ನಗರದಲ್ಲಿ ಹೆಚ್ಚಿದ ಬಯಲು ಕುಡಿತ

7
ಜಿಲ್ಲಾ ಖಜಾನೆ ಮತ್ತು ಪ್ರಾದೇಶಿಕ ಕಚೇರಿ ಆವರಣಗಳೇ ಕುಡುಕರ ಕಾಯಂ ತಾಣಗಳು!

ನಗರದಲ್ಲಿ ಹೆಚ್ಚಿದ ಬಯಲು ಕುಡಿತ

Published:
Updated:
Deccan Herald

ಯಾದಗಿರಿ:ನಗರದಲ್ಲಿ ಬಯಲು ಕುಡಿತ ಹೆಚ್ಚಿದೆ. ರಸ್ತೆ ಬದಿಯ ಸ್ಥಳಗಳು, ಸರ್ಕಾರಿ ಕಚೇರಿಗಳ ಆವರಣ ಕುಡುಕರ ತಾಣಗಳಾಗಿ ಮಾರ್ಪಟ್ಟಿವೆ.

ನಗರ ಉತ್ತರದಲ್ಲಿರುವ ಕೋಟೆಯ ಸುತ್ತಲಿನ ರಸ್ತೆಗಳು ಹಾಗೂ ನಗರ ದಕ್ಷಿಣದ ಎಪಿಎಂಸಿ ಬಯಲು ಪ್ರದೇಶದ ರಸ್ತೆ ಅಂಚುಗಳಲ್ಲಿ ಮದ್ಯ ವ್ಯಸನಿಗಳ ಆಟಾಟೋಪ ನಡೆಯುತ್ತಿದೆ. ಯಾವುದೇ ರಸ್ತೆಯಲ್ಲಿ ಸಂಚರಿಸಿದರೂ ಕುಡಿದು ಎಸೆದಿರುವ ಮದ್ಯದ ಖಾಲಿ ಬಾಟೆಲಿಗಳು, ಸ್ಯಾಚೆಟ್‌, ಪ್ಲಾಸ್ಟಿಕ್‌ ಲೋಟಗಳು, ಪ್ಲಾಸ್ಟಿಕ್ ಪಾಕೆಟ್‌ಗಳು ಕಾಣಿಸುತ್ತವೆ.

ಸಾರಿಗೆ ಪ್ರಾದೇಶಿಕ ಕಚೇರಿ, ಸರ್ಕಾರಿ ಪದವಿ ಕಾಲೇಜು ಆವರಣ, ಎಪಿಎಂಸಿ ಆವರಣ, ಸರ್ಕಾರಿ ಪಾಳು ಕಚೇರಿ ಕಟ್ಟಡಗಳಲ್ಲಿ ನಿರಂತರವಾಗಿ ನಡೆಯುತ್ತಿದ್ದ ಹಾವಳಿ, ಈಗ ರಸ್ತೆ ಇಕ್ಕೆಲಗಳಿಗೂ ವಿಸ್ತರಿಸಿದೆ. ಹತ್ತಿಕುಣಿ ಸಂಪರ್ಕ ರಸ್ತೆಯಿಂದ ಚಿತ್ತಾಪುರ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ವೃತ್ತರಸ್ತೆ ಅಂಚಿನಲ್ಲಿ ಸೂರ್ಯ ಅಸ್ತಂತಗನಾಗುತ್ತಿದ್ದಂತೆ ಕುಡುಕರ ಗುಂಪುಗಳು ಬೀಡುಬಿಡುತ್ತವೆ. ಈಗ ಅದು ಜಿಲ್ಲಾ ಕ್ರೀಡಾಂಗಣದ ಸಮೀಪದ ಅಬ್ಬೆತುಮಕೂರು, ಗುರಸಣಗಿ ಸಂಪರ್ಕ ಮಾರ್ಗಕ್ಕೂ ಹಬ್ಬಿದೆ.

ಅಚ್ಚರಿ ಎಂದರೆ ಈ ಎರಡು ರಸ್ತೆಗಳ ಸಮೀಪವೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಹಾಗೂ ಜಿಲ್ಲಾಡಳಿತ ಕಚೇರಿಗಳಿವೆ. ಪೊಲೀಸರ ನಿರಂತರ ಸಂಚಾರ ಇರುವ ರಸ್ತೆಗಳಲ್ಲಿಯೇ ಕುಡುಕರ ಇಂಥಾ ದಂಧೆ ಹೆಚ್ಚಿರುವುದು ಇಡೀ ಪೊಲೀಸ್‌ ವ್ಯವಸ್ಥೆಯನ್ನೇ ಪ್ರಶ್ನಿಸುವಂತಾಗಿದೆ.

‘ಜಿಲ್ಲಾಡಳಿತ ಕಚೇರಿ ಕಾರ್ಯಾರಂಭಿಸಿದ ಮೇಲೆ ಚಿತ್ತಾಪುರ ಸಂಪರ್ಕ ರಸ್ತೆಯ ಎರಡೂ ಬದಿಗೆ ನೂತನ ಬಡಾವಣೆಗಳು ತಲೆ ಎತ್ತಿವೆ. ಹಲವು ಮನೆಗಳು ನಿರ್ಮಾಣಗೊಂಡಿವೆ. ಇಲ್ಲಿನ ನಿವಾಸಿಗಳು ರಸ್ತೆ ಕುಡುಕರ ಹಾವಳಿಯಿಂದಾಗಿ ಮನೆಯಿಂದ ಹೊರಬರುವುದನ್ನೇ ಬಿಟ್ಟಿದ್ದಾರೆ’ ಎನ್ನುತ್ತಾರೆ ನೂತನ ಬಡಾವಣೆಯ ಶಿವರಾಜ್.

ರಾತ್ರಿ ಸಂದರ್ಭದಲ್ಲಿ ಚಿತ್ತಾಪುರ ಸಂಪರ್ಕ ರಸ್ತೆಯಲ್ಲಿ ಕುಡುಕರ ಹಾವಳಿ ದಿನದಿನಕ್ಕೆ ಹೆಚ್ಚುತ್ತಿದ್ದು ಭಯದ ವಾತಾವರಣ ಸೃಷ್ಟಿಸುತ್ತಿದೆ. ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಿಂದ ಹಿಡಿದು ಅಲ್ಲಿನ ರಸ್ತೆಗಳಲ್ಲಿ ಕುಡುಕರು ಕುಡಿದು ಎಸೆದಿರುವ ಖಾಲಿ ಮದ್ಯದ ಸೀಸೆಗಳು ಹಾಗೂ ತಿಂದೆಸೆದ ಖಾಲಿ ಪ್ಲಾಸ್ಟಿಕ್ ಕೈಚೀಲಗಳು, ಲೋಟಗಳು ಕಣ್ಣಿಗೆ ಬೀಳುತ್ತವೆ. ಕುಡುಕರು ಅಮಲಿನಲ್ಲಿ ರಸ್ತೆಗಳ ಮೇಲೆ ಮದ್ಯದ ಬಾಟಲಿಗಳನ್ನು ಒಡೆದು ಹಾಕಿರುವ ದೃಶ್ಯವೂ ಕಾಣಿಸುತ್ತವೆ. ನಗರ ಹೊರವಲಯದ ಬಹುತೇಕ ರಸ್ತೆಗಳಲ್ಲಿ ಇಂಥದ್ದೇ ದೃಶ್ಯ ಕಂಡುಬರುತ್ತವೆ ಮತ್ತು ಸುಗಮ ಸಂಚಾರಕ್ಕೂ ಅಡ್ಡಿ ಉಂಟಾಗುತ್ತಿದೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !