ಶನಿವಾರ, ಸೆಪ್ಟೆಂಬರ್ 21, 2019
21 °C
ಜಿಲ್ಲೆಯ 34,212 ಮಕ್ಕಳಿಗೆ ರೋಟಾ ವೈರಸ್ ಲಸಿಕೆ ನೀಡುವ ಗುರಿ: ಶಾಸಕ

ಮಕ್ಕಳಿಗೆ ತಪ್ಪದೆ ರೋಟಾವೈರಸ್ ಲಸಿಕೆ ಹಾಕಿಸಿ

Published:
Updated:
Prajavani

ಯಾದಗಿರಿ: ‘ರೋಟಾವೈರಸ್ ಸೋಂಕಿನಿಂದ ರಕ್ಷಣೆ ಪಡೆಯಬೇಕಾದರೆ ತಪ್ಪದೆ 6 ರಿಂದ10 ಮತ್ತು 14 ವಾರಗಳ ವಯಸ್ಸಿನ ಮಕ್ಕಳಿಗೆ ರೋಟಾವೈರಸ್ ಲಸಿಕೆ ಹಾಕಿಸಬೇಕು’ ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಹೇಳಿದರು.

ನಗರದ ಜಿಲ್ಲಾ ಆಸ್ಪತ್ರೆ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರೋಟಾವೈರಸ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ರೋಟಾವೈರಸ್ಸಾಂ ಕ್ರಾಮಿಕವಾಗಿದ್ದು, ಅತಿಸಾರದಿಂದ ಬಳಲುತ್ತಿರುವ ರೋಗಿಗಳು ದೊಡ್ಡ ಪ್ರಮಾಣದಲ್ಲಿ ವೈರಸ್‍ನ್ನು ಮಲದ ಮೂಲಕ ಹೊರಹಾಕುತ್ತಾರೆ. ಒಂದು ಮಗುವಿಗೆ ಕಲುಷಿತವಾದ ನೀರು, ಆಹಾರ ಮತ್ತು ಕೊಳೆಯಾದ ಕೈಗಳ ಸಂಪರ್ಕಕ್ಕೆ ಬರುವುದರಿಂದ ವೈರಸ್ ಹರಡುತ್ತದೆ. ಹೀಗಾಗಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಅಡಿಯಲ್ಲಿ ಈ ಲಸಿಕೆ ನೀಡಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿ, ‘ರೋಟಾವೈರಸ್ ಬೇಗ ಹರಡಬಲ್ಲ ವೈರಾಣು. ಇದು ಮಕ್ಕಳಲ್ಲಿ ಭೇದಿಯಾಗಲು ಮುಖ್ಯ ಕಾರಣವಾಗಿದೆ. ರೋಟಾವೈರಸ್ ಸೋಂಕಿನ ಆರಂಭ ಕಡಿಮೆ ಪ್ರಮಾಣದ ಭೇದಿಯಿಂದ ಆಗುತ್ತದೆ. ಮುಂದೆ ಅದು ಗಂಭೀರ ಸ್ವರೂಪಕ್ಕೆ ತಿರುಗಬಹುದು. ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಶರೀರದಲ್ಲಿ ನೀರು ಮತ್ತು ಲವಣಾಂಶ ಕೊರತೆಯಾಗುತ್ತದೆ’ ಎಂದರು.

ಈ ವೈರಸ್‌ನಿಂದ ಕೆಲವು ಸಂದರ್ಭಗಳಲ್ಲಿ ಮಕ್ಕಳು ಸಾವಿಗೀಡಾಗಬಹುದು. ಆದ್ದರಿಂದ ಸಾರ್ವಜನಿಕರು ತಮ್ಮ ಮಕ್ಕಳಿಗೆ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ತಪ್ಪದೆ ರೋಟಾವೈರಸ್ ಲಸಿಕೆ ಹಾಕಿಸಬೇಕು’ ಎಂದು ತಿಳಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ನಾರಾಯಣಪ್ಪ ಮಾತನಾಡಿ, ‘ಪ್ರತಿದಿನ ಸುಮಾರು 300 ಮಕ್ಕಳು ಅತಿಸಾರ ಭೇದಿಯಿಂದ ಉಂಟಾಗುವ ನಿರ್ಜಲೀಕರಣದಿಂದ ಸಾವನ್ನಪ್ಪುತ್ತಿದ್ದಾರೆ. ರೋಟಾ ವೈರಸ್‍ನಿಂದ ಉಂಟಾಗುವ ಅತಿಸಾರ ಭೇದಿಯನ್ನು ಲಸಿಕೆಯಿಂದ ತಡೆಗಟ್ಟಬಹುದು’ ಎಂದರು.

ಡಾ.ವೀರೇಶ, ಡಾ.ಹಣಮಂತರೆಡ್ಡಿ, ಸುದರ್ಶನ, ಗಂಗಾಧರ, ಆಶಾ ಕಾರ್ಯಕರ್ತೆಯರು, ಮಹಿಳೆಯರು ಇದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿರಾದಾರ ಶಂಕರ ನಿರೂಪಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅರವಿಂದ ಕುಮಾರ ವಂದಿಸಿದರು.
 

Post Comments (+)