ ಕಾರ್ಯಕರ್ತರು ಹೇಳುತ್ತಿದ್ದಾರೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !