ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಬಿಜೆಎನ್‌ಎಲ್‌ ಖಾನಾಪುರ ಕ್ಯಾಂಪ್‌ನಲ್ಲಿ ಶಿಥಿಲಾವಸ್ಥೆ ತಲುಪಿದ ಮನೆಗಳು

ಪಾಳುಬಿದ್ದ ವಸತಿ ಗೃಹಗಳು, ಮಂಗಗಳ ಕಾಟ
Last Updated 11 ಜೂನ್ 2021, 1:35 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಶಹಾ‍ಪುರ ತಾಲ್ಲೂಕಿನ ಖಾನಾಪುರ ಕ್ಯಾಂಪ್‌ನ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (ಕೆಬಿಜೆಎನ್‌ಎಲ್‌) ವಸತಿ ಗೃಹಗಳು ಶಿಥಿಲಾವಸ್ಥೆ ತಲುಪಿದ್ದು, ಹಲವಾರು ಮನೆಗಳು ಪಾಳುಬಿದ್ದಿವೆ.

ಕೆಬಿಜೆಎನ್‌ಎಲ್‌ ಅಧಿಕಾರಿ, ಸಿಬ್ಬಂದಿ ವಾಸಕ್ಕಾಗಿ ಗೃಹಗಳನ್ನು ಹಲವಾರು ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಸೂಕ್ತ ನಿರ್ವಹಣೆ ಕೊರತೆಯಿಂದ ಹಲವಾರು ಮನೆಗಳ ಗೋಡೆ, ಕಿಟಿಕಿ, ಹೆಂಚುಗಳು ಮುರಿದು ಬಿದ್ದಿವೆ. ಕೆಲವು ಮನೆಗಳಲ್ಲಿ ಮಾತ್ರ ಸಿಬ್ಬಂದಿ ವಾಸ ಮಾಡುತ್ತಿದ್ದು, ಮಳೆಗಾಲದಲ್ಲಿ ಸಂಕಷ್ಟ ಅನುಭವಿಸುತ್ತಿದ್ದಾರೆ.

60ಕ್ಕಿಂತ ಹೆಚ್ಚು ಮನೆಗಳಿದ್ದು, ಆಯಾ ಅಧಿಕಾರಿ ಹುದ್ದೆಗೆ ಅನುಗುಣವಾಗಿ ನಿವಾಸಗಳಿವೆ. ಆದರೆ, ಈಗ ಉನ್ನತ ಅಧಿಕಾರಿಗಳು ತಾಲ್ಲೂಕು, ಜಿಲ್ಲಾ ಮಟ್ಟದ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಸಣ್ಣ ಹುದ್ದೆಯಲ್ಲಿರುವ ಸಿಬ್ಬಂದಿ ಮಾತ್ರ ಈಗ ಇಲ್ಲಿ ವಾಸ ಮಾಡುತ್ತಿದ್ದಾರೆ.

ಮಂಗಗಳ ಉಪಟಳ: ಕ್ಯಾಂಪ್‌ನಲ್ಲಿ ಗೃಹಗಳು ಗುಣಮಟ್ಟ ಇಲ್ಲದಿರುವುದು ಒಂದು ಕಡೆಯಾದರೆ ಮಂಗಗಳ ಕಾಟ ಮತ್ತೊಂದು ಕಡೆ. ಮಂಗಗಳ ಉಪಟಳ ಹೆಚ್ಚಿದೆ ಎನ್ನುವುದು ಅಲ್ಲಿಯ ನಿವಾಸಿಗಳ ಮಾತಾಗಿದೆ.

‘ವಸತಿ ಗೃಹಗಳ ಸಿಮೆಂಟ್‌ ಹೆಂಚುಗಳ ಮೇಲ್ಛಾವಣಿ ಇದ್ದು, ಬಿಸಿಲಿಗೆ ಕಾವೇರಿದಾಗ ಮಂಗಗಳು ಮನೆಯ ಮೇಲೆ ಓಡಾಡುತ್ತವೆ. ಇದರಿಂದ ಹಲವಾರು ಮನೆಗಳ ಹೆಂಚುಗಳು ಒಡೆದು ಹೋಗಿವೆ. ಇದರಿಂದ ನಮಗೆ ಮುಕ್ತಿ ಇಲ್ಲದಂತಾಗಿದೆ. ಮಳೆಗಾಲದಲ್ಲಿ ಮನೆಗಳು ಸೋರುತ್ತವೆ. ಇದರಿಂದ ಮನೆಯಲ್ಲಿರಲು ತೊಂದರೆಯಾಗುತ್ತಿದೆ’ ಎನ್ನುತ್ತಾರೆ ವಸೀಮ್ ಖಾಜಿ, ಅಖ್ತಾರ ಭಾನು ಅವರು.

ಹಾವು, ಚೇಳು ಕಾಟ: ಹಲವಾರು ಮನೆಗಳಲ್ಲಿ ಜನರು ವಾಸ ಮಾಡದ ಕಾರಣ ಹಾವು, ಚೇಳುಗಳ ಆವಾಸಸ್ಥಾನವಾಗಿ ಮಾರ್ಪಟ್ಟಿವೆ. ರಾತ್ರಿ ವೇಳೆಯಲ್ಲಿ ಹಾವು, ಚೇಳುಗಳ ಕಾಟ ಹೆಚ್ಚಿದೆ. ಸ್ವಚ್ಛತೆ ಇಲ್ಲದಿರುವುದು ಇದಕ್ಕೆ ಕಾರಣವಾಗಿದೆ ಎನ್ನುವುದು ನಿವಾಸಿಗಳ ಅಭಿಪ್ರಾಯವಾಗಿದೆ.

‘ಈ ಮೊದಲು ಕ್ಯಾಂಪ್‌ನ ವಸತಿ ಗೃಹಗಳು ಚೆನ್ನಾಗಿದ್ದವು. ಖಾನಾಪುರ ಗ್ರಾಮದ ಕೆಲವರು ಬಂದು ವಾಸ ಮಾಡುತ್ತಿದ್ದರು. ಅವರನ್ನು ಖಾಲಿ ಮಾಡಿಸಿದ ನಂತರ ಕಿಟಿಕಿ, ಬಾಗಿಲು ಒಡೆಯುವಂತ ಕೆಲಸ ನಡೆಯುತ್ತಿದೆ’ ಎಂದು ಹೆಸರು ಬಹಿರಂಗ ಪಡಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

***

ಕಚೇರಿಗಳು ಖಾಲಿ ಖಾಲಿ

ಖಾನಾಪುರ ಕ್ಯಾಂಪ್‌ನಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (ಕೆಬಿಜೆಎನ್‌ಎಲ್‌) ವಿವಿಧ ಉಪವಿಭಾಗಗಳ ಕಚೇರಿಗಳಿವೆ. ಆದರೆ, ಅಧಿಕಾರಿ,ಸಿಬ್ಬಂದಿ ಕೊರತೆಯಿಂದ ಖಾಲಿ ಖಾಲಿಯಾಗಿದ್ದವು.

ಗುರುವಾರ ‘ಪ್ರಜಾವಾಣಿ’ ಪ್ರತಿನಿಧಿ ಕ್ಯಾಂಪ್‌ಗೆ ಭೇಟಿ ನೀಡಿದಾಗ ಅಧಿಕಾರಿಗಳು ಯಾರೂ ಇರಲಿಲ್ಲ. ಅಲ್ಲಿರುವ ಸಿಪಾಯಿಗಳನ್ನು ಕೇಳಿದಾಗ ‘ನಮಗೆ ಕಚೇರಿ ಬಾಗಿಲು ತೆಗೆದಿಡಲು ಹೇಳಿದ್ದಾರೆ. ಹೀಗಾಗಿ ನಾವು ತೆಗೆದಿದ್ದೇವೆ. ಅಧಿಕಾರಿಗಳು ಕಚೇರಿಗೆ ಬಾರದಿರುವ ಬಗ್ಗೆ ಮಾಹಿತಿ ಇಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಲಾಕ್‌ಡೌನ್ ಕಾರಣದಿಂದ ಅಧಿಕಾರಿಗಳು ಮನೆಯಿಂದ ಕೆಲಸ ಮಾಡುತ್ತಿದ್ದಾರೆ. ಕೆಲವರು ಸ್ಥಳ ವೀಕ್ಷಣೆಗೆ ತೆರಳಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

***

ವಸತಿ ಗೃಹಗಳ ದುರಸ್ತಿಗಾಗಿ ಇದೇ ವರ್ಷ ₹ 60 ಲಕ್ಷ ಅನುದಾನ ಮಂಜೂರು ಆಗಿದ್ದು, ಟೆಂಡರ್ ಕರೆಯಲಾಗಿದೆ. ಶೀಘ್ರ ದುರಸ್ತಿ ಕೈಗೆತ್ತಿಕೊಳ್ಳಲಾಗುವುದು

- ಪಂಚಾಕ್ಷರಿ ಹೀರೆಮಠ, ಕೆಬಿಜೆಎನ್‌ಎಲ್‌ ಕಿರಿಯ ಎಂಜಿನಿಯರ್, ಖಾನಾಪುರ ವಿಭಾಗ

***

ವಸತಿ ಗೃಹಗಳು ವಾಸಿಸಲು ಯೋಗ್ಯವಿಲ್ಲ. ಅನಿವಾರ್ಯವಾಗಿ ಇಲ್ಲಿದ್ದೇವೆ. ಮನೆಯ ಹೆಂಚುಗಳು ಒಡೆದಿದ್ದು, ಮಳೆ ಬಂದರೆ ಸೋರುತ್ತವೆ

- ಅಖ್ತಾರ ಭಾನು ಖಾನಾಪುರ ಕ್ಯಾಂಪ್ ನಿವಾಸಿ

***

ಹಲವಾರು ವರ್ಷಗಳಿಂದೆ ವಸತಿ ಗೃಹಗಳು ನಿರ್ಮಿಸಿದ್ದರಿಂದ ಗೋಡೆಗಳು ಬಿರುಕು ಬಿಟ್ಟಿವೆ. ಅಧಿಕಾರಿಗಳು ಇತ್ತ ಗಮನಹರಿಸಬೇಕು

- ವಸೀಮ್ ಖಾಜಿ, ಖಾನಾಪುರ ಕ್ಯಾಂಪ್ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT