ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ನಮ್ಮ ಜನ ನಮ್ಮ ಧ್ವನಿ–ತುಕ್ಕು ಹಿಡಿದ ಯಂತ್ರಗಳು; ಹೊಂಡದ ನೀರೇ ಗತಿ

ಭೀಮಾ ನದಿ ಸೇರುವ ಚರಂಡಿ ನೀರು ಶುದ್ಧೀಕರಿಸಿ ಪೂರೈಕೆ, ಪೂರ್ಣಗೊಳ್ಳದ ಜಾಕ್‌ವೆಲ್‌ ಕಾಮಗಾರಿ
Last Updated 16 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಯಾದಗಿರಿ: ನಗರದಲ್ಲಿ 30 ವರ್ಷಗಳ ಹಿಂದಿನ ಜಾಕ್‌ವೆಲ್‌, ಫಿಲ್ಟರ್‌ ಬೆಡ್‌ ಇದ್ದು, ಭೀಮಾ ನದಿಗೆ ಸೇರಿವಚರಂಡಿ ನೀರನ್ನೇ ಶುದ್ಧೀಕರಿಸಿ ನಲ್ಲಿಗಳ ಮೂಲಕ ಪೂರೈಸಲಾಗುತ್ತಿದೆ. ಇದರಿಂದ ಹೊಂಡದ ನೀರನ್ನೇ ಕುಡಿಯುವ ದುಸ್ಥಿತಿ ನಿರ್ಮಾಣವಾಗಿದೆ.

ನಗರದ ಪದವಿ ಮಹಾವಿದ್ಯಾಲಯದಿಂದ ದೊಡ್ಡ ಕಾಲುವೆ ತನಕ ಚರಂಡಿ ಇದ್ದು, ದೊಡ್ಡ ನಾಲಾ ಮೂಲಕ ಚರಂಡಿ ನೀರು ಭೀಮಾ ನದಿ ಸೇರುತ್ತದೆ.

ಸುರಪುರ ತಾಲ್ಲೂಕಿನಲ್ಲಿ ಕೃಷ್ಣಾ ನದಿ ಇದ್ದರೂ ನೀರಿನ ಸಮಸ್ಯೆ ತೀವ್ರವಾಗಿದೆ. ಹಲವಾರು ವರ್ಷಗಳ ಹಿಂದೆ ನಿರ್ಮಿಸಿರುವ ಜಾಕ್‌ವೆಲ್‌, ಪಂಪ್‌ಗಳು ಬೇಸಿಗೆಯಲ್ಲಿ ಕೈಕೊಡುವುದು ಸಾಮಾನ್ಯವಾಗಿದೆ. ಇನ್ನೂ ಶಹಾಪುರ ನಗರಕ್ಕೆ ಕಾಲುವೆಗಳಿಂದ ಪೂರೈಸುವ ನೀರನ್ನು ಕೆರೆಯಲ್ಲಿ ಸಂಗ್ರಹಿಸಿ ಅಲ್ಲಿಂದ ಸರಬರಾಜು ಮಾಡಲಾಗುತ್ತಿದೆ.

ಗುರುಮಠಕಲ್‌ ತಾಲ್ಲೂಕಿಗೆ ಯಾದಗಿರಿಯ ಭೀಮಾ ನದಿಯಿಂದ ಮೂರು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ.

ಎರಡು ದಿನಕ್ಕೊಮ್ಮೆ ನೀರು: ಗೃಹ ಮತ್ತು ವಾಣಿಜ್ಯ ಉದ್ದೇಶ ಸೇರಿ ಯಾದಗಿರಿ ನಗರಕ್ಕೆ ನಿತ್ಯ ಸುಮಾರು 10 ಎಂಎಲ್‌ಡಿ ನೀರಿನ ಅವಶ್ಯಕತೆ ಇದೆ. ಭೀಮಾ ನದಿ ಜತೆ ಕೈಪಂಪ್ (ಬೋರವೆಲ್) ಹಾಗೂ ಕಿರು ನೀರು ಸರಬರಾಜು ಕೊಳವೆ ಬಾವಿಗಳ ಮೂಲಕ ಪೂರೈಕೆ ಮಾಡಲಾಗುತ್ತಿದೆ.

ಹೊಸಳ್ಳಿ ಕ್ರಾಸ್‌ ಬಳಿ ಇರುವ ಫಿಲ್ಟರ್‌ ಬೆಡ್‌ 13.64 ಎಂಎಲ್‌ಡಿ ಸಂಗ್ರಹ ಸಾಮಾರ್ಥ್ಯ ಹೊಂದಿದ್ದು, ಇದರಿಂದ ಎರಡು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ.

ಕೆಲ ವಾರ್ಡ್‌ಗಳಿಗೆ ಸಮರ್ಪಕ ನೀರು ಸರಬರಾಜು ಆಗುವುದಿಲ್ಲ ಎನ್ನುವ ಆರೋಪವಿದೆ. ಪೈಪ್‌ಲೈನ್‌ ದುರಸ್ತಿ ಕಾರ್ಯ ಶೀಘ್ರ ಮಾಡುವುದಿಲ್ಲ ಎಂದು ಸ್ಥಳೀಯರು ದೂರುತ್ತಾರೆ.

ಸೊನ್ನ, ಸನ್ನತಿ ಸೇರಿದಂತೆ ಮಹಾರಾಷ್ಟ್ರದಲ್ಲಿ ಹೆಚ್ಚು ಮಳೆಯಾದರೆ ನಗರ ಹೊರವಲಯದ ಗುರುಸಣಗಿ ಬ್ರಿಜ್‌ ಕಂ ಬ್ಯಾರೇಜ್‌ ಗೇಟುಗಳನ್ನು ಎತ್ತರಿಸಲಾಗುತ್ತದೆ. ಆದರೆ, ಗೇಟುಗಳು ತಳಮಟ್ಟದಿಂದ ಮಣ್ಣು, ಹೂಳು ಹೊತ್ತುಕೊಂಡು ಬರುತ್ತವೆ. ಭೀಮಾ ನದಿಗೆ ಅಳವಡಿಸಿರುವ ಜಾಕ್‌ವೆಲ್‌ ನಿರಂತರ ನೀರು ಎತ್ತುತ್ತದೆ.

ಭೀಮಾ ನದಿಯಿಂದ ಪೂರೈಸುವ ನೀರು ಹೊಂಡದ ನೀರಿನಂತೆ ಭಾಸವಾಗುತ್ತದೆ. ಭೀಮಾ ನದಿ ವ್ಯಾಪ್ತಿಯಲ್ಲಿ ಪ್ರವಾಹದ ನೀರು ಬಿಟ್ಟಾಗಲೂ ಮಲಿನ ನೀರು ಜಾಕ್‌ವೆಲ್‌ಗೆ ಬರುತ್ತವೆ. ಇವು ಫಿಲ್ಟರ್‌ಬೆಡ್‌ಗೆ ಬಂದು ಶುದ್ಧೀಕರಣ ಮಾಡಲಾಗುತ್ತಿದೆ.

ಅನುಷ್ಠಾನಗೊಳ್ಳದ24X7 ನೀರು ಸೌಲಭ್ಯ: ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳಿದ್ದು,24X7 ನೀರು ಸೌಲಭ್ಯ ಕೇವಲ ಪ್ರಸ್ತಾವದಲ್ಲೇ ಉಳಿದಿದೆ.ಭೀಮಾ ನದಿಯಿಂದ ದಿನ ಬಿಟ್ಟು ದಿನ ಕುಡಿಯುವ ನೀರು ಸರಬರಾಜು ಮಾಡುತ್ತಿರುವುದರಿಂದ ನಗರ ವಾಸಿಗಳಿಗೆ ತೊಂದರೆ ಆಗುತ್ತಿದೆ. ಸಮೀಪದಲ್ಲೇ ಭೀಮಾನದಿ ಹರಿ ಯುತ್ತಿದ್ದರೂ ನಿರಂತರ ನೀರು ಪೂರೈಕೆ
ಆಗುತ್ತಿಲ್ಲ.

ಉನ್ನತ ಹುದ್ದೆಯ ಅಧಿಕಾರಿಗಳು ಭೇಟಿ ನೀಡಿದಾಗ ನೀರು ಶುದ್ದೀಕರಿಸಿ ಬಿಡಲಾಗುತ್ತದೆ ಎಂದು ಸಬೂಬು ಹೇಳುತ್ತಾರೆ. ಕೇವಲ ಬ್ಲಿಚಿಂಗ್ ಪೌಡರ ಹಾಕಿ ನೀರು ಸರಬರಾಜು ಮಾಡುತ್ತಾರೆ ಎಂದು ನಿವಾಸಿ ಒಬ್ಬರು ದೂರಿದರು.

ಜಾಕ್‌ವೆಲ್‌ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ನೂತನ ತಂತ್ರಜ್ಞಾನದಿಂದ ನೀರು ಪೂರೈಸಬೇಕು ಎನ್ನುವುದು ನಗರ ನಿವಾಸಿಗಳ ಆಗ್ರಹವಾಗಿದೆ.

15 ದಿನಕ್ಕೊಮ್ಮೆ ನೀರು
ಸುರಪುರ:
ನದಿಯಲ್ಲಿ ಸಾಕಷ್ಟು ನೀರಿದ್ದರೂ ನಗರಕ್ಕೆ ತಿಂಗಳಿಗೆ ಎರಡು ಬಾರಿ ಮಾತ್ರ ನೀರು ಸರಬರಾಜು ಮಾಡಲಾಗುತ್ತಿದೆ. ಇದರಿಂದ ನಾಗರಿಕರು ಪರದಾಡುವಂತಾಗಿದೆ.

ನಗರಕ್ಕೆ 15 ಕಿ.ಮೀ ಅಂತರದಲ್ಲಿರುವ ಶೆಳ್ಳಿಗಿ ಹತ್ತಿರದ ಕೃಷ್ಣಾ ನದಿಗೆ ಜಾಕ್‌ವೆಲ್ ಕೂಡಿಸಲಾಗಿದೆ. 300 ಎಚ್‌ಪಿ ಸಾಮರ್ಥ್ಯದ ಎರಡು ಮೋಟಾರುಗಳಿವೆ. ಸಾಕಷ್ಟು ಸಿಬ್ಬಂದಿ ಇದ್ದಾರೆ. ಎಕ್ಸ್ಪ್ರೆಸ್ ವಿದ್ಯುತ್ ಲೈನ್ ಇದೆ. ಆದರೂ ನೀರಿನ ಸಮಸ್ಯೆ ಗಂಭೀರವಾಗುತ್ತಿದೆ.

ಕುಂಬಾರಪೇಟೆಯ ಹತ್ತಿರ ನೀರು ಶುದ್ಧೀಕರಣ ಘಟಕವಿದೆ. ಅಲ್ಲಿ ₹ 6 ಕೋಟಿ ವೆಚ್ಚದ ಜರ್ಮನ್ ತಂತ್ರಜ್ಞಾನದ ಶುದ್ಧೀಕರಣ ಘಟಕ ಅಳವಡಿಸಲಾಗಿದೆ.

ಆಲಂ ಮತ್ತು ಬ್ಲೀಚಿಂಗ್ ಪೌಡರ್ ಬಳಸಿ ನೀರನ್ನು ಶುದ್ಧೀಕರಿಸಲಾಗುತ್ತದೆ. ಆಲಂ ನೀರಿನಲ್ಲಿರುವ ಹೊಂಡವನ್ನು ತಳಕ್ಕೆ ದೂಡುತ್ತದೆ. ಬ್ಲೀಚಿಂಗ್ ಪೌಡರ್ ಕ್ರಿಮಿಗಳನ್ನು ನಾಶಪಡಿಸುತ್ತದೆ. ಜರ್ಮನ್ ತಂತ್ರಜ್ಞಾನದಲ್ಲಿ ನೀರು ಶುದ್ಧೀಕರಣಗೊಳ್ಳುತ್ತದೆ ಎಂದು ನಗರಸಭೆ ಸಿಬ್ಬಂದಿ ಹೇಳುತ್ತಾರೆ.

ನಗರದಲ್ಲಿ ನಿರಂತರ ನೀರು ಪೂರೈಕೆ ಯೋಜನೆಗಾಗಿ ಎಲ್ಲೆಡೆ ಗುಂಡಿ ತೆಗೆಯಲಾಗಿದೆ. ಇದರಿಂದ ನೀರು ಸರಬರಾಜು ಪೈಪ್‌ಗಳು
ಒಡೆದಿದ್ದು ಚರಂಡಿ ನೀರು ಸೇರಿಕೊಳ್ಳುತ್ತಿದೆ. ಹೀಗಾಗಿ ಅಶುದ್ಧ ಮತ್ತು ಕೆಟ್ಟ ವಾಸನೆಯ ನೀರು ಪೂರೈಕೆಯಾಗುತ್ತಿದೆ.

ಮೂರು ದಿನಕ್ಕೊಮ್ಮೆ ನೀರು
ಗುರುಮಠಕಲ್:
ಬಹುಗ್ರಾಮ ಕುಡಿಯುವ ನೀರಿನ ಭೀಮಾ ಯೋಜನೆಯಿಂದ ಪಟ್ಟಣಕ್ಕೆ ಮೂರು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ.

ದಿನಕ್ಕೆ ಪಟ್ಟಣಕ್ಕೆ 30 ಲಕ್ಷ ಲೀಟರ್‌ ನೀರು ಪೂರೈಕೆ ಮಾಡಲಾಗುತ್ತಿದ್ದು, ಅರಕೇರಾ ಗ್ರಾಮದ ಹೊರವಲಯದಲ್ಲಿನ ಭೀಮಾ ಯೋಜನೆಯ ನೀರು ಶುದ್ಧೀಕರಣ ಘಟಕದಿಂದ (ಫಿಲ್ಟರ್ ಬೆಡ್) ಶುದ್ದೀಕರಿಸಿದ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಜತೆ ಸ್ಥಳೀಯ ನಲ್ಲಚೆರು ಕೆರೆಯ ಪ್ರಾಂತದ 13 ಕೊಳವೆಬಾವಿಗಳನ್ನೂ ಬಳಸುತ್ತಿರುವುದಾಗಿ ಪುರಸಭೆಯ ನೀರು ಸರಬರಾಜು ಸಿಬ್ಬಂದಿ ಮಾಹಿತಿ ನೀಡಿದರು.

ಈ ಮೊದಲು ಮಳೆಗಾಲದಲ್ಲಿ ಆಗಾಗ ನಳಗಳಲ್ಲಿ ಕೆಸರು ಮಿಶ್ರಿತ ನೀರು ಬರುತ್ತಿತ್ತು, ಸದ್ಯಕ್ಕೆ ಆ ಸಮಸ್ಯೆಯಾಗಿಲ್ಲ. ಆದರೆ, ಮೂರು ದಿನಕ್ಕೊಮ್ಮೆ ನೀರು ನೀರು ಬರುವುದರಿಂದ ಸಾಲುತ್ತಿಲ್ಲ ಎಂದು ಮಲ್ಲಯ್ಯಕಟ್ಟ ಬಡಾವಣೆ ನಿವಾಸಿಗಳು ಹೇಳುತ್ತಾರೆ.

‘ಪಟ್ಟಣ ಸೇರಿ ವಿವಿಧ ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಯೋಜನೆಯಿದು. ಆದರೆ, ಯಾದಗಿರಿಯ ಜಾಕ್‌ವೆಲ್‌, ಅರಕೇರಾದ ಫಿಲ್ಟರ್ ಬೆಡ್‌, ಧರ್ಮಪುರದ ನೀರೆತ್ತುವ ಘಟಕಗಳ ನಿರ್ವಹಣೆ, ವಿದ್ಯುತ್ ಬಿಲ್, ದುರಸ್ತಿ ಹಾಗೂ ಸಿಬ್ಬಂದಿಯನ್ನು ಪುರಸಭೆಯೇ ವಹಿಸಿಕೊಂಡಿದೆ. ಜಿಲ್ಲಾ ಪಂಚಾಯಿತಿಗೆ ನಿರ್ವಹಣಾ ವೆಚ್ಚಕ್ಕೆ ಒಂದಿಷ್ಟು ಅನುದಾನ ನೀಡುವಂತೆ ಮನವಿ ಮಾಡಿದರೂ ಉಪಯೋಗವಾಗಿಲ್ಲ’ ಎನ್ನುವುದು ಪುರಸಭೆ ಸದಸ್ಯರ ಅಳಲು.

‘ಸಮರ್ಪಕ ನೀರು ಪೂರೈಸಿ’
ಹುಣಸಗಿ:
ಬೆಳೆಯುತ್ತಿರುವ ಹುಣಸಗಿ ಪಟ್ಟಣಕ್ಕೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡುವಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಆದ್ಯತೆ ನೀಡಬೇಕಿದೆ.

ಕಳೆದ ಹತ್ತು ವರ್ಷಗಳ ಹಿಂದೆ ಜಲ ನಿರ್ಮಲ ಯೋಜನೆ ಅಡಿಯಲ್ಲಿ ದೇವಪುರ (ಜೆ) ಗ್ರಾಮದ ಬಳಿ ನಿರ್ಮಿಸಲಾಗಿರುವ ಬುಗ್ಗೆಯಿಂದ ಪಟ್ಟಣಕ್ಕೆ ನೀರು ಸರಬರಾಜು ಆಗುತ್ತಿದ್ದು, ಬೇಸಿಗೆ ಸಂದರ್ಭದಲ್ಲಿ ನೀರಿನ ತೊಂದರೆ ಕಾಡುತ್ತಿದೆ. ಈ ನಿಟ್ಟಿನಲ್ಲಿ ಮುಂದಿನ ಮೂರು ದಶಕಗಳಲ್ಲಿ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆ ರೂಪಿಸಬೇಕಿದೆ.

ಪಟ್ಟಣಕ್ಕೆ ಸದ್ಯ ಕುಡಿಯುವ ನೀರಿನ ವ್ಯವಸ್ಥೆ ಇದ್ದರೂ ಶುದ್ಧಕುಡಿಯುವ ನೀರು ಸರಬರಾಜು ಆಗುತ್ತಿಲ್ಲ. ಫಿಲ್ಟರ್‌ ಬೆಡ್‌ ನಿರ್ಮಿಸಿ ಶುದ್ಧವಾದ ನೀರು ಪೂರೈಕೆ ಮಾಡಬೇಕು ಎನ್ನುವುದು ಜನತೆಯ ಆಗ್ರಹವಾಗಿದೆ.

‘ಪಟ್ಟಣಕ್ಕೆ ಶುದ್ಧ ಕುಡಿಯುವ ನೀರು ಒದಗಿಸುವಂತಾಗಲುಈಗಾಗಲೇ ಯೋಜನೆ ಸಿದ್ಧಪಡಿಸಲಾಗಿದ್ದು, ಕೆಲವೇ ದಿನಗಳಲ್ಲಿಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕ ರಾಜೂಗೌಡತಿಳಿಸಿದರು.

20 ವರ್ಷಕ್ಕೂ ಹಳೆಯ ಯಂತ್ರಗಳು
ಶಹಾಪುರ
: ಶಹಾಪುರ ಶಾಖಾ ಕಾಲುವೆ ಮೂಲಕ ನೀರು ನಗರದ ಫಿಲ್ಟರ್ ಬೆಡ್ ಕೆರೆಯಲ್ಲಿ ಸಂಗ್ರಹಿಸಿ ನಂತರ ನಗರಕ್ಕೆ ಕುಡಿಯಲು ಪೂರೈಸಲಾಗುತ್ತದೆ. ಆದರೆ, ತೀರಾ ಹಳೆಯ ಕಾಲದ ಯಂತ್ರಗಳು ಕೆಟ್ಟು ನಿಂತಿವೆ.

ಸುಮಾರು 20 ವರ್ಷದ ಹಳೆಯ ಯಂತ್ರಗಳು ಇವೆ. ಪ್ರತಿ ವರ್ಷ ದುರಸ್ತಿಗಾಗಿ ಲಕ್ಷಾವಧಿ ಹಣ ವೆಚ್ಚವಾಗುತ್ತದೆ. ಸಮರ್ಪಕವಾದ ನೀರು ಪೂರೈಕೆ ಆಗುತ್ತಿಲ್ಲ. ಅಲ್ಲದೆ ಸಂಗ್ರಹ ಮಾಡುವ ಕೆರೆಯ ಸುತ್ತಮುತ್ತ ಸುರಕ್ಷತಾ ಕ್ರಮ ತೆಗೆದುಕೊಂಡಿಲ್ಲ. ಕೆರೆಯ ದಂಡೆಯ ಮೇಲೆ ಜಾಲಿಗಿಡ ಬೆಳೆದಿವೆ, ಸುತ್ತಲು ಮುಳ್ಳಿನ ತಂತಿ ಹಾಕಬೇಕು. ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು. ಕಾಯಂ ಆಗಿ ಭದ್ರತಾ ಸಿಬ್ಬಂದಿ ನೇಮಿಸಬೇಕು ಎನ್ನುತ್ತಾರೆ ನಗರದ ನಿವಾಸಿ ಮಾನಪ್ಪ ಹಡಪದ.

‘ಭೀಮಾ ನದಿಯಿಂದ ನಗರಕ್ಕೆ ₹75 ಕೋಟಿ ವೆಚ್ಚದಲ್ಲಿ ನೀರು ಸರಬರಾಜು ಮಾಡುವ ಶಾಶ್ವತ ಕುಡಿಯುವ ನೀರಿನ ಯೋಜನೆ ಕಾಮಗಾರಿ ಭರದಿಂದ ಸಾಗಿದೆ. ಈಗಾಗಲೇ ಕೆರೆಯ ಅಂಗಳದಿಂದ ನೀರು ಶುದ್ಧೀಕರಿಸುವ ಘಟಕಕ್ಕೆ ಪೈಪ್‌ ಅಳವಡಿಕೆ ಕಾರ್ಯ ಮುಕ್ತಾಯವಾಗಿದೆ. ಕೆಲ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡರೆ ನಗರಕ್ಕೆ ಶಾಶ್ವತವಾಗಿ ನೀರು ಸರಬರಾಜು ಮಾಡುವ ಕೆಲಸ ಸಾಗಲಿದೆ’ ಎಂದು ಪೌರಾಯಕ್ತ ರಮೇಶ ಬಡಿಗೇರ ತಿಳಿಸಿದರು.

**

ಸದ್ಯಕ್ಕೆ ನೀರು ಸರಬರಾಜಿನಲ್ಲಿ ಯಾವ ಸಮಸ್ಯೆಯೂ ಇಲ್ಲ. ಪಟ್ಟಣದ ಎಲ್ಲಾ 23ವಾರ್ಡ್‌ಗಳಿಗೆ ನೀರು ಸರಬರಾಜು ಮಾಡಲು ಮೂರು ದಿನಕ್ಕೊಮ್ಮೆಯಂತೆ ವ್ಯವಸ್ಥೆಮಾಡಲಾಗಿದೆ.
–ಭಾರತಿ ಸಿ.,ಪುರಸಭೆ ಮುಖ್ಯಾಧಿಕಾರಿ, ಗುರುಮಠಕಲ್‌

**

ನಿರಂತರ ನೀರು ಯೋಜನೆಯ ಕಾಮಗಾರಿ ನಡೆದಿರುವುದರಿಂದ ವಿದ್ಯುತ್ ಪೂರೈಕೆಯಲ್ಲಿವ್ಯತ್ಯಯ ಮತ್ತು ಪೈಪುಗಳು ಒಡೆದಿವೆ. ಇದರಿಂದ ಸಮಸ್ಯೆ ಆಗಿದೆ.
–ಜೀವನ ಕಟ್ಟಿಮನಿ,ಪೌರಾಯುಕ್ತ, ಸುರಪುರ ನಗರಸಭೆ

**

ನಗರಸಭೆ ನೀರು ಪೂರೈಕೆಯಲ್ಲಿ ಇಲ್ಲ ಸಲ್ಲದ ನೆಪ ಹೇಳುತ್ತಾ ಬರುತ್ತಿದೆ. ಕೆಟ್ಟ ನೀರು ಪೂರೈಸುತ್ತಿದೆ.ಅಲ್ಲಲ್ಲಿ ವಾಂತಿಭೇದಿ ಪ್ರಕರಣಗಳು ಕಾಣಿಸುತ್ತಿದೆ.
–ಶೌಕತ್‌ಅಲಿ ಖುರೇಶಿ,ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ

**

ಮುಂದಿನ ತಿಂಗಳು ಹೊಸ ಜಾಕ್‌ವೆಲ್‌ ಆರಂಭವಾಗುವ ನಿರೀಕ್ಷೆ ಇದೆ. ಈಗಾಗಲೇ ಪೈಪ್‌ಲೈನ್‌ ಕಾಮಗಾರಿ ನಡೆಯುತ್ತಿದೆ. ಆಲಂ, ಬ್ಲಿಚಿಂಗ್‌ ಪೌಡರ್‌ ಮೂಲಕ ನೀರು ಶುದ್ಧೀಕರಿಸಲಾಗುತ್ತದೆ. ಚರಂಡಿ ನೀರು ಭೀಮಾ ನದಿಗೆ ಸೇರುವುದು ಅನೇಕ ವರ್ಷಗಳಿಂದ ನಡೆಯುತ್ತಿದೆ.
–ಶರಣಪ್ಪ,ಪೌರಾಯುಕ್ತ, ಯಾದಗಿರಿ ನಗರಸಭೆ

**

ಪೂರಕ ವರದಿ: ಟಿ.ನಾಗೇಂದ್ರ, ಅಶೋಕ ಸಾಲವಾಡಗಿ, ಭೀಮಶೇನರಾವ ಕುಲಕರ್ಣಿ, ಎಂ.ಪಿ.ಚಪೆಟ್ಲಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT