ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ವಹಣೆ ಕೊರತೆ; ‘ಶುದ್ಧ’ವಾಗದ ನೀರು

ಶುದ್ಧ ನೀರಿನ ಘಟಕಗಳಿಗೆ ಕೋಟ್ಯಂತರ ರೂಪಾಯಿ ಖರ್ಚು; ಬಳಕೆಯಾಗದೆ ವ್ಯರ್ಥ
Last Updated 15 ನವೆಂಬರ್ 2020, 16:44 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಾದ್ಯಂತ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸ್ಥಾಪಿಸಿದ್ದ ಶುದ್ಧ ನೀರಿನ ಘಟಕಗಳು ಈಗ ಪಾಳು ಬಿದ್ದಿದ್ದು, ಬಳಕೆಗೆ ಯೋಗ್ಯವಿಲ್ಲದಂತಾಗಿವೆ. ನಿರ್ವಹಣೆ ಕೊರತೆಯಿಂದ ಬಳಲುತ್ತಿವೆ.

ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಈ ಯೋಜನೆ ಆರಂಭಿಸಿದ್ದರೂ ಇಂದಿಗೂ ಹಲವು ಗ್ರಾಮಗಳಲ್ಲಿ ಶುದ್ಧ ನೀರು ಸಿಗುತ್ತಿಲ್ಲ.

ಆರ್ಸೆನಿಕ್‌, ಮಣ್ಣು ಮಿಶ್ರಿತ ನೀರು ಕುಡಿದು ಜನ ತೀವ್ರ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದರೂ ಜಿಲ್ಲಾಡಳಿತ ಮಾತ್ರ ನಿರ್ವಹಣೆ ಹೊಣೆ ಹೊತ್ತ ಏಜೆನ್ಸಿಗಳತ್ತ ಬೊಟ್ಟು ತೋರಿಸಿ ತಮ್ಮ ಜವಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂಬುದು ಸಾರ್ವಜನಿಕರ ಆರೋಪ.

ಶುದ್ಧ ಕುಡಿಯುವ ನೀರಿನ ಘಟಕವನ್ನು ಅವೈಜ್ಞಾನಿವಾಗಿ ನಿರ್ಮಿಸಿದ್ದರಿಂದ ಜನರಿಗೆ ಶುದ್ಧ ನೀರು ಸಿಗದಂತೆ ಆಗಿದೆ. ಹಲವೆಡೆ ನೀರಿನ ಸಮಸ್ಯೆ ಇದ್ದು, ಅಂಥ ಕಡೆ ಶುದ್ಧ ನೀರಿನ ಘಟಕ ಸ್ಥಾಪಿಸಿದ್ದರೂ ಕಾರ್ಯಾಚರಣೆ ಮಾಡುತ್ತಿಲ್ಲ.

‘ನಮ್ಮ ಗ್ರಾಮದಲ್ಲಿ ಶುದ್ಧ ನೀರಿನ ಘಟಕ ಆರಂಭಿಸಿದ್ದರೂ ಇಲ್ಲಿಯವರೆಗೆ ಹನಿ ನೀರನ್ನು ಇಲ್ಲಿಂದ ತೆಗೆದುಕೊಂಡು ಹೋಗಿಲ್ಲ. ಇದರಿಂದ ಯಾವ ಪ್ರಯೋಜನವಿದೆ. ಇದಕ್ಕೆ ಜಾಗ, ವಿದ್ಯುತ್‌ ದಂಡವಾಗಿದೆ’ ಎಂದು ಕಡೇಚೂರು ಗ್ರಾಮದ ನರಸಪ್ಪ ಮೈಲಾರಪ್ಪ ಹೇಳುತ್ತಾರೆ.

‘ಗ್ರಾಮದಲ್ಲಿ ನೀರಿನ ಘಟಕವಿದ್ದರೂ ಯಾವಾಗಲೂ ಬಂದ್ ಆಗಿರುತ್ತದೆ. ಆಪರೇಟರ್‌ಗಳು ತಮಗೆ ಇಷ್ಟ ಬಂದಾಗ ತೆಗೆಯುತ್ತಾರೆ. ಜನ ಕೇಳಿದಾಗ ನೀರು ಕೊಡುವುದಿಲ್ಲ. ಇದರಿಂದ ಇದ್ದೂಇಲ್ಲದಂತಾಗಿದೆ’ ಎನ್ನುವುದು ಬಳಿಚಕ್ರ ಗ್ರಾಮದ ಮಹೇಶ ಪಾಟೀಲ ಅವರ ಆರೋಪ.

‘ಜಿಲ್ಲೆಯಲ್ಲಿ ಹಲವಾರು ಕಡೆ ಶುದ್ಧ ನೀರಿನ ಘಟಕಗಳು ಹಾಳಾಗಿವೆ. ಇವುಗಳನ್ನು ದುರಸ್ತಿ ಮಾಡಿಲ್ಲ. ಇದರಿಂದ ಘಟಕದ ಗಾಜು ಸೇರಿದಂತೆ ಇನ್ನಿತರ ಸಾಮಗ್ರಿ ಕಳುವಾಗಿವೆ. ಇದಕ್ಕೆ ಯಾರು ಹೊಣೆ’ ಎಂದು ರಾಜಾಪುರ ಗ್ರಾಮದ ಸಂಗಪ್ಪ ತಾತನವರ್‌ ಪ್ರಶ್ನಿಸಿದರು.

ನಾನು ಬಂದಾಗ ಹೆಚ್ಚು ಹಾಳಾಗಿದ್ದವು:

‘ಜಿಲ್ಲಾ ಪಂಚಾಯಿತಿ ಸಿಇಒ ಆಗಿ ಬಂದಾಗ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಘಟಕಗಳು ಹಾಳಾಗಿದ್ದವು. ಈಗ ಹಂತ ಹಂತವಾಗಿ ದುರಸ್ತಿ ಮಾಡಲಾಗಿದೆ. ಇನ್ನು ಕೆಲ ಕಡೆ ನೀರಿನ ಸಮಸ್ಯೆಯಿಂದ ಶುದ್ಧ ನೀರಿನ ಘಟಕಗಳು ಆರಂಭವಾಗಿಲ್ಲ. ಮುಂದಿನ ದಿನಗಳಲ್ಲಿ ಶುದ್ಧ ನೀರು ಪೂರೈಸುವ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾಶರ್ಮಾ ತಿಳಿಸಿದರು.

ವಿದ್ಯುತ್ ಸಮಸ್ಯೆ

ಗ್ರಾಮಾಂತರ ಭಾಗದಲ್ಲಿ ವಿದ್ಯುತ್‌ ಸಮಸ್ಯೆಯಿಂದ ಹಲವಾರು ಘಟಕಗಳು ನಿಂತು ಹೋಗಿವೆ. ಇದರಿಂದ ಕೊಳವೆ ಬಾವಿ ನೀರು ಕುಡಿಯುವ ದೌರ್ಭಾಗ್ಯ ತಪ್ಪಿಲ್ಲ ಎನ್ನುವುದು ಗ್ರಾಮಸ್ಥರ ದೂರು. ಸುರಪುರ, ಕೆಂಭಾವಿ, ಕಕ್ಕೇರಾ ಭಾಗದಲ್ಲಿ ಪ್ಲೋರೈಡ್‌ಯುಕ್ತ ನೀರು ಸಿಗುವುದರಿಂದ ಇದೇ ನೀರನ್ನು ಕುಡಿದು ಹಲವಾರು ರೋಗಗಳಿಗೆ ಜನ ತುತ್ತಾಗಿದ್ದಾರೆ. ಇಲ್ಲಿ ಹೆಸರಿಗೆ ಮಾತ್ರ ನೀರಿನ ಘಟಕ ಅಳವಡಿಸಿದ್ದಾರೆ. ಆದರೆ, ಸಮರ್ಪಕ ನಿರ್ವಹಣೆ ಕೊರತೆಯಿಂದ ದುರಸ್ತಿ ಭಾಗ್ಯ ಸಿಕ್ಕಿಲ್ಲ.

ಕಾಗದದಲ್ಲಿಯೇ ಕಾಮಗಾರಿ

ಜಿಲ್ಲೆಯ ಕೆಲವೆಡೆ ಕಾಗದದಲ್ಲಿ ಮಾತ್ರ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲಾಗಿದೆ. ಈಚೆಗೆ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಸದಸ್ಯರು ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಯಾವುದೇ ಯೋಜನೆ ಇಲ್ಲದೆ ಕೆಲಸ ಮಾಡಿದ್ದರಿಂದ ಶುದ್ಧ ನೀರಿನ ಘಟಕಗಳ ಬೇಡಿಕೆ ಈಡೇರಿಲ್ಲ ಎಂದು ಹರಿಹಾಯ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT